

ಶಿವಮೊಗ್ಗ: ಬೆಂಗಳೂರಿನ ಅಜೀಂ ಪ್ರೇಮ್‌ಜೀ ವಿಶ್ವವಿದ್ಯಾಲಯದಿಂದ ಭಾರತದ ವೈವಿಧ್ಯಮಯ ಪರ್ವತಗಳ ಕಥನ ‘ಮೌಂಟನ್ಸ್ ಆಫ್ ಲೈಫ್’ ವಾರ್ಷಿಕ ಹವಾಮಾನ ಉತ್ಸವ ಮಾ.3ರಿಂದ 7ರವರೆಗೆ ಕುವೆಂಪು ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕುವೆಂಪು ವಿವಿ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಹೇಳಿದರು.
ಐದು ದಿನಗಳ ಉತ್ಸವವು ಪರ್ವತಗಳಿಗೆ ಸಂಬಂಧಿಸಿದ್ದಾಗಿದೆ. ವಿದ್ಯಾರ್ಥಿಗಳೇ ಸೆರೆಹಿಡಿದಿರುವ ಪರ್ವತಗಳ ಛಾಯಾಚಿತ್ರಗಳು, ಸಂಗೀತ, ಚಲನಚಿತ್ರಗಳು, ಕಲಾಕೃತಿಗಳು, ಸಂವಾದಾತ್ಮಕ ಕಾರ್ಯಾಗಾರಗಳು ಉತ್ಸವಕ್ಕೆ ಮೆರುಗು ತುಂಬಲಿವೆ. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ. ಈಗಾಗಲೇ ಮೂರು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಂಗಳೂರಿನ ಅಜೀಂ ಪ್ರೇಮ್‌ಜೀ ವಿವಿ ಕುಲಸಚಿವ ಪ್ರೊ. ಶರತ್ ಮಾತನಾಡಿ, ಉತ್ಸವದ ಅಂಗವಾಗಿ ಕುವೆಂಪು ವಿವಿಯ ಬೇರೆ ಬೇರೆ ಸಭಾಂಗಣಗಳಲ್ಲಿ ಪ್ರತಿದಿನವೂ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಾಗಾರಗಳು, ತಜ್ಞರನ್ನೊಳಗೊಂಡ ಚರ್ಚೆಗಳು, ಚಲನಚಿತ್ರಗಳ ವೀಕ್ಷಣೆ, ಜಾನಪದ ಗೀತೆಗಳ ಗಾಯನ, ಶಿಲಾಯುಗದ ವರ್ಣಚಿತ್ರಗಳು, ಲಡಾಖ್‌ನ ಕಲ್ಲಿನ ಕೆತ್ತನೆಗಳು ಮತ್ತು ಮಿಜೋರಾಂನ ಏಕಬೆಳೆ ತೋಟಗಳ ಆಕರ್ಷಕ ಛಾಯಾಚಿತ್ರಗಳನ್ನು ಒಳಗೊಂಡ ಕಥನಗಳನ್ನು ಇಲ್ಲಿ ಕಾಣಬಹುದು ಎಂದರು.
ಅಜೀಂ ಪ್ರೇಮ್‌ಜೀ ವಿವಿಯು 2022ರಲ್ಲಿ ತನ್ನ ಮೊದಲ ವಾರ್ಷಿಕ ಹವಾಮಾನ ಉತ್ಸವ ರಿವರ್ಸ್ ಆಫ್ ಲೈಫ್ ಅನ್ನು ಹಮ್ಮಿಕೊಂಡಿತ್ತು. ಎರಡನೇ ಆವೃತ್ತಿ ಫಾರೆಸ್ಟ್ ಆಫ್ ಲೈಫ್ ಅಡಿಯಲ್ಲಿ ಭಾರತದ ವೈವಿಧ್ಯಮಯ ಅರಣ್ಯಗಳ ಕಥನಗಳನ್ನು ಪ್ರಸ್ತುತಪಡಿಸಲಾಗಿತ್ತು. ಮೂರನೇ ಆವೃತ್ತಿಯಲ್ಲಿ ಮೌಂಟನ್ಸ್ ಆಫ್ ಲೈಫ್ ವಾರ್ಷಿಕ ಹವಾಮಾನ ಉತ್ಸವವನ್ನು 2024ರ ನವೆಂಬರ್‌ನಲ್ಲಿ ಅಜೀಂ ಪ್ರೇಮ್‌ಜಿ ವಿವಿಯ ಬೆಂಗಳೂರು ಕ್ಯಾಂಪಸ್‌ನಲ್ಲಿ ನಡೆಸಲಾಗಿತ್ತು. 15 ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿಗಳು, ಸಾರ್ವಜನಿಕರು ಈ ಮೂರೂ ಆವೃತ್ತಿಗಳಲ್ಲಿ ಪಾಲ್ಗೊಂಡಿದ್ದರು ಎಂದರು. ಪ್ರಮುಖರಾದ ವಿದ್ಯಾ ರಮೇಶ್, ಡಾ. ಜೆ.ನಾರಾಯಣ, ಡಾ. ಎಂ.ಆರ್.ಸತ್ಯಪ್ರಕಾಶ್ ಸುದ್ದಿಗೋಷ್ಠಿಯಲ್ಲಿದ್ದರು.
ಡಾ. ಅಶೋಕ ಖೋಸ್ಲಾ ಅವರಿಂದ ಚಾಲನೆ
ಮಾ.3ರಂದು ಬೆಳಗ್ಗೆ 10ಕ್ಕೆ ಕುವೆಂಪು ವಿವಿಯ ಬಸವ ಸಭಾಭವನದಲ್ಲಿ ಉತ್ಸವಕ್ಕೆ ಪರಿಸರ ಶಿಕ್ಷಣ ಕೇಂದ್ರದ ಅಧ್ಯಕ್ಷ ಡಾ. ಅಶೋಕ ಖೋಸ್ಲಾ ಚಾಲನೆ ನೀಡುವರು. ಕೇಂದ್ರದ ಮಾಜಿ ಸಚಿವ, ನವದೆಹಲಿಯ ರಿಷಿಹುಡ್ ವಿವಿ ಕುಲಪತಿ ಸುರೇಶ್ ಪ್ರಭು ಮುಖ್ಯ ಅತಿಥಿಯಾಗಿದ್ದು, ಜಿಪಂ ಸಿಇಒ ಎನ್.ಹೇಮಂತ್, ಅಜೀಂ ಪ್ರೇಮ್‌ಜೀ ವಿವಿಯ ಕನ್ನಡ ವಿಭಾಗದ ಸಹ ನಿರ್ದೇಶಕ ಎಸ್.ವಿ.ಮಂಜುನಾಥ, ಕುವೆಂಪು ವಿವಿ ಕುಲಸಚಿವರಾದ ಎ.ಎಲ್.ಮಂಜುನಾಥ, ಎಸ್.ಎಂ.ಗೋಪಿನಾಥ, ಹಣಕಾಸು ಅಧಿಕಾರಿ ಎಚ್.ಎನ್.ರಮೇಶ್ ಉಪಸ್ಥಿತರಿರಲಿದ್ದು ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಅಧ್ಯಕ್ಷತೆ ವಹಿಸುವರು.