ಹೊರ್ಮುಜ್ ಜಲಸಂಧಿಗೆ 'ಟ್ರಂಪ್ ಜಲಸಂಧಿ' ಎಂದು ಹೆಸರಿಡಲು ಪ್ಲಾನ್: ಇರಾನ್ ಸಂಘರ್ಷದ ನಡುವೆ ಅಮೆರಿಕ ಅಧ್ಯಕ್ಷರ ಪ್ರಪೋಸಲ್! | Trump Strait

Trump Strait > ಹೊರ್ಮುಜ್ ಜಲಸಂಧಿಗೆ 'ಟ್ರಂಪ್ ಜಲಸಂಧಿ' ಎಂದು ಹೆಸರಿಡಲು ಪ್ಲಾನ್!
Trump Strait > ಹೊರ್ಮುಜ್ ಜಲಸಂಧಿಗೆ 'ಟ್ರಂಪ್ ಜಲಸಂಧಿ' ಎಂದು ಹೆಸರಿಡಲು ಪ್ಲಾನ್!
Published on
ವಾಷಿಂಗ್ಟನ್: ಅಮೆರಿಕ ಮತ್ತು ಇರಾನ್ ನಡುವೆ ಸಂಘರ್ಷ ತೀವ್ರಗೊಂಡಿರುವ ಬೆನ್ನಲ್ಲೇ, ಪ್ರಮುಖ ಸಮುದ್ರ ಮಾರ್ಗವಾದ ಹೊರ್ಮುಜ್ ಜಲಸಂಧಿಗೆ ಟ್ರಂಪ್ ಜಲಸಂಧಿ (Trump Strait) ಎಂದು ಮರುನಾಮಕರಣ ಮಾಡಬೇಕೇ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಸ್ತಾಪಿಸಿದ್ದಾರೆ.
ಈ ಹೊಸ ಹೆಸರು ಮುಂಚೆಗಿಂತಲೂ ಹೆಚ್ಚು ಹಾಟ್ ಆಗಿರಲಿದೆ ಎಂದು ಹೇಳಿರುವ ಟ್ರಂಪ್​, ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್ ಅನ್ನು ಅಧ್ಯಕ್ಷ ಡೊನಾಲ್ಡ್ ಜೆ. ಟ್ರಂಪ್ ಎಂದು ಕೊನೆಗೊಳಿಸಿದ್ದಾರೆ. ಪ್ರಮುಖ ಭೌಗೋಳಿಕ ಸ್ಥಳಗಳ ಹೆಸರುಗಳನ್ನು ಬದಲಾಯಿಸಲು ಟ್ರಂಪ್ ಈ ಹಿಂದೆ ನಡೆಸಿದ್ದ ಪ್ರಯತ್ನಗಳ ಸಾಲಿಗೆ ಇದು ಹೊಸ ಸೇರ್ಪಡೆಯಾಗಿದೆ. ತಮ್ಮ ಟ್ರೂತ್ ಸೋಶಿಯಲ್​ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಟ್ರಂಪ್, ಈಗ ಜಲಸಂಧಿ ಅಮೆರಿಕದ ನಿಯಂತ್ರಣದಲ್ಲಿದೆ, ಹೀಗಾಗಿ ನಾವು ಹೊರ್ಮುಜ್ ಜಲಸಂಧಿಯ ಹೆಸರನ್ನು ಟ್ರಂಪ್ ಜಲಸಂಧಿ ಎಂದು ಬದಲಾಯಿಸಬೇಕೇ..? ಎಂದು ಪ್ರಶ್ನಿಸಿದ್ದಾರೆ.
ಟ್ರಂಪ್ ನೀಡಿರುವ ಈ ಪ್ರಸ್ತಾಪವು ಕೇವಲ ಹೆಸರಿನ ಕಾರಣಕ್ಕೆ ಮಾತ್ರವಲ್ಲದೆ, ಆ ಜಲಸಂಧಿಯು ಅಮೆರಿಕದ ಭೂಪ್ರದೇಶವೇ ಅಲ್ಲ ಎಂಬ ಕಾರಣಕ್ಕೂ ಭಾರಿ ಚರ್ಚೆಗೆ ಗ್ರಾಸವಾಗಿದೆ. ಇರಾನ್ ಮತ್ತು ಒಮಾನ್ ನಡುವೆ ಇರುವ ಹೊರ್ಮುಜ್ ಜಲಸಂಧಿಯು ಜಾಗತಿಕ ಇಂಧನ ಪೂರೈಕೆಗೆ ಅತ್ಯಂತ ನಿರ್ಣಾಯಕವಾದ ಅಂತಾರಾಷ್ಟ್ರೀಯ ನೌಕಾಯಾನ ಮಾರ್ಗವಾಗಿದೆ. ಪ್ರಸ್ತುತ ನಡೆಯುತ್ತಿರುವ ಸಂಘರ್ಷದಲ್ಲಿ ಇರಾನ್ ಈ ಜಲಸಂಧಿಯ ಮೇಲಿನ ನಿಯಂತ್ರಣವನ್ನು ಕಳೆದುಕೊಂಡಿದೆ ಎಂದು ಟ್ರಂಪ್ ಪದೇ ಪದೇ ಪ್ರತಿಪಾದಿಸುತ್ತಿದ್ದರೂ, ಅದು ಅಮೆರಿಕದ ಭೂಪ್ರದೇಶವಾಗುವುದಿಲ್ಲ.
ಲೇಕ್ ಒಂಟಾರಿಯೊ ಬದಲಿಗೆ ಲೇಕ್ ಅಮೆರಿಕ...?
ಇದೇ ಮಾದರಿಯಲ್ಲಿ, ವ್ಯಾಪಾರ, ಸಾರ್ವಭೌಮತ್ವ ಹಾಗೂ ಕೆನಡಾವನ್ನು ಅಮೆರಿಕದ 51ನೇ ರಾಜ್ಯವನ್ನಾಗಿ ಮಾಡುವ ತಮ್ಮ ಪ್ರಸ್ತಾಪದ ವಿಚಾರವಾಗಿ ಟ್ರಂಪ್ ಈ ಹಿಂದೆ ಕೆನಡಾ ಜೊತೆ ಹಲವು ಬಾರಿ ವಾಕ್ಸಮರ ನಡೆಸಿದ್ದರು. ಈ ವರ್ಷದ ಆರಂಭದಲ್ಲಿ ಟ್ರುತ್ ಸೋಶಿಯಲ್‌ನಲ್ಲಿ ಪೋಸ್ಟ್ ಮಾಡಿದ್ದ ಅವರು, ಲೇಕ್ ಒಂಟಾರಿಯೊ ಸರೊವರವನ್ನು ಲೇಕ್ ಅಮೆರಿಕ ಎಂದು ಉಲ್ಲೇಖಿಸಿದ್ದರು. ಆದರೆ, ಅಂತಾರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಆ ಸರೋವರದ ಹೆಸರು ಬದಲಾಗಿಲ್ಲ. ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಬೆನ್ನಲ್ಲೇ, ಮಂಗಳವಾರ ಹೇಳಿಕೆ ನೀಡಿದ್ದ ಟ್ರಂಪ್​, ಅಮೆರಿಕವು ಹೊರ್ಮುಜ್ ಜಲಸಂಧಿಯ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿದೆ ಮತ್ತು ಇರಾನ್‌ನ ಅರ್ಥವ್ಯವಸ್ಥೆಯು ಸಂಪೂರ್ಣವಾಗಿ ಕುಸಿಯುತ್ತಿದೆ ಎಂದು ಹೇಳಿಕೊಂಡಿದ್ದರು.

ಇರಾನ್ ಜೊತೆ ಮಾತುಕತೆಗೆ ಯತ್ನಿಸುತ್ತಿಲ್ಲ ಎಂದ ಟ್ರಂಪ್

ಟ್ರೂತ್ ಸೋಶಿಯಲ್‌ನಲ್ಲಿ ಈ ಕುರಿತು ಬರೆದುಕೊಂಡಿರುವ ಡೊನಾಲ್ಡ್ ಟ್ರಂಪ್, ತಾವು ಇರಾನ್ ದೇಶವನ್ನು ಮಾತುಕತೆಯ ಮೇಜಿಗೆ ತರಲು ಪ್ರಯತ್ನಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಟೆಹ್ರಾನ್ ಅನ್ನು ಮತ್ತೆ ಸಂಧಾನಕ್ಕೆ ತರಲು ತಾವು ಯತ್ನಿಸುತ್ತಿರುವುದಾಗಿ ಬಂದಿರುವ ವರದಿಗಳನ್ನು ಅವರು ತಳ್ಳಿಹಾಕಿದ್ದಾರೆ. ಎಬಿಸಿ ಫೇಕ್ ನ್ಯೂಸ್ ವರದಿ ಮಾಡಿದಂತೆ ನಾನು ಇರಾನ್ ಅನ್ನು ಮಾತುಕತೆಗೆ ತರಲು ಬಲವಂತ ಮಾಡುತ್ತಿಲ್ಲ. ಅವರ ಪಾಲಿಗೆ ಮೌಲ್ಯವಿಲ್ಲದ ಒಪ್ಪಂದಕ್ಕೆ ಅವರು ಸಹಿ ಹಾಕುತ್ತಾರೋ ಇಲ್ಲವೋ ಎಂಬುದು ನನಗೆ ಅನಗತ್ಯ. ಹೊರ್ಮುಜ್ ಜಲಸಂಧಿಯ ಮೇಲೆ ಬಹುತೇಕ ಸಂಪೂರ್ಣ ನಿಯಂತ್ರಣ ಹೊಂದಿರುವುದು ಹಾಗೂ ಅವರ ಅರ್ಥವ್ಯವಸ್ಥೆ ಸಂಪೂರ್ಣವಾಗಿ ಕುಸಿಯುತ್ತಿರುವುದು, ಈ ಪ್ರಸ್ತುತ ಸ್ಥಿತಿಯೇ ನನಗೆ ಹೆಚ್ಚು ಇಷ್ಟವಾಗಿದೆ. ಅವರು ನಡೆಯಲೇಬೇಕಾದ ಅನಿವಾರ್ಯತೆಯನ್ನು ಎದುರಿಸುತ್ತಿದ್ದಾರೆ ಎಂದು ಟ್ರಂಪ್ ಬರೆದುಕೊಂಡಿದ್ದಾರೆ.
ಇದರ ಜೊತೆಗೆ, ಇರಾನ್ ಜ‌ನತೆಗೆ ತಮ್ಮ ಸರ್ಕಾರದ ವಿರುದ್ಧ ದಂಗೆ ಏಳುವಂತೆ ಕರೆ ನೀಡಿರುವ ಅವರು, ಇರಾನ್‌ನ ಜನ ಯಾವಾಗ ಎದ್ದು ನಿಂತು ಹೋರಾಡುತ್ತಾರೆ..? ಎಂದು ಪ್ರಶ್ನಿಸಿದ್ದಾರೆ.

ಇರಾನ್ ಮೇಲೆ ಕ್ಷಿಪಣಿ ದಾಳಿ ವರದಿ

ಮತ್ತೊಂದೆಡೆ, ನೈಋತ್ಯ ಇರಾನ್‌ನ ಅಹ್ವಾಜ್ ಮತ್ತು ಅಗಾಜಾರಿ ನಗರಗಳ ಬಳಿ ಕ್ಷಿಪಣಿ ದಾಳಿಗಳು ನಡೆದಿವೆ ಎಂದು ಐಆರ್‌ಐಬಿ ವರದಿ ಮಾಡಿದೆ. ಖುಜೆಸ್ತಾನ್ ಗವರ್ನರೇಟ್‌ನ ಭದ್ರತಾ ಮತ್ತು ಕಾನೂನು ಜಾರಿ ವಿಭಾಗದ ಉಪ ಸಚಿವರು ಮಾತನಾಡಿ, ಅಹ್ವಾಜ್ ಮತ್ತು ಅಗಾಜಾರಿ ಸುತ್ತಮುತ್ತಲಿನ ಎರಡು ಸ್ಥಳಗಳ ಮೇಲೆ ಭಯೋತ್ಪಾದಕ ಶತ್ರು ಅಮೆರಿಕ ಕ್ಷಿಪಣಿ ದಾಳಿ ನಡೆಸಿದೆ ಎಂದು ಖಚಿತಪಡಿಸಿದ್ದಾರೆ. ಈ ಕುರಿತು ಹೆಚ್ಚಿನ ವಿವರಗಳನ್ನು ನಂತರ ಘೋಷಿಸಲಾಗುವುದು ಎಂದು ತಿಳಿಸಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net