ದೇಶದ ಡೆಮೊಗ್ರಫಿ ಬದಲಾವಣೆ ಪತ್ತೆ ಹಚ್ಚಲು ಮುಂದಾದ ಅಮಿತ್ ಶಾ; ಕೇಂದ್ರ ಸರ್ಕಾರದಿಂದ ಉನ್ನತ ಮಟ್ಟದ ಸಮಿತಿ ರಚನೆ | Amit Shah

ಅಮಿತ್ ಶಾ
ಅಮಿತ್ ಶಾ
Published on
ನವದೆಹಲಿ: ಅಕ್ರಮ ವಲಸೆ ಮತ್ತು ಇತರೆ ದೇಶಗಳಿಂದ ಉಂಟಾದ ಅಸ್ವಾಭಾವಿಕ ಜನಸಂಖ್ಯಾ ಬದಲಾವಣೆಯನ್ನು ಪತ್ತೆ ಹಚ್ಚಲು ಕೇಂದ್ರ ಗೃಹಸಚಿವ ಅಮಿತ್ ಶಾ(Amit Shah) ಮುಂದಾಗಿದ್ದು, ಈ ಕುರಿತು ಪರಿಶೀಲನೆ ನಡೆಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಿರುವುದಾಗಿ ಮಂಗಳವಾರ(ಮೇ 26) ಹೇಳಿದ್ದಾರೆ.
ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಅವರು, ದೇಶದ ಡೆಮೊಗ್ರಫಿ ಬದಲಾವಣೆಯೂ ಭಾರತದ ಸಾರ್ವಭೌಮತ್ವ, ರಾಷ್ಟ್ರೀಯ ಭದ್ರತೆ, ಸಾಮಾಜಿಕ ಸಮತೋಲನ ಮತ್ತು ಬುಡಕಟ್ಟು ಸಮಾಜಗಳ ಸಂರಕ್ಷಣೆಗೆ ಪ್ರಮುಖ ಸವಾಲಾಗಿದೆ. 2025 ಆಗಸ್ಟ್ 15ರಂದು ಪ್ರಧಾನಿ ಮೋದಿಯವರು ಹೇಳಿದಂತೆ ಅಕ್ರಮ ವಲಸೆ ಮತ್ತು ಇತರ ಅಸಹಜ ಕಾರಣಗಳಿಗೆ ಸಂಬಂಧಿಸಿದ ಜನಸಂಖ್ಯಾ ಬದಲಾವಣೆಗಳ ಬಗ್ಗೆ ಪರಿಶೀಲನೆ ನಡೆಸಲು ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ ಎಂದು ತಿಳಿಸಿದ್ದಾರೆ.
ದೇಶಾದ್ಯಂತ ನಡೆಯುತ್ತಿರುವ ಜನಸಂಖ್ಯಾ ಬದಲಾವಣೆಗಳ ಸಮಗ್ರ ಮೌಲ್ಯಮಾಪನವನ್ನು ನಡೆಸುವ ಮತ್ತು ಧಾರ್ಮಿಕ, ಸಾಮಾಜಿಕ ಸಮುದಾಯಗಳ ಮಟ್ಟದಲ್ಲಿ ಅಸಹಜ ಜನಸಂಖ್ಯಾ ಬದಲಾವಣೆಗಳ ಮಾದರಿಗಳನ್ನು ವಿಶ್ಲೇಷಿಸುವ ಕಾರ್ಯವನ್ನು ಸಮಿತಿಗೆ ವಹಿಸಲಾಗಿದೆ. ಈ ಸಮಸ್ಯೆಯನ್ನು ಪರಿಹರಿಸಲು ಯೋಜಿತ ಮತ್ತು ಕಾಲಮಿತಿಯ ಪರಿಹಾರವನ್ನು ಸಮಿತಿ ಶಿಫಾರಸು ಮಾಡುತ್ತದೆ ಎಂದು ಪ್ರತಿಪಾದಿಸಿದ್ದಾರೆ.
ನಿವೃತ್ತ ನ್ಯಾಯಮೂರ್ತಿ ಪ್ರಕಾಶ್ ಪ್ರಭಾಕರ್ ನವೋಲೇಕರ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದ್ದು, ಮಾಜಿ ಐಎಎಸ್ ಅಧಿಕಾರಿಗಳಾದ ದುರ್ಗಾ ಶಂಕರ್ ಮಿಶ್ರಾ, ಬಾಲಾಜಿ ಶ್ರೀವಾಸ್ತವ ಹಾಗೂ ಅರ್ಥಶಾಸ್ತ್ರಜ್ಞ ಡಾ. ಶಮಿಕಾ ರವಿ ಅವರು ಸದಸ್ಯರಾಗಿರುತ್ತಾರೆ. ಜನಗಣತಿ ಆಯುಕ್ತರು ಸಹ ಸಮಿತಿಯ ಭಾಗವಾಗಿರುತ್ತಾರೆ. ಜೊತೆಗೆ ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ (ವಿದೇಶಿಯರು-I) ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ ಎಂದಿದ್ದಾರೆ.
ಇನ್ನೂ ಅಮಿತ್ ಶಾ ಅವರ ಈ ಸಮಿತಿ ರಚನೆಯೂ ವ್ಯಾಪಕವಾದ ರಾಜಕೀಯ ಚರ್ಚೆಯನ್ನು ಹುಟ್ಟುಹಾಕುವ ನಿರೀಕ್ಷೆಯಿದೆ. ಅಕ್ರಮ ವಲಸೆ ಮತ್ತು ಜನಸಂಖ್ಯಾ ಬದಲಾವಣೆಗಳ ವಿಷಯವು ಹಲವಾರು ರಾಜ್ಯಗಳಲ್ಲಿ, ವಿಶೇಷವಾಗಿ ಗಡಿ ಪ್ರದೇಶಗಳಲ್ಲಿ ಉದ್ವಿಗ್ನತೆ ಉಂಟು ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net