ನಿಮಗೆ ನೀವೇ ಲಾರ್ಡ್​ಗಳಾ? ತುಕಾರಾಂ ಮುಂಧೆ ನೇತೃತ್ವದ ಎಫ್​ಡಿಎ ಅಧಿಕಾರಿಗಳ ನಡೆಗೆ ಹೈಕೋರ್ಟ್​ ಗರಂ | Tukaram Mundhe

ತುಕಾರಾಂ ಮುಂಧೆ ನೇತೃತ್ವದ ಎಫ್​ಡಿಎ ಅಧಿಕಾರಿಗಳ ನಡೆಗೆ ಹೈಕೋರ್ಟ್​ ಗರಂ
ತುಕಾರಾಂ ಮುಂಧೆ ನೇತೃತ್ವದ ಎಫ್​ಡಿಎ ಅಧಿಕಾರಿಗಳ ನಡೆಗೆ ಹೈಕೋರ್ಟ್​ ಗರಂ
Published on

ಪ್ರಮುಖ ಮುಖ್ಯಾಂಶಗಳು

  • ಮಹಾರಾಷ್ಟ್ರ ಎಫ್​ಡಿಎ ಅಧಿಕಾರಿಗಳ ನಡೆಗೆ ಬಾಂಬೆ ಹೈಕೋರ್ಟ್ ಆಕ್ರೋಶ
  • ಸೊಳ್ಳೆ ಸಾಯಿಸಲು ಕತ್ತಿ ಬಳಸಬೇಡಿ ಎಂದು ಎಷ್ಟು ಬಾರಿ ಹೇಳೋದು?
  • ಈಗಿರುವ ನಿಯಮಗಳನ್ನು ಮೀರಿ ದಾಳಿಗೆ ಮುಂದಾಗುವುದನ್ನು ಸಹಿಸಲ್ಲ ಎಂದ ನ್ಯಾಯಾಲಯದ ಪೀಠ
ಮುಂಬೈ: ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ (ಎಫ್​ಡಿಎ) ಆಯುಕ್ತರಾದ ತುಕಾರಾಂ ಮುಂಧೆ ನೇತೃತ್ವದ ಅಧಿಕಾರಿಗಳ ಎರಡು ಪ್ರಮುಖ ಕಠಿಣ ಕ್ರಮಗಳಿಗೆ ಇದೀಗ ಬಾಂಬೆ ಹೈಕೋರ್ಟ್ ತಪರಾಕಿ ಹಾಕಿದೆ.
ಈಗಾಗಲೇ ಜಾರಿಯಲ್ಲಿರುವ ನಿಯಮಗಳನ್ನು ಗಾಳಿಗೆ ತೂರಿ, ಅಧಿಕಾರಿಗಳು ತಮ್ಮದೇ ರೀತಿಯಲ್ಲಿ ಅತಿಯಾಗಿ ವರ್ತಿಸುತ್ತಿರುವುದು ಸರಿಯಲ್ಲ. ರೇಡ್​ ಹೆಸರಿನಲ್ಲಿ ಕಾನೂನಿನ ಚೌಕಟ್ಟು ಮೀರುವುದು ಒಪ್ಪುವಂತದ್ದಲ್ಲ. ನಿಮಗೆ ನೀವೇ ಲಾರ್ಡ್​ಗಳು ಅಂದುಕೊಂಡಿದ್ದೀರಾ? ಏನು ಬೇಕಾದರೂ ಮಾಡಬಹುದಾ? ಎಂದು ಹೈಕೋರ್ಟ್​ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ಎಫ್‌ಡಿಎ ತನ್ನ ಹೋಟೆಲ್​ಗಳ ವಿರುದ್ಧ ಕೈಗೊಂಡಿದ್ದ ಆದೇಶಗಳನ್ನು ಹಿಂಪಡೆದಿದೆ.

ಸಿಪ್ಲಾ ಫಾರ್ಮಾ ಲೈಸೆನ್ಸ್ ರದ್ದು ಆದೇಶ ವಾಪಸ್

ಪುಣೆಯ ವಾಡ್ಕಿಯಲ್ಲಿರುವ ಔಷಧ ತಯಾರಿಕಾ ಸಂಸ್ಥೆ ಸಿಪ್ಲಾ ಫಾರ್ಮಾ ಎಂಡ್ ಲೈಫ್ ಸೈನ್ಸಸ್ ಘಟಕದ ಔಷಧ ಮಾರಾಟ ಪರವಾನಗಿಯನ್ನು ಎಫ್‌ಡಿಎ ರದ್ದುಗೊಳಿಸಿತ್ತು. 'ರಿಯಾಕ್ಟಿನ್ ಪ್ಲಸ್' ಮಾತ್ರೆಗಳ ಪ್ಯಾಕೇಜಿಂಗ್ ನಿಯಮ ಉಲ್ಲಂಘನೆ ವಿಚಾರದಲ್ಲಿ ಆಗಸ್ಟ್ 27ರಿಂದ ಜಾರಿಗೆ ಬರುವಂತೆ ಮಳಿಗೆಯ ಲೈಸೆನ್ಸ್ ಅನ್ನು ಎಫ್​ಡಿಎ ರದ್ದುಪಡಿಸಿತ್ತು. ವಿಚಾರಣೆಗೆ ಆಹ್ವಾನಿಸಲು ಸರ್ಕಾರಿ ಸಾರ್ವಜನಿಕ ರಜಾದಿನದಂದು ಎಫ್‌ಡಿಎ ಇಮೇಲ್ ಕಳುಹಿಸಿರುವುದನ್ನು ಪ್ರಶ್ನಿಸಿದ ಹೈಕೋರ್ಟ್, ನಿಮ್ಮ ಇಲಾಖೆಯಿಂದ ಒಳ್ಳೆಯ ಕೆಲಸ ಆಗುತ್ತಿದೆ. ಆದರೆ, ಕೆಲವೊಮ್ಮೆ ಗಡಿ ದಾಟುತ್ತಿದೆ. ಇದು ನ್ಯಾಯದ ತತ್ವಕ್ಕೆ ವಿರುದ್ಧವಾಗಿದೆ ಎಂದು ಚಾಟಿ ಬೀಸಿದ್ದು ಗಮನಾರ್ಹ.

ಎಂಸಿಎ (MCA) ರೆಸ್ಟೋರೆಂಟ್‌ಗಳಿಗೆ ರಿಲೀಫ್​

ಮುಂಬೈ ಕ್ರಿಕೆಟ್ ಅಸೋಸಿಯೇಷನ್ (MCA) ಆವರಣದಲ್ಲಿದ್ದ 5 ಪ್ರಸಿದ್ಧ ರೆಸ್ಟೋರೆಂಟ್‌ಗಳ ಲೈಸನ್ಸ್​ ಅನ್ನು ಅಮಾನತುಗೊಳಿಸಿದ್ದ ಎಫ್‌ಡಿಎ ನಡೆಗೂ ನ್ಯಾಯಾಲಯ ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ಇತ್ತೀಚಿನ ತಪಾಸಣೆಯಲ್ಲಿ ಈ ಆಪರೇಷನ್‌ಗಳು ಶೇ.88ರಷ್ಟು ಆಹಾರ ಭದ್ರತಾ ನಿಯಮಗಳನ್ನು ಪಾಲಿಸುತ್ತಿವೆ ಎಂಬುದನ್ನು ಅರಿತಿದ್ದರೂ, ಲೈಸೆನ್ಸ್ ಹೊಂದಿರುವ ಎಂಸಿಎ ಬೇರೊಂದು ಸಂಸ್ಥೆಗೆ ಗುತ್ತಿಗೆ ನೀಡಿದೆ ಎಂಬ ಒಂದೇ ಕಾರಣಕ್ಕೆ ಕ್ಯಾನ್ಸಲ್​ ಮಾಡಿದ್ದಕ್ಕೆ ಕೋರ್ಟ್​ ಅಸಮಾಧಾನ ಹೊರಹಾಕಿದೆ.

ಕೋರ್ಟ್​ ಎಚ್ಚರಿಕೆ

ಸೊಳ್ಳೆಯನ್ನು ಕೊಲ್ಲಲು ಕತ್ತಿ ಬಳಸಬೇಡಿ ಎಂದು ನಾವು ಪದೇ ಪದೇ ಹೇಳಿದರೂ ಅಧಿಕಾರಿಗಳು ತಲೆಗೆ ತಗೋತ್ತಿಲ್ಲ. ಇಲ್ಲಿ, ನ್ಯಾಯಾಲಯದ ಆದೇಶಗಳನ್ನು ಪಾಲಿಸದ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ದೂರು ದಾಖಲಿಸಿ, ಜೈಲಿಗೆ ಕಳುಹಿಸಬೇಕಾಗುತ್ತದೆ" ಎಂದು ಎಚ್ಚರಿಸಿತು. ಇದರ ಬೆನ್ನಲ್ಲೇ, ರದ್ದು ಆದೇಶವನ್ನು ಹಿಂಪಡೆಯುವುದಾಗಿ ಎಫ್​ಡಿಎ ತಿಳಿಸಿದೆ. ಈ ಮೂಲಕ ಬಿಕೆಸಿಯಲ್ಲಿರುವ ಎಂಸಿಎ ರೆಸ್ಟೋರೆಂಟ್‌ಗಳ ಕಾರ್ಯಾರಂಭಕ್ಕೆ ಹೈಕೋರ್ಟ್ ಹಸಿರು ನಿಶಾನೆ ತೋರಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net