

ನವದೆಹಲಿ: ನವೆಂಬರ್ 30ರ ಸೋಮವಾರದಿಂದ ಆರಂಭವಾಗಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಹತ್ವದ ಕ್ಷೇತ್ರ ಪುನರ್ವಿಂಗಡಣೆ ಮಸೂದೆ (Delimitation Bill) ಮಂಡನೆಯಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ನವೆಂಬರ್ 30ರಂದು ಲೋಕಸಭೆ ಮತ್ತು ಡಿಸೆಂಬರ್ 2ರಂದು ರಾಜ್ಯಸಭೆಯ ಕಲಾಪಗಳನ್ನು ಕರೆಯುವಂತೆ ಕ್ರಮವಾಗಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹಾಗೂ ರಾಜ್ಯಸಭಾ ಸಭಾಪತಿ ಸಿ.ಪಿ. ರಾಧಾಕೃಷ್ಣನ್ ಅವರಿಗೆ ಸರ್ಕಾರ ಮನವಿ ಮಾಡಿದೆ ಎಂದು ತಿಳಿಸಿದ್ದಾರೆ.
ಡಿಸೆಂಬರ್ 3ರವರೆಗೆ ಈ ಅಧಿವೇಶನ ನಡೆಯಲಿದ್ದು, ಅಗತ್ಯ ಸರ್ಕಾರಿ ಕಾರ್ಯಕಲಾಪಗಳನ್ನು ನಡೆಸಲು ಇದನ್ನು ಕರೆಯಲಾಗಿದೆ ಎಂದು ರಿಜಿಜು ಸ್ಪಷ್ಟಪಡಿಸಿದ್ದಾರೆ.
ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಜಾರಿಗೊಳಿಸಲು ಪೂರಕವಾಗಿ ಲೋಕಸಭೆಯ ಒಟ್ಟು ಸ್ಥಾನಗಳ ಬಲವನ್ನು 850ಕ್ಕೆ ಹೆಚ್ಚಿಸುವ ಉದ್ದೇಶವನ್ನು ಈ ಪ್ರಸ್ತಾವಿತ ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಹೊಂದಿದೆ. ಪರಿಷ್ಕೃತ ಜನಗಣತಿ ದತ್ತಾಂಶವನ್ನು ಪ್ರತಿಬಿಂಬಿಸಲು ಮತ್ತು ಕೆಳಮನೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಸುಗಮವಾಗಿ ಜಾರಿಗೊಳಿಸಲು ಕ್ಷೇತ್ರ ಪುನರ್ವಿಂಗಡಣೆ ಅತ್ಯಗತ್ಯ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ.
ಈ ಮಸೂದೆಯ ಕುರಿತು ವಿವಿಧ ರಾಜಕೀಯ ಪಕ್ಷಗಳು ಭಿನ್ನ ನಿಲುವುಗಳನ್ನು ವ್ಯಕ್ತಪಡಿಸಿವೆ.
ನಿರೀಕ್ಷೆಯಂತೆ ಕಾಂಗ್ರೆಸ್ ವಿರೋಧ!
ಕಾಂಗ್ರೆಸ್ ಸಂಸದ ಪ್ರಮೋದ್ ತಿವಾರಿ ಅವರು ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತಾ, ನಾವು ಕ್ಷೇತ್ರ ಪುನರ್ವಿಂಗಡಣೆಯನ್ನು ವಿರೋಧಿಸಿದ್ದೇವೆ. ಸರ್ಕಾರ ಈ ಬಗ್ಗೆ ಚರ್ಚೆಯನ್ನೇ ನಡೆಸದೆ ಏಕಪಕ್ಷೀಯವಾಗಿ ಮಸೂದೆಯನ್ನು ಜಾರಿಗೊಳಿಸಲು ಹೊರಟಿದೆ. ಮೊದಲು ಎಲ್ಲಾ ರಾಜಕೀಯ ಪಕ್ಷಗಳನ್ನು ಕರೆದು ಮಾತುಕತೆ ನಡೆಸಲಿ ಎಂದು ಆಗ್ರಹಿಸಿದ್ದಾರೆ. ಸಾಮಾನ್ಯವಾಗಿ ನವೆಂಬರ್ ಮೂರನೇ ವಾರದಲ್ಲಿ ಆರಂಭವಾಗಬೇಕಿದ್ದ ಚಳಿಗಾಲದ ಅಧಿವೇಶನದ ಬದಲು ಈ ರೀತಿ ಕಲಾಪ ಕರೆದಿರುವುದನ್ನೂ ಅವರು ಟೀಕಿಸಿದ್ದಾರೆ.
ಸಮಾಜವಾದಿ ಪಕ್ಷದ ಎಚ್ಚರಿಕೆ: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಕ್ಷೇತ್ರ ಪುನರ್ವಿಂಗಡಣೆಯು ಬಿಜೆಪಿಯ ರಾಜಕೀಯದ ಅತಿದೊಡ್ಡ ತಪ್ಪು ಎಂದು ಸಾಬೀತಾಗಲಿದೆ ಎನ್ನುವ ಮೂಲಕ ಮಸೂದೆಗೆ ತಮ್ಮ ವಿರೋಧವನ್ನು ಸೂಚಿಸಿದ್ದಾರೆ.
ಡಿಎಂಕೆ ಷರತ್ತುಗಳೇನು?: ಕೇಂದ್ರ ಸರ್ಕಾರ ಮಂಡಿಸಲು ಉದ್ದೇಶಿಸಿರುವ ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಬೆಂಬಲ ನೀಡಲು ದ್ರಾವಿಡ ಮುನ್ನೇತ್ರ ಕಳಗಂ ಪಕ್ಷವು ಕೆಲವು ಪ್ರಮುಖ ಷರತ್ತುಗಳನ್ನು ಮುಂದಿಟ್ಟಿದೆ ಎಂದು ಇಂಡಿಯಾ ಟಿವಿ ವರದಿ ಮಾಡಿದೆ. ಸಂಸತ್ತಿನಲ್ಲಿ ತಮಿಳುನಾಡಿನ ಪ್ರಸ್ತುತ ಪ್ರಾತಿನಿಧ್ಯದ ಪಾಲಿಗೆ ಯಾವುದೇ ಧಕ್ಕೆಯಾಗದಂತೆ ರಕ್ಷಣೆ ನೀಡಿದರೆ ಮಾತ್ರ ಈ ಪ್ರಸ್ತಾವಿತ ಮಸೂದೆಯನ್ನು ಬೆಂಬಲಿಸುವುದಾಗಿ ಡಿಎಂಕೆ ಸ್ಪಷ್ಟಪಡಿಸಿದೆ.
ಪಕ್ಷದ ಮೂಲಗಳ ಪ್ರಕಾರ, 1971ರ ಜನಗಣತಿಯ ಆಧಾರದ ಮೇಲೆ ನಿಗದಿಪಡಿಸಲಾದ ಲೋಕಸಭಾ ಸ್ಥಾನಗಳ ಹಂಚಿಕೆಯ ಸ್ಥಗಿತವನ್ನು 2027ರ ನಂತರವೂ ಇನ್ನೂ 25 ವರ್ಷಗಳ ಕಾಲ ಮುಂದುವರಿಸಲು ಕೇಂದ್ರ ಸರ್ಕಾರವು ಸಂವಿಧಾನಕ್ಕೆ ತಿದ್ದುಪಡಿ ತರಬೇಕು ಎಂಬುದು ಡಿಎಂಕೆಯ ಮೊದಲ ಮತ್ತು ಪ್ರಮುಖ ಬೇಡಿಕೆಯಾಗಿದೆ. ಜನಸಂಖ್ಯೆ ನಿಯಂತ್ರಣ ಮಾಡಿದ ರಾಜ್ಯಗಳಿಗೆ ಕ್ಷೇತ್ರ ಪುನರ್ವಿಂಗಡಣೆಯಿಂದ ಅನ್ಯಾಯವಾಗಬಾರದು ಎಂಬುದು ಇದರ ಹಿಂದಿನ ಉದ್ದೇಶವಾಗಿದೆ.
ಇದರೊಂದಿಗೆ, ಸಂಸತ್ತಿನ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸುವುದಾದರೆ ಕೇವಲ ಜನಸಂಖ್ಯೆ ಹೆಚ್ಚಿರುವ ರಾಜ್ಯಗಳಿಗೆ ಮಾತ್ರ ಆದ್ಯತೆ ನೀಡದೆ, ದೇಶದ ಎಲ್ಲಾ ರಾಜ್ಯಗಳ ಸ್ಥಾನಗಳನ್ನು ಸಮಾನವಾಗಿ ಶೇ. 50ರಷ್ಟು ಹೆಚ್ಚಿಸಬೇಕು ಮತ್ತು ಯಾವ ರಾಜ್ಯಕ್ಕೆ ಎಷ್ಟು ಸ್ಥಾನಗಳು ಸಿಗಲಿವೆ ಎಂಬ ಸ್ಪಷ್ಟ ಪಟ್ಟಿಯನ್ನು ಕೇವಲ ಭರವಸೆಯಾಗಿ ನೀಡದೆ ಮಸೂದೆಯಲ್ಲೇ ಅಧಿಕೃತವಾಗಿ ಸೇರಿಸಬೇಕು ಎಂಬ ಷರತ್ತುಗಳನ್ನೂ ಡಿಎಂಕೆ ಇಟ್ಟಿದೆ ಎಂದು ವರದಿಯಾಗಿದೆ. ಈ ಮೂರು ಷರತ್ತುಗಳನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡರೆ ಮಾತ್ರ ಮಸೂದೆಗೆ ಬೆಂಬಲ ನೀಡಲು ಡಿಎಂಕೆ ಸಿದ್ಧವಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ವೈಎಸ್ಆರ್ಸಿಪಿ ಬೆಂಬಲ: ರಾಜ್ಯಗಳ ನ್ಯಾಯಯುತ ಸಮತೋಲನವನ್ನು ಕಾಯ್ದುಕೊಂಡರೆ ಮಸೂದೆಯನ್ನು ಬೆಂಬಲಿಸಲು ವೈಎಸ್ಆರ್ ಕಾಂಗ್ರೆಸ್ ಪಕ್ಷ ಸಿದ್ಧವಿದೆ ಎಂದು ಪಕ್ಷದ ಮೂಲಗಳನ್ನು ಉಲ್ಲೇಖಿಸಿ ಎಎನ್ಐ ವರದಿ ಮಾಡಿದೆ.
ಇಂಡಿಯಾ ಮೈತ್ರಿಕೂಟದಲ್ಲಿ ಒಡಕು?: ಎನ್ಸಿಪಿ (ಶರದ್ ಬಣ) ಸಂಸದೆ ಸುಪ್ರಿಯಾ ಸುಳೆ ಅವರು ಮಸೂದೆಗೆ ಬೆಂಬಲ ನೀಡುವ ಸಾಧ್ಯತೆಯಿದೆ ಎಂಬ ವರದಿಗಳ ನಡುವೆ, ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವುತ್ ಅವರು ಎನ್ಡಿಎ ಬೆಂಬಲಿಸುವ ಯಾವುದೇ ಪಕ್ಷವು ಇಂಡಿಯಾ ಮೈತ್ರಿಕೂಟಕ್ಕೆ ದ್ರೋಹ ಬಗೆದಂತಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕಳೆದ ಏಪ್ರಿಲ್ನಲ್ಲಿ ಸಂವಿಧಾನದ (131ನೇ ತಿದ್ದುಪಡಿ) ಮಸೂದೆಯು ಲೋಕಸಭೆಯಲ್ಲಿ 298 ಪರ ಮತ್ತು 230 ವಿರುದ್ಧ ಮತಗಳನ್ನು ಪಡೆದು, ಅಗತ್ಯವಿದ್ದ ಮೂರನೇ ಎರಡರಷ್ಟು ಬಹುಮತ ಸಿಗದ ಕಾರಣ ಸೋಲುಂಡಿತ್ತು. ಆಗ ಕ್ಷೇತ್ರ ಪುನರ್ವಿಂಗಡಣೆ ಮಸೂದೆಯನ್ನು ಕೈಬಿಡಲಾಗಿತ್ತು. ಆದರೆ ಈ ಬಾರಿ ಶಿರೋಮಣಿ ಅಕಾಲಿದಳವು ಬಿಜೆಪಿಯೊಂದಿಗೆ ಕೈಜೋಡಿಸಿರುವುದರಿಂದ ಹಾಗೂ ಟಿಎಂಸಿ ಮತ್ತು ಉದ್ಧವ್ ಬಣದ ಸುಮಾರು 30 ಸಂಸದರು ಇತರ ಪಕ್ಷಗಳಿಗೆ ಸೇರ್ಪಡೆಯಾಗಿರುವುದರಿಂದ ಲೋಕಸಭೆಯಲ್ಲಿ ಮಸೂದೆ ಪಾಸ್ ಮಾಡಲು ಎನ್ಡಿಎ ದೃಢನಿಶ್ಚಯ ಮಾಡಿದೆ. ಇನ್ನು ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರವಾಗಲು 163 ಮತಗಳ ಅಗತ್ಯವಿದ್ದು, ಎನ್ಡಿಎ ಬಳಿ ಪ್ರಸ್ತುತ 155 ಮತಗಳಿವೆ. ಹೀಗಾಗಿ ಬಿಜೆಡಿ ಮತ್ತು ವೈಎಸ್ಆರ್ಸಿಪಿಯಂತಹ ಪಕ್ಷಗಳ ಬೆಂಬಲ ಸರ್ಕಾರಕ್ಕೆ ನಿರ್ಣಾಯಕವಾಗಲಿದೆ(ಏಜೆನ್ಸೀಸ್).