ಫ್ರಾನ್ಸ್: ಬೋಧಕ ಸಿಬ್ಬಂದಿಯ ತೀವ್ರ ಕೊರತೆ, ಶಾಲೆಗಳ ಕಳಪೆ ಸ್ಥಿತಿ ಹಾಗೂ ಶೈಕ್ಷಣಿಕ ಸೌಲಭ್ಯಗಳ ಕೊರತೆಯನ್ನು ಖಂಡಿಸಿ ಫ್ರಾನ್ಸ್ನಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಾರಿ ಪ್ರತಿಭಟನೆ ನಡೆಸುತ್ತಿದ್ದು, ಇದು ಹಲವು ನಗರಗಳಿಗೆ ವ್ಯಾಪಿಸಿದೆ. ಸೆಪ್ಟೆಂಬರ್ 17ರಂದು ಆರಂಭವಾದ ಈ ಚಳವಳಿಯ ಭಾಗವಾಗಿ, ವಿದ್ಯಾರ್ಥಿಗಳು ಶಾಲಾ ಪ್ರವೇಶ ದ್ವಾರಗಳಿಗೆ ಬ್ಯಾರಿಕೇಡ್ಗಳು ಮತ್ತು ಸರಪಳಿಗಳನ್ನು ಕಟ್ಟಿ ಶಾಲೆಗಳನ್ನು ಸಂಪೂರ್ಣವಾಗಿ ಬಂದ್ ಮಾಡಿದ್ದಾರೆ. ಪ್ರತಿಭಟನೆ ಶಾಂತಿಯುತವಾಗಿ ಉಳಿಯದೆ ಹಲವೆಡೆ ಗಲಭೆಯ ಸ್ವರೂಪ ಪಡೆದುಕೊಂಡಿದೆ. ಕಲ್ಲು ತೂರಾಟ, ಶಾಲಾ ಆಸ್ತಿಪಾಸ್ತಿಗೆ ಹಾನಿ ಹಾಗೂ ವಾಹನಗಳಿಗೆ ಬೆಂಕಿ ಹಚ್ಚುವ ಅಹಿತಕರ ಘಟನೆಗಳು ನಡೆದಿವೆ. ಫ್ರಾನ್ಸ್ನಲ್ಲಿ ಸರ್ಕಾರಿ ಶಿಕ್ಷಣ ವ್ಯವಸ್ಥೆ ಹೇಗಿದೆ, ಅದು ಎದುರಿಸುತ್ತಿರುವ ಸವಾಲುಗಳೇನು? ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣಗಳೇನು? ಈ ಕುರಿತಾದ ವಿವರ ಇಲ್ಲಿದೆ.
ಇತ್ತೀಚಿನ ದಿನಗಳಲ್ಲಿ ಫ್ರಾನ್ಸ್ನ ಪ್ರೌಢಶಾಲೆಗಳ ಮುಂಭಾಗದಲ್ಲಿ ಹದಿಹರೆಯದ ವಿದ್ಯಾರ್ಥಿಗಳು (ಜೆನ್ ಅಲ್ಪಾ ಮತ್ತು ಜೆನ್ಜೀ) ನಡೆಸುತ್ತಿರುವ ಪ್ರತಿಭಟನೆಗಳು ಇಡೀ ದೇಶವನ್ನು ಬೆಚ್ಚಿಬೀಳಿಸಿವೆ. ವಿದ್ಯಾರ್ಥಿಗಳು ತಮ್ಮ ಶಾಲಾ ಪ್ರವೇಶದ್ವಾರಗಳಿಗೆ ಬೀಗ ಜಡಿದು ತಡೆಗೋಡೆಗಳನ್ನು ನಿರ್ವಿುಸಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಭದ್ರತಾ ಪಡೆಗಳು ಕೆಲವೆಡೆ ಅಶ್ರುವಾಯು ಪ್ರಯೋಗಿಸಿವೆ. ವಿದ್ಯಾರ್ಥಿಗಳ ಕುಂದುಕೊರತೆಗಳು ಸಮಂಜಸವಾಗಿದ್ದರೂ, ಹಿಂಸಾಚಾರವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಇದೇ ವೇಳೆ, ಈ ಪ್ರತಿಭಟನೆಯನ್ನು ಪ್ರಚೋದಿಸುತ್ತಿರುವ ಹಿಂದೆ ತೀವ್ರ ಎಡಪಂಥೀಯ ಶಕ್ತಿಗಳ ಕೈವಾಡವಿದೆ ಎಂದು ಸರ್ಕಾರ ಆರೋಪಿಸಿದೆ.
ಮತ್ತೊಂದೆಡೆ, ಕಾಯ್ದೆಯ ಪ್ರಕಾರ ಇನ್ನೂ ಮಕ್ಕಳೇ ಆಗಿರುವ ಅಪ್ರಾಪ್ತ ಪ್ರತಿಭಟನಾಕಾರರ ವಿರುದ್ಧ ಪೊಲೀಸರು ಅತಿಯಾದ ಬಲಪ್ರಯೋಗ ಮಾಡುತ್ತಿದ್ದಾರೆ ಎಂದು ಶಿಕ್ಷಣ ತಜ್ಞರು ಆಪಾದಿಸಿದ್ದಾರೆ. ಆಂತರಿಕ ಸಚಿವಾಲಯದ ಮಾಹಿತಿ ಪ್ರಕಾರ, ಸೆಪ್ಟೆಂಬರ್ 17ರಿಂದ ಅಕ್ಟೋಬರ್ 3ರವರೆಗೆ 5 ಸಾವಿರಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಶುಕ್ರವಾರ ಒಂದೇ ದಿನ 735 ಶಿಕ್ಷಣ ಸಂಸ್ಥೆಗಳು ಪ್ರತಿಭಟನೆಯಿಂದ ಬಾಧಿತವಾಗಿವೆ ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ. ನಾಳೆ (ಅ.6) ಮತ್ತೊಂದು ಬೃಹತ್ ಮಟ್ಟದ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ ನೀಡಲಾಗಿದೆ. ವೇತನ ಹೆಚ್ಚಳಕ್ಕೆ ಆಗ್ರಹಿಸಿ ಮತ್ತು ಬಜೆಟ್ ಕಡಿತವನ್ನು ವಿರೋಧಿಸಿ ಸರ್ಕಾರಿ ನೌಕರರು (ಶಿಕ್ಷಕರು, ಅಗ್ನಿಶಾಮಕ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರು) ಕರೆ ನೀಡಿದ್ದ ರಾಷ್ಟ್ರವ್ಯಾಪಿ ಮುಷ್ಕರಗಳಿಗೆ ವಿದ್ಯಾರ್ಥಿಗಳು ಕೈಜೋಡಿಸಿ ಸರ್ಕಾರದ ವಿರುದ್ಧ ಧ್ವನಿ ಎತ್ತಿದ್ದಾರೆ.
ಈ ಚಳವಳಿ ಆರಂಭವಾಗಿದ್ದು ಸೆಪ್ಟೆಂಬರ್ 17ರಂದು. ಪ್ಯಾರಿಸ್ನ ಉಪನಗರವಾದ ಕ್ರೆಟೆಯ್್ಲ ಸೇಂಟ್-ಎಕ್ಸುಪೆರಿ ಪ್ರೌಢಶಾಲೆಯಲ್ಲಿ ಸಿಬ್ಬಂದಿ ಮತ್ತು ಸಂಪನ್ಮೂಲಗಳ ಕೊರತೆಯನ್ನು ವಿರೋಧಿಸಿ ಶಿಕ್ಷಕರು ಮುಷ್ಕರ ನಡೆಸಿದ್ದರು. ಅವರಿಗೆ ಬೆಂಬಲ ಸೂಚಿಸಲು ವಿದ್ಯಾರ್ಥಿಗಳು ಈ ಪ್ರತಿಭಟನೆ ಪ್ರಾರಂಭಿಸಿದರು. ಅಲ್ಲಿಂದ ಕಾಳ್ಗಿಚ್ಚಿನಂತೆ ಹರಡಿದ ಈ ಕಿಡಿ, ಕಳೆದ ವಾರದಲ್ಲಿ ದೇಶಾದ್ಯಂತ ವ್ಯಾಪಕ ಸ್ವರೂಪ ಪಡೆದುಕೊಂಡಿತು. ದೇಶದ ಇತರೆಡೆಗಳಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತಿದ್ದಂತೆ, ಸೇಂಟ್-ಎಕ್ಸುಪೆರಿ ಶಾಲೆಯಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿತು. ಏಕೆಂದರೆ, ಆಡಳಿತ ಮಂಡಳಿಯು ಉಪ ಪ್ರಾಂಶುಪಾಲರು ಮತ್ತು ನರ್ಸ್ ಸೇರಿದಂತೆ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲು ಒಪ್ಪಿಕೊಂಡಿತು.
ಟಿಕ್ಟಾಕ್ನಂತಹ ಆನ್ಲೈನ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗುತ್ತಿರುವ ದೃಶ್ಯಗಳು ಮತ್ತು ವಿಡಿಯೋಗಳು ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಿವೆ. ಕಸದ ಬುಟ್ಟಿಗಳಿಗೆ ಬೆಂಕಿ ಹಚ್ಚುವುದು ಅಥವಾ ಪೊಲೀಸರು ಅಶ್ರುವಾಯು ಸಿಡಿಸುವ ದೃಶ್ಯಗಳನ್ನು ವಿದ್ಯಾರ್ಥಿಗಳು ಸ್ವತಃ ತಮ್ಮ ಸ್ಮಾರ್ಟ್ಫೋನ್ಗಳಲ್ಲಿ ಸೆರೆಹಿಡಿಯುತ್ತಿದ್ದಾರೆ. ಸಾಂಪ್ರದಾಯಿಕ ಮಾಧ್ಯಮಗಳು ಬಿಂಬಿಸುವ ಕಥನಕ್ಕಿಂತ ಭಿನ್ನವಾದ, ಕೃತಕವಲ್ಲದ ನೈಜ ಚಿತ್ರಣವನ್ನು ನೀಡಲು ಸಾಮಾಜಿಕ ಜಾಲತಾಣಗಳು ಈ ಯುವಕರಿಗೆ ದಾರಿ ಮಾಡಿಕೊಟ್ಟಿವೆ ಎಂದಿದ್ದಾರೆ ಶಿಕ್ಷಣ ತಜ್ಞರು.
ಈ ಪ್ರತಿಭಟನೆಗಳು ಮುಖ್ಯವಾಗಿ ಫ್ರಾನ್ಸ್ನ ಲೈಸೀ (ಪ್ರೌಢಶಾಲಾ ಹಂತದ) ಶಾಲೆಗಳಲ್ಲಿ ನಡೆಯುತ್ತಿವೆ. ಇವು 15ರಿಂದ 18 ವರ್ಷ ವಯಸ್ಸಿನ ಹದಿಹರೆಯದವರು ಕಲಿಯುವ ಶಾಲೆಗಳಾಗಿದ್ದು, ಅಮೆರಿಕದ ಪ್ರೌಢಶಾಲೆ ಅಥವಾ ಯುಕೆಯ ಸಿರ್ಕ್ಸ್ ಫಾಮರ್್ಗೆ ಸಮಾನವಾಗಿವೆ.
ಶಿಕ್ಷಕರ ತೀವ್ರ ಕೊರತೆ: ಸರ್ಕಾರಿ ಶಾಲೆಗಳಲ್ಲಿ ಸಾವಿರಾರು ಶಿಕ್ಷಕರ ಹುದ್ದೆಗಳು ಭರ್ತಿಯಾಗದೆ ಉಳಿದಿವೆ. ಇದರಿಂದ ಹಲವು ಪ್ರಮುಖ ವಿಷಯಗಳಿಗೆ ವಾರಗಟ್ಟಲೇ ತರಗತಿಗಳೇ ನಡೆಯುತ್ತಿಲ್ಲ. ಶಿಕ್ಷಕರ ಕೊರತೆಯಿಂದಾಗಿ ಇರುವ ಶಿಕ್ಷಕರ ಮೇಲೆ ವಿಪರೀತ ಕೆಲಸದ ಒತ್ತಡ ಉಂಟಾಗಿದ್ದು, ಶೈಕ್ಷಣಿಕ ಗುಣಮಟ್ಟ ಕುಸಿಯುತ್ತಿದೆ ಎಂಬುದು ವಿದ್ಯಾರ್ಥಿಗಳ ಮುಖ್ಯ ಆರೋಪ.
ಕಿಕ್ಕಿರಿದ ತರಗತಿಗಳು: ಬಜೆಟ್ ಮಿತಿಗಳಿಂದಾಗಿ ತರಗತಿಗಳ ಸಂಖ್ಯೆಯನ್ನು ಕಡಿತಗೊಳಿಸಲಾಗಿದ್ದು, ಒಂದೊಂದು ಕೊಠಡಿಯಲ್ಲಿ 35ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಕೂರಿಸಲಾಗುತ್ತಿದೆ. ಇದರಿಂದ ಶಿಕ್ಷಕರಿಗೆ ವಿದ್ಯಾರ್ಥಿಗಳತ್ತ ವೈಯಕ್ತಿಕ ಗಮನ ನೀಡಲು ಸಾಧ್ಯವಾಗುತ್ತಿಲ್ಲ.
ಬಜೆಟ್ ಕಡಿತ: ಹೆಚ್ಚುತ್ತಿರುವ ಸಾಲವನ್ನು ನಿಯಂತ್ರಿಸಲು ಸರ್ಕಾರ ಸಾರ್ವಜನಿಕ ವೆಚ್ಚಗಳಿಗೆ ಕತ್ತರಿ ಹಾಕುತ್ತಿದೆ. ಶಾಲೆಗಳ ಹಳೆಯ ಕಟ್ಟಡಗಳ ನಿರ್ವಹಣೆ, ತಾಪಮಾನ ನಿಯಂತ್ರಣ, ಲ್ಯಾಬ್ ಉಪಕರಣಗಳು ಮತ್ತು ಕ್ರೀಡಾ ಸೌಲಭ್ಯಗಳಿಗೆ ಅಗತ್ಯ ಅನುದಾನ ಸಿಗುತ್ತಿಲ್ಲ ಎಂಬ ಬೇಸರ ವಿದ್ಯಾರ್ಥಿಗಳಲ್ಲಿದೆ.
ಒತ್ತಡ: ಶಾಲಾ ವೇಳಾಪಟ್ಟಿಯು ದೀರ್ಘವಾಗಿದ್ದು, ವಿದ್ಯಾರ್ಥಿಗಳ ಮೇಲೆ ಒತ್ತಡ ಸೃಷ್ಟಿಸುತ್ತಿದೆ. ಬೆಳಗ್ಗೆ 8ರಿಂದ ಸಂಜೆ 6ರವರೆಗೆ ನಡೆಯುವ ದೀರ್ಘಾವಧಿಯ ತರಗತಿಗಳು ವಿದ್ಯಾರ್ಥಿಗಳನ್ನು ಹೈರಾಣಾಗಿಸಿವೆ.
ಫ್ರಾನ್ಸ್ ಎಲ್ಲ ವಿದ್ಯಾರ್ಥಿಗಳಿಗೂ ಲೈಸೀ ಶಾಲೆಗಳಿಗೆ ಪ್ರವೇಶಾವಕಾಶ ನೀಡುತ್ತದೆಯಾದರೂ, ವಾಸ್ತವದಲ್ಲಿ ವೃತ್ತಿಪರ ಶಾಲೆಗಳಿಂದ ಹಿಡಿದು ಗಣ್ಯ (ಎಲೈಟ್) ಸಂಸ್ಥೆಗಳವರೆಗೆ ಶಿಕ್ಷಣ ವ್ಯವಸ್ಥೆಯಲ್ಲಿ ಬೃಹತ್ ಕಂದಕವಿದೆ. ಪ್ರೌಢಶಾಲಾ ವಿದ್ಯಾರ್ಥಿಗಳು ಅದರಲ್ಲೂ, ಕಡಿಮೆ ಆದಾಯದ ಕುಟುಂಬಗಳು ವಾಸಿಸುವ ಪ್ರದೇಶಗಳ ಮಕ್ಕಳು ತಮಗೆ ಕಳಪೆ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೈವಿಧ್ಯತೆಯನ್ನು ಉತ್ತೇಜಿಸಲು ಹಲವು ಯೋಜನೆಗಳನ್ನು ರೂಪಿಸಲಾಗಿದ್ದರೂ, ಇಂದಿಗೂ ಪ್ರಮುಖ ಮತ್ತು ಪ್ರತಿಷ್ಠಿತ ಸಂಸ್ಥೆಗಳಲ್ಲಿ ವಿಶ್ವವಿದ್ಯಾಲಯ ಶಿಕ್ಷಣ ಪಡೆದ ಶ್ರೀಮಂತ ಕುಟುಂಬಗಳ ಮಕ್ಕಳೇ ಮೇಲುಗೈ ಸಾಧಿಸಿದ್ದಾರೆ. ವಿವಿಧ ಶ್ರೇಣಿಯ ವಿದ್ಯಾರ್ಥಿಗಳು ಮತ್ತು ಶಾಲೆಗಳ ನಡುವೆ ಎದ್ದು ಕಾಣುವಂತಹ ತಾರತಮ್ಯಗಳಿವೆ, ಇದು ಅತ್ಯಂತ ಗಂಭೀರವಾದ ಸಮಸ್ಯೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಅಧ್ಯಕ್ಷೀಯ ಚುನಾವಣೆಗೆ ಕೇವಲ ಆರು ತಿಂಗಳು ಬಾಕಿ ಇರುವ ಈ ಸಂದರ್ಭದಲ್ಲಿ, ವಿದ್ಯಾರ್ಥಿಗಳ ಪ್ರತಿಭಟನೆಯು ತೀವ್ರ ರಾಜಕೀಯ ತಿಕ್ಕಾಟಕ್ಕೆ ವೇದಿಕೆಯಾಗಿದೆ. ತೀವ್ರ ಎಡಪಂಥೀಯ ಪಕ್ಷವಾದ ಫ್ರಾನ್ಸ್ ಅನ್ಬೌಡ್ (ಎಲ್ಎಫ್ಐ) ಈ ಪ್ರತಿಭಟನೆಯ ಹಿಂದಿದೆ ಎಂದು ಸರ್ಕಾರ ನೇರವಾಗಿ ಆರೋಪಿಸಿದೆ. ಆದರೆ ಈ ಆರೋಪವನ್ನು ತಳ್ಳಿಹಾಕಿರುವ ಎಲ್ಎಫ್ಐನ ಹಿರಿಯ ಮುಖಂಡ ಮ್ಯಾನುಯೆಲ್ ಬೊಂಪಾರ್ಡ್, ಸರ್ಕಾರವು ಪಿತೂರಿ ನಡೆಸಿದೆ ಎಂದು ತಿರುಗೇಟು ನೀಡಿದ್ದಾರೆ. ಪ್ರಸ್ತುತ 18ರಿಂದ 25 ವರ್ಷ ವಯಸ್ಸಿನ ಯುವ ಮತದಾರರಲ್ಲಿ ಶೇಕಡ 40ಕ್ಕೂ ಹೆಚ್ಚು ಬೆಂಬಲ ಹೊಂದಿರುವ ಹಿರಿಯ ಎಲ್ಎಫ್ಐ ಅಧ್ಯಕ್ಷೀಯ ಅಭ್ಯರ್ಥಿ ಜೀನ್-ಲುಕ್ ಮೆಲೆನ್ಶಾನ್, ಅಹಿಂಸಾತ್ಮಕ ಮಾರ್ಗಗಳನ್ನು ಅನುಸರಿಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡುತ್ತಲೇ ಅವರ ಪ್ರತಿಭಟನೆಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.
ಫ್ರಾನ್ಸ್ನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶಿಕ್ಷಣವು ಉಚಿತವಾಗಿದೆ. ಉನ್ನತ ಶಿಕ್ಷಣವು ಅತ್ಯಂತ ಕಡಿಮೆ ಶುಲ್ಕವನ್ನು ಹೊಂದಿದೆ. 3ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲಿ ಸಂಪೂರ್ಣವಾಗಿ ಉಚಿತ ಶಿಕ್ಷಣ ಸಿಗುತ್ತಿದೆ. ಪಠ್ಯಪುಸ್ತಕಗಳನ್ನು ಕೂಡ ಉಚಿತವಾಗಿ ನೀಡಲಾಗುತ್ತದೆ ಅಥವಾ ಅದರ ಹಣವನ್ನು ಮರುಪಾವತಿಸಲಾಗುತ್ತದೆ. ಆದರೆ, ವೈಯಕ್ತಿಕ ಶಾಲಾ ಸಾಮಗ್ರಿಗಳು ಮತ್ತು ಶಾಲಾ ಮಧ್ಯಾಹ್ನದ ಊಟಕ್ಕೆ (ಕುಟುಂಬದ ಆದಾಯದ ಆಧಾರದ ಮೇಲೆ ಸಬ್ಸಿಡಿ ನೀಡಲಾಗುತ್ತದೆ) ಮಕ್ಕಳ ಪಾಲಕರು ಹಣ ಪಾವತಿಸಬೇಕಾಗುತ್ತದೆ. ಆದರೆ, ಖಾಸಗಿ ಅಥವಾ ಸ್ವತಂತ್ರ ಶಾಲೆಗಳು ಬೋಧನಾ ಶುಲ್ಕವನ್ನು ವಿಧಿಸುತ್ತವೆ. ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿನ ಪದವಿ ಶಿಕ್ಷಣ ಸಂಪೂರ್ಣವಾಗಿ ಉಚಿತವಲ್ಲ, ಆದರೆ ಅವುಗಳ ಹೆಚ್ಚಿನ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ. ವಿದ್ಯಾರ್ಥಿಗಳು ಸಣ್ಣ ಪ್ರಮಾಣದ ನೋಂದಣಿ ಶುಲ್ಕವನ್ನು ಪಾವತಿಸುತ್ತಾರೆ.
ನರ್ಸರಿ ಶಾಲೆ: 3ರಿಂದ 6 ವರ್ಷ ವಯಸ್ಸಿನ ಮಕ್ಕಳಿಗೆ. ಫ್ರಾನ್ಸ್ನಲ್ಲಿ 3 ವರ್ಷದಿಂದಲೇ ಶಿಕ್ಷಣ ಕಡ್ಡಾಯವಾಗಿದೆ. ಇಲ್ಲಿ ಸಾಮಾಜಿಕ ನಡವಳಿಕೆ, ಭಾಷೆ ಮತ್ತು ಮೂಲಭೂತ ಚಟುವಟಿಕೆಗಳನ್ನು ಕಲಿಸಲಾಗುತ್ತದೆ.
ಪ್ರಾಥಮಿಕ ಶಾಲೆ: 6ರಿಂದ 11 ವರ್ಷ ವಯಸ್ಸಿನ ಮಕ್ಕಳಿಗೆ (5 ವರ್ಷಗಳ ಅವಧಿ). ಇಲ್ಲಿ ಓದುವುದು, ಬರೆಯುವುದು, ಗಣಿತ, ವಿಜ್ಞಾನ ಹಾಗೂ ನಾಗರಿಕ ಪ್ರಜ್ಞೆಗೆ ಒತ್ತು ನೀಡಲಾಗುತ್ತದೆ.
ಪ್ರೌಢ ಶಿಕ್ಷಣ: ಎರಡು ಹಂತಗಳಾಗಿ ವಿಂಗಡಿಸಲಾಗಿದೆ.
1) ಕೊಲೆಜ್ (ಲೋವರ್ ಸೆಕೆಂಡರಿ) 11ರಿಂದ 15 ವರ್ಷ ವಯಸ್ಸಿನವರೆಗೆ (4 ವರ್ಷಗಳ ಅವಧಿ). ಇಲ್ಲಿ ಎಲ್ಲ ವಿದ್ಯಾರ್ಥಿಗಳಿಗೂ ಸಾಮಾನ್ಯ ಪಠ್ಯಕ್ರಮವಿರುತ್ತದೆ. ಫ್ರಾನ್ಸ್ನಲ್ಲಿ 16 ವರ್ಷದವರೆಗೆ ಕಡ್ಡಾಯ ಶಿಕ್ಷಣ ಜಾರಿಯಲ್ಲಿದೆ.
2) ಲಿಸೆ (ಅಪ್ಪರ್ ಸೆಕೆಂಡರಿ) 15ರಿಂದ 18 ವರ್ಷ ವಯಸ್ಸಿನವರೆಗೆ (3 ವರ್ಷಗಳ ಅವಧಿ). ಇದು ಭಾರತದ ಪಿಯುಸಿ ಅಥವಾ ಹೈಯರ್ ಸೆಕೆಂಡರಿಗೆ ಸಮಾನ. ಇಲ್ಲಿ ವಿದ್ಯಾರ್ಥಿಗಳು ತಮ್ಮ ಆಸಕ್ತಿಗೆ ತಕ್ಕಂತೆ ಮೂರು ವಿಭಾಗಗಳನ್ನು ಆಯ್ಕೆ ಮಾಡಿಕೊಳ್ಳಬಹುದು
ಜನರಲ್: ಉನ್ನತ ವ್ಯಾಸಂಗಕ್ಕಾಗಿ ಶೈಕ್ಷಣಿಕ ವಿಷಯಗಳು.
ಟೆಕ್ನಾಲಜಿಕಲ್: ತಾಂತ್ರಿಕ ಮತ್ತು ಅನ್ವಯಿಕ ವಿಜ್ಞಾನ.
ವೊಕೇಷನಲ್: ನೇರ ಉದ್ಯೋಗಕ್ಕೆ ಪೂರಕವಾದ ವೃತ್ತಿಪರ ಕೌಶಲಗಳು. ಈ ಹಂತದ ಕೊನೆಯಲ್ಲಿ ನಡೆಯುವ ರಾಷ್ಟ್ರೀಯ ಪರೀಕ್ಷೆಯೇ ಬ್ಯಾಕಲೋರಿಯೇಟ್. ವಿಶ್ವವಿದ್ಯಾಲಯ ಪ್ರವೇಶಕ್ಕೆ ಈ ಪ್ರಮಾಣಪತ್ರ ಅತ್ಯಗತ್ಯ.
ಉನ್ನತ ಶಿಕ್ಷಣ: ಫ್ರಾನ್ಸ್ ಯುರೋಪಿಯನ್ ಯೂನಿಯನ್ನ ಔMಈ (ಔಜ್ಚಿಛ್ಞಿ್ಚMಚಠಠಿಛ್ಟಿಈಟ್ಚಠಿಟ್ಟಚಠಿ) ಮಾದರಿಯನ್ನು ಅನುಸರಿಸುತ್ತದೆ:
ಲೈಸನ್ಸ್: 3 ವರ್ಷಗಳ ಪದವಿ.
ಮಾಸ್ಟರ್: 2 ವರ್ಷಗಳ ಸ್ನಾತಕೋತ್ತರ ಪದವಿ.
ಡಾಕ್ಟರೇಟ್: 3 ವರ್ಷಗಳ ಸಂಶೋಧನಾ ಪದವಿ.