AI Impact Summit: ಅರೆಬೆತ್ತಲಾದ ಕಾಂಗ್ರೆಸ್​ ಕಾರ್ಯಕರ್ತರಿಂದ ಪ್ರತಿಭಟನೆ; ರಾಷ್ಟ್ರೀಯ ಅವಮಾನ ಎಂದ ಬಿಜೆಪಿ

AI Impact Summit ನಲ್ಲಿ ಅರೆಬೆತ್ತಲಾಗಿರುವ ಕಾಂಗ್ರಸ್​ ಕಾರ್ಯಕರ್ತರು
AI Impact Summit ನಲ್ಲಿ ಅರೆಬೆತ್ತಲಾಗಿರುವ ಕಾಂಗ್ರಸ್​ ಕಾರ್ಯಕರ್ತರು
Published on

ಪ್ರಮುಖ ಮುಖ್ಯಾಂಶಗಳು

  • AI Impact Summit ನಲ್ಲಿ ಕಾಂಗ್ರೆಸ್​ ಕಾರ್ಯಕರ್ತರಿಂದ ಪ್ರತಿಭಟನೆ
  • ಅರೆಬೆತ್ತಲಾಗಿ ಪ್ರಧಾನ ಮಂತ್ರಿ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರು
  • ಇದೊಂದು ರಾಷ್ಟ್ರೀಯ ಅವಮಾನ ಎಂದ ಬಿಜೆಪಿ
ನವದೆಹಲಿ: ಭಾರತದ ಪ್ರತಿಷ್ಠೆಯ ಸಂಕೇತವಾಗಿ ದೆಹಲಿಯ ಭಾರತ್ ಮಂಟಪದಲ್ಲಿ ನಡೆಯುತ್ತಿರುವ AI ಇಂಪ್ಯಾಕ್ಟ್ ಶೃಂಗಸಭೆ (AI Impact Summit) ಶುಕ್ರವಾರ (ಫೆ.20) ದಂದು ಅಕ್ಷರಶಃ ರಾಜಕೀಯ ರಣಾಂಗಣವಾಗಿ ಮಾರ್ಪಟ್ಟಿತು.
ವಿಶ್ವದ ನಾನಾ ದೇಶಗಳ ಗಣ್ಯರು, ತಂತ್ರಜ್ಞಾನ ದಿಗ್ಗಜರು ಭಾಗವಹಿಸಿರುವ ಈ ವೇದಿಕೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ಅನಿರೀಕ್ಷಿತ ಪ್ರತಿಭಟನೆ ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ.

QR ಕೋಡ್ ಬಳಸಿ ಒಳಬಂದ ಪ್ರತಿಭಟನಾಕಾರರು!

ಅತ್ಯಂತ ಬಿಗಿ ಭದ್ರತೆಯ ನಡುವೆಯೂ ಸುಮಾರು 10 ಮಂದಿ ಯುವ ಕಾಂಗ್ರೆಸ್ ಸದಸ್ಯರು ಸಾಮಾನ್ಯ ಸಂದರ್ಶಕರಂತೆ QR-ಕೋಡೆಡ್ ಪಾಸ್‌ಗಳನ್ನು ಬಳಸಿಕೊಂಡು ಹಾಲ್ ಸಂಖ್ಯೆ 5ರ ಒಳಗೆ ಪ್ರವೇಶಿಸಿದ್ದಾರೆ. ಪ್ರಧಾನಿ ಮೋದಿ ಮತ್ತು ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಚಿತ್ರಗಳಿದ್ದ ಟಿ-ಶರ್ಟ್‌ಗಳನ್ನು ಧರಿಸಿದ್ದ ಅವರು ದಿಢೀರನೆ ತಮ್ಮ ಟಿ-ಶರ್ಟ್‌ಗಳನ್ನು ತೆಗೆದು ಘೋಷಣೆಗಳನ್ನು ಕೂಗಲು ಆರಂಭಿಸಿದ್ದಾರೆ.
ಭಾರತ- ಅಮೆರಿಕಾ ವ್ಯಾಪಾರ ಒಪ್ಪಂದದಲ್ಲಿ ಪ್ರಧಾನಿ ರಾಜಿ ಮಾಡಿಕೊಂಡಿದ್ದಾರೆ ಮತ್ತು ಎಪ್ಸ್ಟೀನ್ ಫೈಲ್ಸ್ ತನಿಖೆಯಾಗಲಿ ಎಂಬ ಘೋಷಣೆಗಳನ್ನು ಅವರು ಕೂಗಿದ್ದಾರೆ. ಈ ಗದ್ದಲದಿಂದಾಗಿ ವಿದೇಶಿ ಅತಿಥಿಗಳು ಒಂದು ಕ್ಷಣ ದಿಗಿಲುಗೊಂಡಿದ್ದು, ಕೂಡಲೇ ಕಾರ್ಯಪ್ರವೃತ್ತರಾದ ದೆಹಲಿ ಪೊಲೀಸರು ಐದಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ತಿಲಕ್ ಮಾರ್ಗ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.

ಇದು ಯುವಕರ ಆಕ್ರೋಶ: ಯುವ ಕಾಂಗ್ರೆಸ್ ಸಮರ್ಥನೆ

ಈ ಪ್ರತಿಭಟನೆಯನ್ನು ಸಮರ್ಥಿಸಿಕೊಂಡಿರುವ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಉದಯ್ ಭಾನು ಚಿಬ್, ಇದು ಕೇವಲ ಸಂಘಟನೆಯ ಪ್ರತಿಭಟನೆಯಲ್ಲ, ದೇಶದ ನಿರುದ್ಯೋಗಿ ಯುವಕರ ಆಕ್ರೋಶ. ಅಮೆರಿಕದೊಂದಿಗಿನ ವ್ಯಾಪಾರ ಒಪ್ಪಂದದಿಂದ ನಮ್ಮ ರೈತರಿಗೆ ಮತ್ತು ಸಾಮಾನ್ಯ ಜನರಿಗೆ ಹಾನಿಯಾಗಲಿದೆ. ದೇಶದ ಹಿತಾಸಕ್ತಿಯನ್ನು ಪ್ರಧಾನಿ ರಾಜಿ ಮಾಡಿಕೊಂಡಿದ್ದಾರೆ ಎಂದು ಪ್ರಶ್ನಿಸುವುದು ನಮ್ಮ ಹಕ್ಕು, ಎಂದಿದ್ದಾರೆ.
ಬಿಜೆಪಿಯಿಂದ ತೀವ್ರ ವಾಗ್ದಾಳಿ: ರಾಷ್ಟ್ರೀಯ ಅವಮಾನ
ಈ ಘಟನೆಯನ್ನು ಬಿಜೆಪಿ ನಾಯಕರು ಕಟುವಾಗಿ ಟೀಕಿಸಿದ್ದಾರೆ. ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಎಕ್ಸ್ (X) ನಲ್ಲಿ ಪ್ರತಿಕ್ರಿಯಿಸಿ, ವಿಶ್ವದ ಮುಂದೆ ಭಾರತ ತನ್ನ ತಂತ್ರಜ್ಞಾನದ ಶಕ್ತಿಯನ್ನು ಪ್ರದರ್ಶಿಸುತ್ತಿರುವಾಗ, ಕಾಂಗ್ರೆಸ್ ಕಾರ್ಯಕರ್ತರು ಟಾಪ್‌ಲೆಸ್ ಆಗಿ ಪ್ರತಿಭಟಿಸಿ ದೇಶಕ್ಕೆ ಮುಜುಗರ ತಂದಿದ್ದಾರೆ. ಇದು ರಾಹುಲ್ ಗಾಂಧಿ ಸಂಸ್ಕೃತಿ, ಎಂದು ಕಿಡಿಕಾರಿದ್ದಾರೆ.
ದೆಹಲಿ ಸಚಿವ ಸಿರ್ಸಾ ಕೂಡ ಆಕ್ರೋಶ ವ್ಯಕ್ತಪಡಿಸಿ, ವಿದೇಶಿ ಅತಿಥಿಗಳ ಮುಂದೆ ಈ ರೀತಿ ಅಸಭ್ಯವಾಗಿ ವರ್ತಿಸುವುದು ಸ್ವೀಕಾರಾರ್ಹವಲ್ಲ. ಗಾಂಧಿ ಕುಟುಂಬ ಇಷ್ಟು ಕೆಳಮಟ್ಟಕ್ಕೆ ಇಳಿಯುತ್ತದೆ ಎಂದು ಯಾರೂ ಭಾವಿಸಿರಲಿಲ್ಲ, ಎಂದಿದ್ದಾರೆ.

ಭದ್ರತೆ ಹೆಚ್ಚಿಸಿದ ಪೊಲೀಸರು

ಶೃಂಗಸಭೆಯಲ್ಲಿ ಭಾಗವಹಿಸಿದ್ದ ಅತಿಥಿಗಳು ಈ ಘಟನೆಯಿಂದ ಆಘಾತ ವ್ಯಕ್ತಪಡಿಸಿದ್ದು, ಇದು ಭಾರತದ ವರ್ಚಸ್ಸಿಗೆ ಧಕ್ಕೆ ತಂದಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಘಟನೆಯ ಬೆನ್ನಲ್ಲೇ ಭಾರತ್ ಮಂಟಪದ ಸುತ್ತ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.
ಫೆಬ್ರವರಿ 16 ರಿಂದ 20 ರ ವರೆಗೆ ನಡೆಯುತ್ತಿರುವ ಈ ಶೃಂಗಸಭೆಯಲ್ಲಿ ಜಾಗತಿಕ AI ನಾಯಕರು ಮತ್ತು ಸಂಶೋಧಕರು ಭಾಗವಹಿಸುತ್ತಿದ್ದಾರೆ. ಇಂತಹ ಮಹತ್ವದ ವೇದಿಕೆಯಲ್ಲಿ ನಡೆದ ಈ ಪ್ರತಿಭಟನೆ ಈಗ ದೇಶಾದ್ಯಂತ ಪರ-ವಿರೋಧದ ಚರ್ಚೆಗೆ ಗ್ರಾಸವಾಗಿದೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net