ಬಸ್ ಕಿರುಕುಳದ ವಿಡಿಯೋ ವೈರಲ್: ಅಮಾಯಕನ ಸಾವಿಗೆ ಕಾರಣವಾದ 'ಸೋಷಿಯಲ್ ಮೀಡಿಯಾ ಸ್ಟಾರ್' ಈಗ ಜೈಲುಪಾಲು! | Jail

ಆರೋಪಿ ಶೀಮ್‌ಜಿತಾ ಮುಸ್ತಫಾ ಬಂಧನ
ಆರೋಪಿ ಶೀಮ್‌ಜಿತಾ ಮುಸ್ತಫಾ ಬಂಧನ
Published on
ಕೋಝಿಕೋಡ್: ಖಾಸಗಿ ಬಸ್‌ನಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ಹಂಚಿಕೊಳ್ಳುವ ಮೂಲಕ ವ್ಯಕ್ತಿಯೊಬ್ಬರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಶೀಮ್‌ಜಿತಾ ಮುಸ್ತಫಾ ಎಂಬಾಕೆಯನ್ನು ಕೇರಳ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಕಳೆದ ಶುಕ್ರವಾರ ಕಣ್ಣೂರಿನ ಪಯ್ಯನ್ನೂರು ಬಳಿ ಖಾಸಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ, ಬಟ್ಟೆ ಅಂಗಡಿಯೊಂದರ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿದ್ದ ಗೋವಿಂದಪುರಂ ನಿವಾಸಿ ಯು. ದೀಪಕ್ (41) ಎಂಬುವವರು ತಮಗೆ ಅಸಭ್ಯವಾಗಿ ಸ್ಪರ್ಶಿಸಿದ್ದಾರೆ ಎಂದು ಮಲಪ್ಪುರಂನ ಅರೀಕೋಡ್ ಪಂಚಾಯತ್ ಮಾಜಿ ಸದಸ್ಯೆಯೂ ಆಗಿರುವ ಶೀಮ್‌ಜಿತಾ ಆರೋಪಿಸಿದ್ದರು. ದೀಪಕ್ ಅವರ ವೀಡಿಯೊ ಚಿತ್ರೀಕರಿಸಿದ್ದ ಈಕೆ, ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ವೀಡಿಯೊ ಕೇವಲ ಎರಡು ದಿನಗಳಲ್ಲಿ 20 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದು ವೈರಲ್ ಆಗಿತ್ತು.

ಅಪಮಾನ ತಾಳಲಾರದೆ ಪ್ರಾಣ ಬಿಟ್ಟ ದೀಪಕ್

ತನ್ನ ವಿರುದ್ಧ ಕೇಳಿಬಂದ ಸುಳ್ಳು ಆರೋಪ ಮತ್ತು ಸಾಮಾಜಿಕವಾಗಿ ಎದುರಿಸಬೇಕಾದ ಅವಮಾನದಿಂದ ತೀವ್ರ ಮನನೊಂದ ದೀಪಕ್ ಆತ್ಮಹತ್ಯೆ ಮಾಡಿಕೊಂಡಿದ್ದರು. "ನನ್ನ ಮಗ ಯಾವುದೇ ತಪ್ಪು ಮಾಡಿಲ್ಲ, ಈ ಮಹಿಳೆಯ ಸುಳ್ಳು ಆರೋಪದಿಂದ ಉಂಟಾದ ಮಾನಸಿಕ ಆಘಾತವೇ ಆತನ ಸಾವಿಗೆ ಕಾರಣ," ಎಂದು ದೀಪಕ್ ಅವರ ತಾಯಿ ಕೆ. ಕನ್ಯಕಾ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದರು. ಇದರ ಬೆನ್ನಲ್ಲೇ ಪೊಲೀಸರು ಶೀಮ್‌ಜಿತಾ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ (BNS ಸೆಕ್ಷನ್ 108) ಪ್ರಕರಣ ದಾಖಲಿಸಿಕೊಂಡಿದ್ದರು.

ಬಂಧನ ಮತ್ತು ಸಾರ್ವಜನಿಕ ಆಕ್ರೋಶ

ಸೋಮವಾರದಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮೆಡಿಕಲ್ ಕಾಲೇಜ್ ಪೊಲೀಸರು ವಡಕರದ ಆಕೆಯ ಸಂಬಂಧಿಕರ ಮನೆಯಲ್ಲಿ ಪತ್ತೆಹಚ್ಚಿ ಬಂಧಿಸಿದ್ದಾರೆ. ಬಂಧನದ ನಂತರ ಆಕೆಯನ್ನು ಕುನ್ನಮಂಗಲಂ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಕುಟುಂಬದ ಆಕ್ರೋಶ ಮತ್ತು ಕಾನೂನು ಹೋರಾಟ

ಪೊಲೀಸರು ಆರೋಪಿಯ ಪರವಾಗಿ ಮೃದು ಧೋರಣೆ ತಳೆಯುತ್ತಿದ್ದಾರೆ ಎಂದು ದೀಪಕ್ ಕುಟುಂಬ ಆರೋಪಿಸಿದೆ. ಕೇವಲ ಆತ್ಮಹತ್ಯೆಗೆ ಪ್ರಚೋದನೆ ಮಾತ್ರವಲ್ಲದೆ, ಐಟಿ ಕಾಯಿದೆಯಡಿ (IT Act) ಪ್ರಕರಣ ದಾಖಲಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net