

Pakistani Astronaut: ಬಾಹ್ಯಾಕಾಶಕ್ಕೆ ಹೋದರೂ ಮನೆಯ ಊಟದ ರುಚಿ ಮರೆಯುವಂತಿಲ್ಲ ಎಂಬುದಕ್ಕೆ ಚೀನಾ ಸಿದ್ಧಪಡಿಸಿರುವ ಈ ವಿಶೇಷ ಮೆನುವೇ ಸಾಕ್ಷಿ. ಪಾಕಿಸ್ತಾನದ ಮೊದಲ ಗಗನಯಾತ್ರಿ ಮೊಹಮ್ಮದ್ ಜೀಶನ್ ಅಲಿ ಅವರಿಗೆಂದೇ ಚೀನಾ ವಿಶೇಷವಾಗಿ 100ಕ್ಕೂ ಅಧಿಕ ಬಗೆಬಗೆಯ ಖಾದ್ಯಗಳನ್ನು ಸ್ಪೇಸ್ಗೆ ಕಳುಹಿಸಿಕೊಟ್ಟಿರುವ ಸುದ್ದಿ ಇದೀಗ ಜನರ ಹುಬ್ಬೇರಿಸಿದೆ.
ಟಿಯಾಂಗಾಂಗ್ ಬಾಹ್ಯಾಕಾಶ ನಿಲ್ದಾಣದಲ್ಲಿ 100ಕ್ಕೂ ಹೆಚ್ಚು ಬಗೆಯ ಹಲಾಲ್ ಆಹಾರಗಳನ್ನು ಸಿದ್ಧಪಡಿಸಿರುವ ಚೀನಾ, ಬಟರ್ ಚಿಕನ್, ಲ್ಯಾಂಬ್ ಕೊರ್ಮಾ, ಬೀಫ್ ನಿಹಾರಿ ಸೇರಿದಂತೆ ಪಾಕಿಸ್ತಾನಿ ಆಹಾರ ಶೈಲಿಯಲ್ಲೇ ಹಲವು ಖಾದ್ಯಗಳನ್ನು ಮೊಹಮ್ಮದ್ ಅವರಿಗೆ ಉಣಬಡಿಸಿದೆ. ಈ ವಿಶೇಷ ಮೆನುವಿನಲ್ಲಿ, ಪಾಕ್ ಪದ್ಧತಿಯನ್ನೇ ಅನುಸರಿಸಿ ಮಾಡಿರುವುದು ಹಲವರ ಗಮನ ಸೆಳೆದಿದೆ.
ಅಸಲಿಗೆ ಭರ್ಜರಿ ಆತಿಥ್ಯವೇನೋ ಹೌದು. ಆದರೆ, ಜೀರೋ ಗ್ರಾವಿಟಿ ಇರುವ ಬಾಹ್ಯಾಕಾಶದಲ್ಲಿ ಊಟ ಮಾಡೋದು ಅಷ್ಟು ಸುಲಭವಲ್ಲ. ಇದೊಂದು ರೀತಿ ಸವಾಲೇ ನಿಜ. ಗಗನಯಾತ್ರಿಯ ಆಹಾರದ ಅಭಿರುಚಿ ಮತ್ತು ಧಾರ್ಮಿಕ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ಚೀನಾ ಈ ವ್ಯವಸ್ಥೆ ಮಾಡಿರುವುದು ವಿಶೇಷ.
ಪೈಲಟ್ ಮೊಹಮ್ಮದ್ ಜೀಶನ್ ಅಲಿ (40) ಅವರು ನವೆಂಬರ್ 25ರಂದು ಚೀನಾದ ಶೆಂಝೌ-24 ಬಾಹ್ಯಾಕಾಶ ನೌಕೆಯ ಮೂಲಕ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಿದರು. ಈ ಮೂಲಕ ಅವರು ಬಾಹ್ಯಾಕಾಶಕ್ಕೆ ತೆರಳಿದ ಮೊದಲ ಪಾಕಿಸ್ತಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲದೆ, ಚೀನಾದ ಟಿಯಾಂಗಾಂಗ್ ಬಾಹ್ಯಾಕಾಶ ನಿಲ್ದಾಣಕ್ಕೆ ಭೇಟಿ ನೀಡಿದ ಮೊದಲ ವಿದೇಶಿ ಗಗನಯಾತ್ರಿ ಎಂಬ ಇತಿಹಾಸಕ್ಕೂ ಸಾಕ್ಷಿಯಾಗಿದ್ದಾರೆ.
ಚೀನಾದ ಗಗನಯಾತ್ರಿಗಳಾದ ಟಾಂಗ್ ಹಾಂಗ್ಬೊ ಮತ್ತು ವು ಯಿ ಅವರೊಂದಿಗೆ ಪ್ರಯಾಣಿಸಿದ ಜೀಶನ್ ಅಲಿ, ಈಗಾಗಲೇ ಶೆಂಝೌ-23 ಮಿಷನ್‌ನ ಮೂವರು ಗಗನಯಾತ್ರಿಗಳಿದ್ದ ಟಿಯಾಂಗಾಂಗ್ ನಿಲ್ದಾಣವನ್ನು ಸೇರಿದ್ದಾರೆ. ಈ ಮೂಲಕ ನಿಲ್ದಾಣದಲ್ಲಿ ಒಟ್ಟು ಆರು ಗಗನಯಾತ್ರಿಗಳು ಒಟ್ಟಿಗೆ ಕಾರ್ಯನಿರ್ವಹಿಸುತ್ತಿದ್ದಾರೆ.
ಜೀಶನ್ ಅಲಿ ಅವರ ಆಹಾರದ ಅಭಿರುಚಿ, ಪಾಕಿಸ್ತಾನದ ಆಹಾರ ಸಂಸ್ಕೃತಿ ಮತ್ತು ಪೌಷ್ಟಿಕಾಂಶದ ಅಗತ್ಯಗಳನ್ನು ಮೊದಲೇ ಅರಿತಿದ್ದ ಚೀನಾದ ಸಂಶೋಧಕರು, ಈ ವಿಶೇಷ ಮೆನುವನ್ನು ಸಿದ್ಧಪಡಿಸುವಂತೆ ತಮ್ಮ ಸಿಬ್ಬಂದಿಗೆ ತಿಳಿಸಿದ್ದರು. ಇದರಲ್ಲಿ, ಬಟರ್ ಚಿಕನ್, ಲ್ಯಾಂಬ್ ಕುರ್ಮಾ, ಬೀಫ್ ನಿಹಾರಿ ಮತ್ತು ಮಸಾಲೆಯುಕ್ತ ಕಡಲೆ ಖಾದ್ಯಗಳು ಸೇರಿವೆ ಎಂದು ವಿವರಿಸಲಾಗಿದೆ.
ಚೀನಾ ಗಗನಯಾತ್ರಿ ಕೇಂದ್ರದ ಸಂಶೋಧಕ ಚೆನ್ ಜುನ್ಲಿ ಅವರ ಪ್ರಕಾರ, ಈ ಆಹಾರಗಳು ಗಗನಯಾತ್ರಿಗಳಿಗೆ ಅಗತ್ಯವಾದ ಶಕ್ತಿ ಮತ್ತು ಪೌಷ್ಟಿಕಾಂಶ ಒದಗಿಸುವಂತೆ ರೂಪಿಸಲಾಗಿದೆ. ಜತೆಗೆ ಅವು ಹಗುರವಾಗಿದ್ದು, ಸುಲಭವಾಗಿ ಜೀರ್ಣವಾಗುವಂತೆಯೂ ನೋಡಿಕೊಳ್ಳಲಾಗಿದೆ. ಅರಿಶಿಣ ಮತ್ತು ಕರಿಬೇವು ಸೇರಿದಂತೆ ಪಾಕಿಸ್ತಾನಿ ಆಹಾರದಲ್ಲಿ ಬಳಕೆಯಾಗುವ ಮಸಾಲೆಗಳ ಅಭಿರುಚಿಯನ್ನೂ ಗಮನದಲ್ಲಿಟ್ಟುಕೊಂಡು ಮಾಡಲಾಗಿದೆ.
ಭೂಮಿಯಲ್ಲಿ ಇರುವಂತೆ ಬಾಹ್ಯಾಕಾಶ ನಿಲ್ದಾಣದಲ್ಲಿ ಸಾಮಾನ್ಯ ರೀತಿಯಲ್ಲಿ ಅಡುಗೆ ಮಾಡಲು ಸಾಧ್ಯವಿಲ್ಲ. ಹೀಗಾಗಿ, ಗಗನಯಾತ್ರಿಗಳಿಗೆ ಬೇಕಾದ ಆಹಾರವನ್ನು ಭೂಮಿಯಲ್ಲೇ ಸಿದ್ಧಪಡಿಸಿ, ವಿಶೇಷವಾಗಿ ಸಂಸ್ಕರಿಸಿ ಪ್ಯಾಕ್ ಮಾಡಲಾಗುತ್ತದೆ. ಬಳಿಕ ಅದನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ಯಲಾಗುತ್ತದೆ. ಆಹಾರವು ದೀರ್ಘಕಾಲ ಸುರಕ್ಷಿತವಾಗಿರುವುದರ ಜತೆಗೆ ಗಗನಯಾತ್ರಿಗಳಿಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವಂತೆಯೂ ಇರಬೇಕು.
ಬಾಹ್ಯಾಕಾಶದಲ್ಲಿ ವಿಜ್ಞಾನ ಪ್ರಯೋಗಗಳಷ್ಟೇ ಅಲ್ಲ, ಗಗನಯಾತ್ರಿಗಳ ಆಹಾರ ಪದ್ಧತಿ ಮತ್ತು ವೈಯಕ್ತಿಕ ಅಗತ್ಯಗಳಿಗೂ ಎಷ್ಟು ಮಹತ್ವ ನೀಡಲಾಗುತ್ತದೆ ಎಂಬುದಕ್ಕೆ ಜೀಶನ್ ಅಲಿ ಅವರಿಗಾಗಿ ಚೀನಾ ಸಿದ್ಧಪಡಿಸಿರುವ ಈ ವಿಶೇಷ ಹಲಾಲ್ ಮೆನುವೇ ಅತ್ಯುತ್ತಮ ಉದಾಹರಣೆ ಎನ್ನಬಹುದು,(ಏಜೆನ್ಸೀಸ್).