21 ವರ್ಷಗಳಲ್ಲಿ 25 ಬಾರಿ ವರ್ಗಾವಣೆ... ಯಾರಿಗೂ ಬಗ್ಗದ, ಯಾವುದಕ್ಕೂ ಜಗ್ಗದ 'ಸಿಂಗಂ' ಅಧಿಕಾರಿಯ ಯಶೋಗಾಥೆ | Success Story

ಮಹಾರಾಷ್ಟ್ರ ಎಫ್​ಡಿಎ ಅಧಿಕಾರಿ ತುಕಾರಂ ಮುಂಧೆ
ಮಹಾರಾಷ್ಟ್ರ ಎಫ್​ಡಿಎ ಅಧಿಕಾರಿ ತುಕಾರಂ ಮುಂಧೆ
Published on

ಪ್ರಮುಖ ಮುಖ್ಯಾಂಶಗಳು

  • ಅಧಿಕಾರ ವಹಿಸಿಕೊಂಡ ಕೆಲವೇ ತಿಂಗಳಲ್ಲಿ 1,100ಕ್ಕೂ ಹೆಚ್ಚು ರಿಯಾಲಿಟಿ ಚೆಕ್
  • 21 ವರ್ಷಗಳ ಸೇವಾವಧಿಯಲ್ಲಿ ಬರೋಬ್ಬರಿ 25 ಬಾರಿ ವರ್ಗಾವಣೆ
  • 25 ಬಾರ ಟ್ರಾನ್ಸ್​ಫರ್​ ಮಾಡಿದ್ರೂ ಎದೆಗುಂದದ ಮಹಾ 'ಸಿಂಗಂ' ಅಧಿಕಾರಿ
Tukaram Mundhe: ಸರ್ಕಾರಿ ಉದ್ಯೋಗ ಪಡೆದು, ಬದುಕು ಕಟ್ಟಿಕೊಳ್ಳುವ ಮಂದಿ ಒಂದಷ್ಟಾದರೆ, ಅದೇ ನೌಕರಿಯಲ್ಲಿ ಹಣ ಸಂಪಾದಿಸಿಕೊಂಡು ಲಕ್ಸುರಿ ಜೀವನ ಮಾಡುವವರ ಸಂಖ್ಯೆ ಮತ್ತೊಂದೆಡೆ. ಆದರೆ, ಅದೇ ಕೆಲಸದಲ್ಲಿ ಯಾವುದಕ್ಕೂ ರಾಜಿಯಾಗದೆ, ಯಾವ ಆಮಿಷಗಳಿಗೂ ಬಗ್ಗದೆ ಜನಸಾಮಾನ್ಯರು ಮೆಚ್ಚಿ, ಕೊಂಡಾಡುವಂತೆ ಬದುಕುವವರೇ ಕೆಲವೇ ಕೆಲವರು. ಆ ಪೈಕಿ ಮಹಾರಾಷ್ಟ್ರದ ಸಿಂಗಂ ಎಂದೇ ಹೆಸರುವಾಸಿಯಾಗಿರುವ ಐಎಎಸ್ ಅಧಿಕಾರಿ ತುಕಾರಾಂ ಮುಂಧೆ ಕೂಡ ಒಬ್ಬರು. ಇದೀಗ ಮತ್ತೊಮ್ಮೆ ಅವರು ಸುದ್ದಿಯಲ್ಲಿದ್ದಾರೆ.
ತಮ್ಮ 21 ವರ್ಷಗಳ ಸೇವೆಯಲ್ಲಿ ಬರೋಬ್ಬರಿ 25 ಬಾರಿ ವರ್ಗಾವಣೆಗಳನ್ನು ಎದುರಿಸಿದರೂ, ತಮ್ಮ ಕಟ್ಟುನಿಟ್ಟಿನ ಕೆಲಸದ ಶೈಲಿಯಿಂದ ಇಂದಿಗೂ ಜನರ ಹೃದಯವನ್ನು ಗೆಲ್ಲುತ್ತಿದ್ದಾರೆ. ಸರಳ ಕುಟುಂಬದಿಂದ ಬಂದ ತುಕಾರಾಂ ಅವರು, ಯುಪಿಎಸ್‌ಸಿಯಲ್ಲಿ ಅಖಿಲ ಭಾರತ 20ನೇ ಶ್ರೇಣಿ ಗಳಿಸಿದ ಬಳಿಕ ಐಎಎಸ್ ಅಧಿಕಾರಿಯಾಗಿ ಆಯ್ಕೆಯಾದರು. ಪ್ರಸ್ತುತ, ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ ಆಯುಕ್ತರಾಗಿ ಅಧಿಕಾರ ನಿರ್ವಹಿಸುತ್ತಿರುವ ಅವರು, ಸರಣಿ ರಿಯಾಲಿಟಿ ಚೆಕ್​ ಮೂಲಕ ಜನರ ಗಮನವನ್ನು ತಮ್ಮತ್ತ ಸೆಳೆದಿದ್ದಾರೆ.

ಏನಿದು 'ಮುಂಧೆ ಎಫೆಕ್ಟ್'​​!

ಕೊಳೆತ, ಅವಧಿ ಮೀರಿದ ಆಹಾರಗಳನ್ನು ಬಳಕೆ ಮಾಡುತ್ತಿರುವ ರೆಸ್ಟೋರೆಂಟ್ ಮತ್ತು ಹೋಟೆಲ್​ಗಳನ್ನು ಪರಿಶೀಲನೆ ಮಾಡುವ ಮುಂಧೆ, ಯಾವ ಹೋಟೆಲ್​ನವರು ಇಂತಹ ತಪ್ಪುಗಳಲ್ಲಿ ತೊಡಗಿ, ಆಹಾರ ನಿಯಮಗಳನ್ನು ಉಲ್ಲಂಘಿಸಿ ತನ್ನ ಗ್ರಾಹಕರ ಕಣ್ಣಿಗೆ ಮಣ್ಣೆರಚಿರುವುದು ಸಾಬೀತಾದ ತಕ್ಷಣವೇ ಅಂತಹ ಹೋಟೆಲ್​ಗಳ ಲೈಸನ್ಸ್​ ರದ್ದುಗೊಳಿಸಿ, ಬೀಗ ಜಡಿಯಲಾಗುತ್ತದೆ. ಇವರ ಈ ಖಡಕ್​ ನಡೆಯನ್ನು ಮಹಾರಾಷ್ಟ್ರದ ಜನತೆ ಮುಂಧೆ ಎಫೆಕ್ಟ್​​ ಎಂದು ಕರೆಯುತ್ತಾರೆ. ಅವರ ಆಡಳಿತದ ಪವರ್​ ಈಗ ದೇಶವ್ಯಾಪಿ ಇತರೆ ರಾಜ್ಯಗಳಿಗೂ ಪ್ರೇರಣೆಯಾಗಿದ್ದು, ಆಯಾ ಆಹಾರ ಇಲಾಖೆಗಳು ತಮ್ಮ ರಾಜ್ಯಗಳಲ್ಲಿ ಬಿರುಸಿನ ಕಾರ್ಯಾಚರಣೆಗಳನ್ನು ಕೈಗೊಳ್ಳುತ್ತಿವೆ.

ಯಾರು ಈ ತುಕಾರಂ ಮುಂಧೆ?

ತುಕಾರಾಂ ಮುಂಧೆ, ಜೂನ್ 3, 1975ರಂದು ಮಹಾರಾಷ್ಟ್ರದ ಬೀಡ್ ಜಿಲ್ಲೆಯ ತಡ್ಸೊನ್ನಾ ಗ್ರಾಮದಲ್ಲಿ ಜನಿಸಿದರು. ಸರಳ ಕೃಷಿ ಕುಟುಂಬದಲ್ಲಿ ಬೆಳೆದ ಅವರಿಗೆ ಚಿಕ್ಕ ವಯಸ್ಸಿನಿಂದಲೂ ಶಿಕ್ಷಣದ ಬಗ್ಗೆ ಹೆಚ್ಚಿನ ಆಸಕ್ತಿ. ಆರಂಭದಲ್ಲಿ ಜಿಲ್ಲಾ ಪರಿಷತ್ ಶಾಲೆಯಲ್ಲಿ ಓದಿದರು. ಬಳಿಕ, ಔರಂಗಾಬಾದ್‌ನಲ್ಲಿ ಉನ್ನತ ಶಿಕ್ಷಣ ಪಡೆದರು. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಮರಾಠವಾಡ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಪದವಿ ಮತ್ತು ರಾಜಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಸ್ವೀಕರಿಸಿದರು. ಅವರ ಶೈಕ್ಷಣಿಕ ಹಿನ್ನೆಲೆಯು ಯುಜಿಸಿ-ಜೆಆರ್‌ಎಫ್/ನೆಟ್‌ನಂತಹ ಅರ್ಹತೆಗಳನ್ನು ಸಹ ಒಳಗೊಂಡಿದೆ ಎಂಬುದು ಗಮನಾರ್ಹ.
2005ರ ಬ್ಯಾಚ್ ಮಹಾರಾಷ್ಟ್ರ ಕೇಡರ್ ಐಎಎಸ್ ಅಧಿಕಾರಿಯಾಗಿ ಸೇವೆಗೆ ಸೇರಿದ ಮುಂಧೆ, ಮಸ್ಸೂರಿಯ ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಆಡಳಿತ ಅಕಾಡೆಮಿಯಲ್ಲಿ ಟ್ರೇನಿಂಗ್ ಪಡೆದರು. ಅವರು 2011ರಲ್ಲಿ ಸಿಂಗಾಪುರದ ರಾಷ್ಟ್ರೀಯ ವಿಶ್ವವಿದ್ಯಾಲಯದಲ್ಲಿ ಬಿಕ್ಕಟ್ಟು, ತುರ್ತುಸ್ಥಿತಿ ಮತ್ತು ವಿಪತ್ತು ನಿರ್ವಹಣೆ ಕುರಿತು ವಿಶೇಷ ಕೋರ್ಸ್ ಅನ್ನು ಸಹ ಪೂರ್ಣಗೊಳಿಸಿದರು. ತುಕಾರಾಮ್ ಮುಂಧೆ, ತಮ್ಮ 21 ವರ್ಷಗಳ ಕರಿಯರ್​ನಲ್ಲಿ ಬರೋಬ್ಬರಿ 25 ಬಾರಿ ವರ್ಗಾವಣೆಗಳನ್ನು ಎದುರಿಸಿದ್ದಾರೆ. ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು, ಪಾರದರ್ಶಕತೆಗೆ ಒತ್ತು ನೀಡುವುದು ಮತ್ತು ನಿರ್ಧಾರಗಳಲ್ಲಿ ಯಾವುದೇ ರಾಜಿ ಮಾಡಿಕೊಳ್ಳದಿರುವುದು ಅವರ ಕಾರ್ಯ ಶೈಲಿಗೆ ವಿಶೇಷ ಮನ್ನಣೆಯನ್ನು ತಂದುಕೊಟ್ಟಿದೆ.
ಈ ವರ್ಷದ ಮೇನಲ್ಲಿ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ (FDA) ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ, ಆಹಾರ ಸುರಕ್ಷತೆಗೆ ವಿಶೇಷ ಹಾಗೂ ಹೆಚ್ಚಿನ ಆದ್ಯತೆ ನೀಡಿದ್ದಾರೆ. ರಾಜ್ಯಾದ್ಯಂತ ಹೋಟೆಲ್​, ರೆಸ್ಟೋರೆಂಟ್‌ಗಳು, ಆಹಾರ ಉತ್ಪಾದನಾ ಘಟಕಗಳು ಮತ್ತು ವಿತರಣಾ ಕಂಪನಿಗಳಲ್ಲಿ ಚುರುಕಿನ ತಪಾಸಣೆ ಕೈಗೊಳ್ಳುತ್ತಿದ್ದಾರೆ. ತುಕಾರಾಮ್ ಮುಂಧೆ ಅವರು ಅಧಿಕಾರ ವಹಿಸಿಕೊಂಡ ಬಳಿಕ ಎಫ್‌ಡಿಎ 1,100ಕ್ಕೂ ಹೆಚ್ಚು ದಾಳಿಗಳನ್ನು ನಡೆಸಿದ ಎಂಬುದು ಹುಬ್ಬೇರಿಸುವ ಸಂಗತಿ ಎನ್ನಬಹುದು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net