Jairam Ramesh | ಮೊದಲು ಮತಕಳ್ಳತನ.. ಈಗ ಉಚಿತ ಯೋಜನೆ; ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್​ ನಾಯಕ ಜೈರಾಮ್​ ರಮೇಶ್​ ವಾಗ್ದಾಳಿ!

Jairam Ramesh
Published on

Jairam Ramesh: ಇತ್ತೀಚೆಗೆ ಬಿಹಾರದಲ್ಲಿ ಮಹಿಳಾ ರೋಜ್‌ಗಾರ್ ಯೋಜನೆಯನ್ನು ಉದ್ಘಾಟಿಸಿದ್ದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಇಷ್ಟು ದಿನ ಮತಕಳ್ಳತನ ಮಾಡುತ್ತಿದ್ದ ಕೇಂದ್ರ ಸರ್ಕಾರ ಈಗ ಮತ ಪಡೆಯುವ ಏಕೈಕ ಉದ್ದೇಶದಿಂದ ಉಚಿತ ಯೋಜನೆಗಳನ್ನು ಘೋಷಿಸುತ್ತಿದೆ ಎಂದು ಹೇಳಿದರು.

ತಮ್ಮ ಎಕ್ಸ್​​​ ಖಾತೆಯಲ್ಲಿ ಪೋಸ್ಟ್​​ ಹಂಚಿಕೊಂಡಿರುವ ಜೈರಾಮ್​​ ರಮೇಶ್​​, ಗೃಹಲಕ್ಷ್ಮಿ ಯೋಜನೆಯಡಿ 1.3 ಕೋಟಿ ಮಹಿಳೆಯರಿಗೆ ತಿಂಗಳಿಗೆ 2,000 ರೂಪಾಯಿ ನೀಡುವುದಾಗಿ ಕರ್ನಾಟಕದ ಕಾಂಗ್ರೆಸ್​ ಘೋಷಿಸಿದಾಗ ಟೀಕಿಸಿದ್ದ ಬಿಜೆಪಿ ನಾಯಕರುಗಳು, ಈಗ ಸ್ವತಃ ತಾವೇ ಅದನ್ನು ಮಾಡುತ್ತಿದ್ದಾರೆ. ಪ್ರಧಾನ ಮಂತ್ರಿಗಳು ಬಿಹಾರದ ಮಹಿಳೆಯರಿಗೆ ಹೊಸ ಯೋಜನೆಯನ್ನು ಜಾರಿಗೆ ತಂದಿದ್ದು, ಅದು ಕೂಡ ನೀತಿ ಸಂಹಿತೆ ಜಾರಿಗೆ ಬರುವ ಕೆಲವೇ ದಿನಗಳ ಮೊದಲು. ಈಗ 'ವೋಟ್ ಚೋರಿ' ಜೊತೆಗೆ ಉಚಿತ ಹಣ ವಿತರಿಸುವಲ್ಲಿ ನಿರತರಾಗಿದ್ದಾರೆ. ಇದು ಸಂಪೂರ್ಣ ಹತಾಶೆಯಾಗಿದ್ದು, ಅಲ್ಲಿನ ಮಹಿಳೆಯರು ಇದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ ಎಂದು ಬರೆದಿದ್ದಾರೆ.

ಬಿಹಾರ ಸರ್ಕಾರದ ಕ್ಷಣಗಣನೆ ಈಗಾಗಲೇ ಆರಂಭವಾಗಿದ್ದು, ನಿತೀಶ್ ಕುಮಾರ್ ಈಗಾಗಲೇ ಅಧಿಕಾರದಿಂದ ದೂರವಾಗುತ್ತಿದ್ದು, ಬಿಹಾರ ಚುನಾವಣೆಯ ಫಲಿತಾಂಶಗಳು ಬಂದಾಗ, ಪ್ರಧಾನಿ ಮೋದಿ ಕೂಡ ಹಿನ್ನಡೆ ಅನುಭವಿಸಲಿದ್ದಾರೆ ಎಂದು ಹೇಳಿದರು.

ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆ

ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ (ಸೆಪ್ಟೆಂಬರ್ 26) ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆಯನ್ನು ವರ್ಚುವಲ್ ಆಗಿ ಉದ್ಘಾಟಿಸಿದರು , ಇದರ ಅಡಿಯಲ್ಲಿ ಬಿಹಾರದ 75 ಲಕ್ಷ ಮಹಿಳೆಯರು ಸ್ವ-ಉದ್ಯೋಗ ಮತ್ತು ಜೀವನೋಪಾಯ ಚಟುವಟಿಕೆಗಳನ್ನು ಆರಂಭಿಸಲು ತಲಾ 10,000 ರೂಪಾಯಿಗಳನ್ನು ಪಡೆಯಲಿದ್ದಾರೆ. 10,000 ಆರಂಭಿಕ ಆರ್ಥಿಕ ನೆರವಿನಿಂದ ಪ್ರಾರಂಭವಾಗುವ ಈ ಯೋಜನೆಯು, ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ, 7,500 ಕೋಟಿ ಯೋಜನೆಯಡಿಯಲ್ಲಿ ಉದ್ಯಮದ ಯಶಸ್ಸಿನ ಆಧಾರದ ಮೇಲೆ 2 ಲಕ್ಷ ರೂಪಾಯಿವರೆಗೆ ಅನುದಾನ ಸಹಾಯಧನ ನೀಡಲಾಗುತ್ತದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net