ಕನ್ನಡಿಗರಿಗೆ ಮತ್ತೆ ಕಾವೇರಿ ಶಾಕ್​! 15 ದಿನ ತಮಿಳುನಾಡಿಗೆ ನಿತ್ಯ 12,000 ಕ್ಯೂಸೆಕ್ ನೀರು ಹರಿಸಲು CWRC ಆದೇಶ! Cauvery Water Dispute

ಕನ್ನಡಿಗರಿಗೆ ಮತ್ತೆ ಕಾವೇರಿ ಶಾಕ್​! 15 ದಿನ ತಮಿಳುನಾಡಿಗೆ ನಿತ್ಯ 12,000 ಕ್ಯೂಸೆಕ್ ನೀರು ಹರಿಸಲು CWRC ಆದೇಶ! Cauvery Water Dispute
ಕನ್ನಡಿಗರಿಗೆ ಮತ್ತೆ ಕಾವೇರಿ ಶಾಕ್​! 15 ದಿನ ತಮಿಳುನಾಡಿಗೆ ನಿತ್ಯ 12,000 ಕ್ಯೂಸೆಕ್ ನೀರು ಹರಿಸಲು CWRC ಆದೇಶ! Cauvery Water Dispute
Published on

ಪ್ರಮುಖ ಮುಖ್ಯಾಂಶಗಳು

  • ಕಾವೇರಿ ನೀರು ಹಂಚಿಕೆ ವಿವಾದದಲ್ಲಿ ತಮಿಳುನಾಡಿಗೆ ನಿತ್ಯ 12000 ಕ್ಯೂಸೆಕ್ ನೀರು ಹರಿಸಲು ಸಿಡಬ್ಲ್ಯುಆರ್​ಸಿ ಸೂಚನೆ
  • ಮಳೆಯ ಕೊರತೆಯಿಂದ ಜಲಾಶಯಗಳು ಬತ್ತಿರುವ ಸಂದರ್ಭದಲ್ಲಿ ಬಂದಿರುವ ಈ ಆದೇಶದಿಂದ ಕನ್ನಡಿಗರು ಆಕ್ರೋಶ
  • ಆಗಸ್ಟ್ 11ರಂದು ನಡೆದ 140ನೇ ಸಭೆಯಲ್ಲಿ ಮುಂದಿನ 15 ದಿನಗಳ ಕಾಲ ಒಟ್ಟು 16 ಟಿಎಂಸಿ ನೀರು ಬಿಡಲು ಶಿಫಾರಸು
  • ಈಗಾಗಲೇ ಆಗಸ್ಟ್ 10ರವರೆಗೆ 7.5 ಟಿಎಂಸಿ ನೀರು ಬಿಟ್ಟಿರುವ ಕರ್ನಾಟಕದಿಂದ ಸಮಿತಿಯ ನಿರ್ಧಾರಕ್ಕೆ ತೀವ್ರ ವಿರೋಧ
  • ಕುಡಿಯುವ ನೀರು ಮತ್ತು ಕೃಷಿಗೆ ನೀರು ಕಾಯ್ದಿರಿಸುವುದು ಅತ್ಯಗತ್ಯವಾಗಿರುವ ಕಾರಣ ಇಷ್ಟು ನೀರು ಹರಿಸಲು ಅಸಾಧ್ಯ ಸ್ಪಷ್ಟನೆ
ನವದೆಹಲಿ/ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ( Cauvery Water Dispute ) ಸಂಬಂಧಿಸಿದಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಮತ್ತೊಮ್ಮೆ ಮಾಡಿರುವ ಶಿಫಾರಸು ಕನ್ನಡಿಗರ ಪಾಲಿಗೆ ಮುಳುವಾಗಿದೆ. ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ನಿತ್ಯ 12,000 ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ ಸಿಡಬ್ಲ್ಯುಆರ್​ಸಿ ಕಠಿಣ ಸೂಚನೆಯನ್ನು ನೀಡಿದೆ.
ಈ ವರ್ಷ ಮಳೆಯ ಕೊರತೆಯಿಂದಾಗಿ ರಾಜ್ಯದ ಜಲಾಶಯಗಳಲ್ಲಿ ಸಮಪರ್ಕ ನೀರಿಲ್ಲ. ಇದರ ಪರಿಣಾಮ ಕುಡಿಯುವ ನೀರಿಗೇ ಹಾಹಾಕಾರ ಉಂಟಾಗುವ ಭೀತಿಯಲ್ಲಿರುವಾಗಲೇ CWRCಯ ಈ ಆದೇಶವು ಅನ್ನದಾತರ ನಿದ್ದೆಗೆಡಿಸಿದೆ. ಈ ಸಂಕಷ್ಟದ ಸಮಯದಲ್ಲಿಯೂ ಕನ್ನಡಿಗರ ಹಿತವನ್ನು ಕಡೆಗಣಿಸಿ ನೆರೆಯ ರಾಜ್ಯದ ಒತ್ತಡಕ್ಕೆ ಮಣಿದು ನೀರು ಹರಿಸಲು ಆದೇಶ ಹೊರಡಿಸಿರುವುದು ನಾಡಿನ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ರಾಜ್ಯದ ಜಲಸಂಪನ್ಮೂಲಗಳ ರಕ್ಷಣೆಗೆ ಸರ್ಕಾರಗಳು ದಿಟ್ಟ ಹೆಜ್ಜೆ ಇಡಬೇಕಿರುವ ಈ ಸಂದರ್ಭದಲ್ಲಿ, ಈ ಆದೇಶವು ಕನ್ನಡಿಗರಿಗೆ ಮತ್ತೊಮ್ಮೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಇಂದು (ಆಗಸ್ಟ್​ 11) ಸಿಡಬ್ಲ್ಯುಆರ್‌ಸಿ ಮುಖ್ಯಸ್ಥ ವಿನೀತ್ ಗುಪ್ತಾ ನೇತೃತ್ವದಲ್ಲಿ ನಡೆದ 140ನೇ ಸಭೆಯಲ್ಲಿ ನೀರು ಬಿಡುವ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ಪ್ರತಿದಿನ 12,000 ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚಿಸಲಾಗಿದೆ. ಇದರ ಪ್ರಕಾರ, ಮುಂದಿನ 15 ದಿನಗಳಲ್ಲಿ ರಾಜ್ಯವು ಒಟ್ಟು ಅಂದಾಜು 16 ಟಿಎಂಸಿ ನೀರನ್ನು ಹರಿಸಬೇಕಾದ ಅನಿವಾರ್ಯತೆ ಇದೀಗ ಎದುರಾಗಿದೆ.
ಈಗಾಗಲೇ ಕರ್ನಾಟಕವು ಆಗಸ್ಟ್ 10ರವರೆಗೆ 7.5 ಟಿಎಂಸಿ ನೀರನ್ನು ಬಿಡುಗಡೆ ಮಾಡಿದ್ದು, ಸಮಿತಿಯ ಮುಂದಿನ ಸಭೆಯನ್ನು ಆಗಸ್ಟ್ 24ಕ್ಕೆ ನಿಗದಿಪಡಿಸಲಾಗಿದೆ. ಆದರೆ, ಸಮಿತಿಯ ಈ ಏಕಪಕ್ಷೀಯ ಶಿಫಾರಸಿಗೆ ಕರ್ನಾಟಕ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ ಕುಡಿಯುವ ನೀರು ಮತ್ತು ಸ್ಥಳೀಯ ರೈತರ ಕೃಷಿಗೆ ನೀರನ್ನು ಕಾಯ್ದಿರಿಸುವುದು ಅತ್ಯಗತ್ಯವಾಗಿರುವ ಕಾರಣ, ಪ್ರಸ್ತುತ ಪರಿಸ್ಥಿತಿಯಲ್ಲಿ ಇಷ್ಟೊಂದು ಪ್ರಮಾಣದ ನೀರನ್ನು ಹರಿಸುವುದು ಅಸಾಧ್ಯ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net