ಅತೀಕ್ ಅಹ್ಮದ್ ಹಿಡಿತದಲ್ಲಿದ್ದ ಕಸಾರಿ-ಮಸಾರಿ ಪ್ರದೇಶಕ್ಕೆ 'ಶ್ರೀಕೃಷ್ಣಪುರಿ' ಎಂದು ಮರುನಾಮಕರಣ ಮಾಡಿದ ಸಿಎಂ ಯೋಗಿ! | Kasari-Masari

ಲಖನೌ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಕುಖ್ಯಾತ ಕಸಾರಿ-ಮಸಾರಿ (Kasari-Masari) ಪ್ರದೇಶದ ಹೆಸರನ್ನು ಶ್ರೀಕೃಷ್ಣಪುರಿ ಎಂದು ಬದಲಾಯಿಸಿ ಅಭಿವೃದ್ಧಿಪಡಿಸುವುದಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘೋಷಿಸಿದ್ದಾರೆ. ದರೋಡೆಕೋರ ಅತೀಕ್ ಅಹ್ಮದ್‌ನ ಕ್ರಿಮಿನಲ್ ನೆರಳಿನಿಂದ ಈ ಜಾಗವನ್ನು ಮುಕ್ತಿಗೊಳಿಸಿ, ಅಭಿವೃದ್ಧಿಯ ಹೊಸ ಸಂಕೇತವಾಗಿ ರೂಪಿಸುವುದಾಗಿ ಯೋಗಿ ಸ್ಪಷ್ಟಪಡಿಸಿದ್ದಾರೆ.
ಕಸಾರಿ-ಮಸಾರಿ ಹೆಸರನ್ನು 'ಶ್ರೀಕೃಷ್ಣಪುರಿ' ಎಂದು ಬದಲಿಸಿದ ಸಿಎಂ ಯೋಗಿ!
ಕಸಾರಿ-ಮಸಾರಿ ಹೆಸರನ್ನು 'ಶ್ರೀಕೃಷ್ಣಪುರಿ' ಎಂದು ಬದಲಿಸಿದ ಸಿಎಂ ಯೋಗಿ!
Published on: 

ಲಖನೌ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಕುಖ್ಯಾತ ಕಸಾರಿ-ಮಸಾರಿ (Kasari-Masari) ಪ್ರದೇಶದ ಹೆಸರನ್ನು ಶ್ರೀಕೃಷ್ಣಪುರಿ ಎಂದು ಬದಲಾಯಿಸಿ ಅಭಿವೃದ್ಧಿಪಡಿಸುವುದಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘೋಷಿಸಿದ್ದಾರೆ. ದರೋಡೆಕೋರ ಅತೀಕ್ ಅಹ್ಮದ್‌ನ ಕ್ರಿಮಿನಲ್ ನೆರಳಿನಿಂದ ಈ ಜಾಗವನ್ನು ಮುಕ್ತಿಗೊಳಿಸಿ, ಅಭಿವೃದ್ಧಿಯ ಹೊಸ ಸಂಕೇತವಾಗಿ ರೂಪಿಸುವುದಾಗಿ ಯೋಗಿ ಸ್ಪಷ್ಟಪಡಿಸಿದ್ದಾರೆ.

ಶಾರದೀಯ ನವರಾತ್ರಿಯ ಶುಭ ಸಂದರ್ಭದಲ್ಲಿ ಇಲ್ಲಿ ನಿರ್ಮಿಸಲ್ಪಡುವ ಮನೆಗಳು ಮತ್ತು ರೂಪುಗೊಳ್ಳುವ ಹೊಸ ಟೌನ್‌ಶಿಪ್ ಅಥವಾ ವಸತಿ ಪ್ರದೇಶವೆಲ್ಲವೂ ಈ ಶ್ರೀಕೃಷ್ಣಪುರಿಯ ಭಾಗವಾಗಲಿದೆ. ಇಡೀ ಪ್ರದೇಶವು ಸಂಪೂರ್ಣ ಹೊಸ ಗುರುತು ಮತ್ತು ಹೊಸ ಕಳೆಯೊಂದಿಗೆ ಮುಂದಕ್ಕೆ ಸಾಗಲಿದೆ ಎಂದು ಯೋಗಿ ವಿವರಿಸಿದ್ದು, ಕಸಾರಿ-ಮಸಾರಿ ಪ್ರದೇಶವು ದೀರ್ಘಕಾಲದಿಂದ ಅತೀಕ್ ಅಹ್ಮದ್‌ನೊಂದಿಗೆ ನಂಟನ್ನು ಹೊಂದಿತ್ತು. ಅತೀಕ್ ಅಹ್ಮದ್, ಆತನ ಸಹೋದರ ಮತ್ತು ಆತನ ಮಕ್ಕಳನ್ನು ಅಂತ್ಯಸಂಸ್ಕಾರ ಮಾಡಿ ಹೂತಿರುವ ಸ್ಮಶಾನವೂ ಇದೇ ಸ್ಥಳದಲ್ಲಿದೆ ಎಂಬುದು ಗಮನಿಸಬೇಕಾದ ಸಂಗತಿ.

ಸಂಗಮ ನಗರಿ ಎಂದೇ ಕರೆಯಲ್ಪಡುವ ಪ್ರಯಾಗ್‌ರಾಜ್‌ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಹಿಂದೆ ಮಾಫಿಯಾಗಳ ದಬ್ಬಾಳಿಕೆಯ ಆಡಳಿತದಿಂದ ಪ್ರಯಾಗ್‌ರಾಜ್‌ನ ಹೆಸರಿಗೆ ಹಾಗೂ ವರ್ಚಸ್ಸಿಗೆ ದೊಡ್ಡ ಮಸಿ ಬಳಿದಂತಾಗಿತ್ತು, ಈ ಮಾಫಿಯಾ ರಾಜ್ ವ್ಯಾಪಾರಿಗಳಿಗೆ, ಹೆಣ್ಣುಮಕ್ಕಳಿಗೆ, ಆಡಳಿತ ವ್ಯವಸ್ಥೆಗೆ ಮತ್ತು ನ್ಯಾಯಾಂಗಕ್ಕೂ ಕೂಡ ಅತ್ಯಂತ ಗಂಭೀರ ಹಾಗೂ ದೊಡ್ಡ ಸವಾಲಾಗಿ ಪರಿಣಮಿಸಿತ್ತು, ಅಷ್ಟೇ ಅಲ್ಲದೆ, ಮಾಫಿಯಾಗಳು ಈ ಸ್ಥಳದ ಪ್ರತಿಭಾವಂತ ಯುವಕರ ಪ್ರತಿಭೆಯನ್ನು ಅಡಗಿಸಲು ಅಥವಾ ಹತ್ತಿಕ್ಕಲು ಕೂಡ ಹಲವು ದುರುದ್ದೇಶಪೂರ್ವಕ ಪ್ರಯತ್ನಗಳನ್ನು ಮಾಡಿದ್ದವು ಎಂದು ಸಿಎಂ ಆರೋಪಿಸಿದರು.

ಇದನ್ನೂ ಓದಿ:ಏಷ್ಯನ್ ಗೇಮ್ಸ್ ಪದಕ ವಿಜೇತರನ್ನು ಭೇಟಿಯಾದ ಪ್ರಧಾನಿ ಮೋದಿ: ಅಥ್ಲೀಟ್‌ಗಳಿಂದ ವಿಶೇಷ ಜೆರ್ಸಿ ಹಾಗೂ ಹಾಕಿ ಸ್ಟಿಕ್‌ ಸ್ವೀಕಾರ! | Narendra Modi

ಅತೀಕ್​ ಆಕ್ರಮಣಕ್ಕೆ ಅಂದಿನ ಸರ್ಕಾರಗಳು ಶರಣು!

ಹಿಂದೆ ಮಾಫಿಯಾ ರಾಜಕೀಯದಿಂದ ಹದಗೆಟ್ಟಿದ್ದ ಪ್ರಯಾಗ್‌ರಾಜ್‌ನಲ್ಲಿ ಈಗ ಅಂತಹ ಎಲ್ಲಾ ಕಾನೂನುಬಾಹಿರ ಕೃತ್ಯಗಳು ಸಂಪೂರ್ಣವಾಗಿ ನಿಂತಿವೆ ಎಂದಿರುವ ಯೋಗಿ ಆದಿತ್ಯನಾಥ್, ಈ ನಗರದ ಮಗಳೊಬ್ಬಳು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉನ್ನತ ಸ್ಥಾನ ಪಡೆದು ಇಡೀ ಊರಿನ ಕೀರ್ತಿಯನ್ನು ಮರುಸ್ಥಾಪಿಸಿರುವುದೇ ಇದಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.

ಮಾಫಿಯಾ ಡಾನ್ ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್ ಪ್ರಯಾಗ್‌ರಾಜ್‌ನಲ್ಲಿ ಮೆರೆದ ಆ ದಿನಗಳನ್ನು ನೆನಪಿಸಿಕೊಂಡ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಈ ಹಿಂದೆ ಮಾಫಿಯಾ ಅತೀಕ್ ಮತ್ತು ಅಶ್ರಫ್ ಯಾವ ಜಮೀನಿನ ಮೇಲೆ ಕಾಲಿಡುತ್ತಿದ್ದರೆ, ಆ ಜಮೀನು ತಕ್ಷಣವೇ ಅವರ ಸ್ವಂತ ಆಸ್ತಿಯಾಗಿಬಿಡುತ್ತಿತ್ತು, ಅಂದಿನ ಸರ್ಕಾರಗಳು ಈ ಕುಖ್ಯಾತ ಮಾಫಿಯಾಗಳ ಮುಂದೆ ತಲೆಬಾಗಿ ಸುಮ್ಮನೆ ಕೂರುತ್ತಿದ್ದವು. ಅಷ್ಟೇ ಅಲ್ಲದೆ, ಹೆಣ್ಣುಮಕ್ಕಳು ಮತ್ತು ಮಹಿಳೆಯರ ಸುರಕ್ಷತೆಗೆ ದೊಡ್ಡ ಕುತ್ತು ಬಂದಿತ್ತು. ಅಪರಾಧಿಗಳು ಕೈಯಲ್ಲಿ ಬಂದೂಕು, ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡು ಊರಿನ ಬೀದಿಗಳಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದರು ಎಂದು ಸಿಎಂ ಯೋಗಿ ಆ ದಿನಗಳನ್ನು ಮೆಲುಕು ಹಾಕಿದರು.

ಅಪರಾಧಿಗಳ ವಿಷಯದಲ್ಲಿ ಮೃದು ಧೋರಣೆ ಇಲ್ಲ

ನಮ್ಮ ಸರ್ಕಾರವು ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೂ ಅಪರಾಧ ಮತ್ತು ಅಪರಾಧಿಗಳ ವಿಷಯದಲ್ಲಿ ಯಾವುದೇ ಮೃದು ಧೋರಣೆ ತಾಳದೆ, ಕಠಿಣ ಕ್ರಮಗಳನ್ನು ಅನುಸರಿಸಿಕೊಂಡು ಬರುತ್ತಿದೆ. ರಾಜ್ಯದಲ್ಲಿ ಇನ್ನು ಮುಂದೆ ಯಾವುದೇ ರೀತಿಯ ದಬ್ಬಾಳಿಕೆಗೆ ನಾವು ಅವಕಾಶ ನೀಡುವುದಿಲ್ಲ. ಇದರ ಜೊತೆಗೆ, ಇಡೀ ಉತ್ತರ ಪ್ರದೇಶವನ್ನು ಸಂಪೂರ್ಣವಾಗಿ ಮಾಫಿಯಾ ಮುಕ್ತ ರಾಜ್ಯವನ್ನಾಗಿ ಮಾಡಿ ತೋರಿಸುತ್ತೇವೆ ಎಂದು ಅವರು ಭರವಸೆ ನೀಡಿದರು.

ಮಾಫಿಯಾಗಳ ಅಕ್ರಮ ವಶದಲ್ಲಿದ್ದ ಜಮೀನನ್ನು ಬಿಡಿಸಿ, ಆ ಜಾಗದಲ್ಲಿ ಜನಸಾಮಾನ್ಯರಿಗಾಗಿ ವಸತಿ ಯೋಜನೆಗಳನ್ನು ಸಾಕಾರಗೊಳಿಸಲು ಸಾಧ್ಯವಾಗಿದೆ ಎಂದ ಸಿಎಂ ಯೋಗಿ, ಪ್ರಯಾಗ್‌ರಾಜ್‌ನ ಇದೇ ನೆಲದಲ್ಲಿ ಹಿಂದೆ ಶಾಸಕ ರಾಜು ಪಾಲ್ ಅವರನ್ನು ಹಗಲಿನಲ್ಲೇ ಗುಂಡಿಕ್ಕಿ ಕೊಲೆ ಮಾಡಲಾಗಿತ್ತು. ಆದರೆ, ಇಂದಿನ ನಮ್ಮ ಸರ್ಕಾರದ ಕಠಿಣ ಕ್ರಮಗಳ ಫಲವೇನು ಎಂಬುದು ಈಗ ಎಲ್ಲರ ಕಣ್ಣಮುಂದಿದೆ. ಮಾಫಿಯಾಗಳ ಕಬಳಿಕೆಯಿಂದ ಮುಕ್ತಗೊಂಡ ಈ ಜಾಗದಲ್ಲಿ ನಾವು ಈಗಾಗಲೇ ಮನೆಗಳನ್ನು ನಿರ್ಮಿಸಿಕೊಟ್ಟಿದ್ದೇವೆ ಎಂದು ವಿವರಿಸಿದರು.

ಈ ಪ್ರದೇಶದ ಹಳೆಯ ಕಳಂಕವನ್ನು ಸಂಪೂರ್ಣವಾಗಿ ತೊಡೆದುಹಾಕಿ, ಶ್ರೀಕೃಷ್ಣಪುರಿ ಎಂಬ ಹೊಸ ಹೆಸರಿನೊಂದಿಗೆ ಜನರಿಗೆ ಉತ್ತಮ ಭವಿಷ್ಯ ಹಾಗೂ ಹೊಸ ಗುರುತನ್ನು ನೀಡುವ ದಿಶೆಯಲ್ಲಿ ಇದೊಂದು ಬೃಹತ್ ಹೆಜ್ಜೆಯಾಗಿದೆ ಎಂದು ಸಿಎಂ ಯೋಗಿ ತಿಳಿಸಿದರು(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net