

ರಾಂಚಿ: ಪತ್ನಿಯರ ನಡುವಿನ ನಿರಂತರ ಜಗಳದಿಂದ ಬೇಸತ್ತು, ಇಬ್ಬರು ಸಹೋದರರು ತಮ್ಮ ಹೆಂಡತಿಯರನ್ನೇ ಕೊಲೆ ಮಾಡಿ, ಆಂಬ್ಯುಲೆನ್ಸ್‌ನಲ್ಲಿ ಶವಗಳನ್ನು ಸಾಗಿಸಿ ಕಾಡಿನಲ್ಲಿ ಹೂತುಹಾಕಿರುವ ಆಘಾತಕಾರಿ ಘಟನೆ ಜಾರ್ಖಂಡ್‌ನ ( Jharkhand Brothers ) ಗುಮ್ಲಾ ಜಿಲ್ಲೆಯಲ್ಲಿ ನಡೆದಿದೆ.
ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯಲ್ಲಿ ಈ ಅಮಾನವೀಯ ಕೃತ್ಯ ಬೆಳಕಿಗೆ ಬಂದಿದ್ದು, ಆಂಬ್ಯುಲೆನ್ಸ್ ಚಾಲಕ ಶಿವಶಂಕರ್ ಸಾಹು ಮತ್ತು ಆತನ ಸಹೋದರ ನವೀನ್ ಸಾಹು ಬಂಧಿತ ಆರೋಪಿಗಳಾಗಿದ್ದಾರೆ. ಇವರಿಬ್ಬರು ತಮ್ಮ ಪತ್ನಿಯರಾದ ಮಿನಿ ಪ್ರಿಯಾ (28) ಮತ್ತು ರಾಧಿಕಾ ಕುಮಾರಿ (20) ಅವರನ್ನು ಸೋಮವಾರ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
ಕೊಲೆ ಮಾಡಿದ ಬಳಿಕ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಇಬ್ಬರ ಮೃತದೇಹಗಳನ್ನು ಶಿವಶಂಕರ್ ಚಲಾಯಿಸುತ್ತಿದ್ದ ಆಂಬ್ಯುಲೆನ್ಸ್‌ನಲ್ಲಿಯೇ ಪಕ್ಕದ ಸಿಮ್ಡೆಗಾ ಜಿಲ್ಲೆಯ ದಟ್ಟ ಅರಣ್ಯಕ್ಕೆ ಸಾಗಿಸಿ ಹೂತುಹಾಕಿದ್ದರು ಎಂದು ಗುಮ್ಲಾ ಪೊಲೀಸ್ ವರಿಷ್ಠಾಧಿಕಾರಿ ಹ್ಯಾರಿಸ್ ಬಿನ್ ಜಮಾ ತಿಳಿಸಿದ್ದಾರೆ.
ಇಬ್ಬರು ಪತ್ನಿಯರ ನಡುವೆ ದೀರ್ಘಕಾಲದಿಂದ ನಡೆಯುತ್ತಿದ್ದ ಕೌಟುಂಬಿಕ ಕಲಹದಿಂದ ಈ ಸಹೋದರರು ತೀವ್ರ ಅಸಮಾಧಾನಗೊಂಡಿದ್ದರು. ವಿಪರ್ಯಾಸವೆಂದರೆ, ಕೊಲೆಯಾಗುವ ಕೇವಲ ಎರಡು ದಿನಗಳ ಮುಂಚೆಯಷ್ಟೇ ಆ ಇಬ್ಬರು ಮಹಿಳೆಯರು ತಮ್ಮ ನಡುವಿನ ಜಗಳವನ್ನು ಮರೆತು ರಾಜಿಯಾಗಿದ್ದರು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಸೋಮವಾರ ಬೆಳಗ್ಗೆ 9 ಗಂಟೆಯ ಸುಮಾರಿಗೆ ಮೃತ ಮಹಿಳೆಯರ ಪೋಷಕರು ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದು, ಆ ಸಮಯದಲ್ಲಿ ಮನೆಯಲ್ಲಿ ಎಲ್ಲವೂ ಸಹಜವಾಗಿಯೇ ಇತ್ತು ಎನ್ನಲಾಗಿದೆ.
ಕೃತ್ಯದ ಬಳಿಕ ಮಂಗಳವಾರ ಪೊಲೀಸರ ಬಳಿ ಬಂದಿದ್ದ ಆರೋಪಿ ಸಹೋದರರು, ತಮ್ಮ ಪತ್ನಿಯರು ಯಾರಿಗೂ ಹೇಳದೆ ಮನೆ ಬಿಟ್ಟು ಹೋಗಿದ್ದಾರೆ ಎಂದು ನಾಟಕವಾಡಿದ್ದರು. ಆದರೆ, ಪೊಲೀಸರಿಗೆ ಅನುಮಾನ ಬಂದು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಆರೋಪಿಗಳು ಸತ್ಯ ಬಾಯ್ಬಿಟ್ಟಿದ್ದಾರೆ.
ಆರೋಪಿಗಳ ಮಾಹಿತಿಯ ಮೇರೆಗೆ ಕಾಡಿನಲ್ಲಿ ಹೂತಿದ್ದ ಶವಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಘಟನೆಗೆ ಬಳಸಲಾಗಿದ್ದ ಕೊಡಲಿ ಮತ್ತು ಆಂಬ್ಯುಲೆನ್ಸ್ ಅನ್ನು ಜಪ್ತಿ ಮಾಡಲಾಗಿದ್ದು, ಕೃತ್ಯಕ್ಕೆ ಸಹಕರಿಸಿದ ಆರೋಪದ ಮೇಲೆ ಆರೋಪಿಗಳ ಪೋಷಕರಾದ ಸಮೇಶ್ವರ ಸಾಹು ಮತ್ತು ತಿಲೇಶ್ವರಿ ದೇವಿ ಅವರನ್ನೂ ಪೊಲೀಸರು ಬಂಧಿಸಿದ್ದಾರೆ, (ಏಜೆನ್ಸೀಸ್).