

ನವದೆಹಲಿ: ದೆಹಲಿಯ ತಿಲಕ್ ನಗರದಲ್ಲಿ ರಸ್ತೆ ಕಾಮಗಾರಿಯನ್ನು ಪರಿಶೀಲನೆ ಮಾಡುವ ವೇಳೆ ಬಿಜೆಪಿ ಸಚಿವ ಪರ್ವೇಶ್ ವರ್ಮಾ ಅವರು ವ್ಯಕ್ತಿಯೊಬ್ಬರ ಕಪಾಳಕ್ಕೆ ಹೊಡೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಟೀಕೆಗೆ ಗುರಿಯಾಗಿದೆ. ಮತ್ತು ಆಪ್ ಅವರ ಬಂಧನಕ್ಕೆ ಆಗ್ರಹಿಸಿದೆ.
ಕಳಪೆ ರಸ್ತೆ ಕಾಮಗಾರಿ ಕುರಿತು ದೂರು ಬಂದ ಹಿನ್ನೆಲೆ ಆಪ್ ಶಾಸಕ ಜರ್ನೈಲ್ ಸಿಂಗ್ ಅವರೊಂದಿಗೆ ಸೇರಿ ಪರ್ವೇಶ್ ವರ್ಮಾ ಅವರು ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ ಜರ್ನೈಲ್ ಸಿಂಗ್ ಅವರು ರಸ್ತೆಯ ಮೇಲ್ಭಾಗದ ಕೆಲ ಭಾಗಗಳನ್ನು ಕೈಯಿಂದಲೇ ಕಿತ್ತು ತೆಗೆದು, ಅದರ ನಿರ್ಮಾಣದ ಬಗ್ಗೆ ಪ್ರಶ್ನಿಸಿದ್ದಾರೆ.
ಹತ್ತಿರದಲ್ಲಿ ನಿಂತಿದ್ದ ಯುವಕನೊಬ್ಬ ಪರಿಶೀಲನೆಯನ್ನು ತನ್ನ ಮೊಬೈಲ್ನಲ್ಲಿ ರೆಕಾರ್ಡ್ ಮಾಡುತ್ತಿದ್ದಾಗ ವರ್ಮಾ ಅವರಿಗೆ ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾಗಿದೆ. ವಿಡಿಯೋವರನ್ನು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಶಾಸಕ ಸಿಂಗ್, ರಸ್ತೆಯ ಗುಣಮಟ್ಟದ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಸಚಿವರು ಯಾವುದೇ ಉತ್ತರ ನೀಡದೆ ತಪಾಸಣೆಯನ್ನು ಚಿತ್ರೀಕರಿಸಿದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ವಿಡಿಯೋವನ್ನು ರಿಟ್ಬೀಟ್ ಮಾಡಿದ್ದು, ರಸ್ತೆ ನಿರ್ಮಾಣದ ಕುರಿತು ಸ್ಥಳೀಯ ನಿವಾಸಿಗಳು ಪ್ರಶ್ನಿಸಿದಾಗ ವರ್ಮಾ ಅವರು ತಾಳ್ಮೆಯನ್ನು ಕಳೆದುಕೊಂಡಿದ್ದಾರೆ. ನಾನು ಕೂಡ ಸೋಮವಾರ ಆ ರಸ್ತೆ ಪರಿಶೀಲನೆ ಮಾಡಲು ತಿಲಕ್ ನಗರಕ್ಕೆ ಭೇಟಿ ನೀಡುತ್ತೇನೆ ಎಂದಿದ್ದಾರೆ.
ಇನ್ನೂ ಘಟನೆ ಕುರಿತು ಎಕ್ಸ್ನಲ್ಲಿ ವಿಡಿಯೋ ಮೂಲಕ ಸ್ಪಷ್ಟನೆ ನೀಡಿರುವ ಸಚಿವ ಪರ್ವೇಶ್ ವರ್ಮಾ, ಜರ್ನೈಲ್ ಸಿಂಗ್ ತಮ್ಮ ಕಾರ್ಯಕರ್ತರೊಂದಿಗೆ ಆಗಮಿಸಿ ತಕ್ಷಣವೇ ಅಸಭ್ಯವಾಗಿ ವರ್ತಿಸಲು ಪ್ರಾರಂಭಿಸಿದರು. ಅವರ ಕಾರ್ಯಕರ್ತರಲ್ಲಿ ಒಬ್ಬರು ಸ್ಥಳಕ್ಕೆ ಬಂದ ತಕ್ಷಣವೇ ನನ್ನ ಕುಟುಂಬದವರನ್ನು ನಿಂದಿಸಲು ತೊಡಗಿದರು. ಆ ಸಿಟ್ಟಿನ ಕ್ಷಣದಲ್ಲಿ, ಯಾರಾದರೂ ನಾನು ಪ್ರತಿಕ್ರಿಯಿಸಿದಂತೆಯೇ ಪ್ರತಿಕ್ರಿಯಿಸುತ್ತಿದ್ದರು ಎಂದು ಹೇಳಿದ್ದಾರೆ (ಏಜೆನ್ಸೀಸ್).