

ಲಡಾಖ್ನ ಗಡಿ ಪ್ರದೇಶಗಳಿಗೆ ಸಂಬಂಧಿಸಿದಂತೆ ಚೀನಾ ಮತ್ತೆ ತನ್ನ ಹಳೆಯ ವಿಸ್ತರಣಾವಾದಿ ಚಾಳಿಯನ್ನು ಮುಂದುವರಿಸಿ ಉದ್ಧಟತನ ಪ್ರದರ್ಶಿಸಿದೆ. ಲಡಾಖ್ನ 28 ಸ್ಥಳಗಳು ತನಗೆ ಸೇರಿದ್ದು ಎಂದು ಚೀನಾ ಪ್ರತಿಪಾದಿಸಿದೆ. ಭಾರತವು ಅಕ್ಟೋಬರ್ 2ರಂದು ಈ ಸ್ಥಳಗಳ ಹೆಸರುಗಳನ್ನು ಅಧಿಕೃತವಾಗಿ ನಿಗದಿಪಡಿಸಿತ್ತು. 2020ರಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಉದ್ವಿಗ್ನತೆ ಉಂಟಾಗಿದ್ದ ಗೋಗ್ರಾ ಮತ್ತು ಹಾಟ್ ಸ್ಪ್ರಿಂಗ್ಸ್ನಂತಹ ಪ್ರದೇಶಗಳೂ ಇವುಗಳಲ್ಲಿ ಸೇರಿವೆ.
"ಭಾರತ ಹೆಸರು ಬದಲಾಯಿಸುವುದರಿಂದ ಅಥವಾ ಹೊಸ ಹೆಸರನ್ನು ಇಡುವುದರಿಂದ ನೆಲದ ಮೇಲಿನ ಮಾಲೀಕತ್ವ ಹಕ್ಕು ಬದಲಾಗುವುದಿಲ್ಲ' ಎಂದು ಚೀನಾ ಹೇಳಿರುವುದು, ಅನವಶ್ಯಕ ಉದ್ವಿಗ್ನತೆಯನ್ನು ಹುಟ್ಟುಹಾಕಿದೆ. ಚೀನಾ ಹೇಳಿಕೆಗೆ ಭಾರತ ಸೂಕ್ತ ತಿರುಗೇಟು ನೀಡಿದೆ. "ಲಡಾಖ್ ಭಾರತದ ಅವಿಭಾಜ್ಯ ಅಂಗವಾಗಿದ್ದು, ಚೀನಾ ಎಷ್ಟೇ ನಿರಾಕರಿಸಿದರೂ ಈ ವಾಸ್ತವವನ್ನು ಬದಲಾಯಿಸಲು ಸಾಧ್ಯವಿಲ್ಲ' ಎಂದು ವಿದೇಶಾಂಗ ಸಚಿವಾಲಯ ವಕ್ತಾರ ರಣಧೀರ್ ಜೈಸ್ವಾಲ್ ಮಂಗಳವಾರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ನೆರೆಯ ರಾಷ್ಟ್ರಗಳ ಸಾರ್ವಭೌಮ ಭೂಪ್ರದೇಶಗಳಿಗೆ ನಿರಂತರವಾಗಿ ತಕರಾರು ಎತ್ತುವುದು, ಹಂತಹಂತವಾಗಿ ಭೂಮಿ ಕಬಳಿಸುವುದು ಚೀನಾ ತಂತ್ರದ ಅವಿಭಾಜ್ಯ ಅಂಗವಾಗಿದೆ. ಐತಿಹಾಸಿಕವಾಗಿ ಗಮನಿಸಿದರೆ, ಲಡಾಖ್ ಎಂದಿಗೂ ಚೀನಾದ ಭಾಗವಾಗಿರಲಿಲ್ಲ. 1842ರ ಚುಶುಲ್ ಒಪ್ಪಂದದ ಮೂಲಕ ಡೋಗ್ರಾ ಸಾಮ್ರಾಜ್ಯ ಮತ್ತು ಟಿಬೆಟ್ ನಡುವೆ ಲಡಾಖ್ನ ಗಡಿರೇಖೆಗಳನ್ನು ಸ್ಪಷ್ಟವಾಗಿ ಗುರುತಿಸಲಾಗಿತ್ತು. ಬ್ರಿಟಿಷ್ ಆಡಳಿತಾವಧಿಯಲ್ಲೂ ಲಡಾಖ್ ಭಾರತದ ಭಾಗವಾಗಿಯೇ ಗುರುತಿಸಲ್ಪಟ್ಟಿತ್ತು. ಆದರೆ 1950ರ ದಶಕದಲ್ಲಿ ಚೀನಾ ಟಿಬೆಟ್ ಅನ್ನು ಅಕ್ರಮವಾಗಿ ಆಕ್ರಮಿಸಿಕೊಂಡ ಬಳಿಕ, ಅಕ್ಸಾಯ್ ಚಿನ್ ಮೂಲಕ ರಹಸ್ಯವಾಗಿ ರಸ್ತೆ ನಿರ್ಮಿಸಿ 1962ರ ಯುದ್ಧದ ಮೂಲಕ ಬಹುದೊಡ್ಡ ಭೂಭಾಗವನ್ನು ಕಬಳಿಸಿತು. ಅಂದಿನಿಂದ ಇಂದಿನವರೆಗೂ ವಾಸ್ತವ ನಿಯಂತ್ರಣ ರೇಖೆಯನ್ನು (ಎಲ್ಎಸಿ) ಸ್ಪಷ್ಟವಾಗಿ ಗುರುತಿಸಲು ನಿರಾಕರಿಸುತ್ತ, ಗಡಿ ವ್ಯಾಜ್ಯವನ್ನು ಜೀವಂತವಾಗಿಡುವುದೇ ಚೀನಾದ ಪ್ರಮುಖ ರಾಜತಾಂತ್ರಿಕ ಅಸಹನೆಯಾಗಿದೆ.
2020ರಲ್ಲಿ ಗಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆ ಭಾರತಕ್ಕೆ ಚೀನಾದ ವಿಸ್ತರಣಾವಾದದ ವಿರುದ್ಧ ಎಚ್ಚರಿಕೆಯ ಗಂಟೆಯಾಯಿತು. ಲಡಾಖ್ ಕೇವಲ ಹಿಮಾವೃತ ಪರ್ವತ ಶ್ರೇಣಿಯಲ್ಲ; ಅದು ಭಾರತದ ರಾಷ್ಟ್ರೀಯ ಭದ್ರತೆ, ಜಲಮೂಲಗಳು ಹಾಗೂ ಮಧ್ಯ ಏಷ್ಯಾದ ಸಂಪರ್ಕಕ್ಕೆ ಅತ್ಯಂತ ಮಹತ್ವದ ಆಯಕಟ್ಟಿನ ನೆಲೆ. 2019ರಲ್ಲಿ ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದ ನಂತರ, ಭಾರತವು ಗಡಿಭಾಗಗಳಲ್ಲಿ ಸರ್ವಋತು ಸುರಂಗಗಳು, ರಸ್ತೆಗಳು, ಸೇತುವೆಗಳು ಮತ್ತು ವಾಯುನೆಲೆಗಳನ್ನು ವೇಗವಾಗಿ ಅಭಿವೃದ್ಧಿಪಡಿಸುತ್ತಿದೆ. ಭಾರತದ ಈ ಸಾರ್ವಭೌಮ ಸನ್ನದ್ಧತೆ ಮತ್ತು ಗಡಿ ಮೂಲಸೌಕರ್ಯ ಬಲವರ್ಧನೆಯೇ ಚೀನಾದ ಅಸಹನೆಗೆ ಮುಖ್ಯ ಕಾರಣ