ನಾಡಿದ್ದು ಜಿಲ್ಲಾ ಈಡಿಗರ ಭವನದಲ್ಲಿ ಸಭೆ

sridhar hultikoppa
Published on

ಶಿವಮೊಗ್ಗ: ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸ್ಥಿತಿಯ ಬಗ್ಗೆ ಸಮೀಕ್ಷೆ ನಡೆಸಲು ತೀರ್ಮಾನಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾ ಆರ್ಯ ಈಡಿಗರ ಸಂಘದಿಂದ ಸೆ.4ರ ಬೆಳಗ್ಗೆ 11ಕ್ಕೆ ಜಿಲ್ಲಾ ಈಡಿಗರ ಭವನದಲ್ಲಿ ಜಿಲ್ಲಾ ಮಟ್ಟದ ಸಭೆ ಆಯೋಜಿಸಲಾಗಿದೆ.

ಈಡಿಗ ಸಮಾಜದಲ್ಲಿ ಸುಮಾರು 26 ಉಪಪಂಗಡಗಳಿವೆ. ಈಡಿಗರು, ದೀವರು, ನಾಮಧಾರಿಗಳು ಎಂದೆಲ್ಲ ಅವರನ್ನು ಕರೆಯುತ್ತಾರೆ. ಸಮೀಕ್ಷೆಗೆ ಅಧಿಕಾರಿಗಳು ಬಂದ ಸಂದರ್ಭ ಯಾವ ಹೆಸರನ್ನು ಬರೆಸಬೇಕು ಎಂಬುದೂ ಸೇರಿ ಒಗ್ಗಟ್ಟಿನ ತೀರ್ಮಾನ ತೆಗೆದುಕೊಂಡು ಗೊಂದಲ ನಿವಾರಿಸುವ ದೃಷ್ಟಿಯಿಂದ ಈ ಸಭೆ ಆಯೋಜಿಸಲಾಗಿದೆ ಎಂದು ಜಿಲ್ಲಾ ಆರ್ಯ ಈಡಿಗರ ಸಂಘದ ಅಧ್ಯಕ್ಷ ಶ್ರೀಧರ್ ಆರ್. ಹುಲ್ತಿಕೊಪ್ಪ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಶಾಸಕ ಬೇಳೂರು ಗೋಪಾಲಕೃಷ್ಣ ಸಭೆಯ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ, ಮಾಜಿ ಶಾಸಕರು, ಮಾಜಿ ಸಚಿವರನ್ನೂ ಸಭೆಗೆ ಆಹ್ವಾನಿಸಲಾಗಿದೆ. ಸಂಘದ ತಾಲೂಕು ಅಧ್ಯಕ್ಷರು, ಮುಂಚೂಣಿ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಸಮಾಜದ ಮುಖಂಡರು ಸಭೆಯಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.

ಸೆ.7ರ ಬೆಳಗ್ಗೆ 10-30ಕ್ಕೆ ಕುವೆಂಪು ರಂಗಮಂದಿರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜಯಂತಿಯನ್ನು ಜಿಲ್ಲಾಡಳಿತದಿಂದ ಆಯೋಜಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಚಿವ ಶಿವರಾಜ ತಂಗಡಗಿ ಸೇರಿ ಜಿಲ್ಲೆಯ ಸಂಸದರು, ಶಾಸಕರು ಇದರಲ್ಲಿ ಭಾಗವಹಿಸಲಿದ್ದಾರೆ ಎಂದರು.

ಪ್ರಮುಖರಾದ ಎಚ್.ರಾಮಪ್ಪ, ಜೆ.ರಾಜಪ್ಪ, ಪ್ರೊ. ಕಲ್ಲನ, ಎಚ್.ಜಿ.ಕೃಷ್ಣಮೂರ್ತಿ, ಉದಯಕುಮಾರ್, ರಮೇಶ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net