

ಚೆನ್ನೈ: ತಮಿಳುನಾಡಿನ ಸನ್ ಟಿವಿ ಸುದ್ದಿ ವಾಹಿನಿ ಮಹಿಳಾ ಆ್ಯಂಕರ್ವೊಬ್ಬರ ಕುರಿತು ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ಆರೋಪ ಪ್ರಕರಣದಲ್ಲಿ ಚೆನ್ನೈ ನ್ಯಾಯಾಲಯವು ಮಂಗಳವಾರ(ಸೆ. 29) ತಮಿಳು ವಿವಾದಿತ ಯೂಟ್ಯೂಬರ್ ಮತ್ತು ರಾಜಕೀಯ ವಿಶ್ಲೇಷಕ ಸಾವುಕ್ಕು ಶಂಕರ್ ಅವರನ್ನು ದೋಷಿ ಎಂದು ತೀರ್ಪು ನೀಡಿದ್ದು, ಅವರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಮಹಿಳೆಯರ ಮೇಲಿನ ಕಿರುಕುಳ ತಡೆಗಟ್ಟುವಿಕೆ ಕಾನೂನಿನ ನಿಬಂಧನೆಗಳ ಅಡಿಯಲ್ಲಿ ಎಗ್ಮೋರ್ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಅವರನ್ನು ದೋಷಿ ಎಂದು ತೀರ್ಪು ನೀಡಿದೆ. ಮತ್ತು ಶಂಕರ್ ನೀಡಿದ ಹೇಳಿಕೆಗಳು ಮಾನಹಾನಿಕರವಾಗಿದ್ದು, ಸುದ್ದಿ ವಾಚಕರನ್ನು ಗುರಿಯಾಗಿಸಿಕೊಂಡಿವೆ ಎಂದು ಪ್ರಾಸಿಕ್ಯೂಷನ್ ಹೇಳಿದೆ. ಇನ್ನೂ ಶಂಕರ್ ಅವರಿಗೆ ಆದೇಶದ ಬಗ್ಗೆ ಮೇಲ್ಮನವಿ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಲಾಗಿದೆ.
ಸಾವುಕ್ಕು ಶಂಕರ್ ಎಂದು ಕರೆಯಲ್ಪಡುವ ಎ ಶಂಕರ್, ತಮಿಳುನಾಡಿನ ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ವಿರೋಧಿ ನಿರ್ದೇಶನಾಲಯದ ಮಾಜಿ ಉದ್ಯೋಗಿಯಾಗಿದ್ದು, ಪ್ರಸ್ತುತ ಅವರು ವಿವಾದಿತ ಯೂಟ್ಯೂಬರ್ ಮತ್ತು ರಾಜಕೀಯ ವಿಶ್ಲೇಷಕರಾಗಿದ್ದಾರೆ. ಸಾವುಕ್ಕು ಶಂಕರ್ ಎಂಬ ಯೂಟ್ಯೂಬ್ ಚಾನಲ್ ಮೂಲಕ ವಿಶ್ಲೇಷಣೆ ಮಾಡುತ್ತಾರೆ. ರಾಜಕಾರಣಿಗಳು, ಪೊಲೀಸ್ ಅಧಿಕಾರಿಗಳು ಮತ್ತು ಇತರ ಸಾರ್ವಜನಿಕ ಸಂಸ್ಥೆಗಳನ್ನು ಟೀಕಿಸಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಇಬ್ಬರು ಹಿರಿಯ ಅಧಿಕಾರಿಗಳ ನಡುವಿನ ಧ್ವನಿಮುದ್ರಿತ ಸಂಭಾಷಣೆಯ ಸೋರಿಕೆ ಆರೋಪದ ಮೇಲೆ 2008ರಲ್ಲಿ ಬಂಧಿಸಲ್ಪಟ್ಟ ನಂತರ ಸಾರ್ವಜನಿಕವಾಗಿ ಮುನ್ನಲೆಗೆ ಬಂದರು. ಬಳಿಕ ಅಂದಿನಿಂದ ಅವರು ತಮ್ಮ ಸಾರ್ವಜನಿಕ ಹೇಳಿಕೆಗಳಿಂದ ಹಲವಾರು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಕಳೆದ ಡಿಎಂಕೆ ಸರ್ಕಾರದ ಅವಧಿಯಲ್ಲಿ ಜೈಲುವಾಸವನ್ನು ಅನುಭವಿಸಿದ್ದಾರೆ.
ಇನ್ನೂ ಸೆಪ್ಟೆಂಬರ್ 2022ರಲ್ಲಿ ನ್ಯಾಯಾಂಗವು ಭ್ರಷ್ಟಾಚಾರದಿಂದ ತುಂಬಿದೆ ಎಂದು ಯೂಟ್ಯೂಬ್ ಸಂದರ್ಶನದಲ್ಲಿ ಹೇಳಿದ ಬಳಿಕ ಮದ್ರಾಸ್ ಹೈಕೋರ್ಟ್ ಅವರಿಗೆ ನ್ಯಾಯಾಂಗ ನಿಂದನೆಗಾಗಿ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು. ಹೀಗೆ ಅನೇಕ ವಿವಾದಾತ್ಮಕ ವಿಷಯಗಳಲ್ಲಿ ಹೆಸರುವಾಸಿಯಾಗಿದ್ದಾರೆ (ಏಜೆನ್ಸೀಸ್).