ಸಂಸದೀಯ ಸಂಘರ್ಷ ಅಂತ್ಯ? ರಾಹುಲ್ ಗಾಂಧಿ ವಿರುದ್ಧದ ಕಠಿಣ ಕ್ರಮದ ಹಾದಿ ಬಿಟ್ಟ ಕೇಂದ್ರ ಸರ್ಕಾರ | Rahul Gandhi

Rahul Gandhi |  ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ
Rahul Gandhi | ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ
Published on

ಪ್ರಮುಖ ಮುಖ್ಯಾಂಶಗಳು

  • ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಹಕ್ಕುಚ್ಯುತಿ ಮಂಡನೆ ಸಾಧ್ಯತೆ ಕಡಿಮೆ
  • ಸಂಸತ್ತಿನ ನಿಯಮಗಳ ಪ್ರಕಾರ ಸದಸ್ಯರು ಸದನದಲ್ಲಿ ಮಾಡಲಾದ ಗಂಭೀರ ಆರೋಪಗಳನ್ನು ಸಾಬೀತುಪಡಿಸಬೇಕು
  • ಎಪ್ಸ್ಟೀನ್ ಸಂಬಂಧಿತ ಕಡತಗಳಲ್ಲಿ ಉದ್ಯಮಿ ಅನಿಲ್ ಅಂಬಾನಿ ಹೆಸರು ಕಾಣಿಸಿಕೊಂಡಿದ್ದು, ಅವರು ಏಕೆ ಜೈಲಿನಲ್ಲಿಲ್ಲ ಎಂದು ರಾಹುಲ್​ ಪ್ರಶ್ನಿಸಿದ್ದರು.
ದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ವಿರುದ್ಧ ಕೇಂದ್ರ ಸರ್ಕಾರ ಹಕ್ಕುಚ್ಯುತಿ ನಿರ್ಣಯ ಮಂಡಿಸುವುದಿಲ್ಲ, ಆದರೆ ಅವರ ಹೇಳಿಕೆಗಳನ್ನು ಸಂಸತ್ತಿನ ದಾಖಲೆಗಳಿಂದ ತೆಗೆದುಹಾಕುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಬುಧವಾರ ಲೋಕಸಭೆಯಲ್ಲಿ ರಾಹುಲ್ ಗಾಂಧಿ ಭಾಷಣದ ವೇಳೆ ಮಾಡಿರುವ ಆರೋಪಗಳು ದೃಢೀಕರಿಸಲ್ಪಟ್ಟಿಲ್ಲ ಆದ್ದರಿಂದ ಸರ್ಕಾರ ಅವುಗಳನ್ನು ತೆಗೆದುಹಾಕುವಂತೆ ಕೋರುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.
ಸಂಸತ್ತಿನ ನಿಯಮಗಳ ಪ್ರಕಾರ ಸದಸ್ಯರು ಸದನದಲ್ಲಿ ಮಾಡಲಾದ ಗಂಭೀರ ಆರೋಪಗಳನ್ನು ಸಾಬೀತುಪಡಿಸಬೇಕು. ಪರಿಶೀಲಿಸದ, ಮಾನನಷ್ಟಕರ ಅಥವಾ ಸ್ಥಾಪಿತ ಕಾರ್ಯವಿಧಾನಕ್ಕೆ ಅನುಗುಣವಾಗಿಲ್ಲದ ಟೀಕೆಗಳನ್ನು ಸಭಾದ್ಯಕ್ಷರು ಅಧಿಕೃತ ದಾಖಲೆಯಿಂದ ತೆಗೆದುಹಾಕಲು ಆದೇಶಿಸಬಹುದು.

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹೇಳಿದ್ದೇನು.?

ಸದನವನ್ನು ದಾರಿತಪ್ಪಿಸಿದ್ದಕ್ಕಾಗಿ ಮತ್ತು ಆಧಾರರಹಿತ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ರಾಹುಲ್ ಗಾಂಧಿ ವಿರುದ್ಧ ಲೋಕಸಭೆಯಲ್ಲಿ ಬಿಜೆಪಿ ಸದಸ್ಯರು ಹಕ್ಕುಚ್ಯುತಿ ನೋಟಿಸ್ ಮಂಡಿಸಲಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹೇಳಿದ ಒಂದು ದಿನದ ಬಳಿಕ ಈ ಬೆಳವಣಿಗೆ ನಡೆದಿದೆ. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸುಳ್ಳು ಮತ್ತು ಆಧಾರರಹಿತ ಆರೋಪಗಳನ್ನು ಹೊರಿಸಿದ್ದಾರೆ ಎಂದು ರಿಜಿಜು ತಿಳಿಸಿದ್ದರು.

ರಾಹುಲ್ ಭಾಷಣ

ಎಪ್ಸ್ಟೀನ್ ಸಂಬಂಧಿತ ಕಡತಗಳಲ್ಲಿ ಉದ್ಯಮಿ ಅನಿಲ್ ಅಂಬಾನಿ ಹೆಸರು ಕಾಣಿಸಿಕೊಂಡಿದ್ದು, ಅವರು ಏಕೆ ಜೈಲಿನಲ್ಲಿಲ್ಲ ಎಂದು ರಾಹುಲ್​ ಪ್ರಶ್ನಿಸಿದ್ದರು.
ನನ್ನಲ್ಲಿರುವ ಡೇಟಾವನ್ನು ದೃಢೀಕರಿಸುತ್ತೇನೆ ಎಂದು ನಾನು ಹೇಳಿದ್ದೇನೆ. ಹರ್ದೀಪ್ ಪುರಿ ಮತ್ತು ಅನಿಲ್ ಅಂಬಾನಿ ಹೆಸರಿರುವ ಎಪ್ಸ್ಟೀನ್ ಫೈಲ್‌ಗಳ ಕುರಿತು ನ್ಯಾಯಾಂಗ ಇಲಾಖೆಯ ಫೈಲ್‌ಗಳಿವೆ. ಅದಾನಿ ವಿರುದ್ಧ ನಡೆಯುತ್ತಿರುವ ಪ್ರಕರಣದಲ್ಲಿ ಸಮನ್ಸ್ ಜಾರಿ ಮಾಡಲಾಗಿದೆ ಎಂದು ರಾಹುಲ್ ಸಂಸತ್ತಿನ ಹೊರಗೆ ಸುದ್ದಿಗಾರರಿಗೆ ತಿಳಿಸಿದರು.
ಕಳೆದ 18 ತಿಂಗಳುಗಳಿಂದ ಕೇಂದ್ರ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪ್ರಧಾನಿಯ ಮೇಲೆ ನೇರ ಒತ್ತಡವಿದೆ, ಉಭಯ ದೇಶಗಳ ನಡುವಿನ ಒಪ್ಪಂದ ದೇಶದ ಜನರ ಭವಿಷ್ಯವನ್ನು ಅಪಾಯಕ್ಕೆ ಸಿಲುಕಿಸುತ್ತದೆ ಎಂದಿರುವ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಬಿಜೆಪಿಯ ಆರ್ಥಿಕ ವಾಸ್ತುಶಿಲ್ಪವನ್ನು ರಕ್ಷಿಸಲು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.
ನಾವು ಇರಾನ್, ರಷ್ಯಾ ಅಥವಾ ಬೇರೆ ಯಾರಿಂದಾದರೂ ತೈಲ ಖರೀದಿಸುತ್ತೇವೆಯೇ ಎಂದು ಅಮೆರಿಕ ಏಕೆ ನಿರ್ಧರಿಸಬೇಕು? ನೀವು ನಮ್ಮ ತಾಯಿ ಭಾರತ ಮಾತೆಯನ್ನು ಮಾರಿದ್ದೀರಿ. ನಿಮಗೆ ಯಾವುದೇ ನಾಚಿಕೆ ಇಲ್ಲ. ಅಮೆರಿಕಾ ಕತ್ತು ಹಿಸುಕಿದ್ದರಿಂದ ಪ್ರಧಾನಿ ಭಾರತವನ್ನು ಮಾರಿದ್ದಾರೆ ಎಂದು ರಾಹುಲ್​ ಕಿಡಿಕಾರಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net