

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ ( CJP Protest ) ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ತಡೆಯುವ ಸಂದರ್ಭದಲ್ಲಿ ಒಂದು ವಿಶೇಷ ಪ್ರಸಂಗ ಜರುಗಿದೆ. ಅದೇನೆಂದರೆ, ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಹಾಗೂ ಅವರ ತಂಡವನ್ನು ಮಹಿಳಾ ಪೊಲೀಸರು ವಿಮಾನದ ಒಳಗಡೆ ವಶಕ್ಕೆ ಪಡೆದಿರುವುದು ರಾಷ್ಟ್ರ ರಾಜಧಾನಿಯಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಸಿಜೆಪಿ ನಾಯಕರನ್ನು ಬಂಧಿಸಲು ಮಹಿಳಾ ಪೊಲೀಸರು ಹೋಗಿದ್ದೇಕೆ? ಹಿರಿಯ ಪೊಲೀಸ್ ಅಧಿಕಾರಿಗಳು ಏಕೆ ಹೋಗಲಿಲ್ಲ? ಎಂಬಿತ್ಯಾದಿ ಪ್ರಶ್ನೆಗಳು ಹುಟ್ಟಿಕೊಂಡಿದ್ದು ಅದಕ್ಕೆ ಉತ್ತರ ಇಲ್ಲಿದೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆ ಹಾಗೂ ಚುನಾವಣಾ ಆಯೋಗದ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ವಿರೋಧಿಸಿ ಇಂದು ದೆಹಲಿಯಲ್ಲಿ ಸಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆಗೆ ಕರೆ ನೀಡಲಾಗಿತ್ತು. ಈ ಪ್ರತಿಭಟನೆಯಲ್ಲಿ ಭಾಗವಹಿಸಲು ಮುಂಬೈನಿಂದ ದೆಹಲಿಗೆ ಆಗಮಿಸುತ್ತಿದ್ದ ಸಿಜೆಪಿ ಸಂಚಾಲಕ ಅಭಿಜಿತ್ ದೀಪ್ಕೆ ಹಾಗೂ ಸಹ-ಸಂಚಾಲಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರನ್ನು ದೆಹಲಿ ಪೊಲೀಸರು ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ ವಿಮಾನದ ಒಳಗೆ ವಶಕ್ಕೆ ಪಡೆದರು.
ಅಭಿಜಿತ್ ದೀಪ್ಕೆ ಗ್ಯಾಂಗ್ ಅನ್ನು ಬಂಧಿಸಲು ದೆಹಲಿ ಪೊಲೀಸರು ಡಜನ್‌ಗೂ ಹೆಚ್ಚು ಮಹಿಳಾ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಿದ್ದು ಈಗ ವಿಶೇಷ ಚರ್ಚೆಗೆ ಗ್ರಾಸವಾಗಿದೆ. ಮಹಿಳಾ ಪೊಲೀಸರನ್ನು ಬಳಸಿಕೊಳ್ಳುವ ಮೂಲಕ ದೆಹಲಿ ಪೊಲೀಸರು ಅತ್ಯಂತ ಜಾಣ್ಮೆಯ ಹೆಜ್ಜೆ ಇರಿಸಿದ್ದು, ಸಿಜೆಪಿಗೆ ಸ್ಪಷ್ಟ ಸಂದೇಶ ರವಾಯಿಸಿದ್ದಾರೆ. ವಿಮಾನದ ಒಳಗೆ ಅಲ್ಪ ಜಾಗವಿರುವ ಕಾರಣ ಪುರುಷ ಪೊಲೀಸರನ್ನು ಕಳುಹಿಸಿದರೆ ಘರ್ಷಣೆ ಅಥವಾ ವಾದ-ವಿವಾದ ಉಂಟಾಗುವ ಸಾಧ್ಯತೆ ಹೆಚ್ಚಿತ್ತು. ಹಾಗಾಗಿ, ಯಾವುದೇ ಪ್ರತಿರೋಧ ಅಥವಾ ಉದ್ವಿಗ್ನತೆ ಇಲ್ಲದೆ ಅವರನ್ನು ಸುಲಭವಾಗಿ ವಶಕ್ಕೆ ಪಡೆಯಲು ಈ ತಂತ್ರ ರೂಪಿಸಲಾಗಿತ್ತು.
ಕಳೆದ ಜುಲೈ 20 ರಂದು ನಡೆದ ಪ್ರತಿಭಟನೆಯೊಂದರಲ್ಲಿ ಪುರುಷ ಪೊಲೀಸರು ಕೆಲ ವಿದ್ಯಾರ್ಥಿನಿಯರು ಹಾಗೂ ಸಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದವು. ಅಲ್ಲದೆ, ಪ್ರತಿಭಟನೆಯ ಸಮಯದಲ್ಲಿ ಕೆಲವರು ಮಹಿಳಾ ಪೊಲೀಸರ ಜತೆ ಅನುಚಿತವಾಗಿ ವರ್ತಿಸಿದ ಘಟನೆಗಳೂ ನಡೆದಿದ್ದವು. ಈ ಎಲ್ಲಾ ಹಿಂದಿನ ಕಹಿ ಅನುಭವಗಳನ್ನು ಗಮನದಲ್ಲಿಟ್ಟುಕೊಂಡು, ಸಿಜೆಪಿ ಉನ್ನತ ನಾಯಕರನ್ನು ಬಂಧಿಸಲು ಮಹಿಳಾ ಪೊಲೀಸ್ ಅಧಿಕಾರಿಗಳನ್ನು ಕಳುಹಿಸಲಾಗಿತ್ತು. ಈ ಮೂಲಕ ಸಿಜೆಪಿ ಪ್ರತಿಭಟನಾಕಾರರಿಗೆ ಎಚ್ಚರಿಕೆಯ ಸಂದೇಶ ರವಾನಿಸಲಾಗಿದೆ.
ವಿಮಾನದಲ್ಲೇ ವಶಕ್ಕೆ ಪಡೆದ ಅಭಿಜಿತ್ ದೀಪ್ಕೆ, ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರನ್ನು ದೆಹಲಿಯ ಮೂರು ಬೇರೆ ಬೇರೆ ಗುಪ್ತ ಸ್ಥಳಗಳಿಗೆ ಕರೆದೊಯ್ಯಲಾಯಿತು. ವಕೀಲರು ತಮ್ಮ ನಾಯಕರನ್ನು ಸಂಪರ್ಕಿಸಲು ಪೊಲೀಸರು ಅವಕಾಶ ನೀಡುತ್ತಿಲ್ಲ ಎಂದು ಸಿಜೆಪಿ ಪರವಾಗಿ ತೀವ್ರ ಆಕ್ಷೇಪ ವ್ಯಕ್ತಪಡಿಸಲಾಗಿದೆ. ಮತ್ತೊಂದೆಡೆ, ಯೂಟ್ಯೂಬರ್ ಧ್ರುವ್ ರಾಠೀ ಹಾಗೂ ಸಿಜೆಪಿ ಲೀಗಲ್ ಹೆಡ್ ರತ್ನ ಸಿಂಗ್ ಸೇರಿದಂತೆ ನೂರಾರು ಪ್ರತಿಭಟನಾಕಾರರನ್ನು ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆದಿದ್ದಾರೆ.
ಪ್ರತಿಭಟನೆಗೆ ಯಾವುದೇ ಅನುಮತಿ ನೀಡದಿದ್ದರೂ, ಜಂತರ್ ಮಂತರ್ ಸೇರಿದಂತೆ ದೆಹಲಿಯ ಪ್ರಮುಖ ಪ್ರದೇಶಗಳಲ್ಲಿ ವ್ಯಾಪಕ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ಸುಮಾರು 35,000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ, ಡ್ರೋನ್‌ಗಳು ಹಾಗೂ ಸಿಸಿಟಿವಿ ಕ್ಯಾಮೆರಾಗಳ ಮೂಲಕ ತೀವ್ರ ಹದ್ದಿನ ಕಣ್ಣು ಇಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ದೆಹಲಿಯ ವಿವಿಧ ಭಾಗಗಳಿಂದ ಸುಮಾರು 400ಕ್ಕೂ ಅಧಿಕ ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ನಗರದಲ್ಲಿ ಬಿಗುವಿನ ವಾತಾವರಣ ಮುಂದುವರೆದಿದೆ.
ಶಾಂತಿಯುತ ಪ್ರತಿಭಟನಾಕಾರರನ್ನು ವಿಮಾನ ನಿಲ್ದಾಣದಲ್ಲೇ ತಡೆಹಿಡಿಯುವುದು ಮತ್ತು ನಾಯಕರನ್ನು ಬಂಧಿಸುವುದು ಪ್ರಜಾಪ್ರಭುತ್ವದ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಸಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಸಂವಿಧಾನದ ವಿಧಿ 19ರಡಿ ಸಿಕ್ಕಿರುವ ಪ್ರತಿಭಟನಾ ಹಕ್ಕನ್ನು ಹತ್ತಿಕ್ಕಲು ಸರ್ಕಾರ ಯತ್ನಿಸುತ್ತಿದೆ ಎಂದು ನಾಯಕರು ಆರೋಪಿಸಿದ್ದಾರೆ. ಒಟ್ಟಿನಲ್ಲಿ, ಸಿಜೆಪಿ ಪ್ರತಿಭಟನೆ ಮತ್ತು ನಾಯಕರ ದಿಢೀರ್ ಬಂಧನವು ರಾಷ್ಟ್ರ ರಾಜಕೀಯದಲ್ಲಿ ತೀವ್ರ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ, (ಏಜೆನ್ಸೀಸ್).