ಪಟನಾ: ಬಾಲಿವುಡ್ ಸಿನಿಮಾಗಳನ್ನೂ ಸಹ ಮೀರಿಸುವ ರೀತಿಯಲ್ಲಿ ನಡೆಯುತ್ತಿರುವ ಈ ಅದ್ದೂರಿ ವಿವಾಹ ಸಮಾರಂಭವು ನವೆಂಬರ್ 25ರಂದು ಪಟನಾದಲ್ಲಿರುವ ಲಾಡ್ಮಾ ಗ್ರಾಮದಲ್ಲಿ ನೆರವೇರಲಿದೆ. ಜೆಡಿಯು ಉಚ್ಛಾಟಿತ ಶಾಸಕ ಅನಂತ್ ಸಿಂಗ್ ಪುತ್ರಿ ಶಿವಾಂಗಿ ಅವರು ಕಮಾಂಡೆಂಟ್ ರಣವಿಜಯ್ ಕುಮಾರ್ ಅವರ ಪುತ್ರ ಋಷಿಕೇಶ್ ಕುಮಾರ್ ಎನ್ನುವವರ ಜೊತೆ ಸಪ್ತಪದಿ ತುಳಿಯಲಿದ್ದಾರೆ.
ವಧು-ವರರ ಅರಿಶಿನ ಶಾಸ್ತ್ರ (ಹಳದಿ ಸಮಾರಂಭ) ಸಂಭ್ರಮದಿಂದ ನೆರವೇರಿದೆ. 100 ಅಡಿಗೂ ಉದ್ದದ ಟೆಂಟ್ ಒಳಗೆ ಬೃಹತ್ ಅಡುಗೆಮನೆ ಸಜ್ಜುಗೊಂಡಿದ್ದು, ಮದುವೆಗೆ ಆಗಮಿಸುವ ಯಾವುದೇ ಅತಿಥಿಯೂ ಹಸಿದು ಹೋಗದಂತೆ ಅಥವಾ ಸಿಹಿ ತಿಂಡಿಯಿಲ್ಲದೆ ಮರಳದಂತೆ ನೋಡಿಕೊಳ್ಳಲು 50 ಲಕ್ಷಕ್ಕೂ ಅಧಿಕ ಗುಲಾಬ್ ಜಾಮೂನ್ಗಳನ್ನು ತಯಾರಿಸಲಾಗುತ್ತಿದೆ.
ಅನಂತ್ ಸಿಂಗ್ ಅವರ ಮೂವರು ಪುತ್ರರಾದ ಅಂಕಿತ್, ಅಭಿಷೇಕ್ ಮತ್ತು ಅಭಿನವ್ ಅವರು ಹಳದಿ ಬಣ್ಣದ ಕುರ್ತಾ ತೊಟ್ಟು ಅತಿಥಿಗಳನ್ನು ಆತ್ಮೀಯವಾಗಿ ಬರಮಾಡಿಕೊಳ್ಳುತ್ತಿದ್ದಾರೆ. ಉತ್ತರ ಭಾರತದ ಬಹುತೇಕ ಸಂಭ್ರಮಗಳಲ್ಲಿ ತಪ್ಪದೇ ಇರುವ ಗುಲಾಬ್ ಜಾಮೂನ್ಗಳ ದೃಶ್ಯಗಳು ಅನೇಕ ಊರುಗಳ ಜನರಿಗೆ ಸುಲಭವಾಗಿ ಹಂಚಬಹುದಾದಷ್ಟು ಪ್ರಮಾಣದಲ್ಲಿವೆ.
ಅನಂತ್ ಸಿಂಗ್ ಅವರ ಆಪ್ತ ಕನ್ಹಯ್ಯ ಸಿಂಗ್ ಮಾತನಾಡಿ, ಮುಂದಿನ ಎರಡು ದಿನಗಳಲ್ಲಿ ಬರಲಿರುವ ಅತಿಥಿಗಳಿಗಾಗಿ ಅಡುಗೆ ಸಿದ್ಧಪಡಿಸಲು ಇನ್ನೂ 12 ಬೃಹತ್ ಟೆಂಟ್ಗಳನ್ನು ಹಾಕಲಾಗುತ್ತಿದೆ ಎಂದು ತಿಳಿಸಿದ್ದಾರೆ. ಸಿಹಿ ತಿಂಡಿ ತಯಾರಿಸಲು 10,000 ಕೆ.ಜಿ ಸಾಮರ್ಥ್ಯದ ಟ್ಯಾಂಕರ್ಗಳ ಮೂಲಕ ನೇರವಾಗಿ ಅಡುಗೆಮನೆಗೆ ಹಾಲನ್ನು ಪೂರೈಸಲಾಗುತ್ತಿದೆ.
ಮಳೆಯಿಂದಾಗಿ ಮೈದಾನ ಕೆಸರಾಗಿದ್ದರೂ, ಮದುವೆಯ ಪ್ರಮುಖ ಆಕರ್ಷಣೆಯಾದ ಕುದುರೆ ಓಟದ ಸ್ಪರ್ಧೆಗೆ ಸಿದ್ಧತೆಗಳು ಭರದಿಂದ ಸಾಗಿವೆ. ಕುದುರೆ ಓಟಕ್ಕಾಗಿ ಮೈದಾನವನ್ನು ಸಮತಟ್ಟು ಮಾಡಲಾಗುತ್ತಿದೆ ಹಾಗೂ ಅತಿಥಿಗಳನ್ನು ಸ್ವಾಗತಿಸಲು ಹೊಸದಾಗಿ ನಿರ್ಮಿಸಲಾಗಿರುವ ವ್ಯವಸ್ಥೆಗಳನ್ನು ದುರಸ್ತಿಗೊಳಿಸಲಾಗುತ್ತಿದೆ ಎಂದು ಕನ್ಹಯ್ಯ ಮಾಹಿತಿ ನೀಡಿದ್ದಾರೆ.
ಈ ವಿಶೇಷ ಸಂದರ್ಭದ ಬಗ್ಗೆ ಸಂತಸ ವ್ಯಕ್ತಪಡಿಸಿದ ಅನಂತ್ ಸಿಂಗ್, ಇಂದು ನನಗೆ ತುಂಬಾ ಸಂತೋಷವಾಗಿದೆ. ಎಲ್ಲರೂ ನಮ್ಮ ಮನೆಗೆ ಬರುತ್ತಿದ್ದಾರೆ, ನಾವೆಲ್ಲರನ್ನೂ ಸ್ವಾಗತಿಸುತ್ತಿದ್ದೇವೆ ಎಂದರು. ಎರಡು ದಿನಗಳಲ್ಲಿ ಕುದುರೆ ಓಟದ ಎಲ್ಲಾ ಸಿದ್ಧತೆಗಳು ಪೂರ್ಣಗೊಳ್ಳಲಿವೆ ಎಂದು ತಿಳಿಸಿದ ಅವರು, ಮೈದಾನ ಸಿದ್ಧವಾಗುತ್ತಿದೆ, ಇಲ್ಲಿ ತಂಗುವ ಕುದುರೆಗಳಿಗಾಗಿ ಓಟದ ಸ್ಪರ್ಧೆಯನ್ನು ಆಯೋಜಿಸುತ್ತೇವೆ ಎಂದು ಹೇಳಿದರು.
ಮದುವೆಯ ದಿನ ನಡೆಯಲಿರುವ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ದೇಶದ ವಿವಿಧ ಭಾಗಗಳಿಂದ ವಿಶೇಷ ತಳಿಯ ಕುದುರೆಗಳು ಆಗಮಿಸುತ್ತಿವೆ. ಓಡುವಾಗ ಕುದುರೆಗಳು ಏಕಕಾಲಕ್ಕೆ ಎರಡು ಕಾಲುಗಳನ್ನು ಎತ್ತಿ ಹೆಜ್ಜೆ ಹಾಕುವ ವಿಶಿಷ್ಟ ನಡಿಗೆಯೇ ಈ ಸ್ಪರ್ಧೆಯ ಪ್ರಮುಖ ಆಕರ್ಷಣೆಯಾಗಿದ್ದು, ಕುದುರೆ ಪ್ರಿಯರು ಈ ವಿಶಿಷ್ಟ ಶೈಲಿಯನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ.
ಇದೇ ವೇಳೆ ಉತ್ತರ ಪ್ರದೇಶದ ಬಿಜೆಪಿ ಶಾಸಕ ಸುಶೀಲ್ ಸಿಂಗ್ ಅವರು ಸಂಭ್ರಮದಲ್ಲಿ ಭಾಗವಹಿಸಲು ಆಗಮಿಸಿದಾಗ ಅನಂತ್ ಸಿಂಗ್ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಅನಂತ್ ಸಿಂಗ್ ನನಗೆ ಸಹೋದರನಂತೆ. ಅವರ ಮಗಳ ಮದುವೆಗೆ ಆಶೀರ್ವದಿಸಲು ಬಂದಿದ್ದೇನೆ ಎಂದ ಸುಶೀಲ್ ಸಿಂಗ್, ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರ ನಡೆಸಲು ಅನಂತ್ ಸಿಂಗ್ ಅವರನ್ನು ಆಹ್ವಾನಿಸುವುದಾಗಿ ತಿಳಿಸಿದರು(ಏಜೆನ್ಸೀಸ್).