ಚಕ್ರವ್ಯೂಹದಲ್ಲಿ ಸಿಇಸಿ! ಹುದ್ದೆ ತೊರೆಯಲಿದ್ದಾರೆಯೇ ಜ್ಞಾನೇಶ್ ಕುಮಾರ್?

ಚಕ್ರವ್ಯೂಹದಲ್ಲಿ ಸಿಇಸಿ! ಹುದ್ದೆ ತೊರೆಯಲಿದ್ದಾರೆಯೇ ಜ್ಞಾನೇಶ್ ಕುಮಾರ್?
Published on: 

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಒಂದಲ್ಲ, ಎರಡಲ್ಲ ಮೂರು ಕಡೆಗಳಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ದೆಹಲಿಯಲ್ಲಿ ವಿರೋಧ ಪಕ್ಷಗಳ ‘ಪ್ರಜಾಪ್ರಭುತ್ವ ಉಳಿಸಿ’ (ಡೆಮಾಕ್ರಸಿ ಬಚಾವೋ) ಪ್ರತಿಭಟನೆಯು ತೀವ್ರ ಸ್ವರೂಪ ಪಡೆದುಕೊಂಡಿದೆ. ಸುಪ್ರೀಂ ಕೋರ್ಟ್ ಕೂಡ ಸೋಮವಾರ ಎರಡು ಅರ್ಜಿಗಳ ವಿಚಾರಣೆ ನಡೆಸಿ, ಚುನಾವಣಾ ಆಯೋಗದಿಂದ ಎಲ್ಲ ಆರೋಪಗಳಿಗೆ ಪ್ರತಿಕ್ರಿಯೆ ಕೇಳಿದೆ. ಇದೇ ವೇಳೆ ಕೇರಳ ಸರ್ಕಾರವು ಜ್ಞಾನೇಶ್ ಕುಮಾರ್ ಅವರಿಗೆ ಸಂಬಂಧಿಸಿದ 20 ವರ್ಷಗಳ ಹಳೆಯ ಪ್ರಕರಣವೊಂದರಲ್ಲಿ ತನಿಖೆಗೆ ಆದೇಶಿಸಿದೆ. ಹಾಗಾದರೆ ಪ್ರತಿಭಟನೆ ಮತ್ತು ನ್ಯಾಯಾಂಗ ಹೋರಾಟಕ್ಕೆ ಮಣಿದು ಜ್ಞಾನೇಶ್ ಹುದ್ದೆ ತೊರೆಯಲಿದ್ದಾರೆಯೇ? ಅವರ ವಿರುದ್ಧ ಇರುವ ಪ್ರಮುಖ ಆರೋಪಗಳೇನು? ಈ ಎಲ್ಲ ಬೆಳವಣಿಗೆಯ ಅವಲೋಕನ ಇಲ್ಲಿದೆ.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಕಾನೂನು ಹೋರಾಟ, ಪ್ರತಿಪಕ್ಷಗಳು ನಡೆಸುತ್ತಿರುವ ಪ್ರತಿಭಟನೆಯಿಂದ ರಾಜಕೀಯ ವಲಯದಲ್ಲಿ ಸಂಚಲನ ಮೂಡಿದ್ದು, ಕೇಂದ್ರ ಚುನಾವಣಾ ಆಯೋಗ ಈಗ ವಿವಾದದ ಕೇಂದ್ರಬಿಂದುವಾಗಿ ಮಾರ್ಪಟ್ಟಿದೆ. ಈ ವಿವಾದ ಎಲ್ಲಿ ಹೋಗಿ ಕೊನೆಗಾಣಲಿದೆ, ಎಸ್​ಐಆರ್ ಪ್ರಕ್ರಿಯೆಯಲ್ಲಿ ಮತ್ತಷ್ಟು ಬದಲಾವಣೆ ಆಗಲಿದೆಯೇ ಎಂಬುದರ ಕುರಿತಾಗಿ ಜಿಜ್ಞಾಸೆ ಆರಂಭವಾಗಿದೆ. ಸುಪ್ರೀಂ ಕೋರ್ಟ್​ನಲ್ಲಿ ಅಕ್ಟೋಬರ್ 5ರಂದು ಜ್ಞಾನೇಶ್ ಕುಮಾರ್ ವಿರುದ್ಧ ಎರಡು ಅರ್ಜಿಗಳ ವಿಚಾರಣೆ ನಡೆಯಿತು.

ಅರ್ಜಿ-1: ಜ್ಞಾನೇಶ್ ಕುಮಾರ್ ಏಕಪಕ್ಷೀಯವಾಗಿ ತೆಗೆದುಕೊಂಡಿದ್ದಾರೆ ಎನ್ನಲಾದ 14 ನಿರ್ಧಾರಗಳನ್ನು ರದ್ದುಗೊಳಿಸ ಬೇಕು ಮತ್ತು ವಿಶೇಷ ತನಿಖಾ ತಂಡವನ್ನು (ಎಸ್​ಐಟಿ) ರಚಿಸಿ ತನಿಖೆ ನಡೆಸಬೇಕು.

ಅರ್ಜಿ-2: ತನಿಖೆ ಮುಗಿಯುವವರೆಗೆ ಜ್ಞಾನೇಶ್ ಕುಮಾರ್ ಅವರನ್ನು ಅಮಾನತುಗೊಳಿಸಬೇಕು. ತನಿಖೆಗಾಗಿ ಚುನಾವಣಾ ಆಯೋಗದ ದಾಖಲೆಗಳನ್ನು ಪರಿಶೀಲಿಸಬೇಕು. ಚುನಾವಣಾ ಆಯೋಗದ ನಿರ್ಧಾರಗಳನ್ನು ಮುಖ್ಯ ಚುನಾವಣಾ ಆಯುಕ್ತರು ಒಬ್ಬರೇ ಏಕಪಕ್ಷೀಯವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಘೊಷಿಸಬೇಕು.

ನ್ಯಾಯಾಲಯ ಹೇಳಿದ್ದು: ಕೇವಲ ಪತ್ರಿಕಾ ವರದಿಯ ಆಧಾರದ ಮೇಲೆ ಮುಖ್ಯ ಚುನಾವಣಾ ಆಯುಕ್ತರನ್ನು ಅಮಾನತುಗೊಳಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಹೇಳಿದರು. ಆದಾಗ್ಯೂ, ನ್ಯಾಯಾಲಯವು ನೋಟಿಸ್ ಜಾರಿ ಮಾಡಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹಾಗೂ ಚುನಾವಣಾ ಆಯೋಗದಿಂದ ಪ್ರತಿಕ್ರಿಯೆ ಕೇಳಿದೆ. ಕೇಂದ್ರ ಸರ್ಕಾರಕ್ಕೂ ತನ್ನ ನಿಲುವನ್ನು ಸ್ಪಷ್ಟಪಡಿಸುವಂತೆ ಸೂಚಿಸಿದೆ.

‘ಫಾರ್ಮ್​ -6ರಲ್ಲಿನ ಬದಲಾವಣೆಗಳು ನಮ್ಮ ಅನುಮೋದನೆಯೊಂದಿಗೆ ನಡೆದಿಲ್ಲ’ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ವಾಸ್ತವವಾಗಿ, ಮತದಾರರ ಪಟ್ಟಿಗೆ ಹೆಸರು ಸೇರಿಸಲು ಫಾಮ್ರ್-6 ಅನ್ನು ಭರ್ತಿ ಮಾಡಲಾಗುತ್ತದೆ. ಇದರಲ್ಲಿ, ಅರ್ಜಿದಾರರ ಅಥವಾ ಅವರ ಪಾಲಕರ ಅಥವಾ ಅಜ್ಜ-ಅಜ್ಜಿಯರ ಹೆಸರು ಹಿಂದಿನ ಎಸ್​ಐಆರ್​ನಲ್ಲಿದೆಯೇ ಅಥವಾ ಇಲ್ಲವೇ ಎಂಬ ಪ್ರಶ್ನೆಯೊಂದನ್ನು ಸೇರಿಸಲಾಗಿದೆ.

ಪ್ರತಿಪಕ್ಷಗಳ ಪ್ರತಿಭಟನೆ

ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಪ್ರತಿಪಪಕ್ಷಗಳ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಬುಧವಾರ ಸತತ ಎರಡನೇ ದಿನವೂ ಪ್ರತಿಭಟನೆ ನಡೆಸಿದ್ದಾರೆ. ಐನ್​ಡಿಐಎ ಒಕ್ಕೂಟದ 200ಕ್ಕೂ ಹೆಚ್ಚು ಸಂಸದರು ಮಂಗಳವಾರ ಸಂಸತ್ತಿನಿಂದ ಚುನಾವಣಾ ಆಯೋಗದ ಕಚೇರಿಯವರೆಗೆ ಮೆರವಣಿಗೆ ನಡೆಸಿದ್ದರು, ಆದರೆ ಅವರನ್ನು ಮುಂಚಿತವಾಗಿಯೇ ತಡೆಯಲಾಯಿತು.

ಹಳೆಯ ಪ್ರಕರಣಕ್ಕೆ ಮರುಜೀವ

ಕೇರಳದ ಗೃಹ ಸಚಿವ ರಮೇಶ್ ಚೆನ್ನಿತ್ತಲ ಅವರು ಜ್ಞಾನೇಶ್ ಕುಮಾರ್ ವಿರುದ್ಧದ 20 ವರ್ಷಗಳ ಹಳೆಯ ಪ್ರಕರಣದಲ್ಲಿ ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ದಳಕ್ಕೆ ತನಿಖೆ ನಡೆಸಲು ಆದೇಶಿಸಿದ್ದಾರೆ. ಈ ಪ್ರಕರಣವು ರಸ್ತೆ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಹಾಗೂ ಮಲೇಷ್ಯಾದ ಮುಖ್ಯ ಇಂಜಿನಿಯರ್ ಲೀ ಸಿ ಬೆನ್ ಅವರ ಆತ್ಮಹತ್ಯೆಗೆ ಸಂಬಂಧಿಸಿದ್ದಾಗಿದೆ.

ವಾಸ್ತವವಾಗಿ, ಜ್ಞಾನೇಶ್ ಕುಮಾರ್ ಕೇರಳ ಕೇಡರ್​ನ ನಿವೃತ್ತ ಐಎಎಸ್ ಅಧಿಕಾರಿಯಾಗಿದ್ದಾರೆ. 2006ರಲ್ಲಿ ಅವರು ಕೇರಳ ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿಯಾಗಿದ್ದರು. ಆಗ ಅಂಗಮಾಲಿಯಿಂದ ತಿರುವನಂತಪುರದವರೆಗಿನ ಮುಖ್ಯ ರಸ್ತೆಯ ಮೇಲ್ದರ್ಜೆಗೇರಿಸುವಿಕೆಗಾಗಿ 215 ಕೋಟಿ ರೂಪಾಯಿ ಮಂಜೂರಾಗಿತ್ತು. ಇಂಡೋ-ಮಲೇಷಿಯನ್ ಕಂಪನಿ ಕಅಖಐಆಉಔಗೆ ಈ ಕಾಮಗಾರಿ ಸಿಕ್ಕಿತ್ತು. 2003ರಲ್ಲಿ ಆರಂಭವಾದ ಯೋಜನೆಯು 2006ರ ಆಗಸ್ಟ್ ವೇಳೆಗೆ ಪೂರ್ಣಗೊಳ್ಳಬೇಕಿತ್ತು, ಆದರೆ ಆ ವೇಳೆಗೆ ಶೇ.30ರಷ್ಟು ಕಾಮಗಾರಿ ಮಾತ್ರ ಮುಗಿದಿತ್ತು. ಇದೇ ಒತ್ತಡದಲ್ಲಿ ಲೀ ಸಿ ಬೆನ್ ಮಲೇಷ್ಯಾಕ್ಕೆ ತೆರಳಿ ಆತ್ಮಹತ್ಯೆ ಮಾಡಿಕೊಂಡರು.

ಗೃಹ ಸಚಿವ ರಮೇಶ್ ಚೆನ್ನಿತ್ತಲ ಪ್ರಕಾರ, ಲೀ ಸಿ ಬೆನ್ ಡೆತ್​ನೋಟ್​ನಲ್ಲಿ ಜ್ಞಾನೇಶ್ ಕುಮಾರ್ ಹೆಸರಿತ್ತು. ತನಿಖೆಯ ವೇಳೆ ಕುಮಾರ್ ಅವರನ್ನು ಪಿಡಬ್ಲೂ್ಯಡಿ ಕಾರ್ಯದರ್ಶಿ ಹುದ್ದೆಯಿಂದ ತೆಗೆದುಹಾಕಲಾಗಿತ್ತು. ಈಗ ಸರ್ಕಾರವು ಪ್ರಕರಣದ ಮರು ತನಿಖೆ ನಡೆಸಲು ನಿರ್ಧರಿಸಿದೆ.

ಕೇರಳದಲ್ಲಿ ಆರಂಭವಾಗಿರುವ ತನಿಖೆಯ ಕುರಿತು ಹಿರಿಯ ವಕೀಲರು ಹೇಳುವಂತೆ, ಸಿಇಸಿ ಅಥವಾ ಅಂತಹ ಯಾವುದೇ ಹುದ್ದೆಯ ಕಾನೂನು ರಕ್ಷಣೆಯು ತಮ್ಮ ಕರ್ತವ್ಯದ ಸಮಯದಲ್ಲಿ ಮಾಡಿದ ಕೆಲಸಗಳಿಗೆ ಮಾತ್ರ ಅನ್ವಯಿಸುತ್ತದೆ. ಒಂದು ವೇಳೆ 3 ವರ್ಷಗಳಿಗಿಂತ ಹೆಚ್ಚಿನ ಶಿಕ್ಷೆಯಿರುವ ಗಂಭೀರ ಅಪರಾಧ ನಡೆದಿದ್ದರೆ, ಅದರಲ್ಲಿ ಶಿಕ್ಷೆ ವಿಧಿಸಬಹುದು.

ಏಕಪಕ್ಷೀಯ ನಿರ್ಧಾರ

ಎಸ್​ಐಆರ್ ಪ್ರಕ್ರಿಯೆಯ ವೇಳೆ ಹೆಸರುಗಳನ್ನು ಸೇರಿಸುವುದು, ತೆಗೆದುಹಾಕುವುದು ಮತ್ತು ಮರುಸ್ಥಾಪಿಸುವ ನಿರ್ಧಾರ ಗಳನ್ನು ಸಂಧು ಮತ್ತು ಜೋಶಿ ಅವರ ಗಮನಕ್ಕೆ ತರದೆಯೇ ತೆಗೆದುಕೊಳ್ಳಲಾಯಿತು. ಇದರ ಪರಿಣಾಮವಾಗಿ 30 ರಾಜ್ಯಗಳಲ್ಲಿ ಕರಡು ಪಟ್ಟಿಯಿಂದ 13 ಕೋಟಿಗೂ ಹೆಚ್ಚು ಹೆಸರುಗಳನ್ನು ಕೈಬಿಡಲಾಯಿತು. ‘ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ ಕಾಯ್ದೆ, 2023’ರ ಸೆಕ್ಷನ್ 18ರ ಪ್ರಕಾರ, ಆಯೋಗವು ತನ್ನ ಎಲ್ಲ ನಿರ್ಧಾರಗಳನ್ನು ಸಾಧ್ಯವಾದಷ್ಟು ಸರ್ವಾನುಮತದಿಂದ ತೆಗೆದುಕೊಳ್ಳಬೇಕು. ಅಭಿಪ್ರಾಯ ಬೇಧವಿದ್ದಲ್ಲಿ, ನಿರ್ಧಾರವನ್ನು ಬಹುಮತದ ಆಧಾರದ ಮೇಲೆ ತೆಗೆದುಕೊಳ್ಳಲಾಗುತ್ತದೆ. ಮೂವರೂ ಆಯುಕ್ತರು ಸಮಾನ ಮತದಾನದ ಅಧಿಕಾರವನ್ನು ಹೊಂದಿರುತ್ತಾರೆ.

ಸಿಇಸಿ ವಿರುದ್ಧದ ಪ್ರಮುಖ ಆರೋಪಗಳು

ಸೆಪ್ಟೆಂಬರ್ 23ರಂದು ಆಂಗ್ಲ ಪತ್ರಿಕೆಯೊಂದರಲ್ಲಿ ಪ್ರಕಟವಾದ ವರದಿಯ ಪ್ರಕಾರ, ಚುನಾವಣಾ ಆಯೋಗದ ಇಬ್ಬರು ಆಯುಕ್ತರಾದ ಡಾ.ಸುಖ್ಬೀರ್ ಸಿಂಗ್ ಸಂಧು ಮತ್ತು ಡಾ.ವಿವೇಕ್ ಜೋಶಿ ಅವರು ಎಸ್​ಐಆರ್​ಗೆ ಸಂಬಂಧಿಸಿದಂತೆ ಕಳೆದ 10 ತಿಂಗಳುಗಳಲ್ಲಿ ಕನಿಷ್ಠ 14 ಬಾರಿ ಲಿಖಿತ ಆಕ್ಷೇಪಣೆಯನ್ನು ದಾಖಲಿಸಿದ್ದಾರೆ. ಇದರಲ್ಲಿ 2 ಬಾರಿ ಕ್ಯಾಬಿನೆಟ್ ಕಾರ್ಯದರ್ಶಿ ಟಿ.ವಿ. ಸೋಮನಾಥನ್ ಅವರಿಗೆ ಪತ್ರವನ್ನೂ ಬರೆದಿದ್ದಾರೆ.

ಫಾರ್ಮ್​-6ರಲ್ಲಿ ಕಾನೂನುಬಾಹಿರವಾಗಿ ಬದಲಾವಣೆಗಳು

ಹೊಸ ಮತದಾರರ ನೋಂದಣಿ ನಮೂನೆಯಲ್ಲಿ (ಫಾರ್ಮ್​-6) ಕಾನೂನು ನಿಯಮಗಳನ್ನು ತಿದ್ದುಪಡಿ ಮಾಡದೆಯೇ ಎಸ್​ಐಆರ್​ಗೆ ಸಂಬಂಧಿಸಿದ ಪ್ರಶ್ನೆಯೊಂದನ್ನು ಸೇರಿಸಲಾಯಿತು. ಅದರಲ್ಲಿ, ಅರ್ಜಿದಾರರ ಅಥವಾ ಅವರ ಪಾಲಕರ ಅಥವಾ ಅಜ್ಜ-ಅಜ್ಜಿಯರ ಹೆಸರು ಹಿಂದಿನ ಎಸ್​ಐಆರ್​ನಲ್ಲಿ ಇತ್ತೇ ಅಥವಾ ಇಲ್ಲವೇ ಎಂದು ಕೇಳಲಾಗಿತ್ತು. ಫಾರ್ಮ್-6ರಲ್ಲಿ ಅನಧಿಕೃತವಾಗಿ ಸೇರಿಸಲಾದ ಈ ಪ್ರಶ್ನೆಯನ್ನು ತಕ್ಷಣವೇ ತೆಗೆದುಹಾಕಬೇಕೆಂದು ಸಂಧು ಅವರು ಆಗಸ್ಟ್ 13ರಂದು ಹೇಳಿದರು, ಆದರೆ ಸೆಪ್ಟೆಂಬರ್ 21ರವರೆಗೂ ಈ ಪ್ರಶ್ನೆ ಹಾಗೆಯೇ ಉಳಿದಿತ್ತು. ಫಾಮ್ರ್-6 ಎಂಬುದು ‘ಮತದಾರರ ನೋಂದಣಿ ನಿಯಮಗಳು, 1960’ ರ ಅಡಿಯಲ್ಲಿ ಬರುವ ಕಾನೂನುಬದ್ಧ ನಮೂನೆಯಾಗಿದೆ. ಇದರಲ್ಲಿ ಬದಲಾವಣೆಗಳನ್ನು ಕೇಂದ್ರ ಸರ್ಕಾರ ಮಾತ್ರ ಮಾಡಲು ಸಾಧ್ಯ.

ಸ್ಥಳೀಯ ಅಧಿಕಾರಿಗಳ ಕಡೆಗಣನೆ

ದೆಹಲಿಯಲ್ಲಿರುವ ಚುನಾವಣಾ ಆಯೋಗದ ಐಟಿ ವಿಭಾಗದ ಮೂಲಕ ಮತದಾರರ ಪಟ್ಟಿ ಡೇಟಾಬೇಸ್ ಇಸಿಐನೆಟ್ (ಹಿಂದಿನ ಇಆರ್​ಒನೆಟ್) ಅನ್ನು ಕೇಂದ್ರೀಕರಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದರಿಂದಾಗಿ ತಳಮಟ್ಟದಲ್ಲಿ ಕಾರ್ಯನಿರ್ವಹಿಸುವ ಚುನಾವಣಾ ನೋಂದಣಿ ಅಧಿಕಾರಿಗಳ ಡೇಟಾಬೇಸ್ ಪ್ರವೇಶದ ವ್ಯಾಪ್ತಿ ಕಡಿಮೆಯಾಗಿದೆ. ‘ಮತದಾರರ ಪಟ್ಟಿಯ ಡೇಟಾಬೇಸ್ ಅನ್ನು ಹಂತ-ಹಂತವಾಗಿ ಕೇಂದ್ರೀಕರಿಸಲಾಗುತ್ತಿದೆ’ ಎಂದು ಆಯುಕ್ತ ಜೋಶಿ ಮೇ ತಿಂಗಳಲ್ಲಿ ಪತ್ರ ಬರೆದಿದ್ದರು. ವಿವಿಧ ರಾಜ್ಯಗಳ ಹಲವು ಚುನಾವಣಾ ಅಧಿಕಾರಿಗಳಿಗೆ ಇಆರ್​ಒನೆಟ್ ಪೋರ್ಟಲ್​ನ ಫುಲ್ ಆಕ್ಸೆಸ್ ಸಿಗುತ್ತಿಲ್ಲ ಎಂದು ಸಂಧು ಆಗಸ್ಟ್​ನಲ್ಲಿ ತಿಳಿಸಿದ್ದರು. ಅಲ್ಲದೆ, ಡೇಟಾಬೇಸ್ ಪ್ರವೇಶವನ್ನು ಸೀಮಿತಗೊಳಿಸಿ ಅಧಿಕಾರಿಗಳ ಕಾನೂನುಬದ್ಧ ಅಧಿಕಾರವನ್ನು ಕುಗ್ಗಿಸುತ್ತಿದ್ದಾರೆ ಎಂದು ಸಂಧು ಅವರು ಆಯೋಗದ ಐಟಿ ಡೈರೆಕ್ಟರ್ ಜನರಲ್ ಸೀಮಾ ಖನ್ನಾ ವಿರುದ್ಧ ಆರೋಪ ಮಾಡಿದ್ದರು.

ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರಾವಧಿಗೆ ಸಂಬಂಧಿಸಿದ ಕಾಯ್ದೆಯನ್ನು 2023ರಲ್ಲಿ ಅಂಗೀಕರಿಸಲಾಗಿತ್ತು. ಇದರ ಅಡಿಯಲ್ಲಿ ಆಯುಕ್ತರಿಗೆ ಕಾನೂನು ರಕ್ಷಣೆ (ಇಮ್ಯೂನಿಟಿ) ದೊರೆತಿದ್ದು, ಅಧಿಕಾರದಲ್ಲಿರುವಾಗ ಅವರ ಯಾವುದೇ ಕೆಲಸ ಅಥವಾ ಹೇಳಿಕೆಗೆ ಸಂಬಂಧಿಸಿದಂತೆ ಕ್ರಿಮಿನಲ್ ಮೊಕದ್ದಮೆ ಹೂಡುವಂತಿಲ್ಲ. ಜ್ಞಾನೇಶ್ ಕುಮಾರ್ ಅವರನ್ನು ಮಹಾಭಿಯೋಗದ (ಇಂಪೀಚ್​ವೆುಂಟ್) ಮೂಲಕ ಮಾತ್ರ ತೆಗೆದುಹಾಕಬಹುದು. 2026ರ ಏಪ್ರಿಲ್​ನಲ್ಲಿ ವಿರೋಧ ಪಕ್ಷಗಳು ಇದಕ್ಕಾಗಿ ನೋಟಿಸ್ ನೀಡಿದ್ದವು, ಆದರೆ ಆಗ ಲೋಕಸಭಾ ಸ್ಪೀಕರ್ ಮತ್ತು ರಾಜ್ಯಸಭಾ ಸಭಾಪತಿಗಳು ಅದನ್ನು ಅಂಗೀಕರಿಸಿರಲಿಲ್ಲ.

ಈಗ ಮತ್ತೊಮ್ಮೆ ವಿರೋಧ ಪಕ್ಷಗಳು ಇದಕ್ಕೆ ಸಿದ್ಧತೆ ನಡೆಸುತ್ತಿವೆ. ಒಂದು ವೇಳೆ ಈ ನೋಟಿಸ್ ಸ್ವೀಕಾರವಾದರೆ, ಮೊದಲು ತನಿಖಾ ಸಮಿತಿಯೊಂದನ್ನು ರಚಿಸಲಾಗುತ್ತದೆ ಮತ್ತು ಅದರ ವರದಿಯ ಆಧಾರದ ಮೇಲೆ ಸದನದಲ್ಲಿ ಮತದಾನ ನಡೆಯುತ್ತದೆ. ಜ್ಞಾನೇಶ್ ಕುಮಾರ್ ವಿರುದ್ಧ ಮೂರನೇ ಎರಡರಷ್ಟು ಮತಗಳು ಚಲಾವಣೆಯಾದರೆ ಮಾತ್ರ ಅವರ ಮಹಾಭಿಯೋಗ ಪ್ರಕ್ರಿಯೆ ಯಶಸ್ವಿಯಾಗುತ್ತದೆ. ಆದರೆ ಪ್ರಸ್ತುತ ವಿರೋಧ ಪಕ್ಷಗಳ ಬಳಿ ಮೂರನೇ ಎರಡರಷ್ಟು ಬಹುಮತವಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net