ಯೋಗೀಶ್ ಗೌಡ ಕೊಲೆ ಕೇಸ್​: ವಿನಯ್ ಕುಲಕರ್ಣಿ ಜಾಮೀನು ರದ್ದು, ಮಾಜಿ ಸಚಿವರ ಮುಂದಿನ ನಡೆಯೇನು? Vinay Kulkarni

ಈ ಮಹತ್ವದ ತೀರ್ಪಿನಿಂದಾಗಿ ವಿನಯ್ ಕುಲಕರ್ಣಿ ಅವರಿಗೆ ಮತ್ತೆ ಜೈಲು ಸೇರುವುದು ಅನಿವಾರ್ಯವಾಗಿದ್ದು, ಅವರ ರಾಜಕೀಯ ಭವಿಷ್ಯದ ಮೇಲೂ ದೊಡ್ಡ ಮಟ್ಟದ ಕರಿನೆರಳು ಆವರಿಸಿದೆ.
Vinay Kulkarni
ಯೋಗೀಶ್ ಗೌಡ ಕೊಲೆ ಕೇಸ್​: ವಿನಯ್ ಕುಲಕರ್ಣಿ ಜಾಮೀನು ರದ್ದು, ಮಾಜಿ ಸಚಿವರ ಮುಂದಿನ ನಡೆಯೇನು?
Published on: 

ನವದೆಹಲಿ/ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ( Vinay Kulkarni ) ಸುಪ್ರೀಂ ಕೋರ್ಟ್ ಭಾರಿ ಆಘಾತ ನೀಡಿದೆ. ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನು ಹಾಗೂ ಶಿಕ್ಷೆ ಅಮಾನತು ಆದೇಶವನ್ನು ಸರ್ವೋಚ್ಚ ನ್ಯಾಯಾಲಯ ರದ್ದುಗೊಳಿಸಿದ್ದು, ಮುಂದಿನ ಎರಡು ವಾರಗಳ ಒಳಗಾಗಿ ನ್ಯಾಯಾಲಯದ ಮುಂದೆ ಶರಣಾಗುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಈ ಮಹತ್ವದ ತೀರ್ಪಿನಿಂದಾಗಿ ವಿನಯ್ ಕುಲಕರ್ಣಿ ಅವರಿಗೆ ಮತ್ತೆ ಜೈಲು ಸೇರುವುದು ಅನಿವಾರ್ಯವಾಗಿದ್ದು, ಅವರ ರಾಜಕೀಯ ಭವಿಷ್ಯದ ಮೇಲೂ ದೊಡ್ಡ ಮಟ್ಟದ ಕರಿನೆರಳು ಆವರಿಸಿದೆ.

ಜನಪ್ರತಿನಿಧಿ ಕಾಯ್ದೆ 1951ರ ಅನ್ವಯ, ಯಾವುದೇ ಶಾಸಕ ಅಥವಾ ಸಂಸದರು ಕ್ರಿಮಿನಲ್ ಪ್ರಕರಣವೊಂದರಲ್ಲಿ ದೋಷಿ ಎಂದು ಸಾಬೀತಾಗಿ ಕನಿಷ್ಠ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಜೈಲು ಶಿಕ್ಷೆಗೆ ಗುರಿಯಾದಲ್ಲಿ, ಅವರು ತಕ್ಷಣವೇ ತಮ್ಮ ಸ್ಥಾನದಿಂದ ಅನರ್ಹಗೊಳ್ಳುತ್ತಾರೆ. ಅದರಲ್ಲೂ ವಿಶೇಷವಾಗಿ ಕೊಲೆ ಪ್ರಕರಣಗಳಲ್ಲಿ (IPC 302 ಅಥವಾ BNS 103) ಅಪರಾಧ ದೃಢಪಟ್ಟಾಗ ಕಾನೂನಿನ ಪ್ರಕಾರ ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆ ವಿಧಿಸುವುದು ಅನಿವಾರ್ಯವಾಗಿದ್ದು, ಇದು ನಿಗದಿಪಡಿಸಿದ ಕನಿಷ್ಠ ಮಿತಿಗಿಂತ ಹೆಚ್ಚಿನ ಅವಧಿಯಾಗಿರುವುದರಿಂದ ಶಿಕ್ಷೆ ಪ್ರಕಟವಾದ ಕ್ಷಣದಿಂದಲೇ ಅವರ ಶಾಸಕತ್ವವು ಅಧಿಕೃತವಾಗಿ ರದ್ದಾಗುತ್ತದೆ. ಅಲ್ಲದೆ, ಶಿಕ್ಷೆಯ ಅವಧಿ ಪೂರ್ಣಗೊಂಡ ನಂತರವೂ ಮುಂದಿನ 6 ವರ್ಷಗಳ ಕಾಲ ಅವರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ.

Also Read
ಯೋಗೀಶ್​ ಗೌಡ ಕೊಲೆ ಕೇಸ್: ವಿನಯ್ ಕುಲಕರ್ಣಿಗೆ ಸುಪ್ರೀಂನಿಂದ ಬಿಗ್ ಶಾಕ್​, ಜಾಮೀನು ರದ್ದು, 2 ವಾರದಲ್ಲಿ ಶರಣಾಗಲು ಆದೇಶ! Yogesh Gowda murder case
Vinay Kulkarni

ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು 2026ರ ಏಪ್ರಿಲ್‌ನಲ್ಲಿ ವಿನಯ್ ಕುಲಕರ್ಣಿ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದ ಬೆನ್ನಲ್ಲೇ ಅವರ ಶಾಸಕ ಸ್ಥಾನವನ್ನು ಅನರ್ಹಗೊಳಿಸಲಾಗಿತ್ತು. ಇದಾದ ಬಳಿಕ ಜುಲೈನಲ್ಲಿ ಕರ್ನಾಟಕ ಹೈಕೋರ್ಟ್ ಅವರ ಶಿಕ್ಷೆಗೆ ತಡೆಯಾಜ್ಞೆ ನೀಡಿ ಜಾಮೀನು ಮಂಜೂರು ಮಾಡಿದ್ದರಿಂದ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿತ್ತು. ಆದರೆ, ಇದೀಗ ಸುಪ್ರೀಂ ಕೋರ್ಟ್ ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿ ಜೀವಾವಧಿ ಶಿಕ್ಷೆಯನ್ನು ಮರುಸ್ಥಾಪಿಸಿರುವುದರಿಂದ, ಅವರ ಶಾಸಕ ಸ್ಥಾನದ ಅನರ್ಹತೆ ಕಾಯಂ ಆಗಿ ಉಳಿಯುವುದಲ್ಲದೆ, ಶಿಕ್ಷೆ ಪೂರ್ಣಗೊಂಡ ಬಳಿಕವೂ ಮುಂದಿನ ಆರು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸುವಂತಿಲ್ಲ.

ಶಾಸಕ ಸ್ಥಾನ ರದ್ದಾಗುವ ಪ್ರಕ್ರಿಯೆ ಹೇಗೆ?

ತೀರ್ಪಿನ ಪ್ರತಿ ರಾಜ್ಯ ವಿಧಾನಸಭೆಯ ಸಭಾದ್ಯಕ್ಷರ ಕಚೇರಿಗೆ ಕಳುಹಿಸಲಾಗುತ್ತದೆ. ತೀರ್ಪಿನ ಪ್ರತಿಯನ್ನು ಪರಿಶೀಲಿಸುವ ಸಭಾಧ್ಯಕ್ಷರು ಅಪರಾಧಿ ಸ್ಥಾನದಲ್ಲಿ ನಿಂತು ಶಿಕ್ಷೆಗೆ ಗುರಿಯಾಗಿರುವ ಶಾಸಕರನ್ನು ಆ ಸ್ಥಾನದಿಂದ ವಜಾಗೊಳಿಸಿ, ಅಧಿಕೃತ ಆದೇಶವನ್ನು ಹೊರಡಿಸುತ್ತಾರೆ. ಬಳಿಕ ಆ ಆದೇಶದ ಪ್ರತಿಯನ್ನು ಚುನಾವಣ ಆಯೋಗಕ್ಕೆ ಕಳುಹಿಸಲಾಗುತ್ತದೆ. ಬಳಿಕ, ಚುನಾವಣಾ ಆಯೋಗ್ಯ ಖಾಲಿಯಾದ ಶಾಸಕ ಸ್ಥಾನಕ್ಕೆ ಉಪಚುನಾವಣೆಯನ್ನು ನಡೆಸುತ್ತದೆ.

ಮುಂದಿನ ನಡೆ ಏನು?

ಸುಪ್ರೀಂ ಕೋರ್ಟ್ ಆದೇಶದಿಂದ ತೀವ್ರ ಇಕ್ಕಟ್ಟಿಗೆ ಸಿಲುಕಿರುವ ವಿನಯ್ ಕುಲಕರ್ಣಿ ಅವರಿಗೆ ಸದ್ಯದ ಮಟ್ಟಿಗೆ ಕಾನೂನು ಹೋರಾಟದ ಆಯ್ಕೆಗಳು ಬಹಳ ಸೀಮಿತವಾಗಿವೆ. ಮೊದಲನೆಯದಾಗಿ, ಸುಪ್ರೀಂ ಕೋರ್ಟ್ ನೀಡಿರುವ ಎರಡು ವಾರಗಳ ಗಡುವಿನೊಳಗೆ ಅವರು ವಿಚಾರಣಾ ನ್ಯಾಯಾಲಯದ ಮುಂದೆ ಶರಣಾಗಿ ಜೈಲು ಸೇರಲೇಬೇಕಾಗಿದೆ. ಸುಪ್ರೀಂ ಕೋರ್ಟ್ ತೀರ್ಪನ್ನು ಪ್ರಶ್ನಿಸಿ ಅದೇ ಪೀಠದ ಮುಂದೆ ಮರುಪರಿಶೀಲನಾ ಅರ್ಜಿ (ರಿವ್ಯೂ ಪಿಟಿಷನ್) ಸಲ್ಲಿಸುವ ಅವಕಾಶ ಅವರಿಗಿದ್ದರೂ, ಜಾಮೀನು ರದ್ದತಿ ಹಾಗೂ ಶಿಕ್ಷೆ ಅಮಾನತು ನಿರಾಕರಣೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತನ್ನದೇ ಆದೇಶವನ್ನು ಬದಲಿಸುವ ಸಾಧ್ಯತೆಗಳು ತೀರಾ ವಿರಳವಾಗಿರುತ್ತವೆ.

ಹೀಗಾಗಿ, ವಿನಯ್ ಕುಲಕರ್ಣಿ ಅವರ ಮುಂದಿರುವ ಏಕೈಕ ಮತ್ತು ಪ್ರಮುಖ ಕಾನೂನು ದಾರಿ ಎಂದರೆ ಕರ್ನಾಟಕ ಹೈಕೋರ್ಟ್‌ನಲ್ಲಿ ಬಾಕಿ ಇರುವ ತಮ್ಮ ಮೂಲ ಕ್ರಿಮಿನಲ್ ಮೇಲ್ಮನವಿಯ (ಕ್ರಿಮಿನಲ್ ಅಪೀಲ್) ವಿಚಾರಣೆಯನ್ನು ತ್ವರಿತವಾಗಿ ನಡೆಸುವಂತೆ ಮನವಿ ಮಾಡುವುದು.

Also Read
ಕತಾರ್​ನಲ್ಲಿ ವೈಭವ್ ರುದ್ರತಾಂಡವ: ವಂಡರ್​ ಕಿಡ್​ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ UAE ನಾಯಕ ಬಾಸಿಲ್ ಹಮೀದ್​! Vaibhav Suryavanshi
Vinay Kulkarni

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಧಿಸಿರುವ ಜೀವಾವಧಿ ಶಿಕ್ಷೆಯನ್ನು ಹೈಕೋರ್ಟ್ ಸಂಪೂರ್ಣವಾಗಿ ರದ್ದುಗೊಳಿಸಿ ಅವರನ್ನು ನಿರ್ದೋಷಿ ಎಂದು ಘೋಷಿಸಿದರೆ ಮಾತ್ರ ಅವರು ಜೈಲಿನಿಂದ ಹೊರಬರಲು ಮತ್ತು ತಮ್ಮ ಕಳೆದುಹೋದ ಶಾಸಕ ಸ್ಥಾನವನ್ನು ಮರಳಿ ಪಡೆಯಲು ಸಾಧ್ಯವಿದೆ. ಹೈಕೋರ್ಟ್‌ನಲ್ಲಿ ಮೇಲ್ಮನವಿ ವಿಚಾರಣೆಯನ್ನು ಶೀಘ್ರಗತಿಯಲ್ಲಿ ಕೈಗೆತ್ತಿಕೊಳ್ಳುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡುವ ಮೂಲಕ ತಮ್ಮ ಕಾನೂನು ಹೋರಾಟವನ್ನು ಚುರುಕುಗೊಳಿಸಲು ಅವರ ವಕೀಲರ ತಂಡ ಸಿದ್ಧತೆ ನಡೆಸುತ್ತಿದೆ.

ರಾಜಕೀಯವಾಗಿ ಧಾರವಾಡ ಜಿಲ್ಲೆಯಲ್ಲಿ ಪ್ರಬಲ ಹಿಡಿತ ಹೊಂದಿರುವ ವಿನಯ್ ಕುಲಕರ್ಣಿ ಅವರಿಗೆ ಈ ಬೆಳವಣಿಗೆ ದೊಡ್ಡ ಹಿನ್ನಡೆಯಾಗಿದೆ. ಮುಂದಿನ ಎರಡು ವಾರಗಳಲ್ಲಿ ಶರಣಾಗುವ ಮುನ್ನ ತಮ್ಮ ಕ್ಷೇತ್ರದ ಕಾರ್ಯಕರ್ತರು ಮತ್ತು ಬೆಂಬಲಿಗರೊಂದಿಗೆ ಸಭೆ ನಡೆಸಿ, ತಮ್ಮ ಅನುಪಸ್ಥಿತಿಯಲ್ಲಿ ಕ್ಷೇತ್ರದ ರಾಜಕೀಯ ಚಟುವಟಿಕೆಗಳನ್ನು ಮುನ್ನಡೆಸುವ ಜವಾಬ್ದಾರಿಯನ್ನು ತಮ್ಮ ಕುಟುಂಬಸ್ಥರು ಅಥವಾ ಆಪ್ತರಿಗೆ ವಹಿಸುವ ಸಾಧ್ಯತೆಯಿದೆ.

ಒಂದು ವೇಳೆ ಅನರ್ಹತೆ ಹಿನ್ನೆಲೆಯಲ್ಲಿ ಧಾರವಾಡ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಎದುರಾದರೆ, ತಮ್ಮ ಪತ್ನಿ ಶಿವಲೀಲಾ ಕುಲಕರ್ಣಿ ಅವರನ್ನು ಕಣಕ್ಕಿಳಿಸುವ ಕುರಿತು ಕಾಂಗ್ರೆಸ್ ಹೈಕಮಾಂಡ್ ಜತೆ ಚರ್ಚಿಸಿ ಮುಂದಿನ ರಾಜಕೀಯ ಹೆಜ್ಜೆ ಇಡುವ ನಿರೀಕ್ಷೆಯಿದೆ.