ಆಸ್ಟ್ರೇಲಿಯಾದ ಮಹಿಳೆ-ಭಾರತೀಯ ವ್ಯಕ್ತಿಯ ನಡುವೆ ಪ್ರೀತಿ ಹುಟ್ಟುಹಾಕಿದ 3 ಗಂಟೆಗಳ ಟ್ಯಾಕ್ಸಿ ಪ್ರಯಾಣ! Love Story

ಆಸ್ಟ್ರೇಲಿಯಾದ ಮಹಿಳೆ-ಭಾರತೀಯ ವ್ಯಕ್ತಿಯ ನಡುವೆ ಪ್ರೀತಿ ಹುಟ್ಟುಹಾಕಿದ 3 ಗಂಟೆಗಳ ಟ್ಯಾಕ್ಸಿ ಪ್ರಯಾಣ! Love Story
ಆಸ್ಟ್ರೇಲಿಯಾದ ಮಹಿಳೆ-ಭಾರತೀಯ ವ್ಯಕ್ತಿಯ ನಡುವೆ ಪ್ರೀತಿ ಹುಟ್ಟುಹಾಕಿದ 3 ಗಂಟೆಗಳ ಟ್ಯಾಕ್ಸಿ ಪ್ರಯಾಣ! Love Story
Published on

ಪ್ರಮುಖ ಮುಖ್ಯಾಂಶಗಳು

  • ಮದುರೈ ವಿಮಾನ ನಿಲ್ದಾಣದಲ್ಲಿ ಶುರುವಾಯ್ತು ಆಸ್ಟ್ರೇಲಿಯಾದ ಪ್ರವಾಸಿ ಹಾಗೂ ಟ್ಯಾಕ್ಸಿ ಡ್ರೈವರ್ ಅಪರೂಪದ ಪ್ರೇಮಕಥೆ
  • ಸಂಸ್ಕೃತಿ, ಧರ್ಮದ ಗಡಿ ಮೀರಿ 'ವಿಶೇಷ ವಿವಾಹ ಕಾಯ್ದೆ'ಯಡಿ ಹಸೆಮಣೆ ಏರಿದ ಜೋಡಿ
  • ಮಗುವಿನ ಜನನದ ವೇಳೆ ವೀಸಾ ಸಿಗದೆ ಮೊಬೈಲ್‌ನಲ್ಲೇ ಮುಖ ನೋಡಿಕೊಂಡ ತಂದೆ ರಬೀಕ್
  • ಪ್ರಸ್ತುತ ಮಗುವಿನೊಂದಿಗೆ ಆಸ್ಟ್ರೇಲಿಯಾದಲ್ಲಿ ಲೊರೆನಾ, ಭಾರತದಲ್ಲೇ ಉಳಿದು ವೀಸಾಗೆ ಕಾಯುತ್ತಿರುವ ಪತಿ
ಚೆನ್ನೈ: ತಮಿಳುನಾಡಿನ ಮದುರೈ ವಿಮಾನ ನಿಲ್ದಾಣದಲ್ಲಿ ಆರಂಭವಾದ ಆಕಸ್ಮಿಕ ಮೂರು ಗಂಟೆಗಳ ಟ್ಯಾಕ್ಸಿ ಪ್ರಯಾಣವೊಂದು ಎರಡು ಭಿನ್ನ ದೇಶಗಳ ಹೃದಯಗಳನ್ನು ಬೆಸೆದು, ಸುಂದರವಾದ ಗಡಿಯಾಚೆಗಿನ ಪ್ರೇಮಕಥೆಯಾಗಿ ಬದಲಾದ ಹಾರ್ಟ್‌ ಟಚಿಂಗ್‌ ಲವ್‌ ಸ್ಟೋರಿ ( Love Story ) ಇದು.
ಆಸ್ಟ್ರೇಲಿಯಾದ ಪ್ರವಾಸಿ ಲೊರೆನಾ ಸ್ಟೆಫನಿ ತಮಿಳುನಾಡಿನ ಸೌಂದರ್ಯ ಸವಿಯಲು ಮದುರೈಗೆ ಬಂದಿಳಿದಾಗ, ಅಲ್ಲಿನ ಟ್ಯಾಕ್ಸಿ ಚಾಲಕ ರಬೀಕ್, ತನ್ನ ಜೀವನದ ಗತಿಯನ್ನೇ ಬದಲಾಯಿಸುತ್ತಾನೆ ಎಂಬ ಕಲ್ಪನೆ ಕೂಡ ಆಕೆಗೆ ಇರಲಿಲ್ಲ. ವಿಮಾನ ನಿಲ್ದಾಣದಿಂದ ಹೊರಟ ಮೂರು ಗಂಟೆಗಳ ಆ ಪುಟ್ಟ ಪ್ರಯಾಣವು ಇಬ್ಬರ ನಡುವೆ ಕೇವಲ ಚಾಲಕ ಮತ್ತು ಪ್ರಯಾಣಿಕಳ ಸಂಬಂಧವನ್ನು ಮೀರಿ ಉತ್ತಮ ಗೆಳೆತನಕ್ಕೆ ಅಡಿಪಾಯ ಹಾಕಿಕೊಟ್ಟಿತು.
ಪ್ರಯಾಣದ ಉದ್ದಕ್ಕೂ ಇಬ್ಬರೂ ಗಂಟೆಗಟ್ಟಲೆ ಮಾತನಾಡುತ್ತಾ ಪರಸ್ಪರರ ಹತ್ತಿರವಾದರು. ಅರಿವಿಲ್ಲದಂತೆ ಇಬ್ಬರ ನಡುವೆ ವಿಶೇಷ ನಂಟು ಬೆಳೆಯಿತು. ಆ ಆಕಸ್ಮಿಕ ಭೇಟಿಯು ಮುಂದಿನ ದಿನಗಳಲ್ಲಿ ಆಳವಾದ ಸ್ನೇಹವಾಗಿ ವಿಕಸನಗೊಂಡು, ಕಾಲಕ್ರಮೇಣ ಇಬ್ಬರ ಮನದಲ್ಲೂ ಪ್ರೀತಿಯ ಅಂಕುರಕ್ಕೆ ಕಾರಣವಾಯಿತು. ಭಿನ್ನ ಸಂಸ್ಕೃತಿ ಮತ್ತು ಹಿನ್ನೆಲೆಯವರಾಗಿದ್ದರೂ ಅವರ ನಡುವಿನ ಒಡನಾಟ ಪ್ರೇಮವಾಗಿ ಬದಲಾಗಲು ಹೆಚ್ಚು ದಿನ ಬೇಕಾಗಲಿಲ್ಲ.
ವಿಭಿನ್ನ ಧರ್ಮಗಳು, ಸಂಸ್ಕೃತಿಗಳು ಮತ್ತು ದೇಶಗಳಿಗೆ ಸೇರಿದವರಾಗಿದ್ದರೂ, ಆ ಭಿನ್ನತೆಗಳ್ಯಾವುವೂ ತಮ್ಮ ಪ್ರೀತಿಗೆ ಎಂದಿಗೂ ಅಡ್ಡಿಯಾಗಲಿಲ್ಲ ಎಂದು ಲೊರೆನಾ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಇಬ್ಬರ ಮನೆಯಲ್ಲಿ ವಿಚಾರ ತಿಳಿದಾಗ ಸಹಜವಾಗಿಯೇ ಭಾಷೆ, ಸಂಸ್ಕೃತಿ ಮತ್ತು ಧರ್ಮದ ಕುರಿತು ಆಕ್ಷೇಪಣೆಗಳು ಹಾಗೂ ಪ್ರಶ್ನೆಗಳು ಎದುರಾದವು. ಆದರೆ ಈ ಸವಾಲುಗಳು ಅವರನ್ನು ದೂರ ಮಾಡುವ ಬದಲು, ಪರಸ್ಪರರ ಮೇಲಿನ ನಂಬಿಕೆಯನ್ನು ಗಟ್ಟಿಗೊಳಿಸಿ ಮತ್ತಷ್ಟು ಹತ್ತಿರ ತಂದವು. ಅಂತಿಮವಾಗಿ ಇಬ್ಬರೂ ಭಾರತದ 'ವಿಶೇಷ ವಿವಾಹ ಕಾಯ್ದೆ'ಯಡಿ ಕಾನೂನುಬದ್ಧವಾಗಿ ವಿವಾಹವಾದರು.
ಅವರ ದಾಂಪತ್ಯ ಜೀವನದ ಅತ್ಯಂತ ಖುಷಿಯ ಕ್ಷಣವೆಂದರೆ ಮುದ್ದಾದ ಮಗುವಿನ ಆಗಮನ. ಆದರೆ, ಈ ಆನಂದದ ಮಧ್ಯೆಯೂ ಒಂದು ನೋವಿನ ಸಂಗತಿ ಇದೆ. ಅದೇನೆಂದರೆ, ವೀಸಾ ಸಿಗದ ಕಾರಣ ರಬೀಕ್ ಭಾರತದಲ್ಲೇ ಉಳಿಯಬೇಕಾಯಿತು ಮತ್ತು ಆಸ್ಟ್ರೇಲಿಯಾದಲ್ಲಿದ್ದ ಲೊರೆನಾ, ಮಗುವಿಗೆ ಜನ್ಮ ನೀಡುವಾಗ ಪತಿ ಹತ್ತಿರವಿರಲಿಲ್ಲ. ರಬೀಕ್ ತಮ್ಮ ಮುದ್ದಿನ ಮಗುವಿನ ಮೊದಲ ಮುಖವನ್ನು ಮೊಬೈಲ್ ಸ್ಕ್ರೀನ್ ಮೂಲಕವೇ ನೋಡಬೇಕಾದ ಅನಿವಾರ್ಯತೆ ಎದುರಾಯಿತು.
ಪ್ರಸ್ತುತ ಲೊರೆನಾ ತಮ್ಮ ಮಗುವಿನೊಂದಿಗೆ ಆಸ್ಟ್ರೇಲಿಯಾದಲ್ಲಿದ್ದರೆ, ರಬೀಕ್ ಭಾರತದಲ್ಲೇ ಇದ್ದು ವೀಸಾ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಎರಡು ದೇಶಗಳ ನಡುವೆ ಬೆಳೆಯುತ್ತಿರುವ ಮಗುವಿಗೆ ತಾಯಿಯ ಸಾಂಗತ್ಯವಿದ್ದರೂ, ತಂದೆಯ ಆಗಮನಕ್ಕಾಗಿ ಕಾಯುವ ಅನಿವಾರ್ಯತೆಯಿದೆ. ನಾವು ಎದುರಿಸಿದ ಕಠಿಣ ಸವಾಲುಗಳ ಮುಂದೆ ಇನ್ನು ಯಾವ ಕಷ್ಟವೂ ನಮ್ಮನ್ನು ಮುರಿಯಲಾರದು ಎಂದು ವಿಶ್ವಾಸದಿಂದ ನುಡಿಯುವ ಲೊರೆನಾ, ಕೇವಲ ಒಂದು ಸೂಟ್‌ಕೇಸ್‌ನೊಂದಿಗೆ ಪ್ರವಾಸಿಯಾಗಿ ಬಂದ ದೇಶದಲ್ಲೇ ತನ್ನ ಬದುಕಿನ ಸಂಗಾತಿಯನ್ನು ಮತ್ತು ಸುಂದರ ಸಂಸಾರವನ್ನು ಕಂಡುಕೊಂಡಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net