ಏನಿದು ಪರ್ಪಲ್​ ಟ್ಯೂಬರ್​? ವಿದೇಶಿ ಬೇಕರಿಯ ಹಾಟ್ ಫೇವರೆಟ್ ಸಿಹಿ ಗಡ್ಡೆ​ಗೆ ತಟ್ಟಿತು ಫಿಲಿಪೈನ್ಸ್​​ ಬ್ಯಾನ್​ | Purple Gold Rush

ಇದರಿಂದ ಮಾಡುವ ಸಿಹಿ ತಿನಿಸುಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿ, ಉಬೆಯ ರಫ್ತು ಡಿಮಾಂಡ್​ ಅನ್ನು ವಿಪರೀತವಾಗಿ ಏರಿಸಿತು. ಇಷ್ಟು ಡಿಮಾಂಡ್​ ಸೃಷ್ಟಿಯಾಗಿರುವಾಗಲೇ ಹೊಸ ಬಿಕ್ಕಟ್ಟೊಂದು ಇದೀಗ ಎದುರಾಗಿದೆ.
Purple Gold Rush
ಏನಿದು ಪರ್ಪಲ್​ ಟ್ಯೂಬರ್​? ವಿದೇಶಿ ಬೇಕರಿಯ ಹಾಟ್ ಫೇವರೆಟ್ ಸಿಹಿ ಗಡ್ಡೆ​ಗೆ ತಟ್ಟಿತು ಫಿಲಿಫೈನ್ಸ್​​ ಬ್ಯಾನ್​ | Purple Gold Rush
Published on: 

Purple Gold Rush: ಮೊದಲ ನೋಟಕ್ಕೆ ಇದೊಂದು ಸಾಮಾನ್ಯ ಗೆಡ್ಡೆಯಂತೆ ಕಾಣಿಸಿದರೂ ಇದನ್ನು ಕತ್ತರಿಸಿದಾಗ, ಇದರೊಳಗಿನ ಆಕರ್ಷಕ ನೇರಳೆ ಬಣ್ಣವು ಒಂದು ನಿಮಿಷ ಏನಪ್ಪ ಇದು? ಎಂದು ಹುಬ್ಬೇರಿಸುವಂತೆ ಮಾಡುತ್ತದೆ. ಆ ಮಟ್ಟಿಗಿನ ಆಕರ್ಷಕ ಹಾಗೂ ನೈಸರ್ಗಿಕ ನೇರಳೆ ಬಣ್ಣ ಇದರಲ್ಲಿದೆ. ಇದು ಸಿಹಿ ಮತ್ತು ಬೀಜಗಳನ್ನು ಒಳಗೊಂಡಿರುವ ರುಚಿಯನ್ನು ಹೊಂದಿರುವ ಫಿಲಿಪೈನ್ಸ್​ ದೇಶದ ಅತ್ಯಂತ ಜನಪ್ರಿಯ ಬೆಳೆ ಉಬೆ (Ube).

ಲಂಡನ್​, ಅಮೆರಿಕ ಸೇರಿದಂತೆ ಜಾಗತಿಕ ಕೆಫೆ ಸಂಸ್ಕೃತಿಯಿಂದಾಗಿ ವಿಶ್ವಪ್ರಸಿದ್ಧಿ ಆಗಿರುವ ಈ ನೇರಳೆ ಬಣ್ಣದ ಗೆಡ್ಡೆಗೆ ಸಖತ್ ಡಿಮಾಂಡ್​ ಇದೆ. ಈ ಮೊದಲು ಫಿಲಿಪೈನ್ಸ್‌ನ ಸಾಂಪ್ರದಾಯಿಕ ಅಡುಗೆ ಪದ್ಧತಿಯ ಭಾಗವಾಗಿದ್ದ ಉಬೆ, ಈಗ ಲಂಡನ್‌ನಿಂದ ನ್ಯೂಯಾರ್ಕ್‌ನವರೆಗಿನ ಕೆಫೆಗಳು, ಬೇಕರಿಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಹೆಚ್ಚು ಜನಪ್ರಿಯವಾಗಿದೆ. ಇದರಿಂದ ಮಾಡುವ ಸಿಹಿ ತಿನಿಸುಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿ, ಉಬೆಯ ರಫ್ತು ಡಿಮಾಂಡ್​ ಅನ್ನು ವಿಪರೀತವಾಗಿ ಏರಿಸಿತು. ಇಷ್ಟು ಡಿಮಾಂಡ್​ ಸೃಷ್ಟಿಯಾಗಿರುವಾಗಲೇ ಹೊಸ ಬಿಕ್ಕಟ್ಟೊಂದು ಇದೀಗ ಎದುರಾಗಿದೆ.

ತಾಜಾ ಉಬೆ ಹಾಗೂ ತಳಿ

ಉಬೆಯ ಪ್ರಮುಖ ಹಾಗೂ ಮೂಲ ಉತ್ಪಾದಕ ದೇಶವಾಗಿರುವ ಫಿಲಿಪೈನ್ಸ್, ಉಬೆ ಮತ್ತು ಅದರ ನಾಟಿ ಮಾಡುವ ಸಾಮಗ್ರಿಗಳ (ಬಿತ್ತನೆಗೆ ಬಳಸುವ ಭಾಗಗಳು) ರಫ್ತನ್ನು ಅನಿರ್ದಿಷ್ಟ ಅವಧಿಗೆ ಸ್ಥಗಿತಗೊಳಿಸಿದೆ. ಈ ನಿರ್ಬಂಧಗಳು ಆಗಸ್ಟ್ ಮಧ್ಯಭಾಗದಿಂದ ಜಾರಿಗೆ ಬಂದಿದ್ದು, ಆಹಾರ, ಕೃಷಿ ಮತ್ತು ಸಂಶೋಧನಾ ಉದ್ದೇಶಗಳಿಗಾಗಿ ಕಳುಹಿಸಲಾಗುವ ತಾಜಾ ಉಬೆ ಹಾಗೂ ತಳಿ ಅಭಿವೃದ್ಧಿಗಾಗಿ ಬಳಸುವ ನಾಟಿ ಸಾಮಗ್ರಿಗಳು ಈ ನಿಷೇಧದ ವ್ಯಾಪ್ತಿಗೆ ಒಳಪಟ್ಟಿವೆ. ಇದರಿಂದ ವಿದೇಶಿ ಕೆಫೆಗಳಿಗೆ ದೊಡ್ಡ ಹೊಡೆತ ಬಿದ್ದಿದೆ. ದೇಶದೊಳಗೆ ಕೃಷಿಗೆ ಅಗತ್ಯವಿರುವ ನಾಟಿ ಸಾಮಗ್ರಿಗಳ ಕೊರತೆ ಎದುರಾದ ಬೆನ್ನಲ್ಲೇ ಫಿಲಿಫೈನ್ಸ್​ ಈ ಕಟು ನಿರ್ಧಾರವನ್ನು ಕೈಗೊಂಡಿದ್ದಾಗಿ ವಿವರಿಸಿದೆ.

ಅಲ್ಲದೆ, ಫಿಲಿಪೈನ್ಸ್‌ನ ವಿಶೇಷ ತಳಿಯಾಗಿರುವ ಈ ಉಬೆಯನ್ನು ಇತರ ದೇಶಗಳಲ್ಲಿ ಹೆಚ್ಚಾಗಿ ಬೆಳೆಸಿ, ಭವಿಷ್ಯದಲ್ಲಿ ಅದೇ ಉತ್ಪನ್ನದೊಂದಿಗೆ ಫಿಲಿಪೈನ್ಸ್‌ಗೆ ಪೈಪೋಟಿ ನೀಡುವ ಸಾಧ್ಯತೆಯ ಬಗ್ಗೆಯೂ ಸರ್ಕಾರ ಪರಿಶೀಲನೆ ನಡೆಸುತ್ತಿದೆ. ತಮ್ಮಲ್ಲಿ ಮಾತ್ರ ಈ ತಳಿ ಇರಬೇಕು, ನಮ್ಮದು ಹೊರಗಡೆ ಡಿಮಾಂಡ್​ ಸೃಷ್ಟಿಸಬೇಕೇ ಹೊರತು ಬೇರೆಡೆ ಅದು ಸುಲಭವಾಗಿ ಸಿಗಬಾರದು ಎಂಬುದು ಫಿಲಿಪೈನ್ಸ್ ಉದ್ದೇಶ. ಈ ನಿಟ್ಟಿನಲ್ಲಿ, ಉಬೆಯನ್ನು ಸದ್ಯದ ಮಟ್ಟಿಗೆ ಎಕ್ಸ್​ಪೋರ್ಟ್​ ಮೇಲೆ ಬ್ಯಾನ್​ ಹೇರಿದೆ.

ಹಲವು ಸಿಹಿ ಐಟಂಗಳಿಗೆ ಬಳಕೆ

ಫಿಲಿಪೈನ್ಸ್‌ನಲ್ಲಿ, ಉಬೆಯನ್ನು ಸಾಂಪ್ರದಾಯಿಕವಾಗಿ ಉಬೆ ಹಲಯಾ, ಐಸ್‌ಕ್ರೀಮ್, ಕೇಕ್‌ಗಳು, ಪೇಸ್ಟ್ರಿಗಳು ಮತ್ತು ಹಾಲೋ-ಹಾಲೋ (halo-halo) ಮುಂತಾದ ಖಾದ್ಯಗಳಲ್ಲಿ ಬಳಸಲಾಗುತ್ತದೆ. ಇದರ ನೇರಳೆ ಬಣ್ಣವೇ ಇದರ ಮುಖ್ಯ ಆಕರ್ಷಣೆ ಎನ್ನಲಾಗಿದೆ. ಈಗ ಇದನ್ನು ಲ್ಯಾಟ್ಟೆಗಳು, ಮಿಲ್ಕ್‌ಶೇಕ್‌ಗಳು, ಡೋನಟ್‌ಗಳು, ಕೇಕ್‌ ಮತ್ತು ಕುಕೀಸ್‌ಗಳಂತಹ ಅನೇಕ ಉತ್ಪನ್ನಗಳಲ್ಲಿಯೂ ಬಳಸಲಾಗುತ್ತಿದೆ. ದೊಡ್ಡ ಕೆಫೆ ಸರಪಳಿಗಳು ಕೂಡ ಉಬೆಯ ರುಚಿಗೆ ಮನಸೋತು ಅದರಿಂದ ಬಗೆಬಗೆಯ ಪಾನೀಯಗಳನ್ನು ಪರಿಚಯಿಸಿವೆ.

ಮುಂಜಾಗ್ರತಾ ಕ್ರಮ

2026ರ ಮೊದಲಾರ್ಧದಲ್ಲಿ ಫಿಲಿಪೈನ್ಸ್‌ನಲ್ಲಿ ಉಬೆ ಉತ್ಪಾದನೆಯು ಶೇ.17ರಷ್ಟು ಹೆಚ್ಚಾಗಿ ಸುಮಾರು 5,660 ಟನ್‌ಗಳಿಗೆ ತಲುಪಿದ್ದರೂ, ಬೇಡಿಕೆಯು ಅದಕ್ಕಿಂತ ವೇಗವಾಗಿ ಹೆಚ್ಚಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಉಬೆಯ ಬೆಲೆಯೂ ದುಪ್ಪಟ್ಟಾಗಿದೆ. ಉಬೆಯ ನಾಟಿ ಸಾಮಗ್ರಿಗಳನ್ನು ಮುಖ್ಯವಾಗಿ ಅಸ್ತಿತ್ವದಲ್ಲಿರುವ ಗೆಡ್ಡೆಯ ಭಾಗಗಳಿಂದಲೇ ತಯಾರಿಸಲಾಗುತ್ತದೆ. ಆದ್ದರಿಂದ, ರಫ್ತಿನೊಂದಿಗೆ ನಾಟಿ ಸಾಮಗ್ರಿಗಳೂ ರಫ್ತಾಗುತ್ತವೆ. ಇದರರ್ಥ ಸ್ಥಳೀಯ ರೈತರಿಗೆ ಮುಂದಿನ ಬೆಳೆ ಹಂಗಾಮಿಗೆ ಉತ್ತಮ ಗುಣಮಟ್ಟದ ನಾಟಿ ಸಾಮಗ್ರಿಗಳು ಸಿಗುತ್ತಿಲ್ಲ. ಈ ಮಧ್ಯೆ, ಪ್ರಸ್ತುತ ನಿಷೇಧವು ಸಂಸ್ಕರಿಸಿದ ಅಥವಾ ಶೈತ್ಯೀಕರಿಸಿದ (Frozen) ಉಬೆಯ ರಫ್ತಿಗೆ ಅನ್ವಯಿಸುವುದಿಲ್ಲ.

Also Read
ಈ ತಿಂಗಳಲ್ಲಿ ಹೇಗಿರಲಿದೆ ಮಳೆ, ಚಳಿ? ಎಲ್​ನಿನೋ ಎಫೆಕ್ಟ್​ಗೆ ತತ್ತರಿಸಿರೋ ಜನಕ್ಕೆ ಹೀಗಿದೆ ಐಎಂಡಿ ಹೊಸ ವರದಿ | October Rains
Purple Gold Rush

ಉಬೆ ಪುಡಿ, ಪೇಸ್ಟ್ ಮತ್ತು ಜಾಮ್‌ನಂತಹ ಉತ್ಪನ್ನಗಳು ವಿದೇಶಿ ಮಾರುಕಟ್ಟೆಯಲ್ಲಿ ಲಭ್ಯವಿರುವುದಕ್ಕೆ ಅಕ್ಷೇಪಣೆ ಕೊಟ್ಟಿಲ್ಲ. ಫಿಲಿಪೈನ್ಸ್ ಸರ್ಕಾರವು ಉಬೆ ಕೃಷಿಯನ್ನು ಅಭಿವೃದ್ಧಿಪಡಿಸಲು 2027ನೇ ಸಾಲಿಗೆ 300 ಮಿಲಿಯನ್ ಪೆಸೊಗಳ ಬಜೆಟ್ ಕೂಡ ಅನುಮೋದಿಸಿದೆ. ಹೆಚ್ಚಿನ ಪ್ರಮಾಣದಲ್ಲಿ ನಾಟಿ ಸಾಮಗ್ರಿಗಳನ್ನು ಒದಗಿಸಲು ಟಿಶ್ಯೂ ಕಲ್ಚರ್ (ಅಂಗಾಂಶ ಕೃಷಿ), ಸಮುದಾಯ ನರ್ಸರಿಗಳು ಮತ್ತು ಮಿನಿ ಸೆಟ್ ಮೂಲಕ ಸಸಿ ವೃದ್ಧಿಸುವ ವಿಧಾನಗಳನ್ನೂ ಪರಿಗಣಿಸಲಾಗುತ್ತಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net