

ಮಸ್ಕತ್: ಸಾಮಾನ್ಯವಾಗಿ ನಾವು ಬಿಳಿ, ಕಂದು ಹಾಗೂ ಕಪ್ಪು ಬಣ್ಣಗಳ ಮಿಶ್ರಣವುಳ್ಳ ಡಾಲ್ಫಿನ್ಗಳನ್ನು ನೋಡಿರುತ್ತೇವೆ. ಭಾರತದ ರಾಷ್ಟ್ರೀಯ ಜಲಚರ ಕೂಡ ಗಂಗಾನದಿಯ ಡಾಲ್ಫಿನ್ ಆಗಿದೆ. ಮನುಷ್ಯರ ಮಾತುಗಳನ್ನು ಅರ್ಥೈಸಿಕೊಳ್ಳುವ ಈ ಜೀವಿಗಳು ವಿಶೇಷವಾಗಿ ಮಕ್ಕಳೊಂದಿಗೆ ಆತ್ಮೀಯವಾಗಿ ವರ್ತಿಸುತ್ತವೆ.
ಆದರೆ, ಓಮನ್ ದೇಶದ ಮಸ್ಕತ್ನಲ್ಲಿರುವ ಕಂತಾಬ್ ಕಡಲತೀರದಲ್ಲಿ ಕಂಡುಬಂದಿರುವ ಗುಲಾಬಿ ಬಣ್ಣದ ಡಾಲ್ಫಿನ್ ವಿಡಿಯೋವೊಂದು ಈಗ ಸೋಷಿಯಲ್ ಮೀಡಿಯಾನಲ್ಲಿ ಸಖತ್ ವೈರಲ್ ಆಗುತ್ತಿದೆ.
ಈ ಮನಮೋಹಕ ದೃಶ್ಯವು, ಓಮನ್ ದೇಶದ ಕಂತಾಬ್ ಬೀಚ್ನಲ್ಲಿ ಕಂಡುಬಂದಿದ್ದು, ಬೀಚ್ನಲ್ಲಿ ಸ್ಕೀಯಿಂಗ್ ಮಾಡಲು ಹೋಗಿದ್ದ ಪ್ರವಾಸಿಗರು ಈ ದೃಶ್ಯವನ್ನು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ. ಈ ಡಾಲ್ಫಿನ್ ಗಲ್ಫ್ ಆಫ್ ಓಮನ್ನಿನ್ನ ನೀಲಿ ಬಣ್ಣದ ಸಮುದ್ರದಲ್ಲಿ ತನ್ನ ಗುಲಾಬಿ ಬಣ್ಣವನ್ನು ಪ್ರದರ್ಶಿಸುತ್ತಾ, ಮೋಹವಾಗಿ ಚಲಿಸುತ್ತಿರುವ ವಿಡಿಯೋ ನೋಡುಗರ ಮನವನ್ನು ಕದ್ದಿದೆ.
ಸಾಮಾನ್ಯವಾಗಿ ಡಾಲ್ಫಿನ್ಗಳು ಕಂದು, ಬಿಳಿ, ಕಪ್ಪು ಬಣ್ಣದಲ್ಲಿರುತ್ತವೆ. ಆದರೆ ಡಾಲ್ಫಿನ್ಗಳು ಗುಲಾಬಿ ಬಣ್ಣವನ್ನು ಹೇಗೆ ಪಡೆಯುತ್ತವೆ? ಇವು ನಿಜವಾಗಿಯೂ ಗುಲಾಬಿ ಬಣ್ಣದಲ್ಲಿರುತ್ತವೆಯೋ? ಅಥವಾ ನಮ್ಮ ಕಣ್ಣಿಗೆ ಹಾಗೆ ಕಾಣಿಸುತ್ತದೆಯೋ? ಎಂಬ ಪ್ರಶ್ನೆಗೆ ವಿಜ್ಞಾನದಲ್ಲಿಯೇ ಉತ್ತರವಿದೆ.
ಡಾಲ್ಫಿನ್ಗಳಲ್ಲಿ ಗುಲಾಬಿ ಬಣ್ಣ ಎನ್ನುವುದು ಅವು ಜನಿಸಿದ ಪ್ರಭೇದದ ಮೇಲೆ ನಿರ್ಧರಿತವಾಗಿರುತ್ತದೆ. ಈ ಗುಲಾಬಿ ಬಣ್ಣದ ಡಾಲ್ಫಿನ್ಗಳು ಸಿಹಿ ನೀರಿನಲ್ಲಿ ಜನ್ಮತಾಳುತ್ತವೆ, ಅಮೆಜಾನ್ ಅರಣ್ಯ ಪ್ರದೇಶದಲ್ಲಿ ಬೊಟೊ ಎಂಬ ತಳಿಯಲ್ಲಿ ಈ ಗುಲಾಬಿ ಬಣ್ಣದ ಡಾಲ್ಫಿನ್ಗಳು ಜನ್ಮತಾಳುತ್ತವೆ ಎನ್ನುತ್ತಾರೆ.
ಡಾಲ್ಫಿನ್ಗಳ ಸ್ಕೇಲ್ಗಳ ಬಣ್ಣ ಬದಲಾದಂತೆ ಅವುಗಳ ಬಣ್ಣ ಬದಲಾಗುತ್ತದೆ. ಈ ಜೀವಿಗಳು ವಾಸಿಸುವ ಪ್ರದೇಶ, ಸೇವಿಸುವ ಆಹಾರ ಹಾಗೂ ಪರಿಸರ ವ್ಯವಸ್ಥೆ ಆಧಾರದಲ್ಲಿ ಅವುಗಳ ಬಣ್ಣ ಬದಲಾಗುತ್ತದೆ ಎಂದು ತಿಳಿದುಬಂದಿದೆ. ಆದರೆ, ಈ ಗುಲಾಬಿ ಬಣ್ಣದ ಡಾಲ್ಫಿನ್ಗಳು ತೀರಾ ಅಪರೂಪ ಎಂದು ಹೇಳಲಾಗುತ್ತದೆ, (ಏಜೆನ್ಸೀಸ್).