

ರಿಪ್ಪನ್ಪೇಟೆ: ಭಾರತೀಯ ಆಧ್ಯಾತ್ಮಿಕ ಶ್ರೀಮಂತಿಕೆ ಮತ್ತು ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಬಿಸುವ ಕಾರ್ತಿಕ ದೀಪೋತ್ಸವವು ಪವಿತ್ರ ಆಚರಣೆ. ದೀಪ ಬೆಳಗಿಸುವುದು ಕೇವಲ ಧಾರ್ಮಿಕ ಸಂಪ್ರದಾಯವಲ್ಲ. ಅದು ಅಜ್ಞಾನದ ಕತ್ತಲೆಯನ್ನು ಕಳೆದು ಜ್ಞಾನದ ಬೆಳಕನ್ನು ಹರಡುವ ಮಹೋನ್ನತ ಜೀವನ ಸಂದೇಶ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಸಮೀಪದ ಶ್ರೀ ರಂಭಾಪುರಿ ಖಾಸಾ ಶಾಖಾ ಮಳಲಿ ಸಂಸ್ಥಾನ ಮಠದಲ್ಲಿ ಕಾರ್ತಿಕ ದೀಪೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ವೀರಶೈವ ಧರ್ಮದ ಶಿವ ತತ್ವದಲ್ಲಿ ಜ್ಯೋತಿಯು ಪರಮ ಚೈತನ್ಯದ ಸಂಕೇತ. ಬಾಹ್ಯವಾಗಿ ಬೆಳಗುವ ದೀಪವು ನಮ್ಮ ಅಂತರಂಗದಲ್ಲಿಯೂ ಜ್ಞಾನ, ವಿವೇಕ, ಸತ್ಯ, ನಿಷ್ಠೆ ಮತ್ತು ಮಾನವೀಯತೆಯ ಬೆಳಕನ್ನು ಮೂಡಿಸಬೇಕು. ಇದೇ ಕಾರ್ತಿಕ ದೀಪೋತ್ಸವದ ನಿಜವಾದ ಆಶಯ ಎಂದರು.
ಸಮಾರಂಭ ಉದ್ಘಾಟಿಸಿದ ಯಡಿಯೂರು ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಇಂದಿನ ಸಮಾಜಕ್ಕೆ ಬೇಕಾಗಿರುವುದು ಸಾವಿರಾರು ದೀಪಗಳ ಬೆಳಕಲ್ಲ. ಮನುಷ್ಯನ ಮನಸ್ಸಿನಲ್ಲಿರುವ ದ್ವೇಷ, ಅಸೂಯೆ, ಅಹಂಕಾರ ಮತ್ತು ಅಜ್ಞಾನವನ್ನು ನಿವಾರಿಸುವ ಜ್ಞಾನದ ಬೆಳಕು. ಮಲೆನಾಡಿನ ಪ್ರಾಂತದಲ್ಲಿ ಮನೆ ಮಾತಾಗಿರುವ ಮಳಲಿ ಸಂಸ್ಥಾನ ಮಠದಲ್ಲಿ ದೀಪೋತ್ಸವ ಸಂಭ್ರಮದಿಂದ ಜರುಗುತ್ತಿರುವುದು ನಮ್ಮೆಲ್ಲರ ಸೌಭಾಗ್ಯ ಎಂದು ತಿಳಿಸಿದರು.
ಮಳಲಿ ಮಠದ ಶ್ರೀ ನಾಗಭೂಷಣ ಶಿವಾಚಾರ್ಯರು ಮಾತನಾಡಿ, ವೀರಶೈವ ಧರ್ಮ ಸಂಸ್ಕೃತಿ, ಮನುಷ್ಯನ ಅಂತರಂಗವನ್ನು ಪರಿಶುದ್ಧಗೊಳಿಸಿ ಸನ್ಮಾರ್ಗದತ್ತ ಕರೆದೊಯ್ಯುವ ಜೀವನ ದರ್ಶನ. ಪರಮ ಪಂಚಾಚಾರ್ಯರು ಭಕ್ತರ ಬದುಕಿಗೆ ಸಂಸ್ಕಾರ, ಶಿಸ್ತು, ಸಾಮರಸ್ಯ ಬೆಳೆಸುತ್ತ ಬಂದಿದ್ದಾರೆ. ಶ್ರಿ ರಂಭಾಪುರಿ ಜಗದ್ಗುರುಗಳ ಆಶೀರ್ವಾದದಿಂದ ಮಠದ ಅಭಿವೃದ್ಧಿ ಮತ್ತು ಭಕ್ತರ ಕಲ್ಯಾಣ ಕಾರ್ಯಗಳು ನಡೆಯುತ್ತಿರುವುದು ಸಂತೃಪ್ತಿ ಉಂಟುಮಾಡಿದೆ ಎಂದರು.
ರೇವಣಸಿದ್ದೇಶ್ವರ ಶ್ರೀಗಳು, ಶ್ರೀ ಚನ್ನವೀರ ಸ್ವಾಮೀಜಿ, ಶ್ರೀ ಶಿವಾನಂದ ಶಿವಾಚಾರ್ಯರು, ಬಿಳಿಕಿ ಶ್ರೀ ರಾಚೋಟೇಶ್ವರ ಶಿವಾಚಾರ್ಯರು, ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯರು, ಶ್ರೀ ಗುರುಲಿಂಗ ಶಿವಾಚಾರ್ಯರು, ಶ್ರೀ ಶಿವಯೋಗಿ ಶಿವಾಚಾರ್ಯರು, ಶ್ರೀ ಸೋಮಶೇಖರ ಶಿವಾಚಾರ್ಯರು, ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯರು,ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯರು, ಶ್ರೀ ವೀರರಾಜೇಂದ್ರ ಸ್ವಾಮೀಜಿ, ಶಾಸಕ ಆರಗ ಜ್ಞಾನೇಂದ್ರ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಆರ್.ಎಂ.ಮಂಜುನಾಥ ಗೌಡ, ಎಚ್.ಎಸ್.ಜಗದೀಶ, ಕೆ.ಆರ್.ಪ್ರಕಾಶ್, ಪತ್ರಕರ್ತ ಆರ್.ಎಸ್.ಪ್ರಶಾಂತ್ ರಿಪ್ಪನ್ಪೇಟೆ ಇತರರಿದ್ದರು.