

ದಕ್ಷಿಣ ಆಫ್ರಿಕಾದ ನವನೀತಂ ನವಿ ಪಿಳ್ಳೈಗೆ ನೊಬೆಲ್ ಶಾಂತಿ ಪ್ರಶಸ್ತಿ ಗರಿ.
ನಾರ್ವೇಜಿಯನ್ ನೊಬೆಲ್ಸಮಿತಿಯಿಂದ ಅಧಿಕೃತ ಮಾಹಿತಿ.
ಕಾನೂನು, ಯುದ್ಧಾಪರಾಧವನ್ನು ತಡೆಯುವಲ್ಲಿ, ಮಾನವ ಹಕ್ಕಿಗಾಗಿ ಹೋರಾಟ ಪರಿಗಣಿಸಿ ಗೌರವಿಸಲಾಗಿದೆ.
Nobel Peace Prize To Navanethem Navi Pillay: ನಾಟಲ್ನಲ್ಲಿ ಸ್ವಂತ ಕಾನೂನು ಸಂಸ್ಥೆ ಸ್ಥಾಪಿಸಿದ ಮೊದಲ ಕಪ್ಪು ಮಹಿಳೆ, ವರ್ಣಬೇಧ ನೀತಿ ವಿರುದ್ಧ ಹೋರಾಟ, ಪ್ರಭಾವಿ ನಾಯಕ ನೆಲ್ಸನ್ ಮಂಡೇಲಾ ಅವರ ಪರ ವಕಾಲತ್ತು ವಹಿಸಿದ್ದ ನವನೀತಂ ಭಾರತೀಯ ಮೂಲದ, ದಕ್ಷಿಣ ಆಫ್ರಿಕಾದ ನವಿ ಪಿಳ್ಳೈ ಅವರನ್ನು ಗುರುತಿಸಿ ನಾರ್ವೇಜಿಯನ್ ನೊಬೆಲ್ ಸಮಿತಿಯು ಅವರಿಗೆ 2026ರ ನೊಬೆಲ್ಶಾಂತಿ ಪ್ರಶಸ್ತಿ ಗರಿಯನ್ನು ಕೊಟ್ಟು ಗೌರವಿಸಿದೆ.
ಭಾರತೀಯ ಮೂಲದ ದಕ್ಷಿಣ ಆಫ್ರಿಕಾ ನಿವಾಸಿ ನ್ಯಾಯಶಾಸ್ತ್ರಜ್ಞೆ ನವನೀತಂ ನವಿ ಪಿಳ್ಳೈ ಅವರಿಗೆ ನೊಬೆಲ್ ಶಾಂತಿ ಗರಿಯನ್ನು ನೀಡಲಾಗಿದೆ ಎಂದು ನಾರ್ವೇಜಿಯನ್ ನೊಬೆಲ್ ಸಮಿತಿಯ ಅಧ್ಯಕ್ಷ ಜೋರ್ಗೆನ್ ವ್ಯಾಟ್ನೆ ಫ್ರೈಡ್ನೆಸ್ ಮಾಹಿತಿ ಹಂಚಿಕೊಂಡಿದ್ದಾರೆ ಎಂದು ವಿದೇಶಿ ಮಾಧ್ಯಮಗಳು ವರದಿ ಮಾಡಿವೆ.
ಅಂತರಾಷ್ಟ್ರೀಯ ಕಾನೂನು ಬಲ ಪಡಿಸುವಲ್ಲಿ, ಯುದ್ಧಾಪರಾಧವನ್ನು ತಡೆಯುವಲ್ಲಿ ಹಾಗೂ ಮಾನವ ಹಕ್ಕುಗಳನ್ನು ರಕ್ಷಿಸುವ ಸಲುವಾಗಿ ನವಿ ಪಿಳ್ಳೈ ಅವರು ಸಾಕಷ್ಟು ಕೆಲಸ ಮಾಡಿದ್ದಾರೆ. ಅವರ ಈ ಜೀವಮಾನದ ಕೊಡುಗೆಯನ್ನು ಗುರುತಿಸಿ ನಾರ್ವೇಜಿಯನ್ ನೊಬೆಲ್ ಸಮಿತಿಯು ಅವರಿಗೆ ನೊಬೆಲ್ಶಾಂತಿ ಪ್ರಶಸ್ತಿ ನೀಡುವ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.
208 ವ್ಯಕ್ತಿಗಳು ಮತ್ತು 79 ಸಂಸ್ಥೆಗಳು ಸೇರಿದಂತೆ ಒಟ್ಟು 287 ಅಭ್ಯರ್ಥಿಗಳ ಪೈಕಿ ನೊಬೆಲ್ ಸಮಿತಿಯು ನವನೀಥಂ ನವಿ ಪಿಳ್ಳೈ ಅವರನ್ನು ಆಯ್ಕೆ ಮಾಡಿ ಗೌರವಿಸಲಾಗಿದೆ. ಶಾಂತಿ ಮತ್ತು ಅಂತರರಾಷ್ಟ್ರೀಯ ಕಾನೂನನ್ನು ಉತ್ತೇಜಿಸುವ ನಿಟ್ಟಿನಲ್ಲಿ ಅವರು ನಡೆಸಿದ ಪ್ರಯತ್ನಗಳಿಗಾಗಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ನವಿ ಪಿಳ್ಳೈ ಅವರು 1941ರಲ್ಲಿ ದಕ್ಷಿಣ ಆಫ್ರಿಕಾದ ಡರ್ಬನ್ನಲ್ಲಿ ಜನಿಸಿದರು. ಇವರು ಪೂರ್ವಜರು ತಮಿಳುನಾಡಿ ಮೂಲದವರು. ಅವರು ಆಫ್ರಿಕಾಕ್ಕೆ ವಲಸೆ ಹೋದ ಭಾರತೀಯರಲ್ಲಿ ಒಬ್ಬರಾಗಿದ್ದಾರೆ. ದಕ್ಷಿಣಾ ಆಫ್ರಿಕಾದ ಮಾನವ ಹಕ್ಕುಗಳ ವಕೀಲರು ಅಂತರರಾಷ್ಟ್ರೀಯ ನ್ಯಾಯಶಾಸ್ತ್ರಜ್ಞರು. ಇಲ್ಲಿನ ವರ್ಣಬೇಧ ನೀತಿ ಬಗ್ಗೆ ಸುದೀರ್ಘವಾಗಿ ಹೋರಾಡಿದವರು. ನರಮೇಧ, ಲೈಂಗಿಕ ಹಿಂಸಾಚಾರಕ್ಕೆ ಮೊಕದ್ದಮೆ, ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿಯಲ್ಲಿ 6 ವರ್ಷ ಸೇವೆ ಸಲ್ಲಿಸಿದ್ದರು. ನೆಲ್ಸನ್ ಮಂಡೇಲಾ ಸೇರಿದಂತೆ ಪ್ರಭಾವಿ ಹೋರಾಟಗಾರರ ಕೇಸ್ ಅನ್ನು ಮುನ್ನಡೆಸಿದವರು ಇವರು.
ವಿಶ್ವಸಂಸ್ಥೆಯ ಸಂದರ್ಶನದಲ್ಲಿ ಮಾತನಾಡಿದ್ದ ನವಿ ಪಿಳ್ಳೈ ಜೀವನದ ಬಗ್ಗೆ ಮಾಹಿತಿ ತೆರೆದಿಟ್ಟಿದ್ದು ಹೀಗೆ, 'ನಮ್ಮ ತಂದೆ ಬಸ್ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ನಾವು ಏಳು ಮಕ್ಕಳು. ಕೆಲವರು ಹೇಳುತ್ತಾರೆ ನೀವು ಭಾರತೀಯರಾಗಿದ್ದರೆ ನಿಜಕ್ಕೂ ನೀವು ಆಫ್ರೀಕಾದ ಜನರಿಗಿಂತ ಅದೃಷ್ಟವಂತರು ಎಂದು. ಅಂತವರಿಗಾಗಿ ಹೇಳುತ್ತೇನೆ, ನಾವು ಸಹ ಹೆಚ್ಚು ಸಮಸ್ಯೆಗಳನ್ನು, ಸಂಕಷ್ಟವನ್ನು ಎದುರಿಸಿದ್ದೇವೆ. ನಾವು ಭಾರತೀಯರಾದ ಮಾತ್ರಕ್ಕೆ ಅದೃಷ್ಟವಂತರಲ್ಲ' ಎಂದು ಹೇಳಿಕೊಂಡಿರುವ ಬಗ್ಗೆ ವರದಿ ಮಾಡಲಾಗಿದೆ.
ನವನೀತಂ ನವಿ ಪಿಳ್ಳೈ ನಟಾಲ್ ವಿಶ್ವ ವಿದ್ಯಾಯಲಯದಲ್ಲಿ ಓದಿ 1963ರಲ್ಲಿ ಆರ್ಸ್ಟ್ನಲ್ಲಿ ಪದವಿ ಪಡೆದುಕೊಂಡರು. ಅಷ್ಟಕ್ಕೆ ಸುಮ್ಮನಾಗದೆ 1965 ರಲ್ಲಿ ಕಾನೂನು ಪದವಿ ಪಡೆದುಕೊಂಡರು. ಇನ್ನೂ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಕಾನೂನಿನಲ್ಲಿ ಸ್ನಾತಕೋತರ ಪದವಿ ದಕ್ಕಿಸಿಕೊಂಡರು. 1988 ರಲ್ಲಿ ನ್ಯಾಯಶಾಸ್ತ್ರದಲ್ಲಿ ಡಾಕ್ಟರೇಟ್ ಕೂಡ ಪಡೆದುಕೊಂಡರು.
1967 ರಲ್ಲಿ, ನಾಟಲ್ ಪ್ರಾಂತ್ಯದಲ್ಲಿ ಸ್ವಂತ ಕಾನೂನು ಸಂಸ್ಥೆ ಸ್ಥಾಪಿಸಿದ ಮೊದಲ ಮಹಿಳೆಯಾಗಿ ನವಿ ಪಿಳ್ಳೈ ಹೊರಹೊಮ್ಮಿದರು. ದಕ್ಷಿಣ ಆಫ್ರಿಕಾದ ಹೈಕೋರ್ಟ್‌ನ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ ಮೊದಲ ಕಪ್ಪು ಮಹಿಳೆ ಎನ್ನುವ ಹೆಮ್ಮೆಯನ್ನು ನವಿ ಪಿಳ್ಳೈ ಗಳಿಸಿಕೊಂಡಿದ್ದಾರೆ.
ಪ್ರತಿ ನೊಬೆಲ್ ಪ್ರಶಸ್ತಿ ಪುರಸ್ಕಾರದ ಹೊತ್ತಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತಾವು ದೇಶಗಳ ಯುದ್ಧ ನಿಲ್ಲಿಸಿರುವ ಬಗ್ಗೆ ಹೇಳುತ್ತಲೆ ಇರುತ್ತಾರೆ. ಬಹುಶಃ ಯಾವುದೇ ಅಧ್ಯಕ್ಷರು ಈವರೆಗೆ ಯಾವುದೇ ಯುದ್ಧಗಳನ್ನು ಬಗೆಹರಿಸಿಲ್ಲ... ಆದರೆ ನಾನು ಎಂಟು ಯುದ್ಧಗಳನ್ನು ಬಗೆಹರಿಸಿದ್ದೇನೆ. ಇದಕ್ಕಾಗಿ ತಮಗೆ ನೊಬೆಲ್ ಶಾಂತಿ ಪ್ರಶಸ್ತಿ ದಕ್ಕಬೇಕು ಎಂದು ಕ್ಯಾತೆ ತೆಗೆಯುತ್ತಲೇ ಇರುತ್ತಾರೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಪ್ರಶಸ್ತಿಗಾಗಿ ಶಿಫಾರಸು ಮಾಡಿದ್ದರು. ಆದರೆ ಈ ಬಾರಿಯು ಅವರ ಕೈ ತಪ್ಪಿದೆ, (ಏಜೆನ್ಸೀಸ್).