ಸೌದಿ ಅರೇಬಿಯಾ: ಯೆಮೆನ್ ಮೂಲದ ಹೌತಿ ಬಂಡುಕೋರರ ನಿರಂತರ ಮತ್ತು ತೀವ್ರ ದಾಳಿಗಳಿಂದಾಗಿ ಮಧ್ಯಪ್ರಾಚ್ಯದಲ್ಲಿ (Middle East Conflict) ಮತ್ತೆ ಪರಿಸ್ಥಿತಿ ಸಂಪೂರ್ಣವಾಗಿ ಹದಗೆಡುತ್ತಿದೆ. ಸೌದಿ ಅರೇಬಿಯಾದ ಜೀವನಾಡಿಯಂತಿರುವ ಪೂರ್ವ-ಪಶ್ಚಿಮ ಪೈಪ್ಲೈನ್ ಕಾರಿಡಾರ್ ಮೇಲೆ ಹೌತಿಗಳು ನಡೆಸಿದ ಮಾರಕ ದಾಳಿಯಿಂದಾಗಿ ತೈಲ ಮೂಲಸೌಕರ್ಯಕ್ಕೆ ಭಾರಿ ಹಾನಿಯಾಗಿದೆ ಎಂದು ವರದಿಯಾಗಿದೆ.
ಈ ಗಂಭೀರ ಬೆಳವಣಿಗೆ ಬೆನ್ನಲ್ಲೇ, ಸೌದಿ ಅರೇಬಿಯಾವು ಮುಂಬರುವ ತಿಂಗಳು ಯುರೋಪಿಯನ್ ತೈಲ ಸಂಸ್ಕರಣಾ ಘಟಕಗಳಿಗೆ ಕಚ್ಚಾ ತೈಲ ಪೂರೈಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ತಿಳಿಸಿದೆ. ಈಗ ಹೊರಬಿದ್ದಿರುವ ಈ ಸ್ಫೋಟಕ ವರದಿಯು ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿದೆ.
ಸೌದಿ ಅರೇಬಿಯಾ ಯುರೋಪ್ಗೆ ಕಚ್ಚಾ ತೈಲ ಪೂರೈಸುವ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿದೆ. ಅಂತಾರಾಷ್ಟ್ರೀಯ ಇಂಧನ ಸಂಸ್ಥೆ ಅಂಕಿಅಂಶಗಳ ಪ್ರಕಾರ, ಪ್ರಸಕ್ತ ವರ್ಷದ ಜೂನ್ ತಿಂಗಳಲ್ಲಿ ಸೌದಿ ಅರೇಬಿಯಾ ಯುರೋಪಿಯನ್ ದೇಶಗಳಿಗೆ ಬರೋಬ್ಬರಿ 5,77,000 ಬ್ಯಾರೆಲ್ ಕಚ್ಚಾ ತೈಲವನ್ನು ರಫ್ತು ಮಾಡಿತ್ತು.
ಈಗ ಸೌದಿ ತೈಲ ಪೂರೈಕೆಯನ್ನು ನಿಲ್ಲಿಸಿದರೆ, ಯುರೋಪ್ ದೇಶಗಳಿಗೆ ದೊಡ್ಡ ತಲೆನೋವು ಶುರುವಾಗಲಿದೆ. ಈಗಾಗಲೇ ಅಮೆರಿಕ-ಇರಾನ್ ಸಂಘರ್ಷದಿಂದಾಗಿ ಯುರೋಪ್ನಲ್ಲಿ ಕಚ್ಚಾ ತೈಲದ ಬೆಲೆ ಗಗನಕ್ಕೇರಿದೆ. ಇಂತಹ ಕಷ್ಟದ ಸಮಯದಲ್ಲಿ ಸೌದಿಯ ಈ ನಿರ್ಧಾರವು ಯುರೋಪ್ನಲ್ಲಿ ತೀವ್ರ ಇಂಧನ ಬಿಕ್ಕಟ್ಟಿಗೆ ಕಾರಣವಾಗುವ ಎಲ್ಲಾ ಸಾಧ್ಯತೆಗಳಿವೆ.
ಭುಗಿಲೆದ್ದ ರಕ್ತಸಿಕ್ತ ಸಂಘರ್ಷ: ಸೌದಿಯಲ್ಲೂ ಸಾವು-ನೋವು!
ಸೌದಿ ಅರೇಬಿಯಾ ಮತ್ತು ಯೆಮೆನ್ ಬೆಂಬಲಿತ ಹೌತಿ ಬಂಡುಕೋರರ ನಡುವಿನ ಕದನ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ. ಕೇವಲ ಗಡಿಯಲ್ಲಿ ಮಾತ್ರವಲ್ಲದೆ, ಈಗ ಸೌದಿಯ ಆಂತರಿಕ ಪ್ರದೇಶಗಳ ಮೇಲೂ ದಾಳಿಗಳು ಹೆಚ್ಚಾಗಿವೆ.
ಯೆಮೆನ್ನಲ್ಲಿ ಭಾರಿ ಸಾವುನೋವು: ಮಾಧ್ಯಮ ವರದಿಗಳ ಪ್ರಕಾರ, ಯೆಮೆನ್ನಲ್ಲಿ ಕಳೆದ 24 ಗಂಟೆಗಳಲ್ಲಿ ಸರ್ಕಾರದ 23 ಸೈನಿಕರು ಬಲಿಯಾಗಿದ್ದಾರೆ. ಇದರೊಂದಿಗೆ ಸೌದಿ ನಡೆಸಿದ ವೈಮಾನಿಕ ದಾಳಿಯಲ್ಲಿ ತಮ್ಮ 40 ಹೋರಾಟಗಾರರು ಸಾವನ್ನಪ್ಪಿದ್ದಾರೆ ಎಂದು ಹೌತಿಗಳು ಒಪ್ಪಿಕೊಂಡಿದ್ದಾರೆ.
ಸೌದಿ ನೆಲದಲ್ಲೂ ಮೊದಲ ಬಲಿ: ಸೌದಿ ಅರೇಬಿಯಾದಲ್ಲಿ ಹೌತಿಗಳ ಡ್ರೋನ್ ದಾಳಿಯಿಂದಾಗಿ ಮೊದಲ ಬಾರಿಗೆ ಪ್ರಾಣಹಾನಿ ಸಂಭವಿಸಿದೆ. ತೈಫ್ ಪ್ರಾಂತ್ಯದಲ್ಲಿ ಹೊಡೆದುರುಳಿಸಲಾದ ಡ್ರೋನ್ನ ಅವಶೇಷಗಳು ಬಿದ್ದು ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರು ಗಾಯಗೊಂಡಿದ್ದು, ಹಲವು ಕಟ್ಟಡ ಹಾಗೂ ವಾಹನಗಳು ಸಂಪೂರ್ಣ ಜಖಂಗೊಂಡಿವೆ.
ಪಾಕಿಸ್ತಾನದ ಬೆಂಬಲದ ನಿರೀಕ್ಷೆಯಲ್ಲಿ ಸೌದಿ!
ನಿರಂತರವಾಗಿ ದಾಳಿಗಳನ್ನು ಎದುರಿಸುತ್ತಿರುವ ಸೌದಿ ಅರೇಬಿಯಾ, ಈಗ ತನ್ನ ಮಿತ್ರರಾಷ್ಟ್ರಗಳ ಸಹಾಯಕ್ಕಾಗಿ ಎದುರು ನೋಡುತ್ತಿದೆ. ಈ . ಹಿಂದೆ ಪಾಕಿಸ್ತಾನದೊಂದಿಗೆ 'ಮೆಕ್ಕಾ ಜಂಟಿ ರಕ್ಷಣಾ ಒಪ್ಪಂದ' ಕ್ಕೆ ಉಭಯ ದೇಶಗಳ ಸಹಿ ಹಾಕಿರುವ ಹಿನ್ನೆಲೆ, ಪಾಕ್ ತಮ್ಮ ಬೆಂಬಲಕ್ಕೆ ಬರಲಿದೆ ಎನ್ನುವುದು ಸೌದಿ ನಿರೀಕ್ಷೆಯಾಗಿದೆ.
ಈ ಹಿಂದೆ ಇದೊಂದು ಕೇವಲ ರಕ್ಷಣಾತ್ಮಕ ಮೈತ್ರಿ ಎಂದು ಪಾಕಿಸ್ತಾನ ಹೇಳಿಕೊಂಡಿತ್ತು. ಆದರೆ ಈಗ ಸೌದಿ ಅರೇಬಿಯಾಕ್ಕೆ ಕಷ್ಟ ಬಂದಿರುವಾಗ ಪಾಕ್ ಸೇನೆ ಮಹತ್ವದ ಹೇಳಿಕೆ ನೀಡಿದೆ. ಹೌತಿಗಳ ಮೇಲೆ ನೇರವಾಗಿ ದಾಳಿ ಮಾಡುವುದರ ಬಗ್ಗೆ ಪಾಕ್ ಸ್ಪಷ್ಟಪಡಿಸಿಲ್ಲವಾದರೂ, ಸೌದಿ ಅರೇಬಿಯಾವನ್ನು ರಕ್ಷಿಸಲು ತಾವು ಹಿಂಜರಿಯುವುದಿಲ್ಲ ಎಂದಿದೆ. ಪವಿತ್ರ ಧಾರ್ಮಿಕ ಕ್ಷೇತ್ರಗಳು ಮತ್ತು ಸೌದಿ ಅರೇಬಿಯಾ ಸಾಮ್ರಾಜ್ಯದ ಸಾರ್ವಭೌಮತೆ ಹಾಗೂ ಭದ್ರತೆಗಾಗಿ ನಾವು ಎಂತಹ ಹಂತಕ್ಕಾದರೂ ಹೋಗಲು ಸಿದ್ಧರಿದ್ದೇವೆ, ಎಂದು ಪಾಕಿಸ್ತಾನದ ಸೇನಾ ವಕ್ತಾರ ಅಹ್ಮದ್ ಷರೀಫ್ ಚೌಧರಿ ತಿಳಿಸಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿರುವ ಈ ಯುದ್ಧದ ವಾತಾವರಣವು ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಏರಿಕೆ ಮತ್ತು ಆರ್ಥಿಕ ಅಸ್ಥಿರತೆಗೆ ದಾರಿ ಮಾಡಿಕೊಡುತ್ತಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಎಲ್ಲಿಗೆ ಬಂದು ಮುಟ್ಟಲಿದೆ ಎನ್ನುವುದನ್ನು ಕಾದುನೋಡಬೇಕಿದೆ, (ಏಜೆನ್ಸೀಸ್).