ಅಭಿಷೇಕ್ ಬ್ಯಾನರ್ಜಿ ಮೇಲಿನ ದಾಳಿಗೆ ಟಿಎಂಸಿ ಮಾಜಿ ಶಾಸಕಿ ಲವ್ಲಿ ಮೈತ್ರಾ ಲಿಂಕ್​..? ಕೇಂದ್ರ ಸಚಿವ ಮಜುಂದಾರ್ ಸ್ಫೋಟಕ ಆರೋಪ! | Abhishek Banerjee

Abhishek Banerjee | ಸಂಸದ ಅಭಿಷೇಕ್ ಬ್ಯಾನರ್ಜಿ
Abhishek Banerjee | ಸಂಸದ ಅಭಿಷೇಕ್ ಬ್ಯಾನರ್ಜಿ
Published on
ಕೊಲ್ಕತಾ: ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಸೋನಾರ್‌ಪುರದಲ್ಲಿ ತೃಣಮೂಲ ಕಾಂಗ್ರೆಸ್ (TMC) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದ ಅಭಿಷೇಕ್ ಬ್ಯಾನರ್ಜಿ (Abhishek Banerjee) ಮೇಲೆ ನಡೆದಿದ್ದ ಹಲ್ಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರನ್ನು ಬಂಧಿಸಿದ್ದು, ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಚುನಾವಣೋತ್ತರ ಹಿಂಸಾಚಾರದ ಸಂತ್ರಸ್ತರ ಕುಟುಂಬಗಳನ್ನು ಭೇಟಿ ಮಾಡಲು ಸೋನಾರ್‌ಪುರಕ್ಕೆ ತೆರಳಿದ್ದ ವೇಳೆ ಅಭಿಷೇಕ್ ಬ್ಯಾನರ್ಜಿ ಮೇಲೆ ಕಲ್ಲು ಮತ್ತು ಮೊಟ್ಟೆಗಳಿಂದ ದಾಳಿ ನಡೆಸಲಾಗಿತ್ತು. ಈ ಘಟನೆಯಲ್ಲಿ ಟಿಎಂಸಿ ನಾಯಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸಿಸಿಟಿವಿ ಹಾಗೂ ಮಾಧ್ಯಮಗಳ ದೃಶ್ಯಾವಳಿಗಳನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಲ್ಲು ತೂರಾಟದಲ್ಲಿ ಮಾಜಿ ಶಾಸಕಿ ಲವ್ಲಿ ಮೈತ್ರಾ ಕೈವಾಡ..?

ಈ ದಾಳಿಯ ಬೆನ್ನಲ್ಲೇ ಆಡಳಿತಾರೂಢ ಟಿಎಂಸಿ ಮತ್ತು ಬಿಜೆಪಿ ನಡುವೆ ತೀವ್ರ ರಾಜಕೀಯ ಆರೋಪ-ಪ್ರತ್ಯಾರೋಪಗಳು ಆರಂಭವಾಗಿವೆ. ಕೇಂದ್ರ ಸಚಿವ ಸುಕಾಂತ ಮುಜುಂದಾರ್ ಈ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದು, ಬಂಧಿತರೆಲ್ಲರೂ ಟಿಎಂಸಿ ಕಾರ್ಯಕರ್ತರಾಗಿದ್ದು ಮಾಜಿ ಶಾಸಕಿ ಲವ್ಲಿ ಮೈತ್ರಾ ಅವರಿಗೆ ಆಪ್ತರಾಗಿದ್ದಾರೆ ಎಂದು ಆರೋಪಿಸಿ ತನಿಖೆಗೆ ಆಗ್ರಹಿಸಿದ್ದಾರೆ.
ಈ ಆರೋಪವನ್ನು ತಳ್ಳಿಹಾಕಿರುವ ಲವ್ಲಿ ಮೈತ್ರಾ, ದಾಳಿಯಲ್ಲಿ ಭಾಗಿಯಾದ ಹಲವು ಮಹಿಳೆಯರು ಸಕ್ರಿಯ ಬಿಜೆಪಿ ಕಾರ್ಯಕರ್ತರಾಗಿದ್ದು, ಇದೊಂದು ಪೂರ್ವ ನಿಯೋಜಿತ ದಾಳಿಯಾಗಿದೆ. ಇದನ್ನು ಸ್ಥಳೀಯರ ಆಕ್ರೋಶ ಎಂಬಂತೆ ಬಿಂಬಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ತಿರುಗೇಟು ನೀಡಿದ್ದಾರೆ. ಮತ್ತೊಂದೆಡೆ ಟಿಎಂಸಿ ಕಾರ್ಯದರ್ಶಿ ಕುನಾಲ್ ಘೋಷ್ ಮಾತನಾಡಿ, ಬಂಧಿತರು ಒಂದು ವೇಳೆ ಮಾಜಿ ಟಿಎಂಸಿ ಕಾರ್ಯಕರ್ತರಾಗಿದ್ದರೂ ಪೊಲೀಸರು ಅವರನ್ನು ಬಂಧಿಸಿರುವುದು ಸರಿಯಾದ ಕ್ರಮವೇ ಆಗಿದೆ, ಆದರೆ ದೃಶ್ಯಾವಳಿಗಳಲ್ಲಿ ಕಲ್ಲು ತೂರುತ್ತಿರುವುದು ಕಂಡರೂ ಸಹ ಉಳಿದ ಎಲ್ಲರನ್ನೂ ಏಕೆ ಇನ್ನೂ ಬಂಧಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.

ಗಂಟಲು ಸೀಳಿದರೂ ನಾನು ಹೆದರುವವನಲ್ಲ

ತಮ್ಮ ಮೇಲಿನ ದಾಳಿಯನ್ನು ಕೊಲೆ ಯತ್ನ ಎಂದು ಕರೆದಿರುವ ಅಭಿಷೇಕ್ ಬ್ಯಾನರ್ಜಿ, ಈ ಕುರಿತಾಗಿ ಕೋರ್ಟ್ ಮೆಟ್ಟಿಲೇರುವುದಾಗಿ ತಿಳಿಸಿದ್ದಾರೆ. ಇಡಿ ಮತ್ತು ಸಿಬಿಐ ಸಂಸ್ಥೆಗಳ ಜೊತೆಗೆ ಈಗ ಬೆಂಗಾಲ್ ಪೊಲೀಸ್, ಕೋಲ್ಕತಾ ಪೊಲೀಸ್ ಮತ್ತು ಕೆಎಮ್‌ಸಿ ಸಂಸ್ಥೆಗಳನ್ನು ನನ್ನ ವಿರುದ್ಧ ಬಳಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಐದಾರು ಸಂಸ್ಥೆಗಳನ್ನು ನನ್ನ ಹಿಂದೆ ಬಿಟ್ಟು ಬ್ಲ್ಯಾಕ್‌ಮೇಲ್ ಮಾಡಬಹುದು ಎಂದು ಯೋಚಿಸುತ್ತಿದ್ದರೆ ಅದು ತಪ್ಪು, ನನ್ನ ಗಂಟಲು ಸೀಳಿದರೂ ನಾನು ಹೆದರುವವನಲ್ಲ ಮತ್ತು ನಾನು ದ್ರೋಹಿಯಲ್ಲ ಎಂದು ಸವಾಲು ಹಾಕಿದ್ದಾರೆ.
ತಮ್ಮ ಭದ್ರತಾ ಸಿಬ್ಬಂದಿ ಮುನ್ಸೂಚನೆ ನೀಡಿದ್ದರೂ ಸಹ ಅಧಿಕಾರಿಗಳು ಸಕಾಲದಲ್ಲಿ ಮಧ್ಯಪ್ರವೇಶಿಸಿ ಕ್ರಮ ಕೈಗೊಳ್ಳಲಿಲ್ಲ ಎಂದು ಅಭಿಷೇಕ್ ಬ್ಯಾನರ್ಜಿ ದೂರಿದ್ದಾರೆ. ಈ ಮಧ್ಯೆ, ಗಾಯಗೊಂಡಿರುವ ತಮ್ಮ ಸೋದರ ಅಳಿಯ ಅಭಿಷೇಕ್​ಗೆ ಚಿಕಿತ್ಸೆ ನೀಡದಂತೆ ವೈದ್ಯರ ಮೇಲೆ ತೀವ್ರ ಒತ್ತಡ ಹೇರಲಾಗಿತ್ತು ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗಂಭೀರ ಆರೋಪ ಮಾಡಿದ್ದಾರೆ.
ಚುನಾವಣೋತ್ತರ ಹಿಂಸಾಚಾರದ ಬೆನ್ನಲ್ಲೇ ನಡೆದಿರುವ ಈ ದಾಳಿ ಪಶ್ಚಿಮ ಬಂಗಾಳದ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಐವರನ್ನು ಬಂಧಿಸಲಾಗಿದ್ದರೂ, ಆರೋಪಿಗಳ ರಾಜಕೀಯ ಹಿನ್ನೆಲೆಯ ಕುರಿತು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಕೆಸರೆರಚಾಟ ಮುಂದುವರಿದಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸಂಸದ ಅಭಿಷೇಕ್ ಬ್ಯಾನರ್ಜಿ ಅವರು ನ್ಯಾಯಾಲಯದ ಮೆಟ್ಟಿಲೇರಲು ಸಿದ್ಧರಾಗುತ್ತಿದ್ದರೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆರೋಪಗಳು ಘಟನೆಯ ಹಿಂದಿನ ರಾಜಕೀಯ ಸಂಘರ್ಷವನ್ನು ಮತ್ತಷ್ಟು ತೀವ್ರಗೊಳಿಸಿವೆ. ಪೊಲೀಸರ ಮುಂದಿನ ತನಿಖೆಯಿಂದಷ್ಟೇ ಈ ದಾಳಿಯ ಹಿಂದಿನ ನೈಜ ಕೈವಾಡ ಮತ್ತು ಸತ್ಯಾಸತ್ಯತೆ ಹೊರಬರಬೇಕಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net