ಭಾರತೀಯರ ಹಕ್ಕುಗಳ ರಕ್ಷಾಕವಚ

ಭಾರತೀಯರ ಹಕ್ಕುಗಳ ರಕ್ಷಾಕವಚ
Published on: 

ವೈವಿಧ್ಯತೆಯಲ್ಲಿ ಏಕತೆಯನ್ನು ತನ್ನ ಜೀವಾಳವಾಗಿಸಿಕೊಂಡಿರುವ ಭಾರತ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಇಂತಹ ದೇಶಕ್ಕೆ ಸಂವಿಧಾನ ಕೇವಲ ನೀತಿ ನಿರೂಪಣೆಯ ಗುಚ್ಛವಲ್ಲ; ಕೋಟ್ಯಂತರ ಭಾರತೀಯರ ಹಕ್ಕುಗಳ ರಕ್ಷಾಕವಚ. ಸಮಾನತೆ, ಸಾಮಾಜಿಕ ನ್ಯಾಯ, ಸ್ವಾತಂತ್ರ್ಯ, ಭ್ರಾತೃತ್ವ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಜೀವಂತವಾಗಿಡುವ ಮಹತ್ವದ ಸಾಧನ.

ಡಾ. ಬಿ.ಆರ್. ಅಂಬೇಡ್ಕರ್ ನೇತೃತ್ವದ ಕರಡು ಸಮಿತಿ ಹಾಗೂ ಸಂವಿಧಾನ ರಚನೆಯಲ್ಲಿ ಪಾಲ್ಗೊಂಡ ಮಹನೀಯರ ದೂರದೃಷ್ಟಿ, ತ್ಯಾಗ ಮತ್ತು ಚಿಂತನೆಯ ಫಲವಾಗಿ ನಮಗೆ ಈ ಶ್ರೇಷ್ಠ ಸಂವಿಧಾನ ದೊರೆತಿದೆ. 1949ರ ನ. 26ರಂದು ಸಂವಿಧಾನ ಸಭೆ ಅದನ್ನು ಅಂಗೀಕರಿಸಿತು. 1950ರ ಜ. 26ರಂದು ಜಾರಿಗೆ ಬಂದ ಸಂವಿಧಾನದ ಮೌಲ್ಯಗಳನ್ನು ಸ್ಮರಿಸುವ ಉದ್ದೇಶದಿಂದ ನ. 26ರಂದು ಸಂವಿಧಾನ ದಿನ ಆಚರಿಸಲಾಗುತ್ತದೆ. ಸಂವಿಧಾನದ ಪೀಠಿಕೆಯ ಮೊದಲ ಪದಗಳಾದ ‘ನಾವು, ಭಾರತದ ಜನತೆ’ ಎಂಬುದು ಪ್ರಜಾಪ್ರಭುತ್ವದ ಪ್ರಬಲ ಸಂದೇಶ. ನ್ಯಾಯದ ಭರವಸೆ, ದುರ್ಬಲರಿಗೆ ಧೈರ್ಯ, ಶೋಷಿತರಿಗೆ ಸಮಾನತೆಯ ಹಕ್ಕು ಮತ್ತು ಪ್ರತಿಯೊಬ್ಬರಿಗೂ ಘನತೆಯಿಂದ ಬದುಕುವ ಅವಕಾಶವನ್ನು ಸಂವಿಧಾನ ಕಲ್ಪಿಸಿದೆ.

ಸಂವಿಧಾನದ ವಿಶೇಷಗಳು: ಮೂಲ ಸಂವಿಧಾನವು 395 ವಿಧಿಗಳು, 22 ಭಾಗಗಳು ಮತ್ತು 8 ಅನುಸೂಚಿಗಳನ್ನು ಹೊಂದಿದ್ದು, ವಿಶ್ವದ ಅತಿದೊಡ್ಡ ಲಿಖಿತ ಸಂವಿಧಾನಗಳಲ್ಲಿ ಒಂದಾಗಿದೆ. ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಕೈಬರಹದ ಮೂಲಕ ರಚಿಸಲಾಗಿರುವ ಮೂಲ ಪ್ರತಿಗಳನ್ನು ಸಂಸತ್ ಭವನದಲ್ಲಿ ವಿಶೇಷ ಸಂರಕ್ಷಣಾ ವ್ಯವಸ್ಥೆಯಡಿ ಹೀಲಿಯಂ ತುಂಬಿದ ಪೆಟ್ಟಿಗೆಗಳಲ್ಲಿ ಇಡಲಾಗಿದೆ.

ಸಂವಿಧಾನ ರಚನಾಕಾರರು ಜಗತ್ತಿನ ಪ್ರಮುಖ ರಾಷ್ಟ್ರಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ, ಭಾರತದ ಪರಿಸ್ಥಿತಿಗೆ ಸೂಕ್ತವಾದ ಅಂಶಗಳನ್ನು ಅಳವಡಿಸಿಕೊಂಡಿದ್ದಾರೆ. ಬ್ರಿಟನ್​ನಿಂದ ಸಂಸದೀಯ ಪದ್ಧತಿ, ಅಮೆರಿಕದಿಂದ ಮೂಲಭೂತ ಹಕ್ಕುಗಳು, ಐರ್ಲೆಂಡ್​ನಿಂದ ರಾಜ್ಯ ನಿರ್ದೇಶಕ ತತ್ವಗಳನ್ನು ಸ್ವೀಕರಿಸಲಾಗಿದೆ. 1976ರ 42ನೇ ತಿದ್ದುಪಡಿಯ ಮೂಲಕ ಪೀಠಿಕೆಯಲ್ಲಿ ‘ಸಮಾಜವಾದಿ’ ಮತ್ತು ‘ಧರ್ಮನಿರಪೇಕ್ಷ’ ಎಂಬ ಪದಗಳನ್ನು ಸೇರಿಸಲಾಯಿತು. ಭಾರತಕ್ಕೆ ಅಧಿಕೃತ ಧರ್ಮವಿಲ್ಲ. ಎಲ್ಲ ಧರ್ಮಗಳನ್ನೂ ಸಮಾನವಾಗಿ ಕಾಣುವುದೇ ಜಾತ್ಯತೀತತೆಯ ಆಶಯ.

ಭಾರತ ನಿರ್ಮಾಣದ ಭದ್ರ ಬುನಾದಿ: ಅಂಬೇಡ್ಕರ್, ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ್, ಡಾ. ರಾಜೇಂದ್ರ ಪ್ರಸಾದ್ ಸೇರಿದಂತೆ ಹಲವು ಮಹನೀಯರು ಕೇವಲ ಕಾನೂನು ರೂಪಿಸಲಿಲ್ಲ. ವೈವಿಧ್ಯತೆಯಲ್ಲಿ ಏಕತೆಯ ಭಾರತ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿದರು. ಆದರೆ ಇಂದು ಧರ್ಮ-ಜಾತಿಯ ಆಧಾರದ ಮೇಲೆ ಸಮಾಜ ವಿಭಜನೆ, ಭಿನ್ನಾಭಿಪ್ರಾಯ ದಮನ ನಡೆಯುತ್ತಿದೆ. ದುರ್ಬಲರು ತಮ್ಮ ಹಕ್ಕುಗಳಿಗಾಗಿ ಹೋರಾಡಬೇಕಾದ ಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಸಂವಿಧಾನದ ಮೌಲ್ಯಗಳನ್ನು ನೆನಪಿಸಿಕೊಳ್ಳುವುದು ಅನಿವಾರ್ಯ. ಸಂವಿಧಾನ ರಕ್ಷಣೆ ಎಂದರೆ ಪ್ರಜಾಪ್ರಭುತ್ವ, ದೇಶದ ವೈವಿಧ್ಯತೆ ಮತ್ತು ಪ್ರತಿಯೊಬ್ಬ ನಾಗರಿಕನ ಹಕ್ಕುಗಳನ್ನು ರಕ್ಷಿಸಿದಂತೆ.

ಕರ್ನಾಟಕದ ಸಾಮಾಜಿಕ ಸುಧಾರಣೆ: ಕರ್ನಾಟಕದ ಸಾಮಾಜಿಕ ಸುಧಾರಣೆಯ ಇತಿಹಾಸಕ್ಕೂ ಸಂವಿಧಾನದ ಮೌಲ್ಯಗಳಿಗೂ ನಿಕಟ ಸಂಬಂಧವಿದೆ. ಬಸವಣ್ಣನವರ ಕಾಯಕ, ದಾಸೋಹ, ಸಮಾನತೆಯ ತತ್ವಗಳು ಹಾಗೂ ಅನುಭವ ಮಂಟಪದ ಪ್ರಜಾಸತ್ತಾತ್ಮಕ ಚಿಂತನೆಗಳು ಸಂವಿಧಾನದ ಆಶಯಗಳಿಗೆ ಪೂರಕವಾಗಿವೆ. ರಾಜ್ಯದಲ್ಲಿ ಸಾಮಾಜಿಕ ನ್ಯಾಯ, ಮೀಸಲಾತಿ, ಮಹಿಳಾ ಸಬಲೀಕರಣ ಮತ್ತು ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗೆ ಸಂವಿಧಾನ ಮಹತ್ವದ ಪಾತ್ರ ವಹಿಸಿದೆ.

ಸಂವಿಧಾನ ರಚನೆಗೂ ಮುನ್ನವೇ ಅಂಬೇಡ್ಕರ್ ಅವರು ಬೆಳಗಾವಿ, ನಿಪ್ಪಾಣಿ, ಧಾರವಾಡ, ಹುಬ್ಬಳ್ಳಿ, ವಿಜಯಪುರ, ಕಲಬುರಗಿ ಸೇರಿದಂತೆ ಕರ್ನಾಟಕದ ಹಲವು ಪ್ರದೇಶಗಳಿಗೆ ಭೇಟಿ ನೀಡಿ ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮೂಲಕ ಸಾಮಾಜಿಕ ಬದಲಾವಣೆಗೆ ಕರೆ ನೀಡಿದ್ದರು. ಅವರ ವಿಚಾರಧಾರೆಗಳು ರಾಜ್ಯದ ದಲಿತ ಚಳವಳಿ ಮತ್ತು ಸಾಮಾಜಿಕ ಸುಧಾರಣಾ ಹೋರಾಟಗಳಿಗೆ ಹೊಸ ದಿಕ್ಕು ನೀಡಿದವು. ಸಂವಿಧಾನ ಯಾವುದೇ ಪಕ್ಷ ಅಥವಾ ಸಂಘಟನೆಯ ಸ್ವತ್ತಲ್ಲ. ಅದರ ಮೂಲ ಆಶಯಗಳನ್ನು ಅಳಿಸಿಹಾಕುವ ಪ್ರಯತ್ನಗಳನ್ನು ಪ್ರಜ್ಞಾವಂತ ಸಮಾಜ ಒಕ್ಕೊರಲಿನಿಂದ ವಿರೋಧಿಸಬೇಕು.

ನಾಗರಿಕರಲ್ಲಿ ಜಾಗೃತಿ ಮುಖ್ಯ: ಸಂವಿಧಾನ ನೀಡಿರುವ ಹಕ್ಕುಗಳನ್ನು ಉಳಿಸಿಕೊಳ್ಳಲು ನಾಗರಿಕರಲ್ಲಿ ಜಾಗೃತಿ ಅಗತ್ಯ. ಮತದಾನದ ಹಕ್ಕನ್ನು ಬಳಸುವುದು, ತಪ್ಪನ್ನು ಪ್ರಶ್ನಿಸುವುದು, ಭಿನ್ನಾಭಿಪ್ರಾಯ ಗೌರವಿಸುವುದು, ದ್ವೇಷದ ರಾಜಕಾರಣ ತಿರಸ್ಕರಿಸುವುದು ಪ್ರತಿಯೊಬ್ಬರ ಕರ್ತವ್ಯ. ಯುವಜನತೆ ಸಂವಿಧಾನವನ್ನು ಪಠ್ಯಪುಸ್ತಕದ ಅಧ್ಯಾಯವಾಗಿ ನೋಡದೆ ತಮ್ಮ ಭವಿಷ್ಯದ ಭದ್ರತೆಯ ದಾಖಲೆಯೆಂದು ಅರಿಯಬೇಕು.

ಸಂವಿಧಾನ ರಚನಾ ಸಭೆಯಲ್ಲಿ ಸರೋಜಿನಿ ನಾಯ್ಡು, ರಾಜಕುಮಾರಿ ಅಮೃತ್ ಕೌರ್, ಹನ್ಸಾ ಮೆಹ್ತಾ, ಸುಚೇತಾ ಕೃಪಲಾನಿ ಮತ್ತು ಜಿ. ದುರ್ಗಾಬಾಯಿ ಸೇರಿದಂತೆ 15 ಮಹಿಳೆಯರು ಸಮಾನ ಹಕ್ಕುಗಳಿಗಾಗಿ ಧ್ವನಿ ಎತ್ತಿದ್ದರು. ಮಹಿಳಾ ಸಮಾನತೆ ಮತ್ತು ರಾಜಕೀಯ ಪ್ರಾತಿನಿಧ್ಯಕ್ಕೂ ಆದ್ಯತೆ ನೀಡಬೇಕು. ಇತ್ತೀಚೆಗೆ ವಿಧಾನಸೌಧದಲ್ಲಿ ನಡೆದ ಕಾಮನ್​ವೆಲ್ತ್ ಮಹಿಳಾ ಸಂಸದೀಯ ಸಂಘಟನೆಯ ಪ್ರಾದೇಶಿಕ ಸಮ್ಮೇಳನದಲ್ಲಿಯೂ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳಾ ಮೀಸಲಾತಿ ಜಾರಿಯ ಅಗತ್ಯವನ್ನು ಒತ್ತಿಹೇಳಲಾಗಿದೆ.

ಭವಿಷ್ಯಕ್ಕಾಗಿ ಸಂವಿಧಾನದ ರಕ್ಷಣೆ: ಸ್ವಾತಂತ್ರ್ಯ, ಸಮಾನತೆ, ನ್ಯಾಯ ಮತ್ತು ಭ್ರಾತೃತ್ವದ ಮೌಲ್ಯಗಳ ಮೇಲೆ ನಿಂತ ಸಾಮರಸ್ಯದ ಭಾರತವನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕು. ಅಧಿಕಾರ, ವ್ಯಕ್ತಿ ಮತ್ತು ರಾಜಕೀಯ ಲಾಭಕ್ಕಿಂತ ದೇಶದ ಏಕತೆ ಹಾಗೂ ಪ್ರಜಾಪ್ರಭುತ್ವಕ್ಕೆ ಆದ್ಯತೆ ನೀಡಬೇಕು. ಅಂಬೇಡ್ಕರ್ ಅವರು ಎಚ್ಚರಿಸಿದಂತೆ, ಸಂವಿಧಾನ ಎಷ್ಟೇ ಉತ್ತಮವಾಗಿದ್ದರೂ ಅದನ್ನು ಅನುಷ್ಠಾನಗೊಳಿಸುವವರು ಸರಿಯಾಗಿಲ್ಲದಿದ್ದರೆ ಪ್ರಯೋಜನವಿಲ್ಲ. ಹೀಗಾಗಿ ಸಂವಿಧಾನದ ರಕ್ಷಣೆ ಮತ್ತು ತಿದ್ದುಪಡಿಯ ಹೊಣೆಗಾರಿಕೆ ಜವಾಬ್ದಾರಿಯುತ ಕೈಗಳಲ್ಲಿರಬೇಕು.

ಸಂವಿಧಾನವನ್ನು ಪುಸ್ತಕದಲ್ಲಿ ಸಂರಕ್ಷಿಸಿದರೆ ಸಾಲದು; ಅದರ ಮೌಲ್ಯಗಳನ್ನು ನಡೆನುಡಿಗಳಲ್ಲಿ ಅಳವಡಿಸಿಕೊಳ್ಳಬೇಕು. ವಿಶೇಷವಾಗಿ ಸಾಮಾಜಿಕ ಜಾಲತಾಣಗಳ ಯುಗದಲ್ಲಿ ಸುಳ್ಳು ಸುದ್ದಿ, ದ್ವೇಷದ ಸಂದೇಶಗಳಿಗೆ ಬಲಿಯಾಗದೆ ಸತ್ಯ ಮತ್ತು ಸೌಹಾರ್ದವನ್ನು ಹರಡುವ ಜವಾಬ್ದಾರಿ ನಮ್ಮದಾಗಬೇಕು.

ಸಂವಿಧಾನದ ಪೀಠಿಕೆ ಓದುವ ಸಂಕಲ್ಪದ ಜತೆಗೆ ಅದರ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪವನ್ನೂ ಮಾಡೋಣ. ಸ್ವಾತಂತ್ರ್ಯವನ್ನು ಗೌರವಿಸೋಣ, ಸಮಾನತೆಯನ್ನು ಪಾಲಿಸೋಣ, ನ್ಯಾಯಕ್ಕಾಗಿ ಧ್ವನಿ ಎತ್ತೋಣ, ಭ್ರಾತೃತ್ವದ ಸಮಾಜ ಕಟ್ಟೋಣ. ಸಂವಿಧಾನ ಬಲಿಷ್ಠವಾಗಿದ್ದರೆ ಪ್ರಜಾಪ್ರಭುತ್ವ ಬಲಿಷ್ಠವಾಗಿರುತ್ತದೆ. ಪ್ರಜಾಪ್ರಭುತ್ವ ಬಲಿಷ್ಠವಾಗಿದ್ದರೆ ನಾಗರಿಕ ಬಲಿಷ್ಠನಾಗುತ್ತಾನೆ. ನಾಗರಿಕ ಬಲಿಷ್ಠನಾದಾಗ ಮಾತ್ರ ಭಾರತ ನಿಜವಾದ ಅರ್ಥದಲ್ಲಿ ಬಲಿಷ್ಠ ರಾಷ್ಟ್ರವಾಗುತ್ತದೆ.