

* ಶಿವಮೊಗ್ಗ ದಸರಾದಲ್ಲಿ ಬೆದರಿ ಓಡಿದ ಅಂಬಾರಿ ಹೊತ್ತಿದ್ದ ಸೋಮಣ್ಣ ಆನೆ
* ಮುಂಜಾಗ್ರತೆ ವಹಿಸಲು ಅಧಿಕಾರಿಗಳಿಗೆ ಸಚಿವ ರಾಮಲಿಂಗಾರೆಡ್ಡಿ ಸೂಚನೆ
ಬೆಂಗಳೂರು: ಶಿವಮೊಗ್ಗ ದಸರಾ ಜಂಬೂಸವಾರಿ ಅಂಬಾರಿ ಹೊತ್ತಿದ್ದ ಸೋಮಣ್ಣ ಆನೆ ಬೆದರಿ ಓಡಿದಂತಹ ಘಟನೆ ಮುಂದಿನ ದಿನಗಳಲ್ಲಿ ಮರುಕಳುಹಿಸದಂತೆ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಮುಂದಿನ ವರ್ಷದಿಂದ ತಾಲೀಮು ಇಲ್ಲದೆ ಆನೆಗಳನ್ನು ಜಂಬೂಸವಾರಿಗೆ ಬಿಡುವ ಮುಂಚೆ ಕನಿಷ್ಠ 20 ದಿನ ಕಾವಾಡಿಗರು, ಮಾವುತರಿಂದ ಬತರಬೇತಿ ಕೊಡಿಸಲಾಗುವುದು. ದಸರಾ ಹಬ್ಬ ಆಚರಣೆ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಇದರಿಂದಾಗಿ ಉತ್ಸವಗಳಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ಮುಂಚಿತವಾಗಿಯೇ ಜನಸಂದಣಿ, ವಾದ್ಯಗಳ ಸದ್ದು, ಮೆರವಣಿಗೆಯ ವಾತಾವರಣ, ಜನ ಸಂದಣಿ ಹಾಗೂ ಇತರ ಸಂದರ್ಭಗಳಿಗೆ ಹೊಂದಿಕೊಳ್ಳುವಂತೆ ಆನೆಗಳನ್ನು ಸಿದ್ಧಗೊಳಿಸಬೇಕು. ಈ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳ ಬಗ್ಗೆ ಆಯೋಜನಾ ಸಂಸ್ಥೆಗಳಿಗೆ ಮಾಹಿತಿ ನೀಡಬೇಕು. ಆನೆಗಳ ಬಳಕೆ ಕುರಿತು ಅರಣ್ಯಾಧಿಕಾರಿಗಳಿಂದಲೂ ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳಬೇಕು ಎಂದರು.
ಅಧಿಕಾರಿಗಳಿಂದ ಮಾಹಿತಿ: ಶಿವಮೊಗ್ಗ ದಸರಾ ಜಂಬೂಸವಾರಿ ವೇಳೆ ನಡೆದ ಘಟನೆ ಕುರಿತು ಸಚಿವ ರಾಮಲಿಂಗ ರೆಡ್ಡಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಅವಘಡದ ಮಾಹಿತಿ ಪಡೆದುಕೊಂಡರು.