

ತಮಿಳುನಾಡು: ಇದು ಸಾಯಿಸಲು ಹೋದವ ತಾನೇ ಸಾವಿಗೀಡಾದಂಥ ಪ್ರಕರಣ. ಇದರಲ್ಲಿ ಆತನಿಗೆ ಜೊತೆಯಾಗಿ ಹೋಗಿದ್ದ 5 ನಾಯಿಗಳೂ ಪ್ರಾಣ ಕಳೆದುಕೊಂಡಿವೆ. ತಮಿಳುನಾಡಿನ ಮಧುರೈ ಜಿಲ್ಲೆಯಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ. ಬೇಟೆಗೆಂದು ಹೋಗಿದ್ದವ ತನ್ನ ಐದು ನಾಯಿಗಳೊಂದಿಗೆ ಸಾವಿಗೀಡಾಗಿದ್ದಾನೆ.
ಮಣಿಕ್ಕಂ (35) ಸಾವಿಗೀಡಾದ ಬೇಟೆಗಾರ. ಈತ ತನ್ನ ಕುಪ್ಪುಸ್ವಾಮಿ (29), ಆರ್. ಮನೋಜ್ (27) ಎಂಬವರೊಂದಿಗೆ ಬೇಟೆಗೆ ಹೋಗಿದ್ದಾಗ ಈ ಘಟನೆ ನಡೆದಿದೆ. ಮಧುರೈ ಜಿಲ್ಲೆಯ ಅರಂಗನಲ್ಲೂರು ಎಂಬಲ್ಲಿ ಈ ದುರಂತ ಸಂಭವಿಸಿದೆ.
ಈ ಮೂವರು ಭಾನುವಾರ ಮೊಲಗಳನ್ನು ಬೇಟೆಯಾಡಲೆಂದು ಐದು ನಾಯಿಗಳೊಂದಿಗೆ ಹೋಗಿದ್ದರು. ಆದರೆ ಹೊಲವೊಂದರ ಸುತ್ತ ಹಾಕಿದ್ದ ವಿದ್ಯುತ್ ತಂತಿಯ ಬೇಲಿಯಿಂದ ವಿದ್ಯುತ್ ಸ್ಪರ್ಶಕ್ಕೆ ಒಳಗಾಗಿ ಪ್ರಾಣ ಕಳೆದುಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮವಾಗಿ ವಿದ್ಯುತ್ ಬೇಲಿ ಹಾಕಿದ್ದ ಹೊಲದ ಮಾಲೀಕ ಅಶೋಕ್ ಕುಮಾರ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಣಿಕ್ಕಂ ಆಗಾಗ ಸ್ನೇಹಿತರೊಂದಿಗೆ ಬೇಟೆಗೆ ಹೋಗುತ್ತಿದ್ದುದು ಬೆಳಕಿಗೆ ಬಂದಿದ್ದು, ಈ ಸಲ ಅಕ್ರಮ ವಿದ್ಯುತ್ ಬೇಲಿಗೆ ಬಲಿಯಾಗಿದ್ದಾನೆ.