ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗಲ್ಲ, ಇದು ವಿಪಕ್ಷಗಳ ಅಪಪ್ರಚಾರ.. ಡಿಲಿಮಿಟೇಶನ್ ಪ್ರಕ್ರಿಯೆಯ ಅಸಲಿ ಕಥೆ ಬಿಚ್ಚಿಟ್ಟ ಸಂಸದ ತೇಜಸ್ವಿ ಸೂರ್ಯ! | Tejasvi Surya

Tejasvi Surya | ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ
Tejasvi Surya | ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ
Published on
ನವದೆಹಲಿ: ಮಹಿಳಾ ಮೀಸಲಾತಿ ಕಾಯ್ದೆಯ ಅನುಷ್ಠಾನಕ್ಕೆ ಸಂಬಂಧಿಸಿದ ಪ್ರಸ್ತಾವಿತ ಕ್ಷೇತ್ರ ಪುನರ್ವಿಂಗಡಣೆ (ಡಿಲಿಮಿಟೇಶನ್) ಪ್ರಕ್ರಿಯೆಯು ಕೇಂದ್ರ ಮತ್ತು ದಕ್ಷಿಣದ ರಾಜ್ಯಗಳ ನಡುವಿನ ಪ್ರಮುಖ ಸಂಘರ್ಷದ ಕೇಂದ್ರಬಿಂದುವಾಗಿದ್ದು, ಜನಸಂಖ್ಯೆಯ ಆಧಾರದ ಮೇಲೆ ಕ್ಷೇತ್ರಗಳನ್ನು ಮರುಹಂಚಿಕೆ ಮಾಡಿದರೆ, ದಕ್ಷಿಣದ ರಾಜ್ಯಗಳು ಸಂಸತ್ತಿನಲ್ಲಿ ತಮ್ಮ ಸ್ಥಾನಗಳನ್ನು ಕಳೆದುಕೊಳ್ಳುತ್ತವೆ ಎಂಬ ಕಳವಳ ವ್ಯಕ್ತವಾಗಿತ್ತಿದೆ.
ಈ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಸಂಸತ್ತಿನಲ್ಲಿ ಪ್ರಾಯೋಗಿಕ ಲೆಕ್ಕಾಚಾರವೊಂದನ್ನು ಮಂಡಿಸುವ ಮೂಲಕ ದಕ್ಷಿಣದ ರಾಜ್ಯಗಳ ಆತಂಕವನ್ನು ಶಮನಗೊಳಿಸಲು ಪ್ರಯತ್ನಿಸಿದ್ದಾರೆ.

ದಕ್ಷಿಣ ರಾಜ್ಯಗಳ ಕಳವಳಕ್ಕೆ ಬಿಜೆಪಿ ಉತ್ತರ

ಗುರುವಾರ ಸಂಸತ್ತಿನಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ವಿರೋಧ ಪಕ್ಷಗಳು ದಕ್ಷಿಣದ ರಾಜ್ಯಗಳ ಜನರನ್ನು ದಾರಿ ತಪ್ಪಿಸುತ್ತಿವೆ ಎಂದು ಆರೋಪಿಸಿದರು. ಮೋದಿ ಸರ್ಕಾರವು ದಕ್ಷಿಣದ ರಾಜ್ಯಗಳಿಗೆ ಮತ್ತು ಜನಸಂಖ್ಯಾ ನಿಯಂತ್ರಣ ಸಾಧಿಸಿದ ಸಣ್ಣ ರಾಜ್ಯಗಳಿಗೆ ಅತ್ಯುತ್ತಮ ಅವಕಾಶಗಳನ್ನು ಒದಗಿಸಿದೆ. ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನಗಳ ಪಾಲನ್ನು ಏಕರೂಪವಾಗಿ ಶೇ. 50 ರಷ್ಟು ಹೆಚ್ಚಿಸುವ ಮೂಲಕ ಈ ಗೊಂದಲಕ್ಕೆ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.

ಡಿಲಿಮಿಟೇಶನ್ ಮತ್ತು ಸಂಖ್ಯಾ ಬಲ

ಸರ್ಕಾರ ಮಂಡಿಸಿರುವ ಡಿಲಿಮಿಟೇಶನ್ ಮಸೂದೆಯ ಪ್ರಕಾರ, ಲೋಕಸಭೆಯ ಒಟ್ಟು ಸ್ಥಾನಗಳ ಸಂಖ್ಯೆಯನ್ನು ಪ್ರಸ್ತುತ ಇರುವ 543 ರಿಂದ 850 ಕ್ಕೆ (ರಾಜ್ಯಗಳಿಗೆ 815 ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 35) ಏರಿಸಲು ಉದ್ದೇಶಿಸಲಾಗಿದೆ. ಈ ಪೈಕಿ 273 ಸ್ಥಾನಗಳು ಮಹಿಳೆಯರಿಗೆ ಮೀಸಲಿಡಲಾಗುವುದು. ದಕ್ಷಿಣದ ಆರು ರಾಜ್ಯಗಳಾದ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ, ಒಡಿಶಾ ಮತ್ತು ತೆಲಂಗಾಣವು ದೇಶದ ಸುಮಾರು 24% ಜನಸಂಖ್ಯೆಯನ್ನು ಹೊಂದಿರುವುದರಿಂದ ತಮ್ಮ ಪ್ರಭಾವ ಕುಸಿಯುತ್ತದೆ ಎಂಬ ಆತಂಕ ಅಲ್ಲಿನ ಜನರಲ್ಲಿದೆ.

ಏನಿದು ತೇಜಸ್ವಿ ಸೂರ್ಯ 50% ಸೂತ್ರ..?

ಸಂವಿಧಾನದ 81(2) ನೇ ವಿಧಿಯ ಅಡಿಯಲ್ಲಿ ಡಿಲಿಮಿಟೇಶನ್ ಕಮಿಷನ್​ ಕಾರ್ಯನಿರ್ವಹಿಸಲಿದ್ದು, ಅಸ್ತಿತ್ವದಲ್ಲಿರುವ ಅನುಪಾತದ ಪ್ರಕಾರವೇ ಪ್ರತಿ ರಾಜ್ಯಕ್ಕೆ ಏಕರೂಪವಾಗಿ 50% ಸ್ಥಾನಗಳನ್ನು ಹೆಚ್ಚಿಸುವ ಏಕೈಕ ಪ್ರಾಯೋಗಿಕ ಮಾರ್ಗವನ್ನು ಬಿಜೆಪಿ ಸಂಸದರು ವಿವರಿಸಿದರು. ಈ ಸೂತ್ರದ ಮೂಲಕ 2011 ರ ಜನಗಣತಿ ದತ್ತಾಂಶದ ನೇರ ಲೆಕ್ಕಾಚಾರಕ್ಕಿಂತ ದಕ್ಷಿಣ ರಾಜ್ಯಗಳಿಗೆ ಹೆಚ್ಚಿನ ಲಾಭವಾಗಲಿದೆ ಎಂದು ಅಂಕಿಅಂಶಗಳ ಸಮೇತ ವಿವರಿಸಿದರು.

ರಾಜ್ಯವಾರು ಲೆಕ್ಕಾಚಾರ ಹೀಗಿದೆ

  • ತಮಿಳುನಾಡು: ಪ್ರಸ್ತುತ 39 ಸ್ಥಾನಗಳನ್ನು ಹೊಂದಿದ್ದು, 50% ಹೆಚ್ಚಳವಾದರೆ ಸ್ಥಾನಗಳ ಸಂಖ್ಯೆ 59 ಕ್ಕೆ ಏರಲಿದೆ. ಇದರಿಂದ ಸಂಸತ್ತಿನಲ್ಲಿ ರಾಜ್ಯದ 7.2% ಪಾಲು ಹಾಗೆಯೇ ಉಳಿಯಲಿದೆ.
  • ಕೇರಳ: ಪ್ರಸ್ತುತ 20 ಸ್ಥಾನಗಳಿವೆ. 2011 ರ ಜನಗಣತಿ ಆಧಾರದ ಮೇಲೆ 23 ಸ್ಥಾನ ಸಿಗುತ್ತಿತ್ತು. ಆದರೆ 50% ಸೂತ್ರದಡಿ ಕೇರಳಕ್ಕೆ 30 ಸ್ಥಾನಗಳು ಲಭಿಸಲಿವೆ.
  • ಆಂಧ್ರಪ್ರದೇಶ: ಪ್ರಸ್ತುತ 25 ಸ್ಥಾನಗಳಿದ್ದು, 50% ಸೂತ್ರದಡಿ 37 ಸ್ಥಾನ ಪಡೆಯಲಿದೆ. ಇದು 2011 ರ ಜನಗಣತಿ ಆಧಾರಿತ ಲೆಕ್ಕಾಚಾರಕ್ಕಿಂತ (33 ಸ್ಥಾನ) 4 ಸ್ಥಾನ ಹೆಚ್ಚು.
  • ಕರ್ನಾಟಕ: ಪ್ರಸ್ತುತ 28 ಸ್ಥಾನಗಳಿದ್ದು, 2011ರ ಜನಗಣತಿಯಂತೆ 41 ಸ್ಥಾನ ಸಿಗುತ್ತಿತ್ತು. ಆದರೆ 50% ಸೂತ್ರದೊಂದಿಗೆ ಕರ್ನಾಟಕ 42 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ.
  • ತೆಲಂಗಾಣ: ಪ್ರಸ್ತುತ 17 ಸ್ಥಾನಗಳಿದ್ದು, ಹೊಸ ಸೂತ್ರದ ಪ್ರಕಾರ 25 ಸ್ಥಾನ ಪಡೆಯಲಿದೆ. ಇದು ಜನಗಣತಿ ಆಧಾರಿತ ಲೆಕ್ಕಾಚಾರಕ್ಕಿಂತ ಒಂದು ಸ್ಥಾನ ಹೆಚ್ಚು.
  • ಒಡಿಶಾ: ಪ್ರಸ್ತುತ 21 ಸ್ಥಾನಗಳಿದ್ದು, 2011ರ ಜನಗಣತಿಯಂತೆ 28 ಸ್ಥಾನ ಸಿಗುತ್ತಿತ್ತು. ಆದರೆ 50% ಸೂತ್ರದಡಿ ಒಡಿಶಾ 31 ಸ್ಥಾನಗಳನ್ನು ಪಡೆಯಲಿದೆ.
ತೇಜಸ್ವಿ ಸೂರ್ಯ ಅವರ ಈ ವಾದದ ಪ್ರಕಾರ, ಪ್ರತಿ ರಾಜ್ಯದ ಸಂಖ್ಯಾಬಲವನ್ನು ಏಕಕಾಲಕ್ಕೆ 50% ಹೆಚ್ಚಿಸುವುದರಿಂದ ದಕ್ಷಿಣದ ರಾಜ್ಯಗಳ ರಾಜಕೀಯ ಪ್ರಭಾವ ಕುಸಿಯುವುದಿಲ್ಲ, ಬದಲಾಗಿ ಹೆಚ್ಚಿನ ಲಾಭವಾಗಲಿದೆ. ಈ ಮೂಲಕ ಡಿಲಿಮಿಟೇಶನ್ ಸುತ್ತಲಿನ ಗೊಂದಲಗಳನ್ನು ನಿವಾರಿಸಲು ಬಿಜೆಪಿ ಪ್ರಯತ್ನಿಸಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net