

ಕನಕಗಿರಿ (ಕೊಪ್ಪಳ): ಕಣ್ಣಿಗೆ ಕಾಣುವ ದೇವರು ಎಂದರೆ ತಂದೆ-ತಾಯಿ ಎನ್ನುವ ಮಾತಿದೆ. ಆದರೆ, ಚೆನ್ನಾಗಿ ನೌಕರಿ ಮಾಡಿಕೊಂಡು ಹೆಂಡತಿಯೊಂದಿಗೆ ಸರಿಯಾಗಿ ಬದುಕುವಂತೆ ಬುದ್ಧಿವಾದ ಹೇಳಿದ್ದಕ್ಕೆ ಪಾಲಕರನ್ನು ಹೆತ್ತ ಮಗನೇ ಕೊಲೆ ಮಾಡಿರುವ ಘಟನೆ ಮಂಗಳವಾರ ನಡೆದಿದೆ.
ಗಿರಿಯಪ್ಪ ಮಡಿವಾಳರ್ (66) ಮತ್ತು ಅಕ್ಕಮ್ಮ (60) ದಂಪತಿಗೆ ರಮೇಶ ಏಕೈಕ ಪುತ್ರ. ಕೆಲ ದಿನಗಳ ಹಿಂದೆ ಮೆಡಿಕಲ್ ಕಂಪನಿಯಲ್ಲಿ ರಮೇಶ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಕೆಲಸ ಬಿಟ್ಟು ಮನೆಯಲ್ಲಿದ್ದ. ಕಳೆದ 15 ದಿನಗಳಿಂದ ಮನೆಯಲ್ಲಿಯೇ ಇದ್ದುದನ್ನು ನೋಡಿ ಬೇಸತ್ತು ಹೆಂಡತಿಯೂ ಮನಸ್ತಾಪ ಮಾಡಿಕೊಂಡು ತವರಿಗೆ ಹೋಗಿದ್ದಳು.
ಮಗನ ಸ್ಥಿತಿ ಹೀಗಾಯಿತಲ್ಲ ಎಂದು ತಂದೆತಾಯಿಗೂ ಬೇಸರವಾಗಿತ್ತು. ‘‘ಮತ್ತೆ ಕೆಲಸಕ್ಕೆ ಹೋಗು. ಹೆಂಡತಿಯನ್ನು ಮರಳಿ ಕರೆದುಕೊಂಡು ಬಾ’’ ಎಂದು ಪದೇಪದೆ ಹೇಳಿದ್ದರು. ಆತ ಇದನ್ನು ಸಕಾರಾತ್ಮಕವಾಗಿ ಸ್ವೀಕರಿಸುವ ಬದಲು ಕಿರುಕುಳ ಎಂದು ಭಾವಿಸಿದ. ಇದೇ ಕಾರಣಕ್ಕೆ ಪಾಲಕರು ಮತ್ತು ಮಗನ ನಡುವೆ ಆಗಾಗ ಜಗಳ ನಡೆಯುತ್ತಿತ್ತು.
ಈ ಎಲ್ಲದರಿಂದ ಮನನೊಂದಿದ್ದ ರಮೇಶ ಮಾನಸಿಕ ಖಿನ್ನತೆಗೂ ಒಳಗಾಗಿದ್ದ. ಮಂಗಳವಾರ ಬೆಳಗಿನ ಜಾವ ಕೂಡ ತಂದೆ-ತಾಯಿ ಜತೆಗೆ ಮತ್ತೆ ಜಗಳವಾಗಿತ್ತು. ಬೆಳಗ್ಗೆ 2.30ಕ್ಕೆ ಕಬ್ಬಿಣದ ಹಾರೆಯಿಂದ ಪಾಲಕರ ತಲೆಗೆ ಹೊಡೆದಿದ್ದಾನೆ. ತೀವ್ರ ಗಾಯಗೊಂಡ ತಾಯಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಗಂಭೀರ ಗಾಯಗೊಂಡಿದ್ದ ತಂದೆ ಆಸ್ಪತ್ರೆಗೆ ದಾಖಲಿಸಿದ ಕೆಲ ಹೊತ್ತಿನ ನಂತರ ಮೃತಪಟ್ಟಿದ್ದಾನೆ.
ಈ ಕ್ರೌರ್ಯ ಕಂಡು ಇಡೀ ಪಟ್ಟಣವೇ ಬೆಚ್ಚಿಬಿದ್ದಿದೆ. ಇಳಿ ವಯಸ್ಸಿನಲ್ಲಿ ಮಗ ಮತ್ತು ಮೊಮ್ಮಕ್ಕಳೊಂದಿಗೆ ಜೀವನ ಕಳೆಯಬೇಕಿದ್ದ ಹಿರಿಯ ಜೀವಗಳು, ಪುತ್ರನಿಂದಲೇ ಹತ್ಯೆಗೀಡಾಗಿವೆ. ಪೊಲೀಸರು ರಮೇಶನನ್ನು ಬಂಧಿಸಿದ್ದಾರೆ.