ಪುಣೆಯಲ್ಲಿ ಇಂದು ಛತ್ರೋನ್ ಕಿ ಗುಂಜ್ ಕಾರ್ಯಕ್ರಮ; ರಾಹುಲ್ ಭೇಟಿಗೂ ಮುನ್ನ ತಡರಾತ್ರಿ ಎಬಿವಿಪಿ, ಎನ್​ಎಸ್​ಯುಐ ಸದಸ್ಯರ ಘರ್ಷಣೆ | ABVP v\s NSUI

ರಾಹುಲ್ ಗಾಂಧಿ
ರಾಹುಲ್ ಗಾಂಧಿ
Published on
ಮುಂಬೈ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ದೇಶವ್ಯಾಪಿ ವಿದ್ಯಾರ್ಥಿ ಸಂವಾದ ಕಾರ್ಯಕ್ರಮ  ಛತ್ರೋನ್ ಕಿ ಗುಂಜ್ ಇಂದು ಪುಣೆಯ ಎಸ್​​ಎಸ್​ಪಿಎಂಎಸ್​ ಕಾಲೇಜು ಮೈದಾನದಲ್ಲಿ ಸಂಜೆ ನಡೆಯಲಿದ್ದು, ಅವರ ಭೇಟಿಗೂ ಮುನ್ನ ತಡರಾತ್ರಿ ಪುಣೆಯ ಸಿಒಇಪಿ ತಾಂತ್ರಿಕ ವಿಶ್ವವಿದ್ಯಾಲಯದ ಹಾಸ್ಟೆಲ್ ಆವರಣದಲ್ಲಿ ಎಬಿವಿಪಿ ಮತ್ತು ಎನ್​ಎಸ್​ಯುಐ ಕಾರ್ಯಕರ್ತರ(ABVP v\s NSUI) ನಡುವೆ ಘರ್ಷಣೆ ನಡೆದಿದೆ ಎಂದು ವರದಿಯಾಗಿದೆ.
ಛತ್ರೋನ್ ಕಿ ಗುಂಜ್ ಕಾರ್ಯಕ್ರಮಕ್ಕೆ ನೋಂದಾಯಿಸಲು ಪುಣೆಯ ಎಂಜಿನಿಯರಿಂಗ್ ಕಾಲೇಜಿನ (ಸಿಒಇಪಿ) ಮಹಿಳಾ ವಿದ್ಯಾರ್ಥಿನಿಯರನ್ನು ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ ಎಂದು ಎಬಿವಿಪಿ ಸದಸ್ಯರು ಆರೋಪಿಸಿದ್ದಾರೆ.
ಆದರೆ ಕಾರ್ಯಕ್ರಮವನ್ನು ಬೆಂಬಲಿಸಿ ಮಾತನಾಡಿದ ಇಬ್ಬರು ವಿದ್ಯಾರ್ಥಿನಿಯರನ್ನು ಎಬಿವಿಪಿ ಕಾರ್ಯಕರ್ತರು ಹಾಸ್ಟೆಲ್ ಒಳಗೆ ಬಂಧಿಸಿ ಬೆದರಿಕೆ ಹಾಕಿದ್ದಾರೆ ಎಂದು ಎನ್​ಎಸ್​ಯುಐ ಕಾರ್ಯಕರ್ತರು ಮತ್ತು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಸ್ಥಳದಲ್ಲೂ ಎರಡು ಕಡೆಯ ಸದಸ್ಯರ ನಡುವೆ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು ಎನ್ನಲಾಗಿದೆ.
ಘಟನೆಯ ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಕ್ಯಾಂಪಸ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಗಲಾಟೆ ಬಳಿಕ ಹಿರಿಯ ಕಾಂಗ್ರೆಸ್ ನಾಯಕ ವಿಜಯ್ ವಡೆಟ್ಟಿವಾರ್ ಹಾಸ್ಟೆಲ್‌ಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಈ ಕುರಿತು ಮಾತನಾಡಿರುವ ಮಹಾರಾಷ್ಟ್ರ ಪ್ರದೇಶ ಯುವ ಕಾಂಗ್ರೆಸ್ (ಮಾಧ್ಯಮ ವಿಭಾಗ) ಅಧ್ಯಕ್ಷ ಅಕ್ಷಯ್ ಜೈನ್, ಈ ಘಟನೆ ಅತ್ಯಂತ ದುರದೃಷ್ಟಕರ. ಇಬ್ಬರು ಛತ್ರೋನ್ ಕಿ ಗುಂಜ್ ಕಾರ್ಯಕ್ರಮವನ್ನು ಬೆಂಬಲಿಸಿದ್ದರು. ಆದರೆ ಅವರು ತಮ್ಮ ವಿದ್ಯಾರ್ಥಿವೇತನ ಸಮಸ್ಯೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು ಎಂದು ಹೇಳಿದ್ದಾರೆ.
ಆದಾಗ್ಯೂ ಎಬಿವಿಪಿಯ ಪ್ರದೇಶ ಮಂತ್ರಿ ಅಥರ್ವ್ ಕುಲಕರ್ಣಿ, ಎನ್‌ಎಸ್‌ಯುಐ ಕಾರ್ಯಕರ್ತರು ಹಾಸ್ಟೆಲ್ ಆವರಣಕ್ಕೆ ಪ್ರವೇಶಿಸಿ ಮಹಿಳಾ ವಿದ್ಯಾರ್ಥಿನಿಯರನ್ನು ಶನಿವಾರದ ಕಾರ್ಯಕ್ರಮಕ್ಕೆ ನೋಂದಾಯಿಸುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ನೂ ಪುಣೆಯ ಎಸ್​​ಎಸ್​ಪಿಎಂಎಸ್​ ಕಾಲೇಜು ಮೈದಾನದಲ್ಲಿ ಸಂಜೆ 4:30 ರಿಂದ ರಾತ್ರಿ 9:30 ರವರೆಗೆ ಛತ್ರೋನ್ ಕಿ ಗುಂಜ್ ಕಾರ್ಯಕ್ರಮ ನಡೆಯಲಿದೆ. ಮುಖ್ಯವಾಗಿ ಯುವತಿಯರು ಹಾಗೂ ವಿದ್ಯಾರ್ಥಿನಿಯರನ್ನು ಕೇಂದ್ರೀಕರಿಸಿರುವ ಈ ಸಮಾವೇಶದಲ್ಲಿ 8,000 ದಿಂದ 10,000 ಜನರು ಭಾಗವಹಿಸುವ ನಿರೀಕ್ಷೆಯಿದೆ (ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net