ಟಿಎಂಸಿಯಲ್ಲಿ ಭಿನ್ನಮತ ಸ್ಫೋಟ!..ದೀದಿ ಕರೆದಿದ್ದ ಮಹತ್ವದ ಸಭೆಗೆ 60 ಶಾಸಕರ ಬಹಿಷ್ಕಾರ | West Bengal Politics

West Bengal Politics | ದೀದಿ ಕರೆದಿದ್ದ ಮಹತ್ವದ ಸಭೆಗೆ 60 ಶಾಸಕರ ಬಹಿಷ್ಕಾರ (ಸಂಗ್ರಹ ಚಿತ್ರ)
West Bengal Politics | ದೀದಿ ಕರೆದಿದ್ದ ಮಹತ್ವದ ಸಭೆಗೆ 60 ಶಾಸಕರ ಬಹಿಷ್ಕಾರ (ಸಂಗ್ರಹ ಚಿತ್ರ)
Published on
West Bengal Politics: ಪಕ್ಷದ ಮೇಲಿನ ಹಿಡಿತ ಸಡಿಲವಾಗುತ್ತಿರುವುದಕ್ಕೆ ಸ್ಪಷ್ಟ ಮುನ್ಸೂಚನೆ ಎಂಬಂತೆ, ಶನಿವಾರ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕೋಲ್ಕತಾದ ಕಾಳೀಘಾಟ್ ನಿವಾಸದಲ್ಲಿ ಕರೆಯಲಾಗಿದ್ದ ಶಾಸಕಾಂಗ ಪಕ್ಷದ ಪ್ರಮುಖ ಸಭೆ ರದ್ದಾಗಿದೆ. ಪಕ್ಷದ ಒಟ್ಟು ಎಂಬತ್ತು ಶಾಸಕರ ಪೈಕಿ ಬರೋಬ್ಬರಿ ಅರವತ್ತು ಶಾಸಕರು ಸಭೆಗೆ ಬಾರದೆ ಬಹಿಷ್ಕಾರ ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಕೇವಲ ಇಪ್ಪತ್ತೇ ಶಾಸಕರು ಮಾತ್ರ ಸಭೆಗೆ ಹಾಜರಾಗಿದ್ದರಿಂದ ಶಾಸಕಾಂಗ ಪಕ್ಷದ ನಾಯಕ ಶೋವಂದೇಬ್ ಚಟ್ಟೋಪಾಧ್ಯಾಯ ಅವರು ಸಭೆಯನ್ನು ರದ್ದುಗೊಳಿಸಬೇಕಾಯಿತು. ಗೈರಾದ ಶಾಸಕರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಲಭ್ಯರಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಈ ಭಾರಿ ಅವಮಾನದಿಂದ ಪಾರಾಗಲು ಟಿಎಂಸಿ ವಕ್ತಾರ ಕುನಾಲ್ ಘೋಷ್ ಸಮರ್ಥನೆಗಿಳಿದಿದ್ದು, ಪಕ್ಷದ ಪ್ರಮುಖ ನಾಯಕರಾದ ಅಭಿಷೇಕ್ ಬ್ಯಾನರ್ಜಿ ಮತ್ತು ಕಲ್ಯಾಣ್ ಬ್ಯಾನರ್ಜಿ ಮೇಲೆ ನಡೆದ ದಾಳಿಗಳ ಹಿನ್ನೆಲೆಯಲ್ಲಿ ಶಾಸಕರು ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಜೂನ್ 1 ರಂದು ರಾಜ್ಯಾದ್ಯಂತ ಬ್ಲಾಕ್ ಮಟ್ಟದಲ್ಲಿ ಪ್ರತಿಭಟನೆಗೆ ಕರೆ ನೀಡಲಾಗಿದ್ದು, ಜೂನ್ 2 ರಂದು ರಾಣಿ ರಶ್ಮೋನಿ ರಸ್ತೆಯಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಮಮತಾ ಬ್ಯಾನರ್ಜಿ ಪಾಲ್ಗೊಳ್ಳಲಿದ್ದಾರೆ ಎಂದು ವರದಿಯಾಗಿದೆ.
2011 ರಿಂದ ಪಶ್ಚಿಮ ಬಂಗಾಳವನ್ನು ಸತತ ಮೂರು ಬಾರಿ ಆಳಿದ ಟಿಎಂಸಿಯ ಹಿಡಿತ ಈಗ ಸಂಪೂರ್ಣ ಸಡಿಲವಾಗುತ್ತಿದ್ದು, ಮಮತಾ ಬ್ಯಾನರ್ಜಿ ಅಳಿಯ ಅಭಿಷೇಕ್ ಬ್ಯಾನರ್ಜಿ ಮೇಲೆ ಗುಂಪೊಂದು ಹಲ್ಲೆ ನಡೆಸಿದ ಮರುದಿನವೇ, ಹೂಗ್ಲಿಯ ಚಂದಿತಲಾದಲ್ಲಿ ಹಿರಿಯ ಸಂಸದ ಕಲ್ಯಾಣ್ ಬ್ಯಾನರ್ಜಿ ತಲೆಗೆ ಹೊಡೆಯಲಾಗಿದೆ. ಈ ಸರಣಿ ದಾಳಿಗಳು ಪಕ್ಷದ ದೌರ್ಬಲ್ಯವನ್ನು ಎತ್ತಿ ತೋರಿಸುತ್ತಿವೆ. ಈ ಬಿಕ್ಕಟ್ಟಿನ ನಡುವೆ ಮಾಜಿ ಸಚಿವ ಫಿರ್ಹಾದ್ ಹಕೀಮ್, ನಯನಾ ಬಂದೋಪಾಧ್ಯಾಯ, ಮದನ್ ಮಿತ್ರಾ ಮತ್ತು ಅಶಿಮಾ ಪಾತ್ರಾರಂತಹ ಹಿರಿಯ ನಾಯಕರು ಮಮತಾ ಪರ ನಿಂತಿರುವುದು ಸದ್ಯದ ಮಟ್ಟಿಗೆ ನಾಯಕತ್ವಕ್ಕೆ ಸಣ್ಣ ಸಮಾಧಾನ ತಂದಿದೆ.
ಬಂಗಾಳದಲ್ಲಿ ಅಜೇಯ ಎಂದು ಬೀಗುತ್ತಿದ್ದ ಟಿಎಂಸಿ, ಇತ್ತೀಚಿನ ಚುನಾವಣೆಯಲ್ಲಿ ಬಿಜೆಪಿಗೆ ಸಂಪೂರ್ಣ ಶರಣಾಗಿದೆ. ಅದರಲ್ಲೂ ಮಮತಾ ಬ್ಯಾನರ್ಜಿ ತಮ್ಮದೇ ಭದ್ರಕೋಟೆಯಾಗಿದ್ದ ಭವಾನಿಪುರದಲ್ಲಿ ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ ಸೋತಿರುವುದು ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗಿದೆ. ಹಿರಿಯ ನಾಯಕರು ಈಗ ಮಮತಾ ತಂತ್ರಗಾರಿಕೆಯನ್ನೇ ಪ್ರಶ್ನಿಸುತ್ತಿದ್ದು, ಇತ್ತೀಚೆಗಷ್ಟೇ ಸಂಸದೆ ಕಾಕೋಲಿ ಘೋಷ್ ದಸ್ತಿದಾರ್ ಪಕ್ಷದ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ.
ಟಿಎಂಸಿ ತನ್ನ ಮೂಲ ತತ್ವವಾದ ‘ಮಾ, ಮಾತಿ, ಮಾನುಷ್’ (ತಾಯಿ, ಮಣ್ಣು, ಜನರು) ಎಂಬ ತತ್ವದಿಂದ ದೂರ ಸರಿದಿದ್ದು, ಮಮತಾ ಸೇರಿದಂತೆ ಉನ್ನತ ನಾಯಕರು ಯಾರಿಗೂ ಸಿಗುತ್ತಿಲ್ಲ ಎಂದು ಘೋಷ್​ ಆರೋಪಿಸುತ್ತಿದ್ದಾರೆ. ಪ್ರಸ್ತುತ, ಪಕ್ಷದ ವಿರುದ್ಧ ಸಾರ್ವಜನಿಕವಾಗಿ ಟೀಕೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಟಿಎಂಸಿ ಐದು ಸದಸ್ಯರ ಸಮಿತಿಯನ್ನು ರಚಿಸಿದೆಯಾದರೂ, ಭಿನ್ನಮತದ ಜ್ವಾಲೆಯನ್ನು ತಣಿಸುವುದು ಸುಲಭದ ಮಾತಲ್ಲ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net