ಮಾಜಿ ಪ್ರಧಾನಿ ಇಮ್ರಾನ್ ಖಾನ್ ಕೊಲೆ ವದಂತಿ ಅಲ್ಲೆಗೆಳೆದ ಪಾಕ್; ಜೀವಂತ ಇರುವ ಬಗ್ಗೆ ಪುರಾವೆ ನೀಡುವಂತೆ ಪುತ್ರ ಒತ್ತಾಯ | Ex PM Imran Khan

ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್​ ಮತ್ತು ಪುತ್ರ ಕಾಸಿಮ್ ಖಾನ್
ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್​ ಮತ್ತು ಪುತ್ರ ಕಾಸಿಮ್ ಖಾನ್
Published on
Ex PM Imran Khan: ಪಾಕಿಸ್ತಾನದ ಜೈಲ್ಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್​ರನ್ನು ಅಡಿಯಾಲ ಜೈಲಿನಲ್ಲಿ ಕೊಲ್ಲಲಾಗಿದೆ ಎಂದು ಅಫ್ಘಾನ್ ಮಾಧ್ಯಮ ವರದಿ ಮಾಡಿದ್ದು, ಅದನ್ನು ಪಾಕ್ ಸರ್ಕಾರ ಅಲ್ಲಗೆಳೆದಿದೆ. ಆದರೆ ತಂದೆ ಜೀವಂತ ಇರುವ ಬಗ್ಗೆ ಪುರಾವೆ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪುತ್ರ ಕಾಸಿಮ್ ಖಾನ್ ಒತ್ತಾಯಿಸಿದ್ದಾರೆ.
ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಹಾಕಿರುವ ಕಾಸಿಮ್ ಖಾನ್, ನನ್ನ ತಂದೆ ಜೈಲಿಗೆ ಹೋಗಿ 845 ದಿನಗಳಾಗಿವೆ. ಕಳೆದ ಆರು ವಾರಗಳಿಂದ, ಅವರನ್ನು ಸಂಪೂರ್ಣ ಪ್ರತ್ಯೇಕತೆಯ ವಾತಾವರಣದಲ್ಲಿ ಡೆತ್ ಸೆಲ್‌ನಲ್ಲಿ ಏಕಾಂಗಿಯಾಗಿ ಇರಿಸಲಾಗಿದೆ. ಸ್ಪಷ್ಟ ನ್ಯಾಯಾಲಯದ ಆದೇಶಗಳ ಹೊರತಾಗಿಯೂ, ಅವರ ಸಹೋದರಿಯರ ಭೇಟಿಗೆ ನಿರ್ಬಂಧಿಸಲಾಗಿದೆ. ನಾನು ಮತ್ತು ನನ್ನ ಸಹೋದರ ನಮ್ಮ ತಂದೆಯನ್ನು ಯಾವುದೇ ರೀತಿಯಲ್ಲಿ ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಯಾವುದೇ ಫೋನ್ ಕರೆಗಳಿಲ್ಲ, ಯಾವುದೇ ಸಭೆಗಳಿಲ್ಲ, ಮತ್ತು ಅವರ ಯೋಗಕ್ಷೇಮದ ಬಗ್ಗೆ ಯಾವುದೇ ಸುದ್ದಿಗಳಿಲ್ಲ ಎಂದು ಹೇಳಿದ್ದಾರೆ.
ಈ ಸಂಪೂರ್ಣ ಕತ್ತಲೆ ಯಾವುದೇ ಭದ್ರತಾ ಶಿಷ್ಟಾಚಾರದ ಭಾಗವಲ್ಲ. ಇದು ತನ್ನ ತಂದೆಯ ಸ್ಥಿತಿಯನ್ನು ಮರೆಮಾಚಲು ಮತ್ತು ಅವರ ಕುಟುಂಬಕ್ಕೆ ಅವರು ಇರುವ ಸ್ಥಳದ ಬಗ್ಗೆ ತಿಳಿಯದಂತೆ ತಡೆಯಲು ಉದ್ದೇಶಪೂರ್ವಕ ಪ್ರಯತ್ನವಾಗಿದೆ ಎಂದು ಆರೋಪಿಸಿದ್ದಾರೆ.
ನನ್ನ ತಂದೆಯ ಸುರಕ್ಷತೆ ಮತ್ತು ಈ ಅಮಾನವೀಯ ಪ್ರತ್ಯೇಕತೆಯ ಪ್ರತಿಯೊಂದು ಪರಿಣಾಮಕ್ಕೂ ಪಾಕಿಸ್ತಾನಿ ಸರ್ಕಾರ ಮತ್ತು ಅದರ ಯಜಮಾನರು ಸಂಪೂರ್ಣ ಕಾನೂನು, ನೈತಿಕ ಮತ್ತು ಅಂತರರಾಷ್ಟ್ರೀಯ ಜವಾಬ್ದಾರಿಯನ್ನು ಹೊರುತ್ತಾರೆ ಎಂಬುದನ್ನು ಸ್ಪಷ್ಟಪಡಿಸಬೇಕು. ಅಂತಾರಾಷ್ಟ್ರೀಯ ಸಮುದಾಯ ಮತ್ತು ಮಾನವ ಹಕ್ಕುಗಳ ಸಂಘಟನೆಗಳು ಮಧ್ಯ ಪ್ರವೇಶ ಮಾಡುವಂತೆ ಮನವಿ ಮಾಡಿದ್ದಾರೆ.
ಇಮ್ರಾನ್ ಖಾನ್ ಅವರ ಮೂವರು ಸಹೋದರಿಯರಲ್ಲಿ ಒಬ್ಬರಾದ ಅಲೀಮಾ ಖಾನಮ್ ಎನ್​ಡಿಟಿವಿ ಜೊತೆ ಮಾತನಾಡಿದ್ದು, ತಮ್ಮ ಕುಟುಂಬಕ್ಕೆ ಇಮ್ರಾನ್ ಅವರನ್ನು ಭೇಟಿಯಾಗಲು ನಿರಾಕರಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಕಳೆದ 6-7 ತಿಂಗಳುಗಳಿಂದ ಭೇಟಿ ಬಗ್ಗೆ ಬಹಳಷ್ಟು ತೊಂದರೆ ನೀಡಿದ್ದಾರೆ. ಕೆಲವೊಮ್ಮೆ ಅವರು ನನ್ನನ್ನು ಅವರನ್ನು ಭೇಟಿಯಾಗಲು ಬಿಡುತ್ತಾರೆ, ಕೆಲವೊಮ್ಮೆ ನನ್ನ ಸಹೋದರಿಯರಲ್ಲಿ ಒಬ್ಬರನ್ನು ಭೇಟಿಯಾಗಲು ಬಿಡುತ್ತಾರೆ, ಕೆಲವೊಮ್ಮೆ ಯಾರನ್ನೂ ಭೇಟಿಯಾಗಲು ಬಿಟ್ಟಿಲ್ಲ. ಹಲವು ಬಾರಿ ನಾವು ಗಂಟೆಗಟ್ಟಲೆ ಜೈಲಿನ ಹೊರಗೆ ಕಾದಿದ್ದೇವೆ ಎಂದು ಹೇಳಿದ್ದಾರೆ.

ಕೊಲೆ ಆರೋಪ ತಿರಸ್ಕರಿಸಿದ ಅಡಿಯಾಲ ಜೈಲು ಅಧಿಕಾರಿಗಳು

ಇಮ್ರಾನ್ ಖಾನ್​ ಜೈಲಿನಲ್ಲಿ ಕೊಲೆಯಾಗಿದ್ದಾರೆ ಎಂಬ ಆರೋಪವನ್ನು ಗುರುವಾರ(ನ. 27) ತಿರಸ್ಕರಿಸಿರುವ ಅಡಿಯಾಲ ಜೈಲು ಅಧಿಕಾರಿಗಳು, ಅವರು ಸಂಪೂರ್ಣ ಆರೋಗ್ಯವಾಗಿದ್ದಾರೆ. ಅವರ ಆರೋಗ್ಯದ ಬಗ್ಗೆ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಇಮ್ರಾನ್ ಪಕ್ಷ) ನಾಯಕತ್ವಕ್ಕೆ ತಿಳಿಸಲಾಗಿದೆ. ಪಿಟಿಐ ಮುಖ್ಯಸ್ಥರಿಗೆ ಅಗತ್ಯವಿರುವ ಎಲ್ಲಾ ಆರೈಕೆಯನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
2023 ಆಗಸ್ಟ್ ತಿಂಗಳಿನಿಂದ ಮಾಜಿ ಪ್ರಧಾನಿ ಇಮ್ರಾನ್ ಜೈಲಿನಲ್ಲಿದ್ದಾರೆ. ರಾಜಕೀಯ ಪ್ರೇರಿತ ಎಂದು ಅವರು ಹೇಳಿಕೊಳ್ಳುವ ಡಜನ್​ಗಟ್ಟಲೇ ಪ್ರಕರಣಗಳಲ್ಲಿ ಅವರ ವಿರುದ್ಧ ಆರೋಪವನ್ನು ಹೊರಿಸಲಾಗಿದೆ. ಈ ವರ್ಷದ ಜನವರಿಯಲ್ಲಿ ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಅವರು ಮತ್ತು ಅವರ ಪತ್ನಿ ತಪ್ಪಿತಸ್ಥರೆಂದು ಸಾಬೀತಾಗಿದ್ದು, ಕೋರ್ಟ್ 14 ಮತ್ತು 7 ವರ್ಷ ಜೈಲು ಶಿಕ್ಷೆ ವಿಧಿಸಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net