ಕಾವೇರಿ ವಿವಾದ: ಬರದ ನಡುವೆ ಕರ್ನಾಟಕಕ್ಕೆ ಮತ್ತೆ ಬರೆ, ತಮಿಳುನಾಡಿಗೆ ನಿತ್ಯ 4,000 ಕ್ಯೂಸೆಕ್ ನೀರು ಹರಿಸಲು CWRC ಆದೇಶ! Cauvery Water Dispute

ವಿನೀತ್ ಗುಪ್ತಾ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಮಹತ್ವದ ಸಭೆಯಲ್ಲಿ, ರಾಜ್ಯದಲ್ಲಿ ತೀವ್ರ ಬರದ ಛಾಯೆ ಹಾಗೂ ಕುಡಿಯುವ ನೀರಿನ ಹಾಹಾಕಾರವಿದ್ದರೂ ಸಹ, ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿದಿನ 4,000 ಕ್ಯೂಸೆಕ್ ನೀರು ಹರಿಸುವಂತೆ ಸಮಿತಿಯು ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
Cauvery Water Dispute
ಕೃಷ್ಣರಾಜಸಾಗರ ಜಲಾಶಯ
Published on

ನವದೆಹಲಿ/ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ( Cauvery Water Dispute ) ಸಂಬಂಧಿಸಿದಂತೆ ದೆಹಲಿಯಲ್ಲಿ ನಡೆದ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಸಭೆಯಲ್ಲಿ ಕರ್ನಾಟಕ ರಾಜ್ಯಕ್ಕೆ ಮತ್ತೊಮ್ಮೆ ತೀವ್ರ ಹಿನ್ನಡೆಯಾಗಿದೆ.

ವಿನೀತ್ ಗುಪ್ತಾ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಮಹತ್ವದ ಸಭೆಯಲ್ಲಿ, ರಾಜ್ಯದಲ್ಲಿ ತೀವ್ರ ಬರದ ಛಾಯೆ ಹಾಗೂ ಕುಡಿಯುವ ನೀರಿನ ಹಾಹಾಕಾರವಿದ್ದರೂ ಸಹ, ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿದಿನ 4,000 ಕ್ಯೂಸೆಕ್ ನೀರು ಹರಿಸುವಂತೆ ಸಮಿತಿಯು ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.

ಸಭೆಯಲ್ಲಿ ಹಾಜರಿದ್ದ ಕರ್ನಾಟಕದ ಪ್ರತಿನಿಧಿಗಳು ರಾಜ್ಯದ ಅಣೆಕಟ್ಟುಗಳಲ್ಲಿ ನೀರಿನ ಸಂಗ್ರಹ ಕುಸಿದಿರುವುದನ್ನು ಹಾಗೂ ಮಳೆಯಿಲ್ಲದೆ ಜನರು ಮತ್ತು ರೈತರು ಎದುರಿಸುತ್ತಿರುವ ಸಂಕಷ್ಟವನ್ನು ಅಂಕಿಅಂಶಗಳ ಸಮೇತ ವಿಸ್ತಾರವಾಗಿ ವಿವರಿಸಿದರು. ಆದರೆ, ರಾಜ್ಯದ ಈ ಎಲ್ಲ ವಾಸ್ತವಿಕ ಮನವಿಗಳನ್ನು ಸಮಿತಿಯು ಸಂಪೂರ್ಣವಾಗಿ ತಳ್ಳಿಹಾಕಿತು. ಬದಲಾಗಿ, ತಮಿಳುನಾಡಿನ ಕುರುವೈ ಬೆಳೆಗಳಿಗೆ ನೀರಿನ ತುರ್ತು ಅವಶ್ಯಕತೆಯಿದೆ ಎಂಬ ವಾದಕ್ಕೆ ಮಣೆಹಾಕಿ ಈ ಆಘಾತಕಾರಿ ತೀರ್ಪನ್ನು ಪ್ರಕಟಿಸಿದೆ.

ಸಮಿತಿಯ ಈ ಏಕಪಕ್ಷೀಯ ನಿರ್ಧಾರವು ಈಗಾಗಲೇ ತೀವ್ರ ಸಂಕಷ್ಟದಲ್ಲಿರುವ ಕರ್ನಾಟಕದ ರೈತರು ಹಾಗೂ ಸಾರ್ವಜನಿಕರಿಗೆ ದೊಡ್ಡ ಆಘಾತ ತಂದಿದೆ. ಮುಂಗಾರು ಮಳೆಯ ವೈಫಲ್ಯದಿಂದ ಕಂಗಾಲಾಗಿರುವ ಅನ್ನದಾತರಿಗೆ ಕಾವೇರಿ ನೀರು ಹಂಚಿಕೆಯ ಈ ಬೆಳವಣಿಗೆಯಿಂದ ಮತ್ತಷ್ಟು ಸಂಕಷ್ಟ ಎದುರಾಗಿದ್ದು, ಸರ್ಕಾರದ ಮುಂದಿನ ಕಾನೂನು ಹೋರಾಟ ಹಾಗೂ ಹೆಜ್ಜೆಯ ಬಗ್ಗೆ ರಾಜ್ಯದಲ್ಲಿ ವ್ಯಾಪಕ ಚರ್ಚೆ ಹುಟ್ಟುಹಾಕಿದೆ.

Also Read
ಶಂಖಪುಷ್ಪ ಹೂವಿನಲ್ಲಿ ಅಡಗಿದೆ ಅಚ್ಚರಿಯ ರಹಸ್ಯ! ಸಕ್ಕರೆ ಕಾಯಿಲೆ, ಕ್ಯಾನ್ಸರ್ ಬಗ್ಗೆ ವಿಜ್ಞಾನ ಹೇಳೋದೇನು? Shankhupushpam
Cauvery Water Dispute

ತಮಿಳುನಾಡಿಗೆ ಪ್ರತಿದಿನ 4,000 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ CWRC ನೀಡಿರುವ ಶಿಫಾರಸಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರಾಜ್ಯದ ಜಲಾಶಯಗಳಲ್ಲಿ ನೀರಿನ ಸಂಗ್ರಹ ಹಾಗೂ ಒಳಹರಿವು ಅತ್ಯಂತ ಕನಿಷ್ಠ ಮಟ್ಟಕ್ಕೆ ಕುಸಿದಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಸಮಿತಿಯ ಈ ನಿರ್ಧಾರವನ್ನು ಕಾನೂನು ಪ್ರಕಾರವೇ ಎದುರಿಸಲಾಗುವುದು ಎಂದಿರುವ ಅವರು, ಸಿಡಬ್ಲ್ಯೂಆರ್‌ಸಿಯ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ರಾಜ್ಯದ ಮೇಲಿರುವ ಪರಿಸ್ಥಿತಿಯ ಒತ್ತಡವನ್ನು ವಿವರಿಸಿದ ಅವರು, "ನಮ್ಮ ಮೇಲೆ ಜಲಬಿಡುಗಡೆಯ ಒತ್ತಡವಿದೆ ಎಂಬುದು ನಿಜ, ಆದರೆ ಪ್ರಕೃತಿ ನಮ್ಮ ಕೈಯಲ್ಲಿಲ್ಲ, ಸದ್ಯ ರಾಜ್ಯದಲ್ಲಿ ಮಳೆಯೇ ಆಗುತ್ತಿಲ್ಲ. ಜಲಾಶಯಗಳಲ್ಲಿ ಕುಡಿಯುವ ನೀರಿಗೇ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಪರಿಸ್ಥಿತಿಯ ಗಂಭೀರತೆಯನ್ನು ಮನಗಂಡಿರುವ ಅವರು, ಈ ಕುರಿತು ಇಂದು ಸಂಜೆ ತುರ್ತು ಸಭೆ ನಡೆಸಿ ಮುಂದಿನ ಕಾನೂನು ಹೋರಾಟ ಹಾಗೂ ಸರ್ಕಾರದ ಅಧಿಕೃತ ನಿಲುವಿನ ಬಗ್ಗೆ ಕೂಲಂಕಷವಾಗಿ ಚರ್ಚಿಸುವುದಾಗಿ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net