ಶಿವಮೊಗ್ಗ: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳ ಮಧ್ಯಾಹ್ನದ ಬಿಸಿಯೂಟ ಯೋಜನೆಯಲ್ಲಿ ಸಾಕಷ್ಟು ಭ್ರಷ್ಟಾ ಚಾರ ನಡೆದಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಕೂಡಲೇ ಗಮನ ಹರಿಸಿ ಕ್ರಮ ಕೈಗೊಳ್ಳಬೇಕು ಎಂದು ತಾಲೂಕಿನ ವಿವಿಧ ಶಾಲೆಗಳ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಪದಾಧಿಕಾರಿಗಳು ಒತ್ತಾಯಿಸಿದರು.
ಅವ್ಯವಹಾರ ನಡೆದಿರುವ ಶಾಲೆಗಳ ಬಗ್ಗೆ ಮತ್ತು ಅಲ್ಲಿನ ಮುಖ್ಯ ಶಿಕ್ಷಕರು ಸೇರಿ ಆರೋಪಗಳಲ್ಲಿ ಭಾಗಿಯಾಗಿರುವ ಶಿಕ್ಷಕರನ್ನು ಗುರುತಿಸಿ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಎಸ್‌ಡಿಎಂಸಿ ಸಮನ್ವಯ ಸಮಿತಿ ಒಕ್ಕೂಟದಿಂದ ಗ್ರಾಮಸ್ಥರೊಂದಿಗೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.
ಸರ್ಕಾರಿ ಶಾಲೆಗಳಲ್ಲಿ ಇಡೀ ಶಿಕ್ಷಣ ವ್ಯವಸ್ಥೆಯೇ ಕುಸಿದಿದೆ. ಶಾಲೆಯಲ್ಲಿ ದಾಖಲಾತಿಯ ಮಕ್ಕಳಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾತಿ ತೋರಿಸಿ ಅಕ್ಕಿ, ಬೇಳೆಯನ್ನು ಇಲ್ಲಿನ ಮುಖ್ಯ ಶಿಕ್ಷಕರು ಮನೆಗಳಿಗೆ ಕೊಂಡೊಯ್ದು, ಇಲ್ಲವೇ ಮಾರಾಟ ಮಾಡಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೊಳಲೂರು ಸರ್ಕಾರಿ ಶಾಲೆ ಎಸ್‌ಡಿಎಂಸಿ ಅಧ್ಯಕ್ಷೆ ರಂಜಿತಾ ಆರೋಪಿಸಿದರು.
ಗೋಂದಿ ಚಟ್ನಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಆರ್.ರಾಜೀವ್ ಮಾತನಾಡಿ, ನಮ್ಮ ಶಾಲೆಯಲ್ಲಿ ಬಿಸಿಯೂಟಕ್ಕೆ ಮೀಸಲಿಟ್ಟ ಹಣ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಮೊಟ್ಟೆ, ಹಾಲು, ಶೇಂಗಾ ಚಿಕ್ಕಿ ಖರೀದಿಯಲ್ಲೂ ಅವ್ಯವಹಾರವಾಗಿದೆ. ದೂರು ನೀಡಿ ಎರಡು ವರ್ಷವಾದರೂ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳು ಶಿಕ್ಷಕರ ಪರವಾಗಿದ್ದಾರೆ ಎಂದು ದೂರಿದರು.
ಸೋಷಿಯಲ್ ಜಸ್ಟೀಸ್ ಪಬ್ಲಿಕ್ ಪ್ರಾಬ್ಲಮ್‌ನ ಮುಖ್ಯಸ್ಥ ರಿಯಾಜ್ ಅಹಮ್ಮದ್ ಮಾತನಾಡಿ, ನ್ಯೂಮಂಡ್ಲಿ ಸರ್ಕಾರಿ ಉರ್ದು ಶಾಲೆಯಲ್ಲಿ ಮಧ್ಯಾಹ್ನ ಬಿಸಿಯೂಟಕ್ಕೆ ಸಂಬಂಧಿಸಿ ಅವ್ಯವಹಾರ ನಡೆಯುತ್ತಿದೆ. ಸರ್ಕಾರಿ ಶಾಲೆಗಳು ಕಟ್ಟೆ ಪಂಚಾಯಿತಿ ಕೇಂದ್ರಗಳಾಗಿವೆ. ಶಿಕ್ಷಕರು ಪಾಠ ಮಾಡುವುದನ್ನು ಬಿಟ್ಟು ಉಳಿದೆಲ್ಲ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಎಸ್‌ಡಿಎಂಸಿ ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷ ವೀರಾಚಾರ್ ಮಾತನಾಡಿ, ತಾಲೂಕಿನ ಬಹುತೇಕ ಎಲ್ಲ ಸರ್ಕಾರಿ ಶಾಲೆಗಳಲ್ಲೂ ಬಿಸಿಯೂಟದಲ್ಲಿ ಅವ್ಯವಹಾರ ನಡೆಯುತ್ತಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪಅವರಿಗೆ ಈ ಬಗ್ಗೆ ಈಗಾಗಲೆ ದೂರು ನೀಡಲಾಗಿದೆ. ಆದರೂ ಕ್ರಮ ತೆಗೆದುಕೊಂಡಿಲ್ಲ ಎಂದರು. ಪ್ರಮುಖರಾದ ಯಾಸಿನ್, ಇಮ್ರಾನ್, ಸೈಯದ್ ಸೈುಲ್ಲಾ, ಪ್ರಕಾಶ್ ಸುದ್ದಿಗೋಷ್ಠಿಯಲ್ಲಿದ್ದರು.