Justice Swaminathan | ದೀಪ ಬೆಳಗಿಸುವ ವಿವಾದ; ನ್ಯಾಯಮೂರ್ತಿ ಸ್ವಾಮಿನಾಥನ್​ ಬೆಂಬಲಕ್ಕೆ ನಿಂತ 56 ಮಾಜಿ ನ್ಯಾಯಾಧೀಶರು!

Justice Swaminathan | ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್
Justice Swaminathan | ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್
Published on
ಚೆನ್ನೈ: ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್​ರನ್ನು ಪದಚ್ಯುತಗೊಳಿಸುವಂತೆ ಕೋರಿ ಸಂಸದರು ಮಂಡಿಸಿದ ಮಹಾಭಿಯೋಗ ನಿರ್ಣಯದ ವಿರುದ್ಧ ಶುಕ್ರವಾರ ಭಾರಿ ವಿರೋಧ ವ್ಯಕ್ತವಾಗಿದ್ದು, 50 ಕ್ಕೂ ಹೆಚ್ಚು ಮಾಜಿ ನ್ಯಾಯಾಧೀಶರು ಈ ಕ್ರಮವನ್ನು ಖಂಡಿಸಿದ್ದಾರೆ. ಇದು ನ್ಯಾಯಾಧೀಶರನ್ನು ದೂಷಿಸುವ ನಿರ್ಲಜ್ಜ ಪ್ರಯತ್ನ ಎಂದು ಕರೆದಿದ್ದಾರೆ.
ಕಾರ್ತಿಗೈ ದೀಪಂ ದೀಪ ಬೆಳಗುವ ಪ್ರಕರಣದಲ್ಲಿ ನ್ಯಾಯಮೂರ್ತಿ ಸ್ವಾಮಿನಾಥನ್ ಅವರ ತೀರ್ಪಿನ ಕುರಿತು ಅವರನ್ನೇ ದೋಷಾರೋಪಣೆ ಮಾಡುವ ಪ್ರಯತ್ನವು ನಮ್ಮ ಪ್ರಜಾಪ್ರಭುತ್ವದ ಬೇರುಗಳನ್ನು ಮತ್ತು ನ್ಯಾಯಾಂಗದ ಸ್ವಾತಂತ್ರ್ಯವನ್ನು ಕತ್ತರಿಸುತ್ತದೆ ಎಂದು ಮಾಜಿ ನ್ಯಾಯಾಧೀಶರು ತಮ್ಮ ಕಠಿಣ ಪದಗಳ ಹೇಳಿಕೆಯಲ್ಲಿ ತಿಳಿಸಿದ್ದು, ಸಂಸದರು ಉಲ್ಲೇಖಿಸಿದ ಕಾರಣಗಳನ್ನು ಮೇಲ್ನೋಟಕ್ಕೆ ತೆಗೆದುಕೊಂಡರೂ ಸಹ, ಅಂತಹ ಗಂಭೀರವಾದ ಸಾಂವಿಧಾನಿಕ ಕ್ರಮವನ್ನು ಸಮರ್ಥಿಸಲು ಅವು ಸಂಪೂರ್ಣವಾಗಿ ಅಸಮರ್ಪಕ ಎಂದಿದ್ದಾರೆ.
ತುರ್ತು ಪರಿಸ್ಥಿತಿಯ ಸಮಯದಲ್ಲಿ ನ್ಯಾಯಾಂಗವನ್ನು ದುರ್ಬಲಗೊಳಿಸುವ ಪ್ರಯತ್ನಗಳಿಗೆ ಸಹಿ ಹಾಕಿರುವವರು, ಇತ್ತೀಚಿನ ಕ್ರಮವು ಪಕ್ಷಪಾತದ ನಿರೀಕ್ಷೆಗಳೊಂದಿಗೆ ಹೊಂದಿಕೆಯಾಗದ ನ್ಯಾಯಾಧೀಶರ ನಿರ್ಧಾರಗಳನ್ನು ಅಪಖ್ಯಾತಿಗೊಳಿಸುವ ರಾಜಕೀಯ ಪ್ರಯತ್ನಗಳ ಸ್ಪಷ್ಟ ಮತ್ತು ತೊಂದರೆದಾಯಕ ಮಾದರಿಗೆ ಹೊಂದಿಕೊಳ್ಳುತ್ತದೆ ಎಂದು ಟೀಕಿಸಿದ್ದಾರೆ.
ಕೇಶವಾನಂದ ಭಾರತಿ ಬಳಿಕ ಮೂವರು ಹಿರಿಯ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಪದಚ್ಯುತಿಯನ್ನು, ಎಡಿಎಂ ಜಬಲ್ಪುರದಲ್ಲಿ ನ್ಯಾಯಮೂರ್ತಿ ಎಚ್.ಆರ್. ಖನ್ನಾ ಅವರ ಭಿನ್ನಾಭಿಪ್ರಾಯದ ನಂತರ ಅವರನ್ನು ಕಡೆಗಣಿಸಿರುವುದನ್ನು ಮತ್ತು ಮಾಜಿ ಮುಖ್ಯ ನ್ಯಾಯಮೂರ್ತಿಗಳಾದ ರಂಜನ್ ಗೊಗೊಯ್, ಎಸ್.ಎ. ಬೊಬ್ಡೆ ಮತ್ತು ಡಿ.ವೈ. ಚಂದ್ರಚೂಡ್ ವಿರುದ್ಧ ಮತ್ತು ಈಗ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ವಿರುದ್ಧ ನಿರಂತರ ದೂಷಣೆ ಅಭಿಯಾನಗಳನ್ನು ಸಹ ಉಲ್ಲೇಖಿಸಿದ್ದಾರೆ. ಇದು ತಾತ್ವಿಕ, ತಾರ್ಕಿಕ ಟೀಕೆಯಲ್ಲ ಆದರೆ ದೋಷಾರೋಪಣೆ ಮತ್ತು ಸಾರ್ವಜನಿಕ ದೂಷಣೆಯನ್ನು ಒತ್ತಡದ ಸಾಧನಗಳಾಗಿ ಬಳಸಿಕೊಳ್ಳುವ ಪ್ರಯತ್ನ ಎಂದು ಹೇಳಿದರು.
ದೋಷಾರೋಪಣೆಯ ಉದ್ದೇಶವೇ ನ್ಯಾಯಾಂಗ ಸಮಗ್ರತೆಯನ್ನು ಎತ್ತಿಹಿಡಿಯುವುದು, ಅದನ್ನು ತೋಳು ತಿರುಚುವ ಮತ್ತು ಪ್ರತೀಕಾರದ ಸಾಧನವಾಗಿ ಪರಿವರ್ತಿಸುವುದಲ್ಲ. ಇಂದು ಆರೋಪಕ್ಕೆ ಗುರಿಯಾಗಿರುವುದು ಒಬ್ಬ ನ್ಯಾಯಾಧೀಶರಾಗಿರಬಹುದು, ನಾಳೆ ಇದು ಇಡೀ ಸಂಸ್ಥೆಯಾಗಿರುತ್ತದೆ ಎಂದರು. ಈ ಕ್ರಮವನ್ನು ಪಕ್ಷಾತೀತವಾಗಿ ಸಂಸದರು, ವಕೀಲರು, ನಾಗರಿಕ ಸಮಾಜ ಪ್ರಾರಂಭದಲ್ಲೇ ಚಿವುಟಿ ಹಾಕಬೇಕು ಎಂದು ಮಾಜಿ ನ್ಯಾಯಾಧೀಶರು ಒತ್ತಾಯಿಸಿದ್ದು, ಪಕ್ಷಪಾತದ ರಾಜಕೀಯ ಒತ್ತಡಗಳು ಅಥವಾ ಸೈದ್ಧಾಂತಿಕ ಬೆದರಿಕೆಗಳಿಗೆ ಅಲ್ಲ, ಸಂವಿಧಾನಕ್ಕೆ ಜವಾಬ್ದಾರರಾಗಿರುತ್ತಾರೆ ಎಂದು ಪ್ರತಿಪಾದಿಸಿದರು.

ಏನಿದು ವಿವಾದ..?

ದೇವಾಲಯ ಮತ್ತು ಹತ್ತಿರದ ದರ್ಗಾ ಹೊಂದಿರುವ ತಿರುಪರಂಕುಂದ್ರಂನಲ್ಲಿರುವ ಬೆಟ್ಟದ ಮೇಲೆ ಸಾಂಪ್ರದಾಯಿಕ ಕಾರ್ತಿಕ ದೀಪವನ್ನು ಬೆಳಗಿಸುವ ಆಚರಣೆಗೆ ಅನುಮತಿ ನೀಡಿದ ಆದೇಶದ ಬಳಿಕ ವಿಪಕ್ಷಗಳು ಮಹಾಭಿಯೋಗ ಕ್ರಮದ ನಿರ್ಧಾರಕ್ಕೆ ಬಂದಿವೆ. ನ್ಯಾಯಾಧೀಶರ ತೀರ್ಪಿನ ಪ್ರಕಾರ, ಡಿಸೆಂಬರ್ 4 ರೊಳಗೆ "ದೀಪಥೂನ್" ಕಂಬದ ಮೇಲೆ ದೀಪವನ್ನು ಬೆಳಗಿಸಬೇಕಿತ್ತು. ದೇವಾಲಯದ ಅಧಿಕಾರಿಗಳು ಮತ್ತು ದರ್ಗಾ ಆಡಳಿತ ಮಂಡಳಿಯ ಆಕ್ಷೇಪಣೆಗಳನ್ನು ನ್ಯಾಯಾಲುಯದ ತೀರ್ಪು ತಿರಸ್ಕರಿಸಿತು ಮತ್ತು ಇದು ಮುಸ್ಲಿಂ ಸಮುದಾಯದ ಧಾರ್ಮಿಕ ಹಕ್ಕುಗಳನ್ನು ಉಲ್ಲಂಘಿಸುವುದಿಲ್ಲ ಎಂದು ಪ್ರತಿಪಾದಿಸಿತು. ಭದ್ರತಾ ಸಿಬ್ಬಂದಿಯ ಬೆಂಗಾವಲಿನಲ್ಲಿ ಸೀಮಿತ ಜನಕ್ಕೆ ಈ ಆಚರಣೆಯನ್ನು ಮಾಡಲು ಅವಕಾಶ ನೀಡಬೇಕೆಂದು ನ್ಯಾಯಾಲಯ ನಿರ್ದೇಶನ ನೀಡಿತ್ತು.
ಈ ನಡುವೆ ಕಾನೂನು ಮತ್ತು ಸುವ್ಯವಸ್ಥೆಯ ಕಾರಣವನ್ನು ಉಲ್ಲೇಖಿಸಿ ರಾಜ್ಯ ಸರ್ಕಾರವು ತೀರ್ಪನ್ನು ಜಾರಿಗೆ ತರಲು ನಿರಾಕರಿಸಿತು. ಇದು ಹಿಂದೂ ಪರ ಸಂಘಟನೆಗಳ ಕಣ್ಣು ಕೆಂಪಾಗಿಸಿತು. ಆದ್ದರಿಂದ ರಾಜ್ಯದಲ್ಲಿ ಪ್ರತಿಭಟನೆಗಳು, ಪೊಲೀಸರೊಂದಿಗೆ ಘರ್ಷಣೆಗಗಳು ಆರಂಭವಾದವು. ಈಗ ಈ ಪ್ರಕರಣ ರಾಜಕೀಯ ಮತ್ತು ನ್ಯಾಯಾಂಗದ ಸಂಘರ್ಷವಾಗಿ ಮಾರ್ಪಟ್ಟಿದೆ.

ಬಿಜೆಪಿ ಸಮರ್ಥನೆ...

ತಮಿಳುನಾಡು ಬಿಜೆಪಿ ಮುಖ್ಯಸ್ಥ ನೈನಾರ್ ನಾಗೇಂದ್ರನ್, ವಿಪಕ್ಷ ಸಂಸದರ ಮಹಾಭಿಯೋಗ ನಡೆ ಪ್ರಜಾಪ್ರಭುತ್ವಕ್ಕೆ ಒಳ್ಳೆಯ ಶಕುನವಲ್ಲ ಎಂದಿದ್ದಾರೆ. ಡಿಎಂಕೆ ಅಲ್ಪಸಂಖ್ಯಾತರನ್ನು ಸಮಾಧಾನಪಡಿಸಲು ನ್ಯಾಯಾಂಗದ ಅಧಿಕಾರವನ್ನು ಪ್ರಶ್ನಿಸುತ್ತಿದೆ ಮತ್ತು ಅನುಕೂಲಕರವಾದಾಗ ಮಾತ್ರ ತೀರ್ಪುಗಳನ್ನು ಸ್ವೀಕರಿಸುತ್ತಿದೆ ಎಂದು ಆರೋಪಿಸಿದರು. ನ್ಯಾಯಮೂರ್ತಿ ಸ್ವಾಮಿನಾಥನ್ ಯಾವ ಅಪರಾಧವನ್ನು ಮಾಡಿಲ್ಲ, ದೇವಾಲಯದ ಅಧಿಕಾರಿಗಳು ಮತ್ತು ಪೊಲೀಸರು ವ್ಯವಸ್ಥೆಗಳನ್ನು ಮಾಡಲು ವಿಫಲವಾದ ಹಿನ್ನಲೆಯಲ್ಲಿ ಈ ಕ್ರಮ ಕೈಗೊಂಡಿದ್ದಾರೆ ಎಂದು ತಿರುಗೇಟು ಸರ್ಕಾರಕ್ಕೆ ನೀಡಿದರು.
ದೋಷಾರೋಪಣೆ ಪ್ರಸ್ತಾವವನ್ನು ತಪ್ಪು ಪೂರ್ವನಿದರ್ಶನ ಎಂದು ಕರೆದ ನಾಗೇಂದ್ರನ್, ಸಾಂಸ್ಥಿಕ ಮುಖಾಮುಖಿಯನ್ನು ತಪ್ಪಿಸಲು ನ್ಯಾಯಾಂಗದ ಆದೇಶಗಳನ್ನು ಗೌರವಿಸಬೇಕು ಎಂದು ಸಲಹೆ ನೀಡಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net