ದಯವಿಟ್ಟು ಅಮೆರಿಕಗೆ ಬರಬೇಡಿ: ಫಾರಿನ್ ಉದ್ಯೋಗದ ಕನಸು ಕಾಣುವವರಿಗೆ ಕಿವಿಮಾತು ಹೇಳಿದ NRI ದಂಪತಿ!

NRI  ಸಾಂದರ್ಭಿಕ ಚಿತ್ರ
NRI ಸಾಂದರ್ಭಿಕ ಚಿತ್ರ
Published on

ವಾಷಿಂಗ್ಟನ್​: ವಿದೇಶಕ್ಕೆ ತೆರಳಿ ಉದ್ಯೋಗ ಕಂಡುಕೊಳ್ಳುವುದು ಮತ್ತು ಅಲ್ಲಿಯೇ ನೆಲೆಸುವುದು ಇಂದಿನ ಅನೇಕ ಯುವಕರ ಕನಸಾಗಿರುತ್ತದೆ. ಆದರೆ, ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಮೂಲದ (NRI) ಸುಹಾಸ್ ಮತ್ತು ಪ್ರಿಯಾಂಕಾ ದಂಪತಿ ನೀಡಿದ ಸಲಹೆಯೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವಿದೇಶಕ್ಕೆ ಬರಬೇಡಿ, ಭಾರತದಲ್ಲೇ ಉದ್ಯೋಗ ಮತ್ತು ಆರ್ಥಿಕ ಪ್ರಗತಿಗೆ ಸೂಕ್ತ ಅವಕಾಶಗಳಿವೆ ಎಂದು ಅವರು ಸಲಹೆ ನೀಡಿದ್ದಾರೆ.

ಪೋಸ್ಟ್​ನಲ್ಲೇನಿದೆ?

ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ದರ್ಶನಾ ಅವರ (@darshanaconnects) ತಮ್ಮ ಇನ್‌ಸ್ಟಾಗ್ರಾಮ್​ನಲ್ಲಿ ವಿಡಿಯೋ ಹಂಚಿಕೊಂಡಿದ್ದು ತಮ್ಮ ಸುದೀರ್ಘ ಅಮೆರಿಕ ವಾಸದ ಅನುಭವಗಳನ್ನು ಹಂಚಿಕೊಳ್ಳುತ್ತಾ ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಾವು ಬಂದ ಕಾಲವೇ ಬೇರೆ, ಇಂದಿನ ಭಾರತವೇ ಬೇರೆ

ವಿದೇಶಕ್ಕೆ ಬರಲು ಬಯಸುವ ಯುವಕರಿಗೆ ನೀವು ಏನು ಸಲಹೆ ನೀಡುತ್ತೀರಿ ಎಂದು ಕೇಳಿದಾಗ, ಸುಹಾಸ್ "ದಯವಿಟ್ಟು ಬರಬೇಡಿ" ಎಂದು ನೇರವಾಗಿ ಹೇಳಿದ್ದಾರೆ.
ನಾವು ಭಾರತದಿಂದ ಹೊರಬಂದ ಸಮಯದಲ್ಲಿ ಅಲ್ಲಿ ಉತ್ತಮ ಉದ್ಯೋಗ ಕಂಡುಕೊಳ್ಳುವುದು ಮತ್ತು ಉತ್ತಮ ಜೀವನಶೈಲಿ ರೂಪಿಸಿಕೊಳ್ಳುವುದು ತುಂಬಾ ಕಷ್ಟಕರವಾಗಿತ್ತು. ಹಾಗಾಗಿ ಅಮೆರಿಕ ನಮಗೆ ಸುಲಭ ಮತ್ತು ಉತ್ತಮ ಆಯ್ಕೆಯಾಗಿ ಕಂಡಿತು. ಇಲ್ಲಿಗೆ ಬಂದು ಸ್ನಾತಕೋತ್ತರ ಪದವಿ ಮುಗಿಸಿದ ನಂತರ ಕೆಲಸ ಗಿಟ್ಟಿಸಿಕೊಂಡರೆ ಜೀವನ ಸುಲಭವಾಗುತ್ತಿತ್ತು.
ಆದರೆ, ಈಗ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. ಇಂದು ಭಾರತದಲ್ಲೇ ಎಲ್ಲಾ ರೀತಿಯ ಅವಕಾಶಗಳು ಲಭ್ಯವಿವೆ. ಅಮೆರಿಕದಲ್ಲಿ ಮಾಡಬಹುದಾದ ಕೆಲಸಗಳನ್ನು ಭಾರತದಲ್ಲೇ ಇದ್ದುಕೊಂಡು ಮಾಡಲು ಸಾಧ್ಯವಿದೆ ಎಂದು ಹೇಳಿದ್ದಾರೆ.

ಅಮೆರಿಕದಲ್ಲೂ ಅನ್ಯತೆಯ ಭಾವನೆ!

ಮತ್ತೊಂದೆಡೆ ಮಾತನಾಡಿದ ಪ್ರಿಯಾಂಕಾ, ಇಂದು ಜಾಗತಿಕ ಹೂಡಿಕೆದಾರರು ಮತ್ತು ದೊಡ್ಡ ಉದ್ಯಮಗಳು ಭಾರತದ ಕಡೆಗೆ ಆಕರ್ಷಿತರಾಗುತ್ತಿದ್ದಾರೆ ಹಾಗೂ ದೇಶದಲ್ಲೇ ಹೂಡಿಕೆ ಮಾಡುತ್ತಿದ್ದಾರೆ, ಎಂದಿದ್ದಾರೆ.
ಉದ್ಯೋಗಾವಕಾಶಗಳಷ್ಟೇ ಅಲ್ಲದೆ, ಭಾವನಾತ್ಮಕ ಸವಾಲುಗಳ ಕುರಿತು ಬೆಳಕು ಚೆಲ್ಲಿದ ಸುಹಾಸ್, ಕುಟುಂಬ, ಆತ್ಮೀಯ ಸ್ನೇಹಿತರನ್ನು ತೊರೆದು ವಿದೇಶಕ್ಕೆ ಬರುವುದು ದೊಡ್ಡ ತ್ಯಾಗ. ವರ್ಷಗಳ ಕಾಲ ಅಮೆರಿಕದಲ್ಲಿದ್ದರೂ ನನಗೆ ಇನ್ನೂ ಇಲ್ಲಿ ಸಂಪೂರ್ಣವಾಗಿ ಸ್ವೀಕರಿಸಲ್ಪಟ್ಟಿದ್ದೀನಿ ಎಂಬ ಭಾವನೆ ಬಂದಿಲ್ಲ. ನನಗೇನಾದರೂ ಸಾಧ್ಯವಾಗಿದ್ದರೆ ನಾನು ಭಾರತದಲ್ಲೇ ವಾಸಿಸುತ್ತಿದ್ದೆ, ಎಂದು ತಮ್ಮ ಮನಸ್ಸಿನ ಮಾತನ್ನು ಹಂಚಿಕೊಂಡಿದ್ದಾರೆ.

ಚೀನಾ ಮೂಲದ ವಿದ್ಯಾರ್ಥಿಗಳಿಂದ ಕಲಿಯಬೇಕಿದೆ!

ಇದೇ ಸಂದರ್ಭದಲ್ಲಿ ಚೀನಾ ಮೂಲದ ವಿದ್ಯಾರ್ಥಿಗಳು ಮತ್ತು ವೃತ್ತಿಪರರನ್ನು ಉದಾಹರಣೆಯಾಗಿ ನೀಡಿದ ಈ ದಂಪತಿ, "ಚೀನಾದ ಯುವಕರು ವಿದೇಶಕ್ಕೆ ಬಂದು ಉತ್ತಮ ಶಿಕ್ಷಣ ಪಡೆಯುತ್ತಾರೆ, ಅಲ್ಲಿನ ಜ್ಞಾನ ಮತ್ತು ತಂತ್ರಜ್ಞಾನವನ್ನು ಗ್ರಹಿಸಿ ತಕ್ಷಣವೇ ತಮ್ಮ ತಾಯ್ನಾಡಿಗೆ ಮರಳಿ ದೇಶದ ಪ್ರಗತಿಗೆ ಕೊಡುಗೆ ನೀಡುತ್ತಾರೆ.
ಆದರೆ, ಭಾರತೀಯರು ವಿದೇಶದಲ್ಲೇ ಉಳಿದುಬಿಡುತ್ತಾರೆ. ಈ ವಿಚಾರದಲ್ಲಿ ನಾವು ಚೀನಾದವರಿಂದ ಕಲಿಯುವುದು ಸಾಕಷ್ಟಿದೆ," ಎಂದು ಸುಹಾಸ್ ಮತ್ತು ಪ್ರಿಯಾಂಕಾ ಅಭಿಪ್ರಾಯಪಟ್ಟಿದ್ದಾರೆ.

ಅನೇಕರು ಇವರ ಸಲಹೆಯನ್ನು ಬೆಂಬಲಿಸಿದರೆ, ಇನ್ನು ಕೆಲವರು ವಿದೇಶಿ ಜೀವನದ ವಾಸ್ತವತೆಯನ್ನು ಬಿಚ್ಚಿಟ್ಟಿದ್ದಕ್ಕಾಗಿ ದಂಪತಿಗೆ ಧನ್ಯವಾದ ತಿಳಿಸಿದ್ದಾರೆ (ಏಜೆನ್ದೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net