ಧರ್ಮದ ಉಳಿವಿನಲ್ಲಿ ಮಹಿಳೆಯರ ಪಾತ್ರ ಹಿರಿದು; ಕಾಶೀ ಜಗದ್ಗುರುಗಳ ಅಭಿಮತ

kashi
Published on

ವಾರಾಣಸಿ: ಧರ್ಮಾಚರಣೆಗಳು ತಲೆಮಾರಿನಿಂದ ತಲೆಮಾರಿಗೆ ಮುಂದುವರೆದುಕೊಂಡು ಬರುವ ಮೂಲಕ ಧರ್ಮ ಉಳಿಯುವುದರಲ್ಲಿ ಸಾಮಾನ್ಯ ಮಹಿಳೆಯರ ಪಾತ್ರ ಹಿರಿದಾಗಿದೆ ಎಂದು ಕಾಶೀ ಪೀಠದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಿಸಿದ್ದಾರೆ.

ಕಾಶೀ ಜಂಗಮವಾಡಿ ಮಠದಲ್ಲಿ ಹಮ್ಮಿಕೊಂಡಿದ್ದ ಶ್ರೀ ಸಿದ್ಧಾಂತ ಶಿಖಾಮಣಿ ಸಾಮೂಹಿಕ ಪಾರಾಯಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಸಾಮಾನ್ಯವಾಗಿ ಧರ್ಮಾಚರಣೆಗಳನ್ನು ಅತ್ಯಂತ ಶ್ರದ್ಧೆ, ಭಕ್ತಿ ಮತ್ತು ಬದ್ಧತೆಯಿಂದ ಪಾಲಿಸುವುದರ ಮೂಲಕ ಸನಾತನ ಧರ್ಮವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಮಹತ್ವದ ಕಾರ್ಯವನ್ನು ನಮ್ಮೆಲ್ಲ ತಾಯಂದಿರು ಮಾಡುತ್ತಿದ್ದಾರೆ. ಧಾರ್ಮಿಕ ಮುಖಂಡರು ಬೋದಿಸುವ ಉಪದೇಶವನ್ನು ಶ್ರದ್ಧೆಯಿಂದ ಅಳವಡಿಸಿಕೊಂಡು ಆಚರಿಸುತ್ತಾರೆ. ಅದರ ಭಾಗವೇ ಕರ್ನಾಟಕದ ವಿವಿಧೆಡೆಗಳಿಂದ ಕಾಶಿಗೆ ಬಂದು ವಿವಿಧ ಸಂಘಟನೆಗಳ ಮಹಿಳೆಯರು ಇಂದು ಶ್ರೀಸಿದ್ಧಾಂತ ಶಿಖಾಮಣಿ ಧರ್ಮಗ್ರಂಥವನ್ನು ಪಾರಾಯಣ ಮಾಡಿದ್ದಾರೆ.

ಕಳೆದ 25-30 ವರ್ಷಗಳ ಹಿಂದೆ ಸಣ್ಣದಾಗಿ ಆರಂಭವಾದ ಶ್ರೀ ಸಿದ್ಧಾಂತ ಶಿಖಾಮಣಿ ಪಾರಾಯಣ ಅಭಿಯಾನವು ಇಂದು ಕರ್ನಾಟಕ, ಆಂಧ್ರ, ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯದ ಹಲವಾರು ಮಹಿಳಾ ಸಂಘಟನೆಗಳು ಅಖಂಡ ಪಾರಾಯಣ ಮಾಡುವಂತಾಗಿದೆ. ಈ ನಿಟ್ಟಿನಲ್ಲಿ ಬೆಂಗಳೂರಿನ ಸ್ನೇಹ ಬಳಗದ ಇಂಧುಕಲಾ ಮತ್ತು ಧಾರವಾಡದ ಕವಿತಾ ಹಿರೇಮಠ ಅವರ ಶ್ರಮ ಮತ್ತು ಸಾಧನೆ ಗಮನಾರ್ಹ ಎಂದು ಜಗದ್ಗುರುಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾಶಿಯಲ್ಲಿ ಪಾರಾಯಣ ಮಾಡುವುದಕ್ಕಾಗಿ ಹೊರಟಿದ್ದ ಮಹಿಳೆಯರಿಗೆ ರೈಲಿನ ಸೀಟು ಸಿಗದೇ ಗೊಂದಲ ಉಂಟಾದಾಗ ವಿಶೇಷ ರೈಲು ಬೋಗಿಯನ್ನೇ ವ್ಯವಸ್ಥೆ ಮಾಡಿಕೊಟ್ಟ ಕೇಂದ್ರದ ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣನವರಿಗೆ ಜಗದ್ಗುರುಗಳು ಶುಭ ಕೋರಿದರು.

ಕಾರ್ಯಕ್ರಮದಲ್ಲಿ ಕರ್ನಾಟಕದ ಬೆಂಗಳೂರು, ತುಮಕೂರು, ಮಧುಗಿರಿ, ಅರಸಿಕೆರೆ ಮತ್ತು ಮೈಸೂರಿನಿಂದ ಆಗಮಿಸಿದ್ದ ವಿವಿಧ ಮಹಿಳಾ ಸಂಘಟನೆಗಳ ತಾಯಂದಿರು ಶ್ರೀಸಿದ್ಧಾಂತ ಶಿಖಾಮಣಿ ಪಾರಾಯಣ ಮಾಡಿದರು.

ಬೆಂಗಳೂರಿನ ಇಂದುಕಲಾ ಮಾರ್ಗದರ್ಶನದಲ್ಲಿ 150ಕ್ಕೂ ಹೆಚ್ಚು ಮಹಿಳೆಯರು ಆನ್ಲೈನ್ ಮೂಲಕ ಶ್ರೀಸಿದ್ಧಾಂತ ಶಿಖಾಮಣಿ ಪಾರಾಯಣವನ್ನು ಅಭ್ಯಾಸ ಮಾಡಿದ್ದು ಈ ಅಭಿಯಾನದ ನೇತೃತ್ವವನ್ನು ಕಾಶಿ ಪೀಠದ ಸಾಧಕರಾದ ಅಖಿಲೇಶ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ವೀರಶೈವ ವಿದ್ವತ್ ಸಂಘದ ಎಲ್ಲಾ ಸಾಧಕರು ಹಾಗೂ ಶ್ರೀ ವಿಶ್ವರಾಧ್ಯ ಗುರುಕುಲದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net