

ಮೆಟಾ ಕಚೇರಿಗೆ ನುಗ್ಗಿ ಪ್ರತಿಭಟನೆ ನಡೆಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು.
ಹೈದರಾಬಾದ್ ಮತ್ತು ಮುಂಬೈನಲ್ಲಿನ ಮೆಟಾ ಕಚೇರಿಯಲ್ಲಿ ಭಾರಿ ಪ್ರತಿಭಟನೆ.
ಕಾಂಗ್ರೆಸ್ ಕಾರ್ಯಕರ್ತರು ಗೂಂಡಾಗಳು ಎಂದು ಬಿಜೆಪಿ-ಬಿಆರ್ಎಸ್ ತೀವ್ರ ವಾಗ್ದಾಳಿ.
ಹೈದರಾಬಾದ್: ಭಾರತೀಯ ಯುವ ಕಾಂಗ್ರೆಸ್ ನಾಯಕರ ಸೋಶಿಯಲ್ ಮೀಡಿಯಾ ಖಾತೆಗಳನ್ನು ಅಮಾತುಗೊಳಿಸಿದ ಕಾರಣ, ಸಿಟ್ಟಿಗೆದ್ದ ತೆಲಂಗಾಣ ಯುವ ಕಾಂಗ್ರೆಸ್ ಕಾರ್ಯಕರ್ತರು, ಹೈದರಾಬಾದ್ನಲ್ಲಿರುವ ಮೆಟಾಕಚೇರಿಯ ಆವರಣಕ್ಕೆ ನುಗ್ಗಿ ಹೂವಿನ ಕುಂಡಗಳನ್ನು ಎಸೆದು, ಪೋಸ್ಟರ್ ಹಿಡಿದು, ಸ್ಥಳದಲ್ಲೇ ಪ್ರತಿಭಟನೆ ನಡೆಸಿದ ಘಟನೆಯ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಉದಯ್ ಭಾನು ಚಿಬ್ ಮತ್ತು ರಾಷ್ಟ್ರೀಯ ಉಸ್ತುವಾರಿ ಮನೀಶ್ ಶರ್ಮಾ ಅವರ ಹ್ಯಾಂಡಲ್ಗಳ ಮೇಲೆ ಮೆಟಾ ನಿರ್ಬಂಧ ಹೇರಿದ್ದನ್ನು ಖಂಡಿಸಿ, ನ.20ರಂದು ರಾಜ್ಯಾಧ್ಯಕ್ಷ ಜಕ್ಕಿಡಿ ಶಿವಚರಣ್ ರೆಡ್ಡಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ ಎಂದು ಇಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಕೇಂದ್ರ ಬಿಜೆಪಿ ಸರ್ಕಾರದ ಒತ್ತಡಕ್ಕೆ ಮಣಿದು ಮೆಟಾ ವಿರೋಧ ಪಕ್ಷಗಳ ಧ್ವನಿಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ನಿರ್ಬಂಧಿಸಲಾದ ಪೋಸ್ಟರ್ಗಳನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು. ಇನ್ನು ಏಳು ದಿನಗಳಲ್ಲಿ ಖಾತೆ ಮತ್ತು ಪೋಸ್ಟ್ಗಳನ್ನು ಮರುಸ್ಥಾಪಿಸದಿದ್ದರೆ ನ್ಯಾಯಾಲಯ, ಬೀದಿ ಹಾಗೂ ಕಚೇರಿಗಳಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಯುವ ಕಾಂಗ್ರೆಸ್ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಎಚ್ಚರಿಕೆ ನೀಡಿದೆ.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋಗಳ ಪ್ರಕಾರ, ಹಲವರು ಕಚೇರಿಯ ಒಳಗೆ ಪ್ರವೇಶಿಸಿ..ಹೂ ಕುಂಡ ಹೊಡೆದು ದಾಂಧಲೆ ನಡೆಸುತ್ತಿರುವುದು ಇದೆ, ಜೊತೆಗೆ ಹಲವರು ಪೋಸ್ಟರ್ಗಳನ್ನು ಹಿಡಿದು ಕಚೇರಿಯಲ್ಲೇ ಕುಳಿತು ಪ್ರತಿಭಟಿಸುತ್ತಿರುವುದು ಇದೆ. ಹೈದರಾಬಾದ್ ಪೊಲೀಸರು ಅವರ ಮನವೊಲಿಸುತ್ತಿರುವ ದೃಶ್ಯವು ಇದರಲ್ಲಿ ಇದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 21 ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡರು. ಆನಂತರ ಜಾಮೀನಿನ ಮೇಲೆ ಅವರನ್ನು ಬಿಡುಗಡೆ ಮಾಡಲಾಯಿತು. ಮುಂಬೈನ ಬಿಕೆಸಿ ಬಳಿಯ ಮೆಟಾ ಕಚೇರಿ ಹೊರಗೂ ಮುಂಬೈ ಯುವ ಕಾಂಗ್ರೆಸ್ ಅಧ್ಯಕ್ಷೆ ಜೀನತ್ ಶಬ್ರಿನ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ವಿದೇಶಿ ಕಂಪನಿಗಳು ದೇಶದಲ್ಲಿ ವ್ಯಾಪಾರ ಮಾಡಬೇಕೇ ಹೊರತು ರಾಜಕೀಯವಲ್ಲ. ಸರ್ಕಾರ ಕೂಡ ಕಂಪನಿಗಳ ಮೇಲೆ ಅನಗತ್ಯ ಒತ್ತಡ ಹೇರಬಾರದು ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಕಿಡಿಕಾರಿದರು.
ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಮಾತನಾಡಿ, ಪ್ರೈವೆಟ್ ಕಂಪನಿಗಳ ಕಚೇರಿ ಧ್ವಂಸ ಮಾಡುವುದು ಕಾಂಗ್ರೆಸ್ನ ಮಾದರಿ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಭಾರತ ದುರ್ಬಲ ಆರ್ಥಿಕತೆಯಾಗಿತ್ತು ಎಂದಿದ್ದಾರೆ. ಜೊತೆಗೆ ಕಾಂಗ್ರೆಸ್ ಕಾರ್ಯಕರ್ತರನ್ನು ಗೂಂಡಾಗಳು ಎಂದು ಕರೆದಿದ್ದಾರೆ.
ಬಿಆರ್ಎಸ್ ನಾಯಕ ಕೆ.ಟಿ. ರಾಮರಾವ್ ಮಾತನಾಡಿ, ಖಾಸಗಿ ಕಂಪನಿಗಳನ್ನು ಕರೆತರುವ ರಾಹುಲ್ ಗಾಂಧಿಯವರ ಮಾರ್ಗ ಇದೇನಾ? ನಿನ್ನೆಯ ಕೃತ್ಯ ಕೇವಲ ಗಾಜನ್ನು ಒಡೆದಿಲ್ಲ, 'ಬ್ರ್ಯಾಂಡ್ ಹೈದರಾಬಾದ್' ಮೇಲಿನ ನಂಬಿಕೆಯನ್ನೇ ಒಡೆದಿದೆ ಎಂದು ಕೆಂಡಕಾರಿದರು, (ಏಜೆನ್ಸೀಸ್).