‘ನಾನು ಪಾಕಿಸ್ತಾನಿ, ಅಟ್ಟಾರಿ ಗಡಿಯಿಂದ ಬಂದಿದ್ದೇನೆ’ ಎಂದ ಆಸಾಮಿ; ಪೊಲೀಸ್ ವಿಚಾರಣೆಯಲ್ಲಿ ಸತ್ಯ ಬಯಲು | Pakistani National Claim

ಮಧ್ಯಪ್ರದೇಶದ ಜಬಲ್ಪುರದಲ್ಲಿ ತಾನು ಪಾಕಿಸ್ತಾನಿ ಎಂದು ಹೇಳಿಕೊಂಡು ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದ ವ್ಯಕ್ತಿಯ ಅಸಲಿ ಗುರುತು ಪೊಲೀಸರ ಪರಿಶೀಲನೆಯಲ್ಲಿ ಬಯಲಾಗಿದೆ. ಆತ ಪಾಕಿಸ್ತಾನಿಯಲ್ಲ, ಉತ್ತರ ಪ್ರದೇಶದ ನಿವಾಸಿ ಎಂಬುದು ಗೊತ್ತಾಗಿದೆ.
The man who said, "I am Pakistani"
‘ನಾನು ಪಾಕಿಸ್ತಾನಿ’ ಎಂದ ವ್ಯಕ್ತಿ
Published on: 

Madhya Pradesh: ಮಧ್ಯಪ್ರದೇಶದಲ್ಲಿ ತಾನು ಪಾಕಿಸ್ತಾನಿ ಪ್ರಜೆ ಎಂದು ಹೇಳಿಕೊಂಡು ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದ ವ್ಯಕ್ತಿಯ ಅಸಲಿ ಗುರುತು ಇದೀಗ ಬಯಲಾಗಿದೆ. ಪೊಲೀಸರ ವಿಚಾರಣೆ ಬಳಿಕ ಆತ ಪಾಕಿಸ್ತಾನಿಯಲ್ಲ, ಉತ್ತರ ಪ್ರದೇಶದ ನಿವಾಸಿ ಎಂಬುದು ಗೊತ್ತಾಗಿದೆ.

ಜಬಲ್ಪುರದ ವೈದ್ಯನಾಥನ್ ನಗರದಲ್ಲಿ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ. ಇದನ್ನು ಗಮನಿಸಿದ ಸ್ಥಳೀಯರು ಆತನನ್ನು ವಿಚಾರಿಸಿದ್ದಾರೆ. ಈ ವೇಳೆ ಆತ ತನ್ನ ಹೆಸರು ಹಮೀದ್ ಅನ್ಸಾರಿ ಎಂದು ಹೇಳಿಕೊಂಡಿದ್ದಾನೆ. ಅಲ್ಲದೆ, ತಾನು ಪಾಕಿಸ್ತಾನದಿಂದ ಬಂದಿದ್ದು, ಅಟ್ಟಾರಿ ಗಡಿಯ ಮೂಲಕ ಕಾಲ್ನಡಿಗೆಯಲ್ಲಿ ಭಾರತಕ್ಕೆ ಬಂದಿದ್ದೇನೆ ಎಂದು ಹೇಳಿದ್ದಾನೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

ಆತ ಹೇಳಿದ ಮಾತಿನಿಂದ ಸ್ಥಳೀಯರಲ್ಲಿ ಆತಂಕ ಶುರುವಾಗಿದೆ. ಅದರಲ್ಲೂ ರಾಂಝಿ ಸುತ್ತಮುತ್ತ ಪ್ರಮುಖ ಭದ್ರತಾ ಸಂಸ್ಥೆಗಳು ಇರುವ ಕಾರಣ, ಪೊಲೀಸರು ಕೂಡ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಸ್ಥಳೀಯರು ಆತನನ್ನು ಪ್ರಶ್ನಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬಳಿಕ ಪೊಲೀಸರ ಗಮನಕ್ಕೂ ಬಂದಿದೆ.

ಪೊಲೀಸ್​ ವಿಚಾರಣೆಯಲ್ಲಿ ಸತ್ಯ ಬಯಲು

ವಿಷಯ ಗೊತ್ತಾಗುತ್ತಿದ್ದಂತೆ ರಾಂಝಿ ಪೊಲೀಸರು ಆತನನ್ನು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ್ದಾರೆ. ಬಳಿಕ ದಾಖಲೆಗಳು ಹಾಗೂ ಕುಟುಂಬದವರ ಮಾಹಿತಿ ಪರಿಶೀಲಿಸಿದಾಗ ಆತ ಪಾಕಿಸ್ತಾನಿಯಲ್ಲ ಎಂಬುದು ಗೊತ್ತಾಗಿದೆ.

ರಾಂಝಿ ನಗರ ಪೊಲೀಸ್ ವರಿಷ್ಠಾಧಿಕಾರಿ ಸತೀಶ್ ಸಾಹು ಮಾಹಿತಿ ನೀಡಿದ್ದು, ಆತ ಉತ್ತರ ಪ್ರದೇಶದ ಹರ್ದೋಯಿ ಜಿಲ್ಲೆಯ ಗೌಸ್ಗಂಜ್ ನಿವಾಸಿ ಶಿವಂ ಪಾಠಕ್ ಎಂದು ಹೇಳಿದ್ದಾರೆ. ಆತನ ಮೂಲ ಊರು ಕಸಿಂಪುರ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುತ್ತದೆ.

ಶಿವಂನನ್ನು ಕರೆಯಲು ಬಂದ ಸಹೋದರ

ಪೊಲೀಸರು ಕುಟುಂಬದವರನ್ನು ಸಂಪರ್ಕಿಸಿ ಆತನ ಗುರುತನ್ನು ಖಚಿತಪಡಿಸಿಕೊಂಡಿದ್ದಾರೆ. ಆತನ ತಂದೆ ಉದಯಕಾಂತ್ ಪಾಠಕ್ ನಿವೃತ್ತ ಬಿಎಸ್‌ಎನ್‌ಎಲ್ ಕಿರಿಯ ಎಂಜಿನಿಯರ್ ಎಂದು ತಿಳಿದುಬಂದಿದೆ. ಶಿವಂ ಅವರ ಇಬ್ಬರು ಸಹೋದರರ ಪೈಕಿ ಒಬ್ಬರು ಆತನನ್ನು ಜಬಲ್ಪುರದಿಂದ ಮನೆಗೆ ಕರೆದುಕೊಂಡು ಹೋಗಲು ಬಂದಿದ್ದಾರೆ.

ಈ ಹಿಂದೆಯೂ ಮನೆ ಬಿಟ್ಟು ಹೋಗಿದ್ದ ಆಸಾಮಿ

ಕುಟುಂಬದವರು ನೀಡಿದ ಮಾಹಿತಿ ಪ್ರಕಾರ, ಶಿವಂ ಅವರ ಮಾನಸಿಕ ಸ್ಥಿತಿ ಸರಿಯಾಗಿಲ್ಲ. ಈ ಹಿಂದೆಯೂ ಯಾರಿಗೂ ಹೇಳದೆ ಮನೆ ಬಿಟ್ಟು ಹೋಗಿದ್ದ ಅವರು, ಕಳೆದ ತಿಂಗಳಷ್ಟೇ ರಾಜಸ್ಥಾನದಿಂದ ವಾಪಸ್ ಕರೆತರಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net