

ಸಂವಿಧಾನ ರಚನಾ ಸಭೆಯು 1949ರ ನ. 26ರಂದು ನಮ್ಮ ಸಂವಿಧಾನವನ್ನು ಅಂಗೀಕರಿಸಿತು. ಇಂದು ನಾವು ಡಾ. ರಾಜೇಂದ್ರ ಪ್ರಸಾದ್, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಸಂವಿಧಾನ ರಚನಾ ಸಭೆಯ ಪ್ರತಿಯೊಬ್ಬ ಸದಸ್ಯರನ್ನು ಸ್ಮರಿಸುತ್ತೇವೆ. ಆಧುನಿಕ ಸಂವಿಧಾನ ರಚಿಸುವಾಗ ಭಾರತದ ಶ್ರೀಮಂತ ಪರಂಪರೆ ಮತ್ತು ನಾಗರಿಕತೆಯ ವಿವೇಕದಿಂದ ಪ್ರೇರಣೆ ಪಡೆದಿರುವುದು ಸಂವಿಧಾನ ಶಿಲ್ಪಿಗಳ ಶ್ರೇಷ್ಠತೆಗೆ ಸಾಕ್ಷಿ.
ಅನೇಕ ನಂಬಿಕೆಗಳು, ಭಾಷೆಗಳು, ಆಚಾರ-ವಿಚಾರಗಳು ಮತ್ತು ಚಿಂತನಾ ಧಾರೆಗಳನ್ನು ಹೊಂದಿರುವ ಭಾರತದಂತಹ ವೈವಿಧ್ಯಮಯ ರಾಷ್ಟ್ರದಲ್ಲಿ ಸಂವಿಧಾನವು ಸಂಸತ್ತು ಮತ್ತು ನ್ಯಾಯಾಲಯಗಳ ಆವರಣಕ್ಕೆ ಸೀಮಿತವಾಗಬಾರದು. ಜನರ, ವಿಶೇಷವಾಗಿ ಯುವಜನರ ಸಾಮೂಹಿಕ ಪ್ರಜ್ಞೆಯೊಂದಿಗೆ ಅದರ ಸಂಪರ್ಕ ಗಾಢವಾಗಬೇಕು. ಭಾರತದ ಉಜ್ವಲ ಭವಿಷ್ಯಕ್ಕೆ ಅಗತ್ಯವಾದ ಏಕತೆಯ ಭಾವನೆ ಬಲಗೊಳ್ಳಬೇಕು. ಈ ಉದ್ದೇಶದಿಂದಲೇ ಒಂದು ದಶಕಕ್ಕೂ ಹಿಂದೆ ನಮ್ಮ ಸರ್ಕಾರ ನ. 26ನ್ನು ಸಂವಿಧಾನ ದಿನವನ್ನಾಗಿ ಆಚರಿಸಲು ನಿರ್ಧರಿಸಿತು.
ನನ್ನನ್ನು ಒಳಗೊಂಡಂತೆ ಕೋಟ್ಯಂತರ ಭಾರತೀಯರಿಗೆ, ಭಾರತದ ಸಂವಿಧಾನವು ನಮ್ಮ ಜೀವನ ಪಯಣದ ಅವಿಭಾಜ್ಯ ಅಂಗವಾಗಿದೆ. ನನ್ನ ಬಾಲ್ಯ ಮತ್ತು ನಾನು ಬೆಳೆದ ಸಾಮಾನ್ಯ ಪರಿಸ್ಥಿತಿಗಳನ್ನು ನೆನಪಿಸಿಕೊಂಡಾಗ ಸಂವಿಧಾನದ ಬಗ್ಗೆ ಅಪಾರ ಕೃತಜ್ಞತೆ ಮೂಡುತ್ತದೆ. ಯಾವುದೇ ವಿಶೇಷ ಸವಲತ್ತುಗಳಿಲ್ಲದ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ವ್ಯಕ್ತಿಯೊಬ್ಬ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಸೇವೆ ಸಲ್ಲಿಸುವ ಜವಾಬ್ದಾರಿ ಪಡೆಯಲು ಸಾಧ್ಯವಾಗಿರುವುದು ನಮ್ಮ ಸಂವಿಧಾನದ ಶಕ್ತಿ. ವ್ಯಕ್ತಿಯ ಹುಟ್ಟಿನ ಪರಿಸ್ಥಿತಿಗಳು ಆತನ ಭವಿಷ್ಯವನ್ನು ನಿರ್ಧರಿಸುವುದಿಲ್ಲ ಎಂಬುದನ್ನು ಸಂವಿಧಾನ ಸಾಧ್ಯವಾಗಿಸಿದೆ. ಅದನ್ನು ಬಲಪಡಿಸುವ ಮೂಲಕ ಈ ಕೃತಜ್ಞತೆಯ ಋಣ ತೀರಿಸಲು ನಾವು ಪ್ರಯತ್ನಿಸಿದ್ದೇವೆ.
ಸಂವಿಧಾನ ತಜ್ಞ ಗ್ರಾನ್ವಿಲ್ ಆಸ್ಟಿನ್ ಅವರು ನಮ್ಮ ಸಂವಿಧಾನವನ್ನು ಪ್ರಮುಖವಾಗಿ ಸಾಮಾಜಿಕ ದಾಖಲೆ ಎಂದು ಬಣ್ಣಿಸಿದ್ದಾರೆ. ಸಾಮಾಜಿಕ ಮತ್ತು ಆರ್ಥಿಕ ನ್ಯಾಯದ ಆಶಯ ಅದರ ಪ್ರತಿಯೊಂದು ಎಳೆಯಲ್ಲೂ ಹಾಸುಹೊಕ್ಕಾಗಿದೆ. ಸಂವಿಧಾನ ಶಿಲ್ಪಿಗಳ ಈ ದೃಷ್ಟಿಕೋನವನ್ನು ಸಾಕಾರಗೊಳಿಸುವುದೇ ನಮ್ಮ ಗುರಿ. ಸುಮಾರು 50 ಕೋಟಿ ಭಾರತೀಯರು ಬಡತನದಿಂದ ಹೊರಬಂದಿದ್ದಾರೆ ಎಂದು ಇತ್ತೀಚಿನ ವಿಶ್ವಬ್ಯಾಂಕ್ ವರದಿ ತಿಳಿಸಿದೆ. ತಲೆಮಾರುಗಳ ವಂಚನೆಯಿಂದ ಮುಕ್ತರಾದ ಕೋಟ್ಯಂತರ ಕುಟುಂಬಗಳು ಈಗ ಮಕ್ಕಳ ಉತ್ತಮ ಭವಿಷ್ಯದ ಕನಸು ಕಾಣುತ್ತಿವೆ.
ಪಿಎಂ ಆವಾಸ್ ಯೋಜನೆಯಡಿ ಬಡವರಿಗೆ ಶಾಶ್ವತ ಮನೆ ದೊರೆತಾಗ ಘನತೆಯ ಬದುಕಿನ ಸಾಂವಿಧಾನಿಕ ಭರವಸೆ ಸಾಕಾರಗೊಳ್ಳುತ್ತದೆ. ಉಜ್ವಲ ಯೋಜನೆಯಡಿ ಮಹಿಳೆಯರು ಹೊಗೆ ತುಂಬಿದ ಅಡುಗೆಮನೆಯ ಸಂಕಷ್ಟದಿಂದ ಮುಕ್ತರಾದಾಗ ಸಮಾನತೆ ಮತ್ತು ಯೋಗಕ್ಷೇಮದ ಆದರ್ಶಗಳು ಈಡೇರುತ್ತವೆ. ಆಯುಷ್ಮಾನ್ ಭಾರತ್ ಯೋಜನೆಯಿಂದ ಬಡ ಕುಟುಂಬಗಳು ಸಾಲದ ಭಯವಿಲ್ಲದೆ ಆರೋಗ್ಯ ಸೇವೆ ಪಡೆಯುವಂತಾದಾಗ ಸಾಮಾಜಿಕ ನ್ಯಾಯ ಜೀವಂತವಾಗುತ್ತದೆ. ಮುದ್ರಾ ಮತ್ತು ಪಿಎಂ-ಸ್ವನಿಧಿ ಯೋಜನೆಗಳು ಸಣ್ಣ ಉದ್ಯಮಿಗಳು ಹಾಗೂ ಬೀದಿಬದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯ ಒದಗಿಸುವ ಮೂಲಕ ಆರ್ಥಿಕ ನ್ಯಾಯವನ್ನು ಸಾಕಾರಗೊಳಿಸುತ್ತಿವೆ. ಡಿಜಿಟಲ್ ತಂತ್ರಜ್ಞಾನ ಮತ್ತು ಯುಪಿಐನಂತಹ ವೇದಿಕೆಗಳು ಎಲ್ಲ ವರ್ಗದ ಜನರಿಗೆ ಅವಕಾಶಗಳನ್ನು ತಲುಪಿಸುವ ಮೂಲಕ ಒಳಗೊಳ್ಳುವಿಕೆಯ ಸಾಂವಿಧಾನಿಕ ಆಶಯವನ್ನು ಬಲಪಡಿಸಿವೆ.
ನಮ್ಮ ಸರ್ಕಾರ ಜಾರಿಗೆ ತಂದ ಸಂವಿಧಾನ ತಿದ್ದುಪಡಿಗಳನ್ನೂ ಇದೇ ದೃಷ್ಟಿಕೋನದಲ್ಲಿ ನೋಡಬೇಕು. 101ನೇ ತಿದ್ದುಪಡಿಯ ಮೂಲಕ ಜಿಎಸ್ಟಿ ಜಾರಿಗೆ ಬಂದಿತು. 102ನೇ ತಿದ್ದುಪಡಿಯು ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡಿತು. 103ನೇ ತಿದ್ದುಪಡಿಯು ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ (ಇಡಬ್ಲ್ಯೂಎಸ್) ಮೀಸಲಾತಿ ಕಲ್ಪಿಸುವ ಮೂಲಕ ಅಸ್ತಿತ್ವದಲ್ಲಿರುವ ಮೀಸಲಾತಿ ವ್ಯವಸ್ಥೆಯ ಹೊರಗಿರುವ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಆಕಾಂಕ್ಷೆಗಳನ್ನು ಈಡೇರಿಸಿತು.
1950ರ ನಂತರ ಇದೇ ಮೊದಲ ಬಾರಿಗೆ ಸಂವಿಧಾನದ ಆವೃತ್ತಿಯು ಎಂಟನೇ ಅನುಸೂಚಿಯ ಎಲ್ಲ 22 ಭಾಷೆಗಳಲ್ಲಿ ಲಭ್ಯವಾಗಿದೆ. ಇದರಿಂದ ಸಂವಿಧಾನ ಜನರಿಗೆ ಇನ್ನಷ್ಟು ಹತ್ತಿರವಾಗಿದೆ. ಸ್ವಾತಂತ್ರ್ಯ ನಂತರವೂ 1860ರ ದಶಕದ ವಸಾಹತುಶಾಹಿ ದಂಡ ಸಂಹಿತೆಯಡಿ ಆಡಳಿತ ನಡೆಯುತ್ತಿತ್ತು. ಭಾರತೀಯ ನ್ಯಾಯ ಸಂಹಿತೆಯ ಮೂಲಕ ಶಿಕ್ಷೆ ಕೇಂದ್ರಿತ ವ್ಯವಸ್ಥೆಯಿಂದ ನಾಗರಿಕ ಕೇಂದ್ರಿತ ನ್ಯಾಯ ವ್ಯವಸ್ಥೆಯತ್ತ ಸಾಗಲು ಪ್ರಯತ್ನಿಸಲಾಗಿದೆ. ಕಳೆದ ದಶಕದಲ್ಲಿ ನಾವು ನಾಗರಿಕರ ಕರ್ತವ್ಯಗಳಿಗೆ ವಿಶೇಷ ಒತ್ತು ನೀಡಿದ್ದೇವೆ. ಸ್ವಚ್ಛ ಭಾರತ, ಜಲ ಸಂರಕ್ಷಣೆ ಮತ್ತು ಪರಿಸರ ಸಂರಕ್ಷಣೆಯಂತಹ ಜನಾಂದೋಲನಗಳು ನಾಗರಿಕ ಕರ್ತವ್ಯದ ಭಾವನೆಯನ್ನು ಬಲಪಡಿಸಿವೆ.
ಆದರೆ, ಸಂವಿಧಾನವನ್ನು ಎತ್ತಿಹಿಡಿಯಬೇಕಾದವರೇ ಅದನ್ನು ದುರ್ಬಲಗೊಳಿಸಿದ ಸಂದರ್ಭಗಳೂ ನಮ್ಮ ಇತಿಹಾಸದಲ್ಲಿವೆ. 1951ರ ಮೊದಲ ಸಂವಿಧಾನ ತಿದ್ದುಪಡಿಗೆ ಈ ವರ್ಷ 75 ವರ್ಷಗಳು ತುಂಬುತ್ತಿವೆ. ಜನರಿಂದ ನೇರವಾಗಿ ಚುನಾಯಿತವಾಗದ ಸರ್ಕಾರವು ತಾತ್ಕಾಲಿಕ ಸಂಸತ್ತಿನ ಬಹುಮತ ಬಳಸಿ ಮೂಲಭೂತ ಸ್ವಾತಂತ್ರ್ಯಗಳನ್ನು ನಿರ್ಬಂಧಿಸಿತು. ಮೊದಲ ಸಾರ್ವತ್ರಿಕ ಚುನಾವಣೆಗೆ ಕೆಲವೇ ತಿಂಗಳುಗಳ ಮೊದಲು ಈ ತಿದ್ದುಪಡಿ ತರಲಾಗಿತ್ತು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜಾರಿಗೆ ತಂದ 42ನೇ ತಿದ್ದುಪಡಿಗೂ 50 ವರ್ಷಗಳಾಗಿವೆ. ಇದು ನ್ಯಾಯಾಂಗ ಪರಿಶೀಲನೆಯ ವ್ಯಾಪ್ತಿಯನ್ನು ಮೊಟಕುಗೊಳಿಸಿ ಸಾಂಸ್ಥಿಕ ಅಧಿಕಾರಗಳ ಸಮತೋಲನವನ್ನು ಬದಲಿಸಿತು. ಅಧಿಕಾರದ ದಾಹವುಳ್ಳ ನಾಯಕತ್ವದ ನಡೆಗಳನ್ನು ಅರ್ಥ ಮಾಡಿಕೊಳ್ಳಲು 38ನೇ ಮತ್ತು 39ನೇ ತಿದ್ದುಪಡಿಗಳನ್ನೂ ಯುವಜನರು ಅಧ್ಯಯನ ಮಾಡಬೇಕು.
ಚುನಾಯಿತ ರಾಜ್ಯ ಸರ್ಕಾರಗಳನ್ನು ವಜಾಗೊಳಿಸಲು 356ನೇ ವಿಧಿಯನ್ನು ಪದೇಪದೆ ದುರುಪಯೋಗ ಮಾಡಿ ಕೊಂಡಿರುವುದೂ ಕಳವಳಕಾರಿ. ಒಂದು ಪಕ್ಷವು ಸುಮಾರು ನೂರು ಬಾರಿ ಈ ವಿಧಿಯನ್ನು ಹೇರಿದ ಕುಖ್ಯಾತ ದಾಖಲೆಯನ್ನು ಹೊಂದಿದೆ. ಸಂವಿಧಾನವು ದೇಶದಾದ್ಯಂತ ಅಕ್ಷರಶಃ ಮತ್ತು ಅದರ ಆಶಯಕ್ಕೆ ಅನುಗುಣವಾಗಿ ಜಾರಿಯಾಗಬೇಕೆಂದು ಸಂವಿಧಾನ ಶಿಲ್ಪಿಗಳು ಬಯಸಿದ್ದರು. ಆದರೆ, 70 ವರ್ಷಗಳಿಗೂ ಹೆಚ್ಚು ಕಾಲ 370 ಮತ್ತು 35ಎ ವಿಧಿಗಳು ಜಮ್ಮು-ಕಾಶ್ಮೀರದಲ್ಲಿ ಪೂರ್ಣ ಸಂವಿಧಾನ ಜಾರಿಯಾಗಲು ಅವಕಾಶ ನೀಡಲಿಲ್ಲ. ಇದರಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರ ಹಕ್ಕುಗಳಿಗೆ ಧಕ್ಕೆಯಾಗಿತ್ತು. 2019ರಲ್ಲಿ ಈ ಐತಿಹಾಸಿಕ ತಪ್ಪನ್ನು ಸರಿಪಡಿಸಲಾಯಿತು.
ದಶಕಗಳಿಂದ ನಕ್ಸಲರು ಬಂದೂಕಿನ ಬಲದಿಂದ ಬಡಜನರಿಗೆ ಸಂವಿಧಾನ ಖಾತ್ರಿಪಡಿಸಿದ ಹಕ್ಕುಗಳನ್ನು ನಿರಾಕರಿಸುತ್ತಿದ್ದರು. ಈ ವರ್ಷ ನಕ್ಸಲಿಸಂ ನಿಮೂಲನೆಯಾಗಿರುವುದು ಮಹತ್ವದ ಸಂಗತಿ. ಇದರಿಂದ ಬಡಜನರು ಭಯವಿಲ್ಲದೆ ತಮ್ಮ ಸಾಂವಿಧಾನಿಕ ಹಕ್ಕುಗಳನ್ನು ಚಲಾಯಿಸಲು ಸಾಧ್ಯವಾಗಿದೆ. ಈಗ ನಮ್ಮ ಪ್ರಗತಿಯ ಹಾದಿಗೆ ಅಡ್ಡಿಯಾಗಲು ಪ್ರಯತ್ನಿಸುತ್ತಿರುವ ಬೌದ್ಧಿಕ ನಕ್ಸಲರು ಮಾತ್ರ ಉಳಿದಿದ್ದಾರೆ. ನಮ್ಮ ಸಂವಿಧಾನವನ್ನು ರೂಪಿಸಲು ನೆರವಾದ ಅಸಾಧಾರಣ ಮಹಿಳೆಯರನ್ನು ಸ್ಮರಿಸದಿದ್ದರೆ ಸಂವಿಧಾನದ ಪಯಣವು ಅಪೂರ್ಣವಾಗುತ್ತದೆ. ಆದರೆ, ಈ ವರ್ಷದ ಆರಂಭದಲ್ಲಿ ನಡೆದ ಘಟನೆಯು ನಮ್ಮ ಹೃದಯಗಳಲ್ಲಿ ನಾಚಿಕೆ ಮೂಡಿಸುವಂತಿದೆ. ಶಾಸಕಾಂಗಗಳಲ್ಲಿ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ನೀಡುವ ಉದ್ದೇಶದ ಮಸೂದೆಯನ್ನು ಅಂಗೀಕರಿಸಲು ಆ ಒಂದು ವಿರೋಧ ಪಕ್ಷವು ಅವಕಾಶ ನೀಡಲಿಲ್ಲ, ಈ ಮೂಲಕ ಸಾಂವಿಧಾನಿಕ ಮೌಲ್ಯಗಳ ಬಗ್ಗೆ ತನಗಿರುವ ತಿರಸ್ಕಾರವನ್ನು ಮತ್ತೊಮ್ಮೆ ಪ್ರದರ್ಶಿಸಿತು. ಭಾರತದ ನಾರಿ ಶಕ್ತಿಗೆ ನ್ಯಾಯ ಒದಗಿಸುವುದನ್ನು ಯಾವ ಶಕ್ತಿಯೂ ತಡೆಯಲು ಸಾಧ್ಯವಿಲ್ಲ ಎಂದು ನಾನು ಭರವಸೆ ನೀಡುತ್ತೇನೆ.
ನಮ್ಮ ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷಕ್ಕೆ ಸ್ಪಷ್ಟವಾಗಿ ವ್ಯಾಖ್ಯಾನಿಸಲಾದ ಪಾತ್ರವಿದೆ. ದುರದೃಷ್ಟವಶಾತ್, ಪ್ರಮುಖ ವಿರೋಧ ಪಕ್ಷವು ‘ವಿರೋಧ ಪಕ್ಷ’ಕ್ಕಿಂತ ಹೆಚ್ಚಾಗಿ ‘ಅವರೋಧ ಪಕ್ಷ’ (ಅಡ್ಡಿಪಡಿಸುವ ಪಕ್ಷ) ಆದಂತೆ ತೋರುತ್ತಿದೆ. ಪ್ರಜಾಪ್ರಭುತ್ವ ಪ್ರಕ್ರಿಯೆಗಳಿಗೆ ಅಡ್ಡಿಪಡಿಸುವುದು ಸಾಂವಿಧಾನಿಕ ಜವಾಬ್ದಾರಿಗಳನ್ನು ನಿರ್ವಹಿಸುವುದಕ್ಕೆ ಪರ್ಯಾಯವಲ್ಲ ಎಂಬುದನ್ನು ಅವರು ತಿಳಿದಿರಬೇಕು. ಇಂದು ಭಾರತವು ನಿರ್ಣಾಯಕ ಘಟ್ಟದಲ್ಲಿ ನಿಂತಿದೆ. 2047ರ ವೇಳೆಗೆ ವಿಕಸಿತ ಭಾರತದತ್ತ ನಾವು ಸಾಗುತ್ತಿರುವಾಗ, ಎರಡು ಸರಳ ಆದರೆ ಶಕ್ತಿಶಾಲಿ ತತ್ವಗಳು ನಮ್ಮ ಸಾಮೂಹಿಕ ಪ್ರಯತ್ನಗಳಿಗೆ ಮಾರ್ಗದರ್ಶನ ನೀಡಬಲ್ಲವು, ಅವುಗಳೆಂದರೆ, ನಮ್ಮ ಆಲೋಚನೆಯಲ್ಲಿ ‘ಭಾರತ ಮೊದಲು’ ಮತ್ತು ನಮ್ಮ ಕಾರ್ಯಗಳಲ್ಲಿ ‘ಕರ್ತವ್ಯ’. ಇವುಗಳನ್ನು ನಮ್ಮ ಮಾರ್ಗದರ್ಶಿ ತತ್ವಗಳಾಗಿ ಮತ್ತು ಸಂವಿಧಾನವನ್ನು ನಮ್ಮ ಶಕ್ತಿಯ ಮೂಲವಾಗಿ ಇಟ್ಟುಕೊಂಡು, ಮುಂಬರುವ ತಲೆಮಾರುಗಳಿಗೆ ಉಜ್ವಲ ಭವಿಷ್ಯವನ್ನು ನಾವು ಭದ್ರಪಡಿಸಬಹುದು.