

ರಿಯಾದ್: ಸೌದಿ ಅರೇಬಿಯಾದ ಮೇಲೆ ಯೆಮೆನ್‌ನ ಹೌತಿ ಬಂಡುಕೋರರು ದಾಳಿ ಮುಂದುವರೆಸಿದ್ದು, ಬುಧವಾರ(ಅ. 21) ತಡರಾತ್ರಿ ಮ್ಮಾಮ್ ವಿಮಾನ ನಿಲ್ದಾಣದ ಮೇಲೆ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಓರ್ವ ಭಾರತೀಯ ಸೇರಿ ಇಬ್ಬರು ಮೃತಪಟ್ಟಿದ್ದಾರೆ. ಮತ್ತು ಎಂಟು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ಮಾಹಿತಿ ನೀಡಿರುವ ನಾಗರಿಕ ವಿಮಾನಯಾನ ಪ್ರಾಧಿಕಾರ, ಬುಧವಾರ ದಮ್ಮಾಮ್ ವಿಮಾನ ನಿಲ್ದಾಣದ ಮೇಲೆ ನಡೆದ ದಾಳಿಯಲ್ಲಿ ಸೌದಿ ಅರೇಬಿಯಾದ ಪ್ರಜೆಯೊಬ್ಬರು ಮತ್ತು ಭಾರತೀಯ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಎಂಟು ಮಂದಿ ಗಾಯಗೊಂಡಿದ್ದಾರೆ. ನಿಲ್ದಾಣಕ್ಕೆ ಆಗಿರುವ ಹಾನಿಯ ಬಗ್ಗೆ ಮೌಲ್ಯಮಾಪನ ನಡೆಯುತ್ತಿದೆ ಎಂದು ತಿಳಿಸಿದೆ.
ಇತ್ತೀಚಿನ ದಿನಗಳಲ್ಲಿ ಸೌದಿ ತೈಲ ಘಟಕ ಮತ್ತು ನಾಗರಿಕ ಮೂಲಸೌಕರ್ಯಗಳ ಮೇಲೆ ಹೌತಿ ಬಂಡುಕೋರರು ನಿರಂತರವಾಗಿ ದಾಳಿ ಮುಂದುವರೆಸಿದ್ದಾರೆ. ಕಳೆದ ಬಾರಿ ರಿಯಾದ್ ಏರ್ಪೋರ್ಟ್ ಮೇಲಿನ ದಾಳಿ ನಡೆದಿತ್ತು. ಬಳಿಕ ನಿಲ್ದಾಣವನ್ನು ಮುಚ್ಚಲಾಗಿದ್ದು, ಆ ನಗರದಲ್ಲಿ ನಡೆಯಬೇಕಿದ್ದ ಹೂಡಿಕೆ ಸಮ್ಮೇಳವನ್ನು ಮುಂದೂಡಲಾಗಿದೆ.
ಅಕ್ಟೋಬರ್ ಒಂದೇ ತಿಂಗಳಲ್ಲಿ ಸೌದಿ ವಿಮಾನ ನಿಲ್ದಾಣಗಳ ಮೇಲಿನ ದಾಳಿಗಳಲ್ಲಿ ಒಟ್ಟು 22 ಜನರು ಸಾವನ್ನಪ್ಪಿದ್ದಾರೆ ಎಂದು AFP ತಿಳಿಸಿದೆ. ಇನ್ನೂ ಯೆಮೆನ್‌ನ ಅಂತರ್ಯುದ್ಧದಲ್ಲಿ ಹಲವು ವರ್ಷಗಳಿಂದ ಜಾರಿಯಲ್ಲಿದ್ದ ಕದನ ವಿರಾಮವು ಜುಲೈ ತಿಂಗಳಲ್ಲಿ ಮುರಿದುಬಿದ್ದ ಬಳಿಕ ಹೌತಿಗಳು ದಾಳಿ ಶುರು ಮಾಡಿದ್ದಾರೆ. ಹೌತಿಗಳಿಗೆ ಇರಾನ್ ಬೆಂಬಲ ನೀಡುತ್ತಿದ್ದು, ಸೌದಿ ನೇತೃತ್ವದ ಒಕ್ಕೂಟದ ಬೆಂಬಲ ಹೊಂದಿರುವ ಸರ್ಕಾರದ ವಿರುದ್ಧ ಹೋರಾಡುತ್ತಿದೆ (ಏಜೆನ್ಸೀಸ್).