

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ದೇಶದ ಕೇಂದ್ರೀಯ ಬ್ಯಾಂಕ್ ಆದ ಫೆಡರಲ್ ರಿಸರ್ವ್ (ಎಫ್ಇಡಿ) ನಡುವಿನ ಸಂಘರ್ಷ ಜಾಗತಿಕ ಆರ್ಥಿಕ ವಲಯದಲ್ಲಿ ನಿರಂತರ ಚರ್ಚೆಯ ವಿಷಯವಾಗಿದೆ. ಇತ್ತೀಚೆಗಷ್ಟೇ ಶ್ವೇತಭವನದಲ್ಲಿ ಮಾತನಾಡಿದ ಟ್ರಂಪ್, ಫೆಡರಲ್ ರಿಸರ್ವ್ ರಾಜಕೀಯ ಪ್ರೇರಿತ ಸಂಸ್ಥೆಯಾಗಿ ವರ್ತಿಸುತ್ತಿದ್ದು, ಅಮೆರಿಕದ ಬಡ್ಡಿದರಗಳನ್ನು ಅತ್ಯಂತ ಹೆಚ್ಚಿನ ಮಟ್ಟದಲ್ಲಿ ಇರಿಸಿದೆ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಭಾರತದ ಶೇಕಡ 7ರಷ್ಟು ಜಿಡಿಪಿ ಬೆಳವಣಿಗೆ ಮತ್ತು ಬಡ್ಡಿದರ ನೀತಿಯನ್ನು ಉದಾಹರಣೆಯಾಗಿ ನೀಡಿದ ಅವರು, ಅಮೆರಿಕದಲ್ಲಿ ಬಡ್ಡಿದರಗಳನ್ನು ಇಳಿಸಿದರೆ ದೇಶದ ಆರ್ಥಿಕ ವೃದ್ಧಿ ದರ ಶೇ.15ರಿಂದ ಶೇ.20ಕ್ಕೆ ತಲುಪಬಹುದು ಎಂದು ಪ್ರತಿಪಾದಿಸಿದ್ದಾರೆ.
ಅಮೆರಿಕದ ಕಾಂಗ್ರೆಸ್ (ಸಂಸತ್ತು) ಫೆಡರಲ್ ರಿಸರ್ವ್ಗೆ ಎರಡು ಪ್ರಮುಖ ಜವಾಬ್ದಾರಿಗಳನ್ನು ನೀಡಿದೆ. ಇದನ್ನು ಆರ್ಥಿಕ ಪರಿಭಾಷೆಯಲ್ಲಿ ದ್ವಿಮುಖ ಆದೇಶ ಎಂದು ಕರೆಯಲಾಗುತ್ತದೆ:
ಬೆಲೆ ಸ್ಥಿರತೆ: ದೇಶದಲ್ಲಿ ಹಣದುಬ್ಬರವನ್ನು ನಿಯಂತ್ರಣದಲ್ಲಿಡುವುದು ಫೆಡರಲ್ ರಿಸರ್ವ್ನ ಪ್ರಮುಖ ಜವಾಬ್ದಾರಿ. ಫೆಡ್ ತನ್ನ ದೀರ್ಘಕಾಲೀನ ಹಣದುಬ್ಬರ ಗುರಿಯನ್ನು ಶೇ.2ಕ್ಕೆ ನಿಗದಿಪಡಿಸಿಕೊಂಡಿದೆ.
ಗರಿಷ್ಠ ಉದ್ಯೋಗ: ಆರ್ಥಿಕತೆಯಲ್ಲಿ ನಿರುದ್ಯೋಗ ದರವನ್ನು ಕನಿಷ್ಠ ಮಟ್ಟದಲ್ಲಿಟ್ಟು, ಗರಿಷ್ಠ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಹೊಣೆಗಾರಿಕೆಯೂ ಫೆಡ್ನದ್ದಾಗಿದೆ.
ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆ: ಫೆಡರಲ್ ರಿಸರ್ವ್ನ ನೀತಿ ನಿರೂಪಣಾ ಸಮಿತಿಯಾದ ಫೆಡರಲ್ ಓಪನ್ ಮಾರ್ಕೆಟ್ ಕಮಿಟಿ (ಎಫ್ಒಎಂಸಿ) ವರ್ಷಕ್ಕೆ ಸಾಮಾನ್ಯವಾಗಿ ಎಂಟು ಬಾರಿ ಸಭೆ ಸೇರಿ ಬಡ್ಡಿದರಗಳ ಕುರಿತು ನಿರ್ಧಾರವನ್ನು ತೆಗೆದುಕೊಳ್ಳುತ್ತದೆ. ಈ ಸಮಿತಿಯು ನಿಗದಿಪಡಿಸುವ ದರವನ್ನು ಫೆಡರಲ್ ಫಂಡ್ಸ್ ರೇಟ್ (ಎಫ್ಎಫ್ಆರ್) ಎನ್ನಲಾಗುತ್ತದೆ. ಸಮಿತಿಯು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ, ಕೇವಲ ಆರ್ಥಿಕ ದತ್ತಾಂಶಗಳಾದ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ), ವೈಯಕ್ತಿಕ ಬಳಕೆಯ ವೆಚ್ಚ (ಪಿಸಿಇ), ನಿರುದ್ಯೋಗ ದರ, ಉದ್ಯೋಗಸೃಷ್ಟಿ ಮತ್ತು ಜಿಡಿಪಿ ಬೆಳವಣಿಗೆಯನ್ನು ಆಧರಿಸಿ ಬಡ್ಡಿದರ ಏರಿಸಬೇಕೇ, ಇಳಿಸಬೇಕೇ ಅಥವಾ ಯಥಾಸ್ಥಿತಿ ಕಾಯ್ದುಕೊಳ್ಳಬೇಕೇ ಎಂದು ಮತದಾನದ ಮೂಲಕ ತೀರ್ವನಿ ಸುತ್ತದೆ. ಪ್ರಸ್ತುತ (2026ರ ನವೆಂಬರ್ ವೇಳೆಗೆ) ಹಣದುಬ್ಬರವು ಶೇ.3ಕ್ಕಿಂತ ಹೆಚ್ಚಿರುವ ಕಾರಣ, ಫೆಡ್ ತನ್ನ ಬಡ್ಡಿದರವನ್ನು ಶೇ.3.75-4.00ರ ಶ್ರೇಣಿಯಲ್ಲಿ ಕಾಯ್ದುಕೊಂಡಿದೆ.
ಬಡ್ಡಿ ದರಗಳ ಪರಿಣಾಮಗಳು
ಬಡ್ಡಿದರಗಳಲ್ಲಿ ಫೆಡರಲ್ ರಿಸರ್ವ್ ಮಾಡುವ ಸಣ್ಣ ಬದಲಾವಣೆಯೂ ಅಮೆರಿಕದ ಜನಸಾಮಾನ್ಯರಿಂದ ಹಿಡಿದು ಜಾಗತಿಕ ಷೇರು ಮಾರುಕಟ್ಟೆಗಳವರೆಗೆ ನೇರ ಪರಿಣಾಮ ಬೀರುತ್ತದೆ. ಆರ್ಥಿಕತೆಯಲ್ಲಿ ಹಣದುಬ್ಬರ ಮಿತಿಮೀರಿದಾಗ ಫೆಡ್ ಬಡ್ಡಿದರವನ್ನು ಹೆಚ್ಚಿಸುತ್ತದೆ. ಇದರಿಂದ ಬ್ಯಾಂಕುಗಳು ನೀಡುವ ಗೃಹ ಸಾಲ, ವಾಹನ ಸಾಲ, ಕ್ರೆಡಿಟ್ ಕಾರ್ಡ್ ಮತ್ತು ವಾಣಿಜ್ಯ ಸಾಲಗಳು ದುಬಾರಿಯಾಗುತ್ತವೆ. ಪರಿಣಾಮವಾಗಿ ಜನರು ಮತ್ತು ಕಂಪನಿಗಳು ವೆಚ್ಚ ಮಾಡುವುದನ್ನು ಹಾಗೂ ಹೊಸ ಹೂಡಿಕೆಗಳನ್ನು ಕಡಿಮೆ ಮಾಡುತ್ತಾರೆ. ಬೇಡಿಕೆ ಕುಸಿದಂತೆ ಸರಕು ಮತ್ತು ಸೇವೆಗಳ ಬೆಲೆಗಳು ಇಳಿಕೆಯಾಗಿ ಹಣದುಬ್ಬರ ನಿಯಂತ್ರಣಕ್ಕೆ ಬರುತ್ತದೆ. ಆದರೆ, ಇದರ ಅಡ್ಡಪರಿಣಾಮವಾಗಿ ಆರ್ಥಿಕ ಬೆಳವಣಿಗೆ ನಿಧಾನವಾಗಬಹುದು ಮತ್ತು ನಿರುದ್ಯೋಗ ಹೆಚ್ಚಾಗಬಹುದು.
ಆರ್ಥಿಕ ಹಿಂಜರಿತದ ಭೀತಿ ಎದುರಾದಾಗ ಅಥವಾ ಉದ್ಯೋಗ ಸೃಷ್ಟಿ ಕುಂಠಿತವಾದಾಗ ಫೆಡ್ ಬಡ್ಡಿದರವನ್ನು ಕಡಿತಗೊಳಿಸುತ್ತದೆ. ಸಾಲಗಳು ಅಗ್ಗವಾಗುವುದರಿಂದ ಉದ್ಯಮಿಗಳು ಹೊಸ ಕಾರ್ಖಾನೆಗಳನ್ನು ಸ್ಥಾಪಿಸಲು ಮತ್ತು ಜನರು ಮನೆ, ವಾಹನಗಳನ್ನು ಖರೀದಿಸಲು ಮುಂದಾಗುತ್ತಾರೆ. ಇದರಿಂದ ಮಾರುಕಟ್ಟೆಯಲ್ಲಿ ಹಣದ ಹರಿವು ಹೆಚ್ಚಾಗಿ ಜಿಡಿಪಿ ವೇಗವಾಗಿ ಬೆಳೆಯುತ್ತದೆ. ಆದರೆ, ಅತಿಯಾದ ಹಣದ ಹರಿವು ಮತ್ತೆ ಹಣದುಬ್ಬರಕ್ಕೆ (ಬೆಲೆ ಏರಿಕೆಗೆ) ದಾರಿ ಮಾಡಿಕೊಡುವ ಅಪಾಯವಿರುತ್ತದೆ.
ಅಮೆರಿಕನ್ ಡಾಲರ್ ವಿಶ್ವದ ಪ್ರಮುಖ ಮೀಸಲು ಕರೆನ್ಸಿಯಾಗಿರುವುದರಿಂದ, ಫೆಡ್ ಬಡ್ಡಿದರ ಏರಿಸಿದಾಗ ಜಾಗತಿಕ ಹೂಡಿಕೆದಾರರು ಭಾರತದಂತಹ ಅಭಿವೃದ್ಧಿಶೀಲ ಮಾರುಕಟ್ಟೆಗಳಿಂದ ಬಂಡವಾಳ ಹಿಂಪಡೆದು ಅಮೆರಿಕದ ಬಾಂಡ್ಗಳಲ್ಲಿ ಹೂಡಿಕೆ ಮಾಡುತ್ತಾರೆ. ಇದರಿಂದ ರೂಪಾಯಿ ಮೌಲ್ಯ ಕುಸಿಯುವುದು ಮತ್ತು ಆಮದು ವೆಚ್ಚ ಹೆಚ್ಚಾಗುವಂತಹ ಸವಾಲುಗಳು ಎದುರಾಗುತ್ತವೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಫೆಡರಲ್ ರಿಸರ್ವ್ ವಿರುದ್ಧ ಗುಡುಗಿದ್ದಾರೆ. ‘ಅಮೆರಿಕದಲ್ಲಿ ಉತ್ತಮ ಆರ್ಥಿಕ ಅಂಕಿಅಂಶಗಳು ಇದ್ದಾಗಲೂ ಫೆಡರಲ್ ರಿಸರ್ವ್ ಬಡ್ಡಿ ದರ ಹೆಚ್ಚಿಸುವುದು ಸರಿಯಲ್ಲ. ಹೆಚ್ಚಿನ ಬಡ್ಡಿದರ ಆರ್ಥಿಕ ಬೆಳವಣಿಗೆಗೆ ಅಡ್ಡಿಯಾಗುತ್ತಿದೆ’ ಎಂದಿದ್ದಾರೆ. ಅಷ್ಟಕ್ಕೂ, ಟ್ರಂಪ್ ಮತ್ತು ಫೆಡರಲ್ ರಿಸರ್ವ್ ನಡುವೆ ಬಡ್ಡಿದರಗಳ ವಿಚಾರವಾಗಿ ಹಲವು ವರ್ಷಗಳಿಂದ ಹಗ್ಗಜಗ್ಗಾಟ ನಡೆಯುತ್ತಿದ್ದು, ಈ ಕುರಿತಾದ ವಿವರ ಇಲ್ಲಿದೆ.
ಅಮೆರಿಕದಲ್ಲಿ ಹಣದುಬ್ಬರ ಶೇ.2ಕ್ಕಿಂತ ಹೆಚ್ಚು
ಅಮೆರಿಕದಲ್ಲಿ ಹಣದುಬ್ಬರ ದರವು ಫೆಡರಲ್ ರಿಸರ್ವ್ ನಿಗದಿಪಡಿಸಿದ ಶೇ.2ರ ಗುರಿಗಿಂತ ಹೆಚ್ಚಿರುವ ಸಮಯದಲ್ಲಿಯೇ ಡೊನಾಲ್ಡ್ ಟ್ರಂಪ್ ಫೆಡ್ ವಿರುದ್ಧ ಹರಿಹಾಯ್ದಿದ್ದಾರೆ. ಸೆಪ್ಟೆಂಬರ್ನಲ್ಲಿ ಹಣದುಬ್ಬರ ದರ ಶೇ.3.6ರಷ್ಟಿತ್ತು. ಅದೇ ಸಮಯದಲ್ಲಿ, ಆಹಾರ ಪದಾರ್ಥಗಳು ಮತ್ತು ಇಂಧನದ ಬೆಲೆಗಳನ್ನು ಹೊರತುಪಡಿಸಿ ಲೆಕ್ಕಹಾಕಲಾಗುವ ಕೋರ್ ಹಣದುಬ್ಬರ ದರವು ಶೇ.3.1ರಷ್ಟು ದಾಖಲಾಗಿದೆ.
ಡೊನಾಲ್ಡ್ ಟ್ರಂಪ್ ಮತ್ತು ಫೆಡರಲ್ ರಿಸರ್ವ್ ನಡುವಿನ ಸಂಘರ್ಷ ಇಂದಿನದಲ್ಲ; ಇದು ಅವರ ಮೊದಲ ಅಧ್ಯಕ್ಷೀಯ ಅವಧಿಯಿಂದಲೂ (2017-2021) ನಡೆದುಕೊಂಡು ಬಂದಿದೆ. 2017ರಲ್ಲಿ ಟ್ರಂಪ್ ಅವರೇ ಜೆರೋಮ್ ಪೊವೆಲ್ ಅವರನ್ನು ಫೆಡರಲ್ ರಿಸರ್ವ್ ಅಧ್ಯಕ್ಷರನ್ನಾಗಿ ನೇಮಿಸಿದ್ದರು. ಆದರೆ 2018ರಲ್ಲಿ ಪೊವೆಲ್ ಹಣದುಬ್ಬರ ನಿಯಂತ್ರಿಸಲು ಬಡ್ಡಿದರಗಳನ್ನು ಏರಿಸಲು ಆರಂಭಿಸಿದಾಗ ಟ್ರಂಪ್ ಕೆಂಡಾಮಂಡಲರಾದರು. ‘ಫೆಡ್ ಅಮೆರಿಕದ ಆರ್ಥಿಕತೆಗೆ ಅತಿ ದೊಡ್ಡ ಬೆದರಿಕೆ’ ಎಂದು ಕರೆದ ಟ್ರಂಪ್, ಪೊವೆಲ್ ಅವರನ್ನು ವಜಾಗೊಳಿಸುವ ಬೆದರಿಕೆ ಹಾಕಿದ್ದರು. ಸಾಮಾನ್ಯವಾಗಿ, ಅಮೆರಿಕದ ಅಧ್ಯಕ್ಷರು ಕೇಂದ್ರೀಯ ಬ್ಯಾಂಕ್ನ ಸ್ವಾಯತ್ತತೆಯನ್ನು ಗೌರವಿಸಿ ಸಾರ್ವಜನಿಕ ಟೀಕೆಗಳಿಂದ ದೂರವಿರುತ್ತಾರೆ. ಆದರೆ ಟ್ರಂಪ್ ಆ ಸಂಪ್ರದಾಯವನ್ನು ಮುರಿದು ನಿರಂತರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಫೆಡ್ ವಿರುದ್ಧ ಹರಿಹಾಯ್ದರು.
ಎರಡನೇ ಅವಧಿಗೆ (2025) ಟ್ರಂಪ್ ಮತ್ತೆ ಅಧಿಕಾರಕ್ಕೆ ಬಂದ ನಂತರವೂ ಈ ಸಂಘರ್ಷ ತೀವ್ರ ಸ್ವರೂಪ ಪಡೆಯಿತು. 2025ರಲ್ಲಿ ಟ್ರಂಪ್ ಫೆಡರಲ್ ರಿಸರ್ವ್ ಕಟ್ಟಡದ ನವೀಕರಣ ವೆಚ್ಚದ ವಿಚಾರವಾಗಿ ಅನಿರೀಕ್ಷಿತವಾಗಿ ಕಚೇರಿಗೆ ಭೇಟಿ ನೀಡಿ ಪೊವೆಲ್ ಅವರನ್ನು ಮುಜುಗರಕ್ಕೀಡುಮಾಡಿದ್ದರು. ಅಲ್ಲದೆ, ಈ ನವೀಕರಣದ ಕುರಿತು ಕಾಂಗ್ರೆಸ್ಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ಆರೋಪದ ಮೇಲೆ ನ್ಯಾಯಾಂಗ ಇಲಾಖೆಯು ಪೊವೆಲ್ ವಿರುದ್ಧ ತನಿಖೆಯನ್ನೂ ಆರಂಭಿಸಿತ್ತು (ನಂತರ 2026ರ ಏಪ್ರಿಲ್ನಲ್ಲಿ ಈ ತನಿಖೆಯನ್ನು ಕೈಬಿಡಲಾಯಿತು). 2026ರ ಮೇನಲ್ಲಿ ಜೆರೋಮ್ ಪೊವೆಲ್ ಅವರ ಫೆಡ್ ಅಧ್ಯಕ್ಷೀಯ ಅವಧಿ ಮುಕ್ತಾಯಗೊಂಡಾಗ, ಟ್ರಂಪ್ ತಮ್ಮ ಆರ್ಥಿಕ ನಿಲುವುಗಳಿಗೆ ಪೂರಕವಾಗಿರಬಹುದು ಎಂಬ ನಿರೀಕ್ಷೆಯೊಂದಿಗೆ ಕೆವಿನ್ ವಾರ್ಷ್ ಅವರನ್ನು ಫೆಡರಲ್ ರಿಸರ್ವ್ನ ನೂತನ ಅಧ್ಯಕ್ಷರನ್ನಾಗಿ ನೇಮಿಸಿದರು.
ಕೆವಿನ್ ವಾರ್ಷ್ ಅಧಿಕಾರ ವಹಿಸಿಕೊಂಡ ನಂತರ ಬಡ್ಡಿದರಗಳನ್ನು ತೀವ್ರವಾಗಿ ಕಡಿತಗೊಳಿಸುತ್ತಾರೆ ಎಂದು ಟ್ರಂಪ್ ನಿರೀಕ್ಷಿಸಿದ್ದರು. ಆದರೆ, 2026ರ ದ್ವಿತೀಯಾರ್ಧದಲ್ಲಿ ಹಣದುಬ್ಬರ ಮತ್ತೆ ಏರಿಕೆಯಾದ ಕಾರಣ, ವಾರ್ಷ್ ನೇತೃತ್ವದ ಫೆಡರಲ್ ಓಪನ್ ಮಾರ್ಕೆಟ್ ಕಮಿಟಿ (ಎಫ್ಒಎಂಸಿ) 2026ರ ಸೆಪ್ಟೆಂಬರ್ನಲ್ಲಿ ಬಡ್ಡಿದರವನ್ನು 25 ಬೇಸಿಸ್ ಪಾಯಿಂಟ್ಗಳಷ್ಟು ಹೆಚ್ಚಿಸಿ ಶೇ.3.75ರಿಂದ ಶೇ. 4.00ಕ್ಕೆ ತಂದಿತು. ಇದರಿಂದ ಅಸಮಾಧಾನಗೊಂಡಿರುವ ಟ್ರಂಪ್, ‘ನಾನು ಅಧ್ಯಕ್ಷರನ್ನು ದೂಷಿಸುತ್ತಿಲ್ಲ, ಆದರೆ ಇಡೀ ಫೆಡರಲ್ ವ್ಯವಸ್ಥೆಯೇ ರಾಜಕೀಯವಾಗಿದೆ. ದೇಶದ ಆರ್ಥಿಕ ಅಂಕಿಅಂಶಗಳು ಉತ್ತಮವಾಗಿದ್ದಾಗ ಬಡ್ಡಿದರ ಇಳಿಸಬೇಕೇ ಹೊರತು ಏರಿಸಬಾರದು’ ಎಂದು ವಾದಿಸಿದ್ದಾರೆ.
ಆದರೆ, ಟ್ರಂಪ್ ಅವರ ವಾದ ರಾಜಕೀಯ ಮತ್ತು ತಕ್ಷಣದ ಆರ್ಥಿಕ ವೇಗವನ್ನು ಕೇಂದ್ರೀಕರಿಸಿದೆ. ಕಡಿಮೆ ಬಡ್ಡಿದರಗಳಿದ್ದರೆ ವ್ಯಾಪಾರ-ವಹಿವಾಟು ವೃದ್ಧಿಸಿ, ಷೇರು ಮಾರುಕಟ್ಟೆ ಜಿಗಿದು, ಸರ್ಕಾರದ ಸಾಲದ ಮೇಲಿನ ಬಡ್ಡಿ ಹೊರೆ ತಗ್ಗುತ್ತದೆ ಎಂಬುದು ಅವರ ಲೆಕ್ಕಾಚಾರ. ಮತ್ತೊಂದೆಡೆ, ಆರ್ಥಿಕ ತಜ್ಞರು ಮತ್ತು ಫೆಡರಲ್ ರಿಸರ್ವ್ ಪ್ರಕಾರ, ಆರ್ಥಿಕತೆ ವೇಗವಾಗಿ ಬೆಳೆಯುತ್ತಿರುವಾಗ ಬಡ್ಡಿದರ ಇಳಿಸಿದರೆ ಹಣದುಬ್ಬರ ನಿಯಂತ್ರಣ ತಪ್ಪಿ ಅದು ದೀರ್ಘಕಾಲೀನ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗುತ್ತದೆ. ಒಟ್ಟಾರೆಯಾಗಿ, ರಾಜಕೀಯ ನಾಯಕರ ಅಲ್ಪಾವಧಿಯ ಜನಪ್ರಿಯ ಗುರಿಗಳು ಮತ್ತು ಕೇಂದ್ರೀಯ ಬ್ಯಾಂಕ್ನ ದೀರ್ಘಾವಧಿಯ ಆರ್ಥಿಕ ಸ್ಥಿರತೆಯ ನಡುವಿನ ಈ ತಿಕ್ಕಾಟ ಅಮೆರಿಕದ ಆರ್ಥಿಕ ನೀತಿಯ ಅತ್ಯಂತ ಸೂಕ್ಷ ್ಮ ಸವಾಲಾಗಿ ಮುಂದುವರಿದಿದೆ.
ಭಾರತದ ಆರ್ಥಿಕತೆಯು ಕಳೆದ ಐದು ವರ್ಷಗಳಿಂದ ನಿರಂತರವಾಗಿ ಶೇಕಡ 7ಕ್ಕಿಂತ ಹೆಚ್ಚಿನ ವೇಗದಲ್ಲಿ ಬೆಳೆಯುತ್ತಿದೆ. 2021-22ರಲ್ಲಿ ಜಿಡಿಪಿ ಬೆಳವಣಿಗೆ ಶೇ.9ರಷ್ಟಿತ್ತು. ಇದರ ನಂತರವೂ ಅಭಿವೃದ್ಧಿ ದರವು ಶೇ.7ಕ್ಕಿಂತ ಮೇಲೆಯೇ ಮುಂದುವರಿದಿದೆ. 20 25-26ನೇ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯು ಶೇ.7.6ರ ದರದಲ್ಲಿ ಬೆಳೆದಿದೆ. ಪ್ರಪಂಚದ ದೊಡ್ಡ ಆರ್ಥಿಕತೆ ಗಳೊಂದಿಗೆ ಹೋಲಿಸಿದರೆ, ಭಾರತದ ಬೆಳವಣಿಗೆ ಸಾಕಷ್ಟು ವೇಗವಾಗಿದೆ. ಚೀನಾದ ಆರ್ಥಿಕತೆಯು ಶೇ.4.5ರಿಂದ 4.8, ಅಮೆರಿಕದ ಆರ್ಥಿಕತೆಯು ಶೇ.2.1ರಿಂದ 2.3 ಮತ್ತು ಯುರೋಪ್ನ ಆರ್ಥಿಕತೆಯು ಶೇ.1ರ ವೇಗದಲ್ಲಿ ಬೆಳೆಯುತ್ತಿದೆ. ಭಾರತದ ಈ ವೇಗದ ಬೆಳವಣಿಗೆಯ ಹಿಂದೆ ದೇಶೀಯ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಬೇಡಿಕೆ, ರಸ್ತೆ-ರೈಲ್ವೆಯಂತಹ ಮೂಲಸೌಕರ್ಯಗಳ ಮೇಲಿನ ಸರ್ಕಾರಿ ವೆಚ್ಚ ಮತ್ತು ಸೇವಾ ವಲಯದ (ಸರ್ವಿಸ್ ಸೆಕ್ಟರ್) ದೊಡ್ಡ ಪಾತ್ರವಿದೆ.