

ಭಾರತೀಯ ರಾಜಕಾರಣದಲ್ಲಿ ಮೈತ್ರಿಗಳ ಅಧ್ಯಾಯವು ಸದಾ ಚಲನಶೀಲವಾಗಿದ್ದು, ಅಧಿಕಾರದ ಸಮೀಕರಣಗಳು ಬದಲಾದಂತೆ ಹಳೆಯ ಮಿತ್ರರು ಮತ್ತೆ ಒಂದಾಗುವುದು, ರಾಜಕೀಯದ ಸ್ವಾರಸ್ಯಕರ ಅಧ್ಯಾಯ. ಆರು ವರ್ಷಗಳ ಸುದೀರ್ಘ ಅವಧಿಯ ನಂತರ ಇತ್ತೀಚೆಗಷ್ಟೇ ಪಂಜಾಬ್ನ ಪ್ರಮುಖ ಪ್ರಾದೇಶಿಕ ಪಕ್ಷವಾದ ಶಿರೋಮಣಿ ಅಕಾಲಿ ದಳ ಮತ್ತೆ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟಕ್ಕೆ (ಎನ್ಡಿಎ) ಮರಳಿದೆ. ಅಕಾಲಿ ದಳದ ಮರಳುವಿಕೆಗಿಂತ ಮುಂಚೆಯೇ, ದಕ್ಷಿಣದ ಪ್ರಮುಖ ಪಕ್ಷವಾದ ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಾರ್ಟಿ (ಟಿಡಿಪಿ) ಮತ್ತು ಬಿಹಾರದ ನಿತೀಶ್ ಕುಮಾರ್ ನೇತೃತ್ವದ ಜನತಾದಳ-ಯುನೈಟೆಡ್ (ಜೆಡಿಯು) ಪಕ್ಷಗಳು ಎನ್ಡಿಎ ತೆಕ್ಕೆಗೆ ಮರಳಿದ್ದವು. ಈ ಎರಡು ಪಕ್ಷಗಳ ‘ಘರ್ ವಾಪ್ಸಿ’ ರಾಷ್ಟ್ರ ರಾಜಕಾರಣದ ದಿಕ್ಕನ್ನೇ ಬದಲಿಸಿತು. ಈ ಮೈತ್ರಿ ಸಮೀಕರಣ ಕುರಿತಾದ ಅವಲೋಕನ ಇಲ್ಲಿದೆ.
ಪಂಜಾಬ್ ರಾಜಕೀಯದ ಇತಿಹಾಸದಲ್ಲಿ ಅಕಾಲಿ ದಳ ಮತ್ತು ಬಿಜೆಪಿ ಮೈತ್ರಿಯು ಯಶಸ್ವಿ ಸಾಮಾಜಿಕ ಸಮೀಕರಣಗಳಲ್ಲಿ ಒಂದಾಗಿದೆ. 1997, 2007 ಮತ್ತು 2012ರ ವಿಧಾನಸಭಾ ಚುನಾವಣೆಗಳಲ್ಲಿ ಈ ಮೈತ್ರಿಕೂಟವು ಅಧಿಕಾರದ ಗದ್ದುಗೆ ಏರಿತ್ತು. ಪಂಜಾಬ್ನ ಗ್ರಾಮೀಣ ಭಾಗದ ಸಿಖ್ ರೈತರ ಮೇಲೆ ಅಕಾಲಿ ದಳದ ಪ್ರಭಾವವಿದ್ದರೆ, ನಗರ ಪ್ರದೇಶದ ಹಿಂದೂ ಮತದಾರರ ಮೇಲೆ ಬಿಜೆಪಿಯ ಹಿಡಿತವಿದೆ. ಆದರೆ, ಕೇಂದ್ರ ಸರ್ಕಾರದ ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಅಕಾಲಿ ದಳ 2020ರಲ್ಲಿ ಎನ್ಡಿಎ ತೊರೆದಿತ್ತು. ಈಗ ಆ ಕಾಯ್ದೆಗಳೇ ರದ್ದಾಗಿರುವುದರಿಂದ ಮತ್ತು ಪಂಜಾಬ್ ವಿಧಾನಸಭಾ ಚುನಾವಣೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ಸುಖ್ಬೀರ್ ಸಿಂಗ್ ಬಾದಲ್ ನೇತೃತ್ವದ ಅಕಾಲಿ ದಳ ಹಾಗೂ ಬಿಜೆಪಿ ಮತ್ತೆ ಕೈಜೋಡಿಸಿವೆ. ಈ ಬೆಳವಣಿಗೆಯು ಪಂಜಾಬ್ ರಾಜ್ಯಕ್ಕೆ ಸೀಮಿತವಾಗದೆ, ರಾಷ್ಟ್ರ ರಾಜಕಾರಣದಲ್ಲಿ ಎನ್ಡಿಎ ಒಕ್ಕೂಟದ ವಿಸ್ತರಣೆ ಮತ್ತು ಬಲವರ್ಧನೆಯ ಹೊಸ ಸಂಕೇತವಾಗಿದೆ. ಕಳೆದ ಆರು ವರ್ಷಗಳಿಂದ ಈ ಎರಡೂ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿದ್ದರಿಂದ ಮತಗಳ ವಿಭಜನೆಯಾಗಿ, ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ಕಾಂಗ್ರೆಸ್ ಪಕ್ಷಗಳಿಗೆ ನೇರ ಲಾಭವಾಗಿತ್ತು. ಟಿಡಿಪಿ, ಜೆಡಿಯು ಮತ್ತು ಈಗ ಅಕಾಲಿ ದಳದ ಮರಳುವಿಕೆಯು ಭಾರತೀಯ ರಾಜಕಾರಣದಲ್ಲಿ ಪ್ರಾದೇಶಿಕ ಪಕ್ಷಗಳ ಅನಿವಾರ್ಯತೆಯನ್ನು ಎತ್ತಿ ತೋರಿಸಿದೆ.
ಅಕಾಲಿ ದಳದ ಮರಳುವಿಕೆಗಿಂತ ಮುಂಚೆಯೇ, ದಕ್ಷಿಣದ ಪ್ರಮುಖ ಪಕ್ಷವಾದ ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಾರ್ಟಿ (ಟಿಡಿಪಿ) ಮತ್ತು ಬಿಹಾರದ ನಿತೀಶ್ ಕುಮಾರ್ ನೇತೃತ್ವದ ಜನತಾದಳ-ಯುನೈಟೆಡ್(ಜೆಡಿಯು) ಪಕ್ಷಗಳು ಎನ್ಡಿಎ ತೆಕ್ಕೆಗೆ ಮರಳಿದ್ದವು. 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸ್ವಂತ ಬಲದ ಬಹುಮತ ಸಿಗದಿದ್ದಾಗ, ಕೇಂದ್ರದಲ್ಲಿ ಸತತ ಮೂರನೇ ಬಾರಿಗೆ ಸರ್ಕಾರ ರಚಿಸಲು ಟಿಡಿಪಿ ಮತ್ತು ಜೆಡಿಯು ಸಂಸದರ ಬೆಂಬಲವೇ ನಿರ್ಣಾಯಕವಾಯಿತು ಎಂಬುದನ್ನು ಮರೆಯುವಂತಿಲ್ಲ.
ರಾಜ್ಯ ಚುನಾವಣೆಗಳಲ್ಲಿ ಜಯಭೇರಿ: ಆಂಧ್ರಪ್ರದೇಶದಲ್ಲಿ ಟಿಡಿಪಿ, ಜನಸೇನಾ ಮತ್ತು ಬಿಜೆಪಿ ಮೈತ್ರಿಯು ವೈಎಸ್ಆರ್ ಕಾಂಗ್ರೆಸ್ ಪಕ್ಷವನ್ನು ಧೂಳೀಪಟ ಮಾಡಿ ಅಭೂತಪೂರ್ವ ಜಯ ಸಾಧಿಸಿತು. ಅದೇ ರೀತಿ ಬಿಹಾರದಲ್ಲಿ ನಿತೀಶ್ ಕುಮಾರ್ ಎನ್ಡಿಎಗೆ ಮರಳಿದ ಪರಿಣಾಮವಾಗಿ, ಲೋಕಸಭಾ ಚುನಾವಣೆ ಹಾಗೂ ನಂತರ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಎನ್ಡಿಎ ಭರ್ಜರಿ ಬಹುಮತದೊಂದಿಗೆ ಅಧಿಕಾರ ಉಳಿಸಿಕೊಂಡಿತು.
ಸಂಸತ್ತಿನಲ್ಲಿ ಬಲವರ್ಧನೆ: ಪ್ರಾದೇಶಿಕ ಪಕ್ಷಗಳ ಈ ಬೆಂಬಲದಿಂದ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಪ್ರಮುಖ ಮಸೂದೆಗಳನ್ನು ಅಂಗೀಕರಿಸಲು ಎನ್ಡಿಎಗೆ ಸುಲಭವಾಯಿತು.
ಈಗ ಮತ್ತೆ ಒಂದಾಗಿರುವ ಈ ಮೈತ್ರಿಕೂಟದಲ್ಲಿ ಅಕಾಲಿ ದಳಕ್ಕೆ ‘ಹಿರಿಯಣ್ಣನ’ ಸ್ಥಾನವನ್ನು ನೀಡಲಾಗಿದ್ದು, ಮೈತ್ರಿಕೂಟ ಗೆದ್ದರೆ ಮುಖ್ಯಮಂತ್ರಿ ಸ್ಥಾನವೂ ಅಕಾಲಿ ದಳಕ್ಕೇ ಸಿಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಸ್ಪಷ್ಟಪಡಿಸಿದ್ದಾರೆ. ಹಿಂದೂ-ಸಿಖ್ ಏಕತೆ, ಮಾದಕವಸ್ತು ಪಿಡುಗಿನ ನಿಮೂಲನೆ ಮತ್ತು ರೈತರ ಕಲ್ಯಾಣದ ಕಾರ್ಯಸೂಚಿಯೊಂದಿಗೆ ಈ ಮೈತ್ರಿ ಕಣಕ್ಕಿಳಿಯುತ್ತಿದೆ. ಇದರಿಂದ ಪಂಜಾಬ್ನಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಕ್ಷದ ವಿರೋಧಿ ಮತಗಳು ಒಗ್ಗೂಡುವ ಸಾಧ್ಯತೆ ಹೆಚ್ಚಾಗಿದ್ದು, ಚತುಷ್ಕೋನ ಸ್ಪರ್ಧೆಯ ಬದಲು ನೇರ ಹಣಾಹಣಿಯ ವಾತಾವರಣ ನಿರ್ವಣವಾಗಿದೆ.
ಅಕಾಲಿ ದಳಕ್ಕೆ ಬಿಜೆಪಿಯ ಅಗತ್ಯವಿರುವಷ್ಟೇ ಬಿಜೆಪಿಗೂ ಅಕಾಲಿ ದಳದ ಅಗತ್ಯವಿದೆ. 2020ರ ಸೆಪ್ಟೆಂಬರ್ನಲ್ಲಿ ಬೇರ್ಪಡುವ ಮೊದಲು ಎರಡೂ ಪಕ್ಷಗಳು 24 ವರ್ಷಗಳ ಕಾಲ ಮೈತ್ರಿಯಲ್ಲಿ ರಾಜಕಾರಣ ಮಾಡಿದ್ದವು. ಈಗ 6 ವರ್ಷಗಳ ನಂತರ ಮತ್ತೆ ಒಂದಾಗಲು 3 ಪ್ರಮುಖ ಕಾರಣಗಳಿವೆ.
37% ಮತಗಳು ಸೆಳೆಯಬಹುದು: ಕಳೆದ 10 ಚುನಾವಣೆಗಳಲ್ಲಿ, ಅಂದರೆ 5 ವಿಧಾನಸಭಾ ಮತ್ತು 5 ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಗೆ ಸರಾಸರಿ 9% ಮತಗಳು ಮತ್ತು ಅಕಾಲಿ ದಳಕ್ಕೆ ಸರಾಸರಿ 28% ಮತಗಳು ಲಭಿಸಿವೆ. ಎರಡೂ ಪಕ್ಷಗಳು ಒಟ್ಟಿಗೆ ಸೇರುವುದರಿಂದ ಒಟ್ಟಾರೆಯಾಗಿ 37% ಮತಗಳನ್ನು ಪಡೆಯಬಹುದು. ಈ 10 ಚುನಾವಣೆಗಳಲ್ಲಿ 8 ಚುನಾವಣೆಗಳನ್ನು ಎರಡೂ ಪಕ್ಷಗಳು ಒಟ್ಟಾಗಿ ಎದುರಿಸಿದ್ದವು, ಈ 8ರಲ್ಲಿ 5 ಬಾರಿ ಮೈತ್ರಿಕೂಟಕ್ಕೆ ಬಹುಮತ ಲಭಿಸಿತ್ತು. 2022ರ ವಿಧಾನಸಭಾ ಮತ್ತು 2024ರ ಲೋಕಸಭಾ ಚುನಾವಣೆಗಳಲ್ಲಿ ಎರಡೂ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು.
ನಗರಗಳಲ್ಲಿ ಬಿಜೆಪಿ, ಗ್ರಾಮಗಳಲ್ಲಿ ಅಕಾಲಿ ದಳ ಬಲಿಷ್ಠ: ಪಂಜಾಬ್ನಲ್ಲಿ 57.7% ಸಿಖ್ಖರು ಮತ್ತು 38.5% ಹಿಂದೂಗಳಿದ್ದಾರೆ. 62.5% ಜನಸಂಖ್ಯೆಯು ಗ್ರಾಮಗಳಲ್ಲಿ ಮತ್ತು 37.5% ಜನಸಂಖ್ಯೆಯು ನಗರಗಳಲ್ಲಿ ವಾಸಿಸುತ್ತಿದೆ. ಮಾಝಾ ಮತ್ತು ದೋವಾಬಾದಂತಹ ನಗರ ಮತ್ತು ಹಿಂದೂ ಬಹುಸಂಖ್ಯಾತ ಪ್ರದೇಶಗಳಲ್ಲಿ ಬಿಜೆಪಿಯ ಹಿಡಿತ ಬಲವಾಗಿದೆ, ಆದರೆ ಅಕಾಲಿ ದಳದ ಸಾಂಪ್ರದಾಯಿಕ ನೆಲೆಯು ಗ್ರಾಮೀಣ ಪ್ರದೇಶಗಳು ಮತ್ತು ಪಂಥಿಕ್, ಅಂದರೆ ಸಿಖ್ ಮತದಾರರ ನಡುವೆ ಇದೆ. ಆದಾಗ್ಯೂ ಕಳೆದ 2 ಚುನಾವಣೆಗಳಲ್ಲಿ ಅಕಾಲಿ ದಳವು ಬಟಿಂಡಾ ಮತ್ತು ಫಿರೋಜ್ಪುರಕ್ಕೆ ಮಾತ್ರ ಸೀಮಿತವಾಗಿದೆ.
ಎಎಪಿ ಕಸಿದುಕೊಂಡಿರುವ ಸ್ಥಾನಗಳನ್ನು ಮರಳಿ ಪಡೆಯುವುದು: 2012ರಲ್ಲಿ ಅಕಾಲಿ ದಳ 56 ಮತ್ತು ಬಿಜೆಪಿ 12 ಸ್ಥಾನಗಳನ್ನು ಗೆದ್ದಿದ್ದವು, ಅಂದರೆ ಒಟ್ಟು 68 ಸ್ಥಾನಗಳು. 2022ರಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿದಾಗ ಅಕಾಲಿ ದಳ 3 ಮತ್ತು ಬಿಜೆಪಿ 2 ಸ್ಥಾನಗಳಿಗೆ ಸೀಮಿತವಾಯಿತು, ಆದರೆ ಆಮ್ ಆದ್ಮಿ ಪಕ್ಷ (ಎಎಪಿ) 92 ಸ್ಥಾನಗಳನ್ನು ಗೆದ್ದು ಸರ್ಕಾರ ರಚಿಸಿತು. ಎಎಪಿ ಗೆಲುವಿನಲ್ಲಿ ಎರಡೂ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿದ್ದು ಮತ್ತು ಅವರಿಂದ ದೂರವಾದ ಮತದಾರರು ಪ್ರಮುಖ ಪಾತ್ರ ವಹಿಸಿದ್ದಾರೆ. ಅಂಕಿಅಂಶಗಳನ್ನು ನೋಡಿದರೆ, 2012ರಲ್ಲಿ ಅಕಾಲಿ ದಳ ಗೆದ್ದಿದ್ದ 56 ಸ್ಥಾನಗಳಲ್ಲಿ 47 ಸ್ಥಾನಗಳು (84%) ಮತ್ತು ಬಿಜೆಪಿ ಗೆದ್ದಿದ್ದ 12 ಸ್ಥಾನಗಳಲ್ಲಿ 8 ಸ್ಥಾನಗಳು (67%) 2022ರಲ್ಲಿ ಎಎಪಿ ಪಾಲಾಗಿವೆ. ಎಎಪಿ ಗೆದ್ದಿರುವ 92 ಸ್ಥಾನಗಳಲ್ಲಿ 49 ಸ್ಥಾನಗಳಲ್ಲಿ ಅದು 2017ರಲ್ಲಿ ಮೂರನೇ ಅಥವಾ ನಾಲ್ಕನೇ ಸ್ಥಾನದಲ್ಲಿತ್ತು. ಅಕಾಲಿ-ಬಿಜೆಪಿ ಮೈತ್ರಿಕೂಟವು 2027ರಲ್ಲಿ ಇದೇ ಸ್ಥಾನಗಳನ್ನು ಮರಳಿ ಗೆಲ್ಲಲು ಬಯಸುತ್ತಿದೆ.
ಎನ್ಡಿಎ ಒಕ್ಕೂಟವು ಒಂದೊಂದೇ ಹಳೆಯ ಮಿತ್ರಪಕ್ಷಗಳನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುತ್ತಿದ್ದರೆ, ವಿರೋಧ ಪಕ್ಷಗಳ ಒಕ್ಕೂಟವಾದ ಐಎನ್ಡಿಐಎ ಬಣವು ತನ್ನದೇ ಆದ ಆಂತರಿಕ ಗೊಂದಲಗಳಿಂದ ಸೊರಗಿದೆ. ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಯು ನಾಯಕ ನಿತೀಶ್ ಕುಮಾರ್ ಅವರು ವಿಪಕ್ಷಗಳ ಒಕ್ಕೂಟವನ್ನು ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ, ಒಕ್ಕೂಟದಲ್ಲಿ ಅವರಿಗೆ ಸೂಕ್ತ ಸ್ಥಾನಮಾನ ಮತ್ತು ಸಂಚಾಲಕ ಹುದ್ದೆ ನೀಡಲು ವಿಳಂಬ ಮಾಡಿದ್ದರಿಂದ ಅವರು ಮತ್ತೆ ಎನ್ಡಿಎ ಕಡೆಗೆ ಮುಖ ಮಾಡಿದರು. ವಿಧಾನಸಭಾ ಚುನಾವಣೆಗಳಲ್ಲಿ ಸೀಟು ಹಂಚಿಕೆಯ ವಿಚಾರದಲ್ಲಿ ಕಾಂಗ್ರೆಸ್ ತೋರಿದ ಬಿಗಿ ನಿಲುವು ಪ್ರಾದೇಶಿಕ ಪಕ್ಷಗಳಲ್ಲಿ ತೀವ್ರ ಅಸಮಾಧಾನ ಮೂಡಿಸಿತು. ಪಂಜಾಬ್, ದೆಹಲಿ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿ ಆಮ್ ಆದ್ಮಿ ಪಕ್ಷ ಮತ್ತು ತೃಣಮೂಲ ಕಾಂಗ್ರೆಸ್ ಜೊತೆ ಸಮನ್ವಯ ಸಾಧಿಸುವಲ್ಲಿ ವಿಪಕ್ಷಗಳು ವಿಫಲವಾದವು.