

ಕೊಚ್ಚಿ: ಸುಮಾರು ನಾಲ್ಕು ಕಿ.ಮೀ ವರೆಗೂ ಉದ್ದೇಶಪೂರ್ವಕವಾಗಿ ಕೇರಳ ರಾಜ್ಯದ ಕೆಎಸ್ಆರ್ಟಿಸಿ ಬಸ್ಗೆ ದಾರಿ ಕೊಡದೆ ಕೀಟಲೆ ಮಾಡಿದ ಬೈಕ್ ಸವಾರನ ವಿರುದ್ಧ ಕಿಡಿಕಾರಿರುವ ಮೋಟಾರು ವಾಹನ ಇಲಾಖೆ ಭಾರಿ ದಂಡ ವಿಧಿಸಿ ಶಾಕ್ ನೀಡಿದೆ.
ಬೈಕ್ ಸವಾರನ ಕೀಟಲೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕಾನೂನು ಕ್ರಮ ಉಲ್ಲಂಘನೆ ಸಾಕ್ಷಿಯನ್ನಾಗಿ ಪರಿಗಣಿಸಿದೆ. ಈ ಘಟನೆ ಸೆಪ್ಟೆಂಬರ್ 26 ರಂದು ಮಧ್ಯಾಹ್ನ 1.30ರ ಸುಮಾರಿಗೆ ನಡೆದಿದೆ.
ಕೆಎಸ್ಆರ್ಟಿಸಿ ಕಣ್ಣೂರಿನಿಂದ ಕಾಸರಗೋಡಿಗೆ ಪ್ರಯಾಣಿಸುತ್ತಿತ್ತು. ಈ ವೇಳೆ ಪೆರುಂಬಾ ಮಾರ್ಗ ಮಧ್ಯೆ ಬಸ್ ಮುಂದೆ ಬಂದ ಬೈಕ್ ಸವಾರ ಮುಂದಿನ ನಾಲ್ಕು ಕಿ.ಮೀ ವರೆಗೂ ಓವರ್ಟೇಕ್ ಮಾಡಲು ಬಸ್ಗೆ ಅವಕಾಶವನ್ನೇ ನೀಡಲಿಲ್ಲ. ಬಸ್ ಎಷ್ಟೇ ಹಾರ್ನ್ ಮಾಡಿದರೂ, ಚಾಲಕ ಮತ್ತು ಕಂಡಕ್ಟರ್ ಮನವಿ ಎಷ್ಟೇ ಮಾಡಿಕೊಂಡರೂ ದಾರಿ ಬಿಡದೆ ಅಡ್ಡಾದಿಡ್ಡಿ ಚಲಿಸುವ ಮೂಲಕ ಬಸ್ನಲ್ಲಿದ್ದವರಿಗೆ ಕಿರಿಕಿರಿ ಉಂಟುಮಾಡಿದ.
ಇದೇ ವೇಳೆ ಬಸ್ನಲ್ಲಿದ್ದ ಪ್ರಯಾಣಿಕರೊಬ್ಬರು ಬೈಕ್ ಸವಾರನ ಕುಚೇಷ್ಟೆಯನ್ನು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟರು. ಇದನ್ನು ಗಮನಿಸಿದ ಮೋಟಾರು ವಾಹನ ಇಲಾಖೆ ತಕ್ಷಣ ಬೈಕ್ ಸವಾರನ ವಿರುದ್ಧ ಕ್ರಮಕ್ಕೆ ಸೂಚಿಸಿತು. ಜಿಲ್ಲಾ ಸಾರಿಗೆ ಅಧಿಕಾರಿಗಳು ದೂರು ದಾಖಲಿಸಿದ ಬೆನ್ನಲ್ಲೇ ಮೋಟಾರು ವಾಹನ ಇಲಾಖೆ ಅಧಿಕಾರಿಗಳು ಬೈಕ್ ಸವಾರನ ಮನೆಯ ಬಾಗಿಲು ಬಡಿದರು.
ಅಪಾಯಕಾರಿ ಬೈಕ್ ಸವಾರಿ ಮಾಡಿದ್ದಲ್ಲದೆ, ಇತರೆ ವಾಹನಕ್ಕೆ ತೊಂದರೆ ನೀಡಿದ್ದಕ್ಕೆ ಬೈಕ್ ಸವಾರನಿಗೆ ಬರೋಬ್ಬರಿ 1,05,000 ದಂಡವನ್ನು ಅಧಿಕಾರಿಗಳು ವಿಧಿಸಿದ್ದಾರೆ. (ಏಜೆನ್ಸೀಸ್)